ಗಣಿನಾಡಿನಲ್ಲಿ ‘ಡಿಕೆಶಿ-ರಮೇಶ ಜಾರಕಿಹೊಳಿ ಸಮರ’!| ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಆದರೂ ನಿಜವಾದ ಸ್ಪರ್ಧಿ ಡಿಕೆಶಿ ಅಂತೆ| ಬಿಜೆಪಿ ಟಿಕೆಟ್ ಲಭಿಸಿದ್ದು ಕಾಂಗ್ರೆಸ್ ಅತೃಪ್ತ ಜಾರಕಿಹೊಳಿ ಬಂಧು ದೇವೇಂದ್ರಪ್ಪಗೆ| - ರಾಮುಲು ವರ್ಸಸ್ ಡಿಕೆಶಿ ಎಂಬಂತಿದ್ದ ಸಮರಕ್ಕೆ ಈಗ ರಮೇಶ್ ಎಂಟ್ರಿ| ಬೆಳಗಾವಿಯಲ್ಲಿನ ದ್ವೇಷ ಈಗ ಬಳ್ಳಾರಿಗೂ ಪ್ರವೇಶ| ಕಾಂಗ್ರೆಸ್‌ನ 6 ಶಾಸಕರಿದ್ದರೂ ಒಗ್ಗಟ್ಟಿಲ್ಲ ಎಂಬುದು ಮೈನಸ್ ಪಾಯಿಂಟ್
ಕ್ಷೇತ್ರ ಸಮೀಕ್ಷೆ: ಬಳ್ಳಾರಿ ಲೋಕಸಭಾ ಕ್ಷೇತ್ರ
ಕೆ.ಎಂ.ಮಂಜುನಾಥ್, ಕನ್ನಡಪ್ರಭ
ಬಳ್ಳಾರಿ(ಏ.14]: ಗಡಿನಾಡು-ಗಣಿನಾಡು-ಬಿಸಿಲೂರು ಎಂಬ ಅನ್ವರ್ಥಕ ಪದನಾಮಗಳಿಂದ ಗುರುತಿಸಿಕೊಳ್ಳುವ ‘ಬಳ್ಳಾರಿ’ಯ ರಾಜಕಾರಣ ಸದಾ ಕುತೂಹಲದ ಗಣಿ. ಆರು ತಿಂಗಳ ಹಿಂದಷ್ಟೇ ಲೋಕಸಭಾ ಉಪ ಚುನಾವಣೆ ಎದುರಿಸಿದ್ದ ಜಿಲ್ಲೆಗೆ ಹೋಲಿಸಿದರೆ ಈ ಮಹಾ ಚುನಾವಣೆಯಲ್ಲಿ ಜಿಲ್ಲೆಯ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧ. ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ, ಶ್ರೀರಾಮಲು-ಡಿಕೆಶಿ ಎಂಬಂತಿರುತ್ತಿದ್ದ ಚುನಾವಣಾ ಕಣ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕ ರಮೇಶ ಜಾರಕಿಹೊಳಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ನಡುವಿನ ಅಖಾಡವಾಗಿ ಪರಿವರ್ತನೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಆರಂಭವಾಗಿದ್ದ ರಮೇಶ ಜಾರಕಿಹೊಳಿ, ಡಿಕೆಶಿ ನಡುವಿನ ಜಿದ್ದಾಜಿದ್ದಿ ಬಳ್ಳಾರಿ ಚುನಾವಣೆಯಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ವಿರುದ್ಧ ತಮ್ಮ ಹತ್ತಿರದ ಸಂಬಂಧಿ, ಕಾಂಗ್ರೆಸ್‌ನಲ್ಲಿದ್ದ ವೈ.ದೇವೇಂದ್ರಪ್ಪರನ್ನು ಕರೆ ತಂದು ಬಿಜೆಪಿ ಟಿಕೆಟ್ ಕೊಡಿಸುವ ಮೂಲಕ ರಮೇಶ ಜಾರಕಿಹೊಳಿ ಅವರು ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದಾರೆ ಎನ್ನಲಾಗಿದೆ. ಪರಿಣಾಮ ಬಿಜೆಪಿ ನಾಯಕ ಶ್ರೀರಾಮುಲು ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಉಪಸ್ಥಿತಿ ಈ ಬಾರಿ ಗೌಣ ಎಂಬಂತಾಗಿದ್ದು ನಿಜವಾದ ಸ್ಪರ್ಧೆ ಡಿಕೆಶಿ ಮತ್ತು ಗೋಕಾಕ ಸಾಹುಕಾರನ ನಡುವೆಯೇ ಎಂಬಂತಾಗಿದೆ. ಡಿಕೆಶಿ ವಿರುದ್ಧ ತೆರೆಮರೆಯಲ್ಲಿ ನಿಂತು ಖುದ್ದು ರಮೇಶ ರಣತಂತ್ರ ರೂಪಿಸುತ್ತಿದ್ದು, ಇದು ಕಾಂಗ್ರೆಸ್‌ಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ರಮೇಶ ಜೊತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಕೆಲ ಶಾಸಕರು, ಮುಖಂಡರು ಕೂಡ ಕಳೆದ ಉಪ ಚುನಾವಣೆಯಷ್ಟುಉತ್ಸಾಹದಿಂದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಕಾಂಗ್ರೆಸ್ ಭದ್ರಕೋಟೆ
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆಂಬ ಸಮಾಧಾನ ಪಕ್ಷದ ಕಾರ್ಯಕರ್ತರಲ್ಲಿದೆ. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಈ ಶಾಸಕರು ಎಷ್ಟರಮಟ್ಟಿಗೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಾರೆ ಎನ್ನುವುದು ಮಾತ್ರ ಫಲಿತಾಂಶದ ದಿನವೇ ಗೊತ್ತಾಗಬೇಕು.
ಹಾಗೆ ನೋಡಿದರೆ ರಾಜ್ಯದ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡ ಶಾಸಕರಲ್ಲಿ ಹೆಚ್ಚಿನ ಮಂದಿ ಬಳ್ಳಾರಿ ಜಿಲ್ಲೆಯವರು. ಮೊನ್ನೆ ಮೊನ್ನೆವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಗ್ರಾಮೀಣ ಶಾಸಕ ನಾಗೇಂದ್ರ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಹೊಸಪೇಟೆ ಶಾಸಕ ಆನಂದ ಸಿಂಗ್ ಅವರೆಲ್ಲ ಸಾರ್ವಜನಿಕರಿಗೆ ಮುಖದರ್ಶನ ಮಾಡಿದ್ದು ಕೆಲ ದಿನಗಳ ಹಿಂದಷ್ಟೆ. ಅದೂ ಡಿಕೆಶಿ ಭೇಟಿ ನೀಡಿದಾಗ. ಇನ್ನು ಕಂಪ್ಲಿ ಶಾಸಕ ಜಿ.ಎನ್.ಗಣೇಶ್ ಹೊಡೆದಾಟ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಕ್ಷೇತ್ರದಲ್ಲಿ ಕೈ ಪಕ್ಷದ ಪರ ಕೆಲಸ ಮಾಡುವವರು ಯಾರು ಎಂಬ ಪ್ರಶ್ನೆ ಇದೆ. ಏತನ್ಮಧ್ಯೆ ಕಾಂಗ್ರೆಸ್‌ನ ಒಳ ಮುನಿಸು, ಶಾಸಕರ ನಡುವಿನ ಮುಸುಕಿನ ಗುದ್ದಾಟಗಳಿಗೆ ಇನ್ನೂ ಅಂತ್ಯಬಿದ್ದಿಲ್ಲ. ಬಿಜೆಪಿ ಅಭ್ಯರ್ಥಿ ಜಾರಕಿಹೊಳಿ ಕುಟುಂಬದ ಬೆಂಬಲ ಹಾಗೂ ಪ್ರಧಾನಿ ಮೋದಿ ಅಲೆಯನ್ನು ನೆಚ್ಚಿ ಪ್ರಚಾರದಲ್ಲಿದ್ದಾರೆ.
ಡಿಕೆಶಿ, ಶ್ರೀರಾಮುಲುಗೂ ಮಹತ್ವದ್ದು
ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಶ್ರೀರಾಮುಲುಗೂ ಇದು ತೀರಾ ಮಹತ್ವದ ಚುನಾವಣೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅವರ ಮೇಲಿದೆ. ಕಳೆದ ಉಪ ಚುನಾವಣೆಯ ಸೋಲು ಅವರನ್ನು ಕಂಗೆಡುವಂತೆ ಮಾಡಿದ್ದು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನ ಇದ್ದರೂ ತೋರ್ಪಡಿಸಿಕೊಳ್ಳದೆ ಅವರ ಪರ ಹೋರಾಟ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದೂ ಕನಕಪುರದಿಂದ ಬಂದು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮುಂದುವರಿದಿರುವ ಡಿಕೆಶಿ ಅವರಿಗೂ ಈ ಚುನಾವಣೆ ಪ್ರತಿಷ್ಠೆಯ ಕಣ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡಲ್ಲಿ ಮಾತ್ರ ಡಿಕೆಶಿಗೆ ಇಲ್ಲಿ, ಪಕ್ಷದಲ್ಲಿ ವರ್ಚಸ್ಸು, ಉಸ್ತುವಾರಿ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ ನೆಮ್ಮದಿ ದೊರೆಯಲಿದೆ.
ಗೆಲುವು ಮರುಕಳಿಸುವ ವಿಶ್ವಾಸ?
ಆರು ತಿಂಗಳ ಹಿಂದೆ ಜರುಗಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 2.40 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, ‘ನಮ್ಮ ಅಭ್ಯರ್ಥಿ ಲಕ್ಷಗಟ್ಟಲೆ ಅಂತರದಲ್ಲಿ ಗೆಲ್ಲೋದು ಬೇಡ ಬರೀ 10 ಸಾವಿರ ಮತಗಳ ಅಂತರದಲ್ಲಿ ಗೆದ್ದರೂ ಸಾಕು’ ಎಂದು ಪಕ್ಷದ ಕಾರ್ಯಕರ್ತರು ಹೇಳಿಕೊಂಡು ಓಡಾಡುತ್ತಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಡಗಲಿ ಹಾಗೂ ಸಂಡೂರು ಶಾಸಕರು ಸಚಿವರಾಗಿದ್ದಾರೆ. ಇನ್ನು ಡಿಕೆಶಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಇರುವುದರಿಂದ ಏನಾದರೂ ತಂತ್ರ ಮಾಡಿಯೇ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಇನ್ನು ಶ್ರೀರಾಮುಲು ಉಪ ಚುನಾವಣೆಯ ಸೋಲಿನ ಕಹಿಯಿಂದ ಇನ್ನೂ ಹೊರ ಬಂದಿಲ್ಲ.
ಎಸ್.ಟಿ, ಲಿಂಗಾಯತ ನಿರ್ಣಾಯಕರು:
ಪರಿಶಿಷ್ಟಪಂಗಡಕ್ಕೆ (ಎಸ್‌ಟಿ) ಮೀಸಲಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಈಗ ಜೋರಾಗಿಯೇ ನಡೆದಿದೆ. ಕ್ಷೇತ್ರದಲ್ಲಿ ಪರಿಶಿಷ್ಟವರ್ಗ ಹಾಗೂ ಲಿಂಗಾಯತ ಮತದಾರರ ಸಂಖ್ಯೆ ಬಹುತೇಕ ಸಮ ಪ್ರಮಾಣದಲ್ಲಿದೆ. 3.5 ಲಕ್ಷ ಎಸ್‌ಟಿ ಮತ್ತು ಅಷ್ಟೇ ಪ್ರಮಾಣದ ಲಿಂಗಾಯತ ಮತಗಳಿವೆ. ಎಸ್ಟಿಮತದಾರರಲ್ಲಿ ಹೆಚ್ಚಿನವರು ವಾಲ್ಮೀಕಿ ನಾಯಕ ವರ್ಗದವರು. ಇನ್ನು ಪರಿಶಿಷ್ಟವರ್ಗದ ಸುಮಾರು 2 ಲಕ್ಷ ಮತಗಳಿವೆ. ಅದೇ ರೀತಿ ಇತರೆ ಹಿಂದುಳಿದ ವರ್ಗದ 3.5 ಲಕ್ಷ ಮತಗಳಿದ್ದು, ಅವರಲ್ಲಿ ಕುರುಬ ಸಮುದಾಯದ 1.5 ಲಕ್ಷ ಮತಗಳಿವೆ. ಇನ್ನು ಬಲಿಜ, ಉಪ್ಪಾರ, ಗಂಗಾಮತಸ್ಥ ಸೇರಿ ಉಳಿದ ಒಳಪಂಗಡಗಳ 2 ಲಕ್ಷ ಮಂದಿ ಮತದಾರರಿದ್ದಾರೆ. ಮುಸ್ಲಿಂ ಮತದಾರರ ಸಂಖ್ಯೆಯೂ ಸುಮಾರು 2 ಲಕ್ಷದಷ್ಟಿದೆ. ಬ್ರಾಹ್ಮಣರು ಸುಮಾರು 90 ಸಾವಿರವಿದ್ದು, ಕ್ಷತ್ರಿಯ, ಶೆಟ್ರು ಸೇರಿ ಇನ್ನಿತರ ವರ್ಗದ 1 ಲಕ್ಷ ಮತಗಳಿದ್ದು, ಸಣ್ಣ ಪುಟ್ಟಸಮುದಾಯದ 1 ಲಕ್ಷ ಮತಗಳಿವೆ. ಜಾತಿವಾರು ಲೆಕ್ಕಾಚಾರ ನೋಡಿದರೆ ಇಲ್ಲಿ ಲಿಂಗಾಯತರು ಮತ್ತು ಎಸ್‌ಟಿ ಸಮುದಾಯದವರೇ ನಿರ್ಣಾಯಕರು. ಈ ಪ್ರಬಲ ಸಮುದಾಯಗಳ ಮತ ಹೇಗೆ ವಿಭಜನೆಯಾಗಬಹುದು ಎನ್ನುವುದರ ಮೇಲೆ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತದೆ.
ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ:
ಪ್ರತಿ ಚುನಾವಣೆಯಲ್ಲೂ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಹಣಾಹಣಿ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ತೆನೆ ಹೊತ್ತ ಮಹಿಳೆಯಿಂದ ಹೆಚ್ಚಿನ ಲಾಭವೇನೂ ಆಗದು. ಜೆಡಿಎಸ್ ಸಂಘಟನೆ ದಿನೇ ದಿನೆ ಕ್ಷೀಣಿಸುತ್ತಾ ಬಂದಿದ್ದು, ಮೈತ್ರಿ ಸರ್ಕಾರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಜೆಡಿಎಸ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಕಾಂಗ್ರೆಸ್ ಶಾಸಕರ ನಡುವಿನ ಒಳ ಮುನಿಸುಗಳಿಗೆ ಕೈ ಹಿರಿಯ ನಾಯಕರು ಪರಿಹಾರ ಸೂತ್ರ ಹುಡುಕಿದರೆ, ಕೈ ಪಡೆಯ ಬಲ ವೃದ್ಧಿಸಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ.
ಕ್ಷೇತ್ರದಲ್ಲಿ ಇಬ್ಬರು ಸಚಿವರಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್. ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ಸೇರಿದರೆ ಒಟ್ಟು ಮೂವರು ಸಚಿವರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಬಂದಾಗ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಜಿಲ್ಲೆಯ ಹಿರಿಯ ಹಾಗೂ ಕಿರಿಯ ನಾಯಕರು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದು ಇನ್ನೂ ನಿಗೂಢ. ಇನ್ನು ಬಿಜೆಪಿಯ ಮಾಜಿ ಶಾಸಕರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಬಲಾಢ್ಯರು. ಕಾಂಗ್ರೆಸ್ ಶಾಸಕರು ಇದ್ದರೂ ಹೆಚ್ಚಿನ ಮತಗಳನ್ನು ಕಿತ್ತುಕೊಳ್ಳುವ ಸಂಘಟನಾ ಶಕ್ತಿ ಇರುವುದರಿಂದ ಎರಡೂ ಪಕ್ಷಗಳ ಅಭ್ಯರ್ಥಿಗಳು ಸಮಬಲ ಹೋರಾಟ ನಡೆಯುವುದು ಬಹುತೇಕ ಖಚಿತ.
2014 ರ ಫಲಿತಾಂಶ
ಬಿ. ಶ್ರೀರಾಮುಲು (ಬಿಜೆಪಿ) 5,34,406
ಎನ್.ವೈ. ಹನುಮಂತಪ್ಪ (ಕಾಂಗ್ರೆಸ್) 4,49,262
ಆರ್. ರವಿನಾಯಕ್ (ಜೆಡಿಎಸ್) 12,613
2018ರ ಉಪ ಚುನಾವಣೆ ಫಲಿತಾಂಶ
ವಿ.ಎಸ್. ಉಗ್ರಪ್ಪ (ಕಾಂಗ್ರೆಸ್) 6,28,365
ಜೆ.ಶಾಂತಾ (ಬಿಜೆಪಿ) 3,85,204
ಗೆಲುವಿನ ಅಂತರ: 2,43,161
11 ಮಂದಿ ಕಣದಲ್ಲಿ
ವೈ. ದೇವೇಂದ್ರಪ್ಪ (ಬಿಜೆಪಿ), ವಿ.ಎಸ್. ಉಗ್ರಪ್ಪ (ಕಾಂಗ್ರೆಸ್), ಎ.ದೇವದಾಸ್ (ಎಸ್‌ಯುಸಿಐ-ಕಮ್ಯುನಿಸ್ಟ್), ಕೆ.ಗೂಳಪ್ಪ (ಬಿಎಸ್ಪಿ), ಬಿ. ಈಶ್ವರಪ್ಪ (ಶಿವಸೇನೆ), ಎನ್. ನವೀನ್ ಕುಮಾರ್ (ಭಾರತ್ ಪ್ರಭಾತ್ ಪಕ್ಷ), ನಾಯಕರ ರಾಮಪ್ಪ (ಇಂಡಿಯನ್ ಲೇಬರ್ ಪಕ್ಷ), ಬಿ. ರಘು (ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ), ರಾಮಾನಾಯಕ್ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಟಿ. ವೀರೇಶ (ಸಮಾಜವಾದಿ ಫಾರ್ವರ್ಡ್ ಬ್ಲಾಕ್), ವೈ.ಪಂಪಾಪತಿ (ಪಕ್ಷೇತರ).
ಒಟ್ಟು ಮತದಾರರು: 19,34,669 | ಮಹಿಳೆಯರು: 9,71,459 | ಪುರುಷರು: 9,62,950 | ಇತರೆ ಮತದಾರರು: 260