Karnataka Politics ಸಿಎಂ ಮನೆ ಮುಂದೆ ಹೋದ ರೇವಣ್ಣ, ಎದುರೇಟು ಕೊಟ್ಟ ಸಚಿವ ಅಶ್ವತ್ಥನಾರಾಯಣ

By Suvarna News  |  First Published Jan 18, 2022, 6:57 PM IST

* ಹೊಳೆನರಸೀಪುರ ಸರ್ಕಾರಿ ಕಾಲೇಜ್ ಗೆ ಹೊಸ ಕೋರ್ಸ್ ನೀಡುವ ವಿಚಾರ
* ಎಚ್.ಡಿ.ರೇವಣ್ಣ ಧರಣಿ ತಂತ್ರಕ್ಕೆ ಸಚಿವ ಅಶ್ವತ್ಥನಾರಾಯಣ ಎದುರೇಟು
* `ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ’ ಎಂದ ಅಶ್ವತ್ಥ್ ನಾರಾಯಣ
 


ಬೆಂಗಳೂರು/ಹಾಸನ, (ಜ.18): ಹೊಳೆನರಸೀಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸದಾಗಿ ಎರಡು ವಿಭಾಗಗಳನ್ನು ಮಂಜೂರು ಮಾಡುವಂತೆ ಎಚ್‌ಡಿ ರೇವಣ್ಣ ಅವರ ಸಿಎಂ ನಿವಾಸದ ಎದುರು ಧರಣಿಗೆ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ ಎದುರೇಟು ಕೊಟ್ಟಿದ್ದಾರೆ.

ರಾಜ್ಯದ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (First Grade Degree College)  ಗುಣಮಟ್ಟದ ಶಿಕ್ಷಣ ದೊರಕಬೇಕೆನ್ನುವುದೇ ಸರಕಾರದ ಸಂಕಲ್ಪವಾಗಿದೆ. ಈ ವಿಷಯದಲ್ಲಿ ವ್ಯವಸ್ಥೆಯ ಸುಧಾರಣೆಯ ಕಡೆಗೆ ಆದ್ಯತೆ ಕೊಡಬೇಕೇ ವಿನಾ ವೈಯಕ್ತಿಕ ಪ್ರತಿಷ್ಠೆಯಿಂದ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ(HD Revanna) ಅವರು ಧರಣಿಗೆ ಮುಂದಾಗಿದ್ದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr CN Ashwath Narayan) ಪ್ರತ್ಯುತ್ತರ ಕೊಟ್ಟಿದ್ದಾರೆ. 

Tap to resize

Latest Videos

ತಾವು ಪ್ರತಿನಿಧಿಸುತ್ತಿರುವ ಹೊಳೆನರಸೀಪುರದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಫುಡ್ & ನ್ಯೂಟ್ರಿಷನ್ ವಿಷಯಗಳಲ್ಲಿ ಎಂ.ಎಸ್ಸಿ ಪದವಿ ಆರಂಭಿಸಲು ಉನ್ನತ ಶಿಕ್ಷಣ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆಂದು ಆರೋಪಿಸಿ ರೇವಣ್ಣ ಅವರು ಮುಖ್ಯಮಂತ್ರಿಗಳ ಗೃಹಕಚೇರಿ ಎದುರು ಧರಣಿ ನಡೆಸಲು ಮಂಗಳವಾರ ಮುಂದಾಗಿದ್ದರು.

ಸಿಎಂ ಮನೆ ಮುಂದೆ ಏಕಾಂಗಿ ಧರಣಿ: ಎಚ್‌.ಡಿ.ರೇವಣ್ಣ

`ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇನ್ನೂ 8-10 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಕಾಲೇಜೂ ಇಲ್ಲ. ಈಗಿರುವ ಕಾಲೇಜುಗಳಲ್ಲೇ ಮೂಲಸೌಲಭ್ಯ, ಪ್ರಯೋಗಾಲಯ ಮತ್ತು ಸಿಬ್ಬಂದಿ ಕೊರತೆ ತೀವ್ರವಾಗಿದೆ. ಮೂಲಸೌಲಭ್ಯ ಸುಧಾರಣೆಗೆ 3,000 ಕೋಟಿ ರೂ. ಅಗತ್ಯವಿದೆ. ಜತೆಗೆ, ಈಗಿರುವ ಸ್ನಾತಕೋತ್ತರ ಕೇಂದ್ರಗಳನ್ನೇ ಸುಧಾರಿಸಬೇಕಾದ ತುರ್ತಿದೆ. ಹೀಗಾಗಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎರಡು ವರ್ಷಗಳಿಂದ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ಅನುಮತಿ ನೀಡುತ್ತಿಲ್ಲ. ಸ್ವತಃ ಸಚಿವರಾಗಿ ಅನುಭವವಿರುವ ರೇವಣ್ಣನವರಿಗೆ ಇದು ಗೊತ್ತಿಲ್ಲವೇ?’ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು. 

`ಹೊಳೆನರಸೀಪುರ ಕ್ಷೇತ್ರವೊಂದರಲ್ಲೇ 8 ಸರಕಾರಿ ಪ್ರಥಮ ದರ್ಜೆ,  6 ಸ್ನಾತಕೋತ್ತರ, 3 ಪಾಲಿಟೆಕ್ನಿಕ್, 1 ಸರಕಾರಿ ಎಂಜಿನಿಯರಿಂಗ್ ಮತ್ತು ಐದು‌ ಐಟಿಐ ಕಾಲೇಜುಗಳಿವೆ. ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳಿಗೆ 65.40 ಕೋಟಿ ರೂ. ಮತ್ತು ಸಾಧನ-ಸಲಕರಣೆಗಳ ಖರೀದಿಗೆ 93.26 ಲಕ್ಷ ರೂ.ಗಿಂತ ಹಣ ಕೊಡಲಾಗಿದೆ. ಇಲ್ಲಿನ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಗೆ 84 ಕೋಟಿ ರೂ. ಹಾಗೂ ಸಾಧನ-ಸಲಕರಣೆಗಳಿಗೆಂದು 1.80 ಕೋಟಿ ರೂ. ಕೊಡಲಾಗಿದೆ. ಅಂದಮೇಲೆ, ತಾರತಮ್ಯದ ಪ್ರಶ್ನೆ ಎಲ್ಲಿ ಬಂತು?’ ಎಂದು ಅವರು ಅಂಕಿಅಂಶಗಳ ಸಮೇತ ಉತ್ತರಿಸಿದರು. 

ಸ್ನಾತಕೋತ್ತರ ಕೋರ್ಸುಗಳು ವಿಶ್ವವಿದ್ಯಾಲಯದ ಮಟ್ಟದಲ್ಲೇ ಇರುವುದು ಶೈಕ್ಷಣಿಕವಾಗಿ ಒಳ್ಳೆಯದು. ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟಗಳಲ್ಲಿ ಒಬ್ಬರೇ ಬೋಧಕರಿದ್ದರೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಸಚಿವರು ಪ್ರತಿಪಾದಿಸಿದರು.     

`ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇರುವ 9 ಸಾವಿರ ತರಗತಿಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮಾಡಲಾಗಿದೆ. ಉಳಿದ 6,500 ಕೊಠಡಿಗಳನ್ನೂ ಸ್ಮಾರ್ಟ್ ಕ್ಲಾಸ್ ರೂಮ್ ಮಾಡಲು  ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ’ ಎಂದು ಅವರು ಹೇಳಿದರು.

click me!