ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬಿಲ್ ತಲೆ ಕೆಡಿಸಿದ್ಯಾ?| ಚಿಂತೆ ಬಿಡಿ, ದಿನ ನಿತ್ಯದ ಅಭ್ಯಾಸ ಬದಲಾಯಿಸಿಕೊಳ್ಳಿ| ದಿನ ನಿತ್ಯದ ರೂಢಿ ಬದಲಾಯಿಸಿ ಬಿಲ್ ಕಡಿಮೆಗೊಳಿಸಿ
ವಿದ್ಯುತ್ ಉಳಿತಾಯದಿಂದ ಎರಡು ಲಾಭಗಳಿವೆ. ಮೊದಲನೆಯದಾಗಿ ಇದು ಜಾಗತಿಕ ತಾಪಮಾನ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಎರಡನೆಯದಾಗಿ ಇದು ಹಣ ಉಳಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ಕೆಲ ಸ್ಮಾರ್ಟ್ ಉಪಕರಣಗಳು ಹಾಗೂ ಸಿಂಪಲ್ ಟಿಪ್ಸ್ ಪ್ರತಿ ತಿಂಗಳು ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಮ್ಮ ಮನೆ, ಕಚೇರಿಯಲ್ಲಿರುವ ವಸ್ತುಗಳ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ, ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಯಾವುದೇ ಉಪಕರಣವನ್ನು ನೀವು ಕಡಿಮೆ ವಿದ್ಯುತ್ ಬಳಸುವ ಸಾಧನವನ್ನಾಗಿ ಮಾರ್ಪಾಡು ಮಾಡಿ. ನಿಮ್ಮ ದಿನನಿತ್ಯದ ಅಭ್ಯಾಸ ಬದಲಾಯಿಸುವುದರಿಂದ ವಿದ್ಯುತ್ ಉಳಿತಾಯ ಮಾಡಬಹುದು.
ಒಂದು ವೇಳೆ ನೀವು ಅತಿ ಪ್ರಕಾಶಮಾನವಾದ, ಬೆಳಕು ಅತಿ ಹೆಚ್ಚು ಬಳಸುವ ಬಲ್ಬ್ ಬಳಸುತ್ತೀರೆಂದಾದರೆ ಈ ಕೂಡಲೇ CFL ಅಥವಾ LED ಬಲ್ಬ್ ಗಳಿಗೆ ಶಿಫ್ಟ್ ಆಗಿ. ಅಡುಗೆ ಮನೆ, ಲಿವಿಂಗ್ ರೂಂ ಹಾಗೂ ಬೆಡ್ ರೂಂ ಹೀಗೆ ಟ್ಯೂಬ್ ಲೈಟ್ ಅತಿ ಹೆಚ್ಚು ಬಳಸುವಲ್ಲಿ LED ಅಥವಾ T5 ಟ್ಯೂಬ್ ಬಳಸಬಹುದು. ಬಲ್ಬ್ ಬಳಸದಿದ್ದಾಗ ಮಾತ್ರ ಸ್ವಿಚ್ ಆಫ್ ಮಾಡಲು ಮರೆಯಬೇಡಿ.
ಇನ್ನು ನೀವು ಹೊರ ಹೋದಾಗ ಅಥವಾ ಬಳಸದಾಗ, ಲೈಟ್ ಅಥವಾ ಫ್ಯಾನ್ ಸ್ವಿಚ್ ಆಫ್ ಮಾಡಲು ಮರೆಯದಿರಿ. ಒಂದು ವೇಳೆ ನೀವು ಹೊಸಫ್ಯಾನ್ ಖರೀದಿಸುತ್ತೀರೆಂದಾದರೆ ಇಂಧನ ಉಳಿಸುವ ಫ್ಯಾನ್ ಖರೀದಿಸಿ. ನೀವು 12 ತಾಸಿಗೂ ಹೆಚ್ಚು ಫ್ಯಾನ್ ಬಳಸುತ್ತೀರೆಂದಾದರೆ ಅವುಗಳನ್ನು ಇಂಧನ ದಕ್ಷತೆಯುಳ್ಳ ಫ್ಯಾನ್ ಆಗಿ ಬದಲಾಯಿಸಿ ಈ ಮೂಲಕ ನೀವು 2 ವರ್ಷದೊಳಗೆ ನಿಮ್ಮ ಹಣ ಹಿಂಪಡೆದುಕೊಳ್ಳಬಹುದು. ಬಳಿಕ ಏನೇ ಸಿಕ್ಕರೂ ಅದು ಬೋನಸ್ ನಂತೆ.
ಹಲವಾರು ಬಾರಿ ನಾವು ಟಿವಿ ಹಾಗೂ ಅದಕ್ಕೆ ಜೋಡಿಸಲ್ಪಟ್ಟ ಉಪಕರಣ [ಸೆಟ್ ಟಾಪ್ ಬಾಕ್ಸ್, ಸ್ಪೀಕರ್, ಮೊದಲಾದವು]ಗಳನ್ನೂ ಬಳಸದಿದ್ದರೂ ಸ್ವಿಚ್ ಆನ್ ಮಾಡಿ ಇಟ್ಟಿರುತ್ತೇವೆ. ಇದು ಹೆಚ್ಚು ವಿದ್ಯುತ್ ಬಳಸಿಕೊಳ್ಳುವುದಿಲ್ಲ ಎಂದು ನೀವು ಭಾವಿಸಬಹುದು, ಆದರೆ ಗಮನದಲ್ಲಿರಲಿ ಇದು ಹೆಚ್ಚು ವಿದ್ಯುತ್ ಬಳಸಿಕೊಳ್ಳುತ್ತದೆ. ಹೀಗಾಗಿ ಟಿವಿ ವೀಕ್ಷಿಸದೇ ಇದ್ದಾಗ ಅದನ್ನು ಆಫ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ರೆಫ್ರಿಜರೇಟರನ್ನು ಗೋಡೆಯಿಂದ ಸುಮಾರು ಅರ್ಧ ಅಡಿ ದೂರದಲ್ಲಿಡಿ. ಫ್ರಿಡ್ಜ್ ಬಿಸಿ ಗಾಳಿಯನ್ನು ಹೊರ ಸೂಸುತ್ತವೆ. ಹೀಗಿರುವಾಗ ಆ ಬಿಸಿ ಗಾಳಿ ಅಲ್ಲಿ ಉಳಿಯದಂತೆ ನಿಗಾ ವಹಿಸಿ. ಒಂದು ವೇಳೆ ಈ ಬಿಸಿ ಗಾಳಿ ಅಲ್ಲೇ ಉಳಿದುಕೊಂಡರೆ ಅದು ಫ್ರಿಡ್ಜ್‌ನ ಕಾರ್ಯ ಕ್ಷಮತೆಯನ್ನು ಕುಗ್ಗಿಸುತ್ತದೆ. ಇನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚು ಆಹಾರವನ್ನು ಇಟ್ಟುಕೊಳ್ಳಬೇಡಿ. ಚಳಿಗಾಲದಲ್ಲಿ ಕನಿಷ್ಟ ಕೂಲಿಂಗ್‌ನಲ್ಲಿಡಿ. ಒಂದು ವೇಳೆ ಯಾವುದಾದರೂ ಪಾತ್ರೆಯಲ್ಲಿ ಕಡಿಮೆ ಆಹಾರವಿದ್ದಲ್ಲಿ ಅದನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಪ್ರಯತ್ನಿಸಿ. ಯಾಕಂದ್ರೆ ಫ್ರಿಡ್ಜ್ ನಲ್ಲಿಡುವ ಪಾತ್ರೆಯನ್ನೇ ಕೂಲಾಗಿಡಲು ಬಹಳಷ್ಟು ವಿದ್ಯುತ್ ಬಳಕೆಯಾಗುತ್ತದೆ.
ಸ್ನಾನಕ್ಕೆ ಹೋಗುವ ತಾಸಿಗೂ ಮುನ್ನ ವಿದ್ಯುತ್ ಗೀಸರ್ ಆನ್ ಮಾಡಬೇಡಿ. ಹಾಗೆಯೇ ಸ್ನಾನ ಮುಗಿಸಿ ಹೊರ ಬಂದ ಕೂಡಲೇ ಗೀಸರ್ ಆಫ್ ಮಾಡುವುದು ಮುಖ್ಯ. ಗೀಸರ್ ಆಟೋ ಆಫ್ ಫೀಚರ್ ಹೊಂದಿದ್ದರೂ, ಇದು ಕೆಲ ಸಮಯದ ಬಳಿಕ ಮತ್ತೆ ಆನ್ ಆಗುತ್ತದೆ.
ಇನ್ನು ನಿಮ್ಮ ಮನೆಯಲ್ಲಿ ಒಂದು ಅಥವಾ ಅದಕ್ಕೂ ಹೆಚ್ಚು ಎಸಿ ಇದ್ದರೆ ನೀವು ವಿದ್ಯುತ್ ಉಳಿತಾಯದ ಕಡೆ ಮತ್ತಷ್ಟು ಹೆಚ್ಚು ನಿಗಾ ವಹಿಸಬೇಕು. ಎಸಿ ಬಳಸುವಾಗ ಬಾಗಿಲು ಹಾಗೂ ಕಿಟಕಿಗಳು ಸರಿಯಾಗಿ ಮುಚ್ಚಿವೆ ಎಂಬುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ಎಸಿ ಬಳಸುವಾಗ ಫ್ಯಾನ್ ಆನ್ ಇಟ್ಟರೆ ಎಸಿಯನ್ನು ಗರಿಷ್ಟ ಟೆಂಪರೇಚರ್ ನಲ್ಲಿಡಲು ಸಹಾಯ ಮಾಡುತ್ತದೆ.
ನೀವು ಭಾರತವಾಸಿಯಾಗಿದ್ದು, ಎಸಿಯನ್ನು ಅತ್ಯಂತ ಕಡಿಮೆ ಟೆಂಪರೇಚರ್‌ನಲ್ಲಿಡುವ ಅಂದರೆ 18 ಡಿಗ್ರಿ ಸೆಲ್ಸಿಯಸ್ ನಲ್ಲಿಡುವ ಅಭ್ಯಾಸ ನಿಮಗಿದ್ದರೆ, ಕೂಡಲೇ ನಿಮ್ಮ ಅಭ್ಯಾಸವನ್ನು ಬಿಟ್ಟು ಹಾಕಿ. ಯಾಕೆಂದರೆ ಎಸಿ ಗಾಳಿ ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ ಕಿಟಕಿ ತೆರೆದಿಟ್ಟರೆ ಎಸಿಗಿಂತಲೂ ತಂಪಾದ ಹಾಗೂ ಶುದ್ಧ ಗಾಳಿ ಒಳ ಬರುತ್ತದೆ. ಎಸಿ ಆನ್ ಮಾಡುವ ವೇಳೆ, ವಾತಾವರಣ ಬೇಗ ತಂಪಾಗಲಿ ಎಂಬ ಮನಸ್ಥಿತಿಯಿಂದ ಅತ್ಯಂತ ಕಡಿಮೆ ಟೆಂಪರೇಚರ್ ನಲ್ಲಿಡಬೇಡಿ. ಯಾಕೆಂದರೆ ಅದು ಅಸಾಧ್ಯ. ಇನ್ನು ರಾತ್ರಿ ವೇಳೆ ಕೇವಲ 1 ಅಥವಾ 2 ಗಂಟೆ ಕಾಲ ನೀವು ಎಸಿ ಆನ್ ಮಾಡಿದರೆ ಸಾಕಾಗುತ್ತದೆ. ಕೋಣೆ ತಂಪಾದ ಬಳಿಕ ಆಫ್ ಮಾಡಬಹುದು. ಅಲ್ಲದೇ ಹಳೆಯ ಎಸಿ ಹೆಚ್ಚು ವಿದ್ಯುತ್ ಬಳಸುವುದರಿಂದ, ಅದನ್ನು ಇಂಧನ ದಕ್ಷತೆಯುಳ್ಳ ಎಸಿಯೊಂದಿಗೆ ಬದಲಾಯಿಸಿಕೊಳ್ಳಿ.
ಅಂತಿಮವಾಗಿ ನೀವು ಲೈಟ್, ಫ್ಯಾನ್, ಟಿವಿ, ಎಸಿ ಹೀಗೆ ಯಾವುದೇ ಹೊಸ ವಿದ್ಯುತ್ ಉಪಕರಣ ಖರೀದಿಸುವಾಗ ಇಂಧನ ದಕ್ಷತೆಯ ಉಪಕರಣ ಖರೀದಿಸಿ.