ಕಾರವಾರದ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ| ಬೈಕ್ ಮಾದರಿಯಲ್ಲಿ ಕೀ ವ್ಯವಸ್ಥೆ| ಆನ್ ಮಾಡಿ ಎಕ್ಸಲೇಟರ್ ನೀಡಿದರೆ ಚಲಿಸಲು ಆರಂಭ| 4- 5 ತಾಸು ಚಾರ್ಜ್ ಮಾಡಿದರೆ 20ರಿಂದ 22 ಕಿಮೀ ವೇಗದಲ್ಲಿ, 28- 30 ಕಿಮೀ ದೂರದವರೆಗೂ ಬೈಸಿಕಲ್ ಕ್ರಮಿಸುತ್ತದೆ| ಮೊಬೈಲ್ ಮಾದರಿ ಚಾರ್ಜ್ ವ್ಯವಸ್ಥೆ|
ಕಾರವಾರ(ಜ.13): ನಗರದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಬ್ಬರು ಸತತ ಪರಿಶ್ರಮದಿಂದ ಬ್ಯಾಟರಿ ಚಾಲಿತ ಬೈಸಿಕಲ್‌ನ್ನು ತಯಾರಿಸಿದ್ದಾರೆ.
ನಂದನಗದ್ದಾ ನಿವಾಸಿಗಳಾದ ತನ್ವಿ ಚಿಪ್ಕರ್, ಕುನಾಲ್ ನಾಯ್ಕ ಅವರು ಬ್ಯಾಟರಿ ಸಾಮರ್ಥ್ಯದಿಂದ ಓಡುವ ಬೈಸಿಕಲ್ ತಯಾರಿಸಿದ್ದು, ಸೇಂಟ್ ಜೊಸೆಫ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಸ್ನೇಹಿತರ ಜತೆಗೆ ಸುತ್ತಾಡುವಾಗ ಇಬ್ಬರೂ ಬೈಸಿಕಲ್ ತುಳಿಯುತ್ತಿದ್ದರು. ಇದು ಆಯಾಸವಾಗುತ್ತಿತ್ತು. ಬೈಕ್ ಅಥವಾ ಸ್ಕೂಟರ್ ಓಡಿಸಲು ಲೈಸೆನ್ಸ್(ಚಾಲನಾ ಪರವಾನಗಿ) ಇಲ್ಲ. ಜತೆಗೆ ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಮೊದಲಿನಿಂದಲೂ ಆಸಕ್ತಿ ಇರುವ ಪರಿಣಾಮ ಬ್ಯಾಟರಿ ಮೂಲಕ ಓಡುವ ಬೈಸಿಕಲ್ ಇವರ ಕಲ್ಪನೆಯಲ್ಲಿ ತಯಾರಾಗಿದೆ.
ಸದ್ಯ 2 ಬೈಸಿಕಲ್‌ಗೆ ಬ್ಯಾಟರಿ ಅಳವಡಿಕೆ ಮಾಡಿದ್ದಾರೆ. ತಲಾ 12 ವ್ಯಾಟ್ ಸಾಮರ್ಥ್ಯದ ಎರಡು ಬ್ಯಾಟರಿ ಅಳವಡಿಕೆ ಮಾಡಿದ್ದಾರೆ. ಅದರ ಸಂಪರ್ಕವನ್ನು 12 ವ್ಯಾಟ್‌ನ ಡಿಸಿ ಮೋಟರ್‌ಗೆ ಸಂಪರ್ಕ ನೀಡಿದ್ದಾರೆ. ಇದಕ್ಕೆ ಪ್ರತ್ಯೇಕ ಚೈನ್ ವ್ಯವಸ್ಥೆಯಿದೆ. ಬೈಕ್ ಮಾದರಿಯಲ್ಲಿ ಕೀ ವ್ಯವಸ್ಥೆಯಿದ್ದು, ಆನ್ ಮಾಡಿ ಎಕ್ಸಲೇಟರ್ ನೀಡಿದರೆ ಚಲಿಸಲು ಆರಂಭಿಸುತ್ತದೆ. ಬ್ರೇಕ್ ಅದುಮಿದರೆ ಬೈಸಿಕಲ್ ನಿಲ್ಲುತ್ತದೆ. 4- 5 ತಾಸು ಚಾರ್ಜ್ ಮಾಡಿದರೆ 20ರಿಂದ 22 ಕಿಮೀ ವೇಗದಲ್ಲಿ, 28- 30 ಕಿಮೀ ದೂರದವರೆಗೂ ಬೈಸಿಕಲ್ ಕ್ರಮಿಸುತ್ತದೆ. ಮೊಬೈಲ್ ಮಾದರಿ ಚಾಜ್‌ರ್ ವ್ಯವಸ್ಥೆಯಿದ್ದು, ಪದೇ ಪದೇ ಬ್ಯಾಟರಿ ತೆಗೆಯಬೇಕಾಗಿಲ್ಲ.
ಸರ್ಕಾರಿ ಡಿಗ್ರಿ, ಬಿಇ ಕಾಲೇಜಲ್ಲಿ ಡಿಜಿಟಲ್ ಕಲಿಕೆ: ಸಿಎಂ ಯಡಿಯೂರಪ್ಪ
ಹೊಸ ಬೈಸಿಕಲ್ ಸೇರಿ ಬ್ಯಾಟರಿ ಅಳವಡಿಕೆ ಮಾಡಲು 16,000- 18,000 ವೆಚ್ಚವಾಗುತ್ತದೆ. ಚಿಕ್ಕದಾದ 1 ಹೆಡ್ ಲೈಟ್, 4 ಇಂಡಿಕೇಟರ್, ಹಾರ್ನ್ ಕೂಡಾ ಅಳವಡಿಕೆ ಮಾಡಲಾಗಿದೆ. ಬ್ಯಾಟರಿ ಚೈನ್ ಹಾಗೂ ಪೆಡಲ್ ಚೈನ್ ಪ್ರತ್ಯೇಕವಾಗಿದೆ. ಒಂದು ವೇಳೆ ಬ್ಯಾಟರಿಯ ಚಾಜ್‌ರ್ ಮುಗಿದರೆ ಪೆಡಲ್ ತುಳಿಯಬಹುದು.
ಬೈಕ್, ಸ್ಕೂಟಿ, ಯಾಂತ್ರಿಕೃತ ಬೈಸಿಕಲ್‌ಗಳನ್ನು ಗಮನಿಸಿ, ಯಾವ ರೀತಿ ಕೆಲಸ ಮಾಡುತ್ತವೆ ಎಂದು ತಿಳಿದು, ತಮ್ದೇ ಆದ ಕಲ್ಪನೆಯಲ್ಲಿ ಈ ಬೈಸಿಕಲ್‌ಗೆ ಬ್ಯಾಟರಿ ಅಳವಡಿಕೆ ಮಾಡಿ ಓಡುವಂತೆ ಮಾಡಿದ್ದೇವೆ ಎಂದು ವಿದ್ಯಾರ್ಥಿ ಕುನಾಲ್ ನಾಯ್ಕ ಹೇಳಿದ್ದಾರೆ.
ಮೊದಲಿನಿಂದಲೂ ಹೊಸದೇನಾದರೂ ಮಾಡಬೇಕು ಎನ್ನುವ ಆಸಕ್ತಿ ಬ್ಯಾಟರಿ ಚಾಲಿತ ಬೈಸಿಕಲ್ ಪ್ರಯೋಗಕ್ಕೆ ನಮ್ಮನ್ನು ಒಡ್ಡಿತು. ಹಲವಾರು ಪ್ರಯೋಗ ಮಾಡಿ ಬಳಿಕ ಯಶಸ್ವಿ ಆಗಿದ್ದೇವೆ. ಪಾಲಕರು ಸದಾ ಪ್ರೋತ್ಸಾಹ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿ ತನ್ವಿ ಚಿಪ್ಕರ್ ಹೇಳಿದ್ದಾರೆ.