ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ನಿರ್ಮಾಣ| ಗ್ರಾಮೀಣಾಭಿವೃದ್ಧಿ ಇಲಾಖೆ ಜತೆ ಸೇರಿ ಯೋಜನೆ| ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರ ಅಳವಡಿಕೆ: ಸಚಿವ ಸುರೇಶ್ ಕುಮಾರ್|
ಬೆಂಗಳೂರು(ಜ.22): ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ನಿರ್ಮಾಣ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗದ ಶಾಲೆಗಳ ಸುಸ್ಥಿರ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೆರವಿನಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ಸಮಗ್ರ ಶಿಕ್ಷಣ ಕರ್ನಾಟಕ ಸಭಾಂಗಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೃಹತ್ ಅಭಿವೃದ್ಧಿ ಆಂದೋಲನದಡಿ ಸುಮಾರು 1500ಕ್ಕೂ ಹೆಚ್ಚು ಶಾಲೆಗಳಲ್ಲಿ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು.
ಶುದ್ಧ ಕುಡಿಯುವ ನೀರು ಘಟಕಗಳಿಂದ ಶಾಲೆಗಳಿಗೆ ಉಚಿತವಾಗಿ ನೀರು ಪೂರೈಕೆಗೆ ಆದೇಶ ಮಾಡಲಾಗಿದೆ. ಇದರ ಭಾಗವಾಗಿ ಕೊಳವೆ ಸಂಪರ್ಕದಿಂದ ಶಾಲೆಗಳ ಸಂಪ್‌ಗೆ ಹರಿಸಿ ಅಲ್ಲಿಂದ ಶಾಲೆಯ ಮೇಲಿನ ಟ್ಯಾಂಕ್‌ಗೆ ತುಂಬಿಸಿ ಶೌಚಾಲಯ, ಅಡುಗೆ ಮನೆ ಮತ್ತು ಕೈತೊಳೆಯುವ ಸ್ಥಳಗಳಿಗೆ ಪೂರೈಸಲು ಪೈಪ್‌ಲೈನ್ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ
ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರ ಅಳವಡಿಕೆ:
ಶಾಲೆಗಳಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಲಾಗುವುದು. ಹಿತ್ತಲ ಕೈದೋಟಗಳ ವ್ಯವಸ್ಥೆ ಕೈಗೊಳ್ಳಲಾಗುವುದು. ಋುತುಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ಶಾಲಾ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವುದರೊಂದಿಗೆ ಶಾಲೆಗಳ ಸಮೀಪ ಮತ್ತು ಆಯ್ದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಯೋಗಾತ್ಮಕವಾಗಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಅಳವಡಿಸಲಾಗುವುದು ಎಂದು ತಿಳಿಸಿದರು.
ಕೈತೋಟದ ಉತ್ಪನ್ನ ಬಿಸಿಯೂಟಕ್ಕೆ:
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶಾಲೆಗಳ ಅಭಿವೃದ್ಧಿಗೆ ಶಾಲಾ ಶೌಚಾಲಯ ನಿರ್ಮಾಣ, ಶಾಲಾ ಅಡುಗೆ ಕೋಣೆ, ಶಾಲಾ ಕಾಂಪೌಂಡ್ ನಿರ್ಮಾಣ, ಶಾಲೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ, ಶಾಲಾ ಆಟದ ಮೈದಾನ ಮತ್ತು ಶಾಲಾ ಪೌಷ್ಟಿಕ ಕೈದೋಟಗಳನ್ನು ನಿರ್ಮಾಣ ಮಾಡಲಾಗುವುದು. ಶಾಲಾ ಪೌಷ್ಟಿಕ ಕೈದೋಟದ ಉತ್ಪನ್ನಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು.
500 ಮಕ್ಕಳಿರುವ ಶಾಲೆಗಳಿಗೆ ಅಂದಾಜು 6.20 ಲಕ್ಷ ರು. ವೆಚ್ಚದಲ್ಲಿ 390 ಚದರ ಅಡಿ ವಿಸ್ತೀರ್ಣದಲ್ಲಿ ಶಾಲಾ ಅಡುಗೆ ಕೋಣೆ ನಿರ್ಮಿಸಲಾಗುವುದು. ಇದರ ಪೂರ್ಣ ಮೊತ್ತ ಭರಿಸಲು ನರೇಗಾದಲ್ಲಿ ಅವಕಾಶವಿಲ್ಲವಾದ್ದರಿಂದ 15ನೇ ಹಣಕಾಸು ಯೋಜನೆ ಮೂಲಕ ಇಲಾಖೆ ಅನುದಾನ ಒಗ್ಗೂಡಿಸಲಿದೆ. 2020-21ನೇ ಸಾಲಿನಲ್ಲಿ 29 ಜಿಲ್ಲೆಗಳ 1222 ಶಾಲೆಗಳಿಗೆ ಕಾಂಪೌಂಡ್ ಗೋಡೆ, ಆಟದ ಮೈದಾನ ನಿರ್ಮಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆಯ ಹಲವು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.