ಹೊಸ ರೂಪಾಂತರ ವೈರಸ್ ಭೀತಿ ನಡುವೆಯೂ ಶಾಲಾ-ಕಾಲೇಜು ಪ್ರಾರಂಭಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿಯನ್ನು ನೀಡಿದ್ದು, ಪೋಷಕರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು, (ಡಿ.31): ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಜ. 1ರ ಶುಕ್ರವಾರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಗಳು ಸುರಕ್ಷಿತ ವಾತಾವರಣದಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಾ ದಿನವಾದ ಗುರುವಾರ ರಾಜ್ಯದ ಮಕ್ಕಳ ಪೋಷಕರಿಗೆ ಮನವಿ ಮಾಡಿಕೊಂಡಿರುವ ಅವರು, ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಶಾಲೆ ಮಕ್ಕಳ ಇನ್ನೊಂದು ಮನೆಯಾಗಿರಲಿದ್ದು, ಶಾಲಾ ವಿದ್ಯಾಲಯ ಸುರಕ್ಷಿತಾಲಯವಾಗಿರಲಿದೆ ಎಂದು ಭರವಸೆ ನೀಡುವೆ ಎಂದು ಅಭಯ ನೀಡಿದರು.
ಜ. 01 ರಿಂದ ಶಾಲಾ-ಕಾಲೇಜು ಪುನಾರಂಭದ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆಯಿದು!
'ಕೋವಿಡ್ ಓಡಿಸೋಣ.. ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ…' ಎಂಬ ಧ್ಯೇಯದೊಂದಿಗೆ ಆರಂಭವಾಗಲಿರುವ ಈ ಶೈಕ್ಷಣಿಕ ವರ್ಷ ಮಕ್ಕಳ ಬಾಳಿಗೆ ಒಂದು ಹೊಸ ಪರ್ವಕಾಲವಾಗಿ ಹೊರಹೊಮ್ಮಲಿದೆ. ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಶಾಲೆಗಳು ಮುಚ್ಚಿಕೊಂಡಿದ್ದವು, ಮೈದಾನಗಳು ಬಿಕೋ ಎನ್ನುತ್ತಿದ್ದವು. ಅದೆಲ್ಲಕ್ಕೂ ಅಂತ್ಯ ಎನ್ನುವಂತೆ ಶಾಲೆಗಳು ಆರಂಭವಾಗುತ್ತಿರುವುದು ಮಕ್ಕಳು ಮತ್ತು ಪೋಷಕರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಮ್ಮ ಒಪ್ಪಿಗೆ ಪತ್ರ ನೀಡಿ ಕಳಿಸಬೇಕು ಎಂದು ಹೇಳಿದರು.
ಶಾಲೆಗಳು ಆರಂಭವಾಗುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮಕ್ಕಳಂತೂ ಶಾಲೆಯಲ್ಲಿ ಬಹುದಿನಗಳ ನಂತರ ತಮ್ಮ ಗೆಳೆಯರನ್ನು ನೋಡಲು ಕಾತರರಾಗಿ ಶಾಲೆ ಆರಂಭವಾಗು ಕ್ಷಣಗಣನೆಯಲ್ಲಿದ್ದಂತೆ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
'ಮಕ್ಕಳಿಗೆ ಶೀತ, ಜ್ವರ, ನೆಗಡಿ ಇದ್ರೆ ಬೇಡ'
ಮಕ್ಕಳಿಗೆ ಶೀತ, ಜ್ವರ, ನೆಗಡಿಯಂತ ಲಕ್ಷಣಗಳಿದ್ದರೆ ಕಳುಹಿಸುವುದು ಬೇಡ. ನಮಗೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಿಂತ ಅವರ ಆರೋಗ್ಯವೂ ಸಹ ಮುಖ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ. ಪ್ರತಿ ಸಂಜೆಯೂ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ದಿನ ಮಕ್ಕಳ ಆರೋಗ್ಯದ ಕಡೆ ಓರ್ವ ಶಿಕ್ಷಕರು ಕಣ್ಗಾವಲು ಇಟ್ಟಿರುತ್ತಾರೆ. ರೋಗ ಲಕ್ಷಣವಿರುವುದು ಕಂಡು ಬಂದರೆ ಅಂತಹ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಮುಂದಿನ ಆರೋಗ್ಯ ತಪಾಸಣೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಮಕ್ಕಳ ಸುರಕ್ಷಿತ ಶಿಕ್ಷಣಕ್ಕಾಗಿ ಆರೋಗ್ಯ, ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿವೆ. ಇಡೀ ರಾಜ್ಯ ಸರ್ಕಾರವೇ ನಿಮ್ಮ ಮಕ್ಕಳ ಹಿತದೃಷ್ಟಿಗೆ ಟೊಂಕ ಕಟ್ಟಿ ನಿಂತಿದೆ ಎಂದು ವಿವರಿಸಿದರು.