ಜಿಲ್ಲೆಯ ಇಬ್ಬರು ಶಿಕ್ಷಕಿಯರು ಈ ಸಲದ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರುಣಾ ನರೇಂದ್ರ ಹಾಗೂ ಕುಷ್ಟಗಿ ತಾಲೂಕಿನ ನೆರೆಬೆಂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿದ್ಯಾ ಶಿವಾನಂದ ಕಂಪಾಪೂರಮಠ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೊಪ್ಪಳ (ಸೆ.3) : ಜಿಲ್ಲೆಯ ಇಬ್ಬರು ಶಿಕ್ಷಕಿಯರು ಈ ಸಲದ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರುಣಾ ನರೇಂದ್ರ ಹಾಗೂ ಕುಷ್ಟಗಿ ತಾಲೂಕಿನ ನೆರೆಬೆಂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿದ್ಯಾ ಶಿವಾನಂದ ಕಂಪಾಪೂರಮಠ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಶಿಕ್ಷಕಿಯರಿಗೆ ರಾಜ್ಯ ಸರ್ಕಾರವು ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.
ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ
undefined
ವಿದ್ಯಾ ಕಂಪಾಪೂರಮಠ ಸಾಧನೆ: ಶಿಕ್ಷಕಿ ವಿದ್ಯಾ ಕಂಪಾಪೂರಮಠ ಅವರು 1997ರಲ್ಲಿ ಶಿಕ್ಷಕ ವೃತ್ತಿಗೆ ಪದಾರ್ಪಣೆ ಮಾಡಿದ್ದು, ಕಳೆದ 26 ವರ್ಷಳಿಂದ ಮಕ್ಕಳಿಗೆ ಗುಣಮಟ್ಟಶಿಕ್ಷಣ, ನಾನಾ ಕ್ರಿಯಾಶೀಲ ಚಟುವಟಿಕೆ ನೀಡುತ್ತಾ ಬಂದಿದ್ದಾರೆ. ಒಬ್ಬ ಉತ್ತಮ ಸಂಪನ್ಮೂಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕ್ರಿಯಾಶೀಲ ಚಟುವಟಿಕೆಗಳು ಶಿಕ್ಷಣ ಇಲಾಖೆಗೆ ಮಾದರಿಯಾಗಿವೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾ ಕಂಪಾಪೂರಮಠ ಅವರು ಗುರುತಿಸಿಕೊಂಡಿದ್ದಾರೆ. ಶಿಕ್ಷಕಿಯಾಗಿ, ಸಾಹಿತ್ಯಾತ್ಮಕವಾಗಿಯೂ ಸೇವೆ ಸಲ್ಲಿಸಿದ್ದಾರೆ. ವಚನಗಳ ಹಾಡುವುದು ಅಂದರೆ ವಿದ್ಯಾ ಅವರಿಗೆ ಎಲ್ಲಿಲ್ಲದ ಪ್ರೀತಿ.
ಶಾಲೆಯ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳೆಂದೇ ಭಾವಿಸಿದ್ದೇನೆ. ಅವರಿಗೆ ಶಿಕ್ಷಣದಲ್ಲಿ ಏನೂ ಕೊರತೆ ಆಗಬಾರದು ಎಂಬ ಆಶಯ ನನ್ನದು. ಮಕ್ಕಳಿಗೆ ಅಭ್ಯಾಸವನ್ನು ಹಾಡುತ್ತಾ, ಆಟ ವಾಡಿಸುತ್ತಾ ಮಾಡಿಸಿದರೆ ಬೇಗ ಕಲಿಯುತ್ತಾರೆ. ರಾಜ್ಯಮಟ್ಟದ ಪ್ರಶಸ್ತಿ ಶಾಲೆಯ ಮಕ್ಕಳು ನೀಡಿದ ಉಡುಗೊರೆ ಎಂದು ಭಾವಿಸಿಕೊಂಡಿದ್ದೇನೆ.
ವಿದ್ಯಾ ಕಂಪಾಪೂರಮಠ, ನೆರೆಬೆಂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ
ಶಾಲೆಯಲ್ಲಿ ಅರುಣೋದಯ: ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರುಣಾ ನರೇಂದ್ರ ಅವರು ಎಸ್‌ಎಸ್‌ಎಲ್‌ಸಿ, ಟಿಸಿಎಚ್ ಓದಿ ಶಿಕ್ಷಕಿಯಾಗಿ ರಾಯಚೂರಿನಲ್ಲಿ 1989ರಲ್ಲಿ ಏಕೋಪಾಧ್ಯಾಯರಾಗಿ ನಾಲ್ಕು ವರ್ಷ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ನಂತರ ಪಿಯುಸಿ, ಬಿಎ, ಎಂಎ ಓದಿದರು. ಬಳಿಕ ಹಿಂದಿ ಬಿಎಡ್ ಅಭ್ಯಾಸ ಮಾಡಿದರು. 1998ರಲ್ಲಿ ಕೊಪ್ಪಳದ ಹೊಸಗೊಂಡಬಾಳ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಕಿಯಾಗಿ ವರ್ಗಾವಣೆ ಆದ ಇವರು ನಂತರ ಮುಖ್ಯೋಪಾಧ್ಯಾಯರಾಗಿ ಮುಂಬಡ್ತಿ ಹೊಂದಿ ಕೊಪ್ಪಳದಲ್ಲಿ ಸೇವೆ ಸಲ್ಲಿಸಿದರು. 2010ರಲ್ಲಿ ಕಿನ್ನಾಳದ ಸರ್ಕಾರಿ ಪ್ರೌಢ ಶಾಲೆಗೆ ಹಿಂದಿ ಶಿಕ್ಷಕರಾಗಿ ನೇಮಕರಾದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಹಂಬಲ ಅರುಣಾ ಅವರದು. ತಾವು ಎಲ್ಲೇ ಸೇವೆಗೆ ಹೋದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು. ಸರ್ಕಾರದ ಕಪ್ಪು ಹಲಗೆ ಯೋಜನೆ, ನಾನಾ ಹೊಸ ತನದ ಕಲಿಕಾ ಯೋಜನೆ, ಚಟುವಟಿಕೆ ಮೂಲಕ ಬೋಧನೆ, ಚಿಣ್ಣರ ಅಂಗಳ, ಬಿಸಿಯೂಟದಂಥ ನಾನಾ ಸರ್ಕಾರದ ಶೈಕ್ಷಣಿಕ ಪೂರಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೈದ ಶಿಕ್ಷಕರಲ್ಲಿ ಅರುಣಾ ನರೇಂದ್ರ ಅವರು ಒಬ್ಬರು. ಶಿಕ್ಷಕ ವೃತ್ತಿ ಜತೆಗೆ ಸಾಹಿತ್ಯದ ಒಲವು ಸಹ ಇವರಿಗಿದೆ. ಮಕ್ಕಳ ಮನ ಮುಟ್ಟುವಂತೆ ಪಾಠ ಮಾಡುತ್ತಾರೆ. ಅರುಣಾ ಅವರು 15 ಪುಸ್ತಕ ಬರೆದಿದ್ದಾರೆ. ಹಾಯ್ಕು, ಗಜಲ್, ಆಧುನಿಕ ವಚನ, ಮಕ್ಕಳ ಸಾಹಿತ್ಯದ ಪುಸ್ತಕ ಬರೆದು ಛಾಪು ಮೂಡಿಸಿದ್ದಾರೆ.
ಪಠ್ಯಪುಸ್ತಕ ರಚನಾ ಸಮಿತಿ ಆಂಗ್ಲ ಮಾಧ್ಯಮದ 3ನೇ ತರಗತಿ ಕನ್ನಡ ಪುಸ್ತಕದಲ್ಲಿ ಅರುಣಾ ನರೇಂದ್ರ ಅವರ ಒಂದು ಮಕ್ಕಳ ಕವಿತೆಯು ಆಯ್ಕೆಯಾಗಿದೆ. ರಾಜ್ಯದ ಮಕ್ಕಳು ಪ್ರಸ್ತುತ ಕವಿತೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಬಸ್ ಇಲ್ಲದೆ ಜೆಸಿಬಿ ಏರಿ ಶಾಲೆಗೆ ಬರ್ತಾರೆ ಮಕ್ಕಳು; ಶಿರಗುಂಪಿ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ!
ಕಡುಬಡತನದಲ್ಲಿ ಬೆಳೆದು ಅಭ್ಯಾಸ ಮಾಡಿ ಶಿಕ್ಷಕಿಯಾದೆ. ಆ ಅನುಭವ ಮಕ್ಕಳಿಗೆ ಪಾಠ ಮಾಡುವಾಗ ಸಹ ಇದೆ. ಮಕ್ಕಳು ಯಾಕೆ ಶಾಲೆ ಬಿಟ್ಟರು, ಅವರು ಕಲಿಕೆಯಲ್ಲಿ ಯಾಕೆ ಹಿಂದುಳಿದಿದ್ದಾರೆ ಎಂಬುದನ್ನು ಅವಲೋಕಿಸಿದರೆ ಮಗುವನ್ನು ಉತ್ತಮವನ್ನಾಗಿ ಮಾಡಬಹುದು. ಪ್ರಶಸ್ತಿ ಬಂದಿರುವುದು ಖುಷಿ ಆಗಿದೆ.
ಅರುಣಾ ನರೇಂದ್ರ, ಕಿನ್ನಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕಿ