ಮುಂದಿನ ಶೈಕ್ಷಣಿಕ ವರ್ಷದಿದ ಗ್ರೇಸ್ ಅಂಕ ನೀಡದಂತೆ ಈ ಹಿಂದೆಯೇ ಮುಖ್ಯಮಂತ್ರಿ ಅವರು ಸೂಚಿಸಿದ್ದರು. ಹಾಗಾಗಿ ಈ ಬಾರಿಯಿಂದ ಗ್ರೇಸ್ ಅಂಕ ನೀಡುವ ಪದ್ಧತಿ ಕೈಬಿಡಲಾಗುವುದು ಎಂದು ಸ್ಪಷ್ಟಪಡಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ
ಬೆಂಗಳೂರು(ಅ.10): ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಗ್ರೇಸ್ ಅಂಕ ನೀಡುವ ಪದ್ಧತಿ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿದ ಗ್ರೇಸ್ ಅಂಕ ನೀಡದಂತೆ ಈ ಹಿಂದೆಯೇ ಮುಖ್ಯಮಂತ್ರಿ ಅವರು ಸೂಚಿಸಿದ್ದರು. ಹಾಗಾಗಿ ಈ ಬಾರಿಯಿಂದ ಗ್ರೇಸ್ ಅಂಕ ನೀಡುವ ಪದ್ಧತಿ ಕೈಬಿಡಲಾಗುವುದು ಎಂದು ಸ್ಪಷ್ಟಪಡಿಸಿದರು.
SSLC ಪಾಸಾದ್ರೆ NABARD ನಲ್ಲಿ ಕೆಲಸ ಪಡೆಯಲು ಸುವರ್ಣಾವಕಾಶ!
ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಳೆದ ಸಾಲಿನಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕಡ್ಡಾಯ ಸಿಸಿ ಕ್ಯಾಮರಾ, ಪರೀಕ್ಷೆ ಕೊಠಡಿ ಚಿತ್ರಣದ ನೇರ ಪ್ರಸಾರ, ವೆಬ್‌ಕಾಸ್ಟಿಂಗ್ ಸೇರಿದಂತೆ ವಿವಿಧ ಬಿಗಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಸಾಮೂ ಹೀಕನಕಲು, ಪರಸ್ಪರ ಮಾತನಾಡಿಕೊಂಡು, ನೋಡಿಕೊಂಡು ಪರೀಕ್ಷೆ ಬರೆಯುವುದು, ಕೊಠಡಿ ಮೇಲ್ವಿಚಾರಕರು ಮಕ್ಕಳನ್ನು ಸಡಿಲ ಬಿಡುವುದು ಸೇರಿದಂತೆ ಇಂತಹ ಅಕ್ರಮಗಳಿಗೆ ಕಡಿವಾಣ ಬಿದ್ದಂತಾಗಿದೆ. ಇದರಿಂದ ಫಲಿತಾಂಶ ಪ್ರಮಾಣದಲ್ಲೂ ಕುಸಿತವಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಗ್ರೇಸ್ ಅಂಕಗಳ ಪ್ರಮಾಣ ಹೆಚ್ಚಿಸಿ ಒಂದಷ್ಟು ಮಂದಿಯನ್ನು ಪಾಸು ಮಾಡಲು ನಿರ್ಧರಿಸಲಾಗಿತ್ತು. ಆದರೆ ಈಗ ಅಕ್ರಮಗಳಿಗೆ ಅವಕಾಶವಿಲ್ಲ ಉತ್ತಮವಾಗಿ ಓದಿಕೊಂಡು ಪರೀಕ್ಷೆ ಬರೆಯದಿದ್ದರೆ ಪಾಸಾಗುವುದು ಕಷ್ಟ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆ. ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ತಮ್ಮ ಶಾಲೆಗಳಿಗೆ ಉತ್ತಮ ಫಲಿತಾಂಶ ತರಲು ಶಿಕ್ಷಕರು ಹೆಚ್ಚು ಶ್ರಮ ಹಾಕುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಗ್ರೇಸ್ ಅಂಕದ ಅಗತ್ಯವಿಲ್ಲ. ಉತ್ತಮ ರೀತಿಯಲ್ಲಿ ಮಕ್ಕಳು ಪರೀಕ್ಷೆಗೆ ಸಿದ್ದರಾಗುತ್ತಿದ್ದಾರೆ. ಫಲಿತಾಂಶ ಈ ಬಾರಿ ಮೊದಲಿನಂತೆ ಏರಿಕೆಯಾಗುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಫಲಿತಾಂಶ ಉತ್ತಮಗೊಳಿಸಲು, ಕೆಲವು ಅಂಕಗಳಿಂದ ಫೇಲಾಗಬಹುದಾದ ಮಕ್ಕಳನ್ನು ಪಾಸು ಮಾಡಲು ಶೇ.5ರಷ್ಟು ಗ್ರೇಸ್ ಅಂಕ ನೀಡುವ ಪರಿಪಾಠ ಹಲವು ವರ್ಷಗಳಿಂದ ಇತ್ತು. ಕೋವಿಡ್ ವರ್ಷದಲ್ಲಿ ತರಗತಿಗಳು ನಡೆಯದೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರಿಂದ ಹಿಂದಿನ ಬಿಜೆಪಿ ಸರ್ಕಾರ ಇದನ್ನು ಶೇ.10ಕ್ಕೆ ಹೆಚ್ಚಿಸಿತ್ತು. ಆ ನಂತರ ಬಂದ ಕಾಂಗ್ರೆಸ್ ಸರ್ಕಾರ 2024 ರ ಮಾರ್ಚ್/ ಏಪ್ರಿಲ್‌ನಲ್ಲಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.30 ರಷ್ಟು ಕುಸಿದಿತ್ತು. ಇದರಿಂದ ಕಂಗಾಲಾದ ಇಲಾಖಾ ಅಧಿಕಾರಿಗಳು ಅದುವರೆಗೆ ಗ್ರೇಸ್ ಅಂತ ಪ್ರಮಾಣವನ್ನು ಏಕಾಏಕಿ ಶೇ.20ಕ್ಕೆ ಹೆಚ್ಚಿಸಲು ಸಚಿವರ ಮುಂದೆ ಪ್ರಸ್ತಾವನೆ ಇಟ್ಟರು. ಸಚಿವರು ಕೂಡ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸದೆ ಒಪ್ಪಿಗೆ ನೀಡಿದ್ದರು. ಇದರಿಂದ ಅನುತ್ತೀರ್ಣರಾಗುತ್ತಿದ್ದ ಸುಮಾರು 1.23 ಲಕ್ಷ ಮಕ್ಕಳು ಪಾಸಾಗಿದ್ದರು. ಆದರೆ, ಇದು ಅವೈಜ್ಞಾನಿಕ ಕ್ರಮ ಎಂಬ ಟೀಕೆ ತಜ್ಞರು, ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.