ಮೊಟ್ಟ ಮೊದಲು ಖಾಸಗಿ ಶಾಲೆಗಳ ಕರಾಳ ದಿನ ಆಚರಣೆಯು ನ್ಯಾಯಯುತವಾಗಿದೆಯೇ ಹಾಗೂ ಸಾರ್ವಜನಿಕರ, ಮಕ್ಕಳ, ವಿದ್ಯಾರ್ಥಿಗಳ, ಸಮಾಜದ ಹಿತದೃಷ್ಟಿಯಲ್ಲಿದೆಯೇ ಎಂದು ತಿಳಿಯಬೇಕು.
ವಿದ್ಯಾಸಾಗರ್ ಬೆಂಗಳೂರು, ಲೇಖಕರು
ಕರಾಳ ದಿನ ಆಚರಣೆಗೆ ಆಗಸ್ಟ್ 15 ರ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದೇ ಖಾಸಗಿ ಶಾಲೆಗಳು ಮಾಡಿದ ಮೊಟ್ಟ ಮೊದಲ ಎಡವಟ್ಟು ಮತ್ತು ದೊಡ್ಡ ತಪ್ಪು. ದೇಶದ ಸ್ವಾತಂತ್ರ್ಯೋತ್ಸವ ಸಡಗರದ ಶ್ರೇಷ್ಠ ದಿನವನ್ನೇ ಕರಾಳ ದಿನವನ್ನಾಗಿ ಆಚರಿಸಲು ಅಣಿಯಾಗಿದ್ದಾರೆ ಎಂಬಲ್ಲಿಗೆ ಖಾಸಗಿ ಶಾಲೆಗಳ, ಶಾಲೆಗಳ ಆಡಳಿತ ಮಂಡಳಿಗಳ ಉದ್ಧಟತನದ ಪರಮಾವಧಿಗೆ ಮಿತಿಯೇ ಇಲ್ಲ ಎಂದೇ ಅರ್ಥ. ಈ ದಿನದ ಆಯ್ಕೆ ದೇಶಾಭಿಮಾನ ಇಲ್ಲದ ಇವರ ಹತಾಶ ನಡೆ ಹಾಗೂ ಶೈಕ್ಷಣಿಕ ಸೇವಾ ಮನೋಭಾವಕ್ಕೇ ಕೊಡಲಿಯೇಟು ಕೂಡಾ.
undefined
ಮೊಟ್ಟ ಮೊದಲು ಖಾಸಗಿ ಶಾಲೆಗಳ ಕರಾಳ ದಿನ ಆಚರಣೆಯು ನ್ಯಾಯಯುತವಾಗಿದೆಯೇ ಹಾಗೂ ಸಾರ್ವಜನಿಕರ, ಮಕ್ಕಳ, ವಿದ್ಯಾರ್ಥಿಗಳ, ಸಮಾಜದ ಹಿತದೃಷ್ಟಿಯಲ್ಲಿದೆಯೇ ಎಂದು ತಿಳಿಯಬೇಕು. ಇಲ್ಲ ಎಂದಾದಲ್ಲಿ ಖಂಡಿತಾ ಸಾರ್ವಜನಿಕರಿಗೆ ವ್ಯವಸ್ಥೆಯ ಅನ್ಯಾಯ ಮತ್ತು ಕಾನೂನು ತಿಳುವಳಿಕೆಯನ್ನು ಹಾಗೂ ಶಿಕ್ಷಣ ಇಲಾಖೆಯ ಕೆಲವು ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು. ಹಾಗೂ ಈ ವಿಷಯದ ಬಗ್ಗೆ, ನ್ಯಾಯ - ಅನ್ಯಾಯಗಳ ಬಗ್ಗೆ ಸಾಮುದಾಯಿಕವಾಗಿ ಹಾಗೂ ಸಮಾಜದ, ರಾಜ್ಯದ, ದೇಶದ ಮುಂದಿನ ಪೀಳಿಗೆಗೋಸ್ಕರ ನಿಸ್ವಾರ್ಥ ಚರ್ಚೆಗೆ ಅವಕಾಶ ಕಲ್ಪಿಸಬೇಕು ಹಾಗೂ ಅರಿವು ಮೂಡಿಸಬೇಕು..
ಈ ಖಾಸಗಿ ಶಾಲೆಗಳು - ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕರಾಳ ದಿನ ಆಚರಣೆಗೆ ಮುಂದಾಗಿರುವುದು ವಿದ್ಯಾರ್ಥಿಗಳ, ಸಮಾಜದ , ರಾಜ್ಯದ ಮತ್ತು ದೇಶದ ಶ್ರೇಯೋಭಿವೃದ್ಧಿಗೆ ಅಂದುಕೊಂಡಿದ್ದರೆ ನಿಮಗಿಂತ ದೊಡ್ಡ ಮೂರ್ಖರು ಇನ್ನೊಬ್ಬರಿರಲಿಕ್ಕಿಲ್ಲ. ಈ ಖಾಸಗಿ ಶಾಲೆಗಳು, ಖಾಸಗಿ ಶಾಲೆಗಳ ಒಕ್ಕೂಟ ಕರಾಳ ದಿನ ಆಚರಣೆಗೆ ಮುಂದಾಗಿರುವುದು ಅವರ ಪಟ್ಟಭದ್ರ ಸ್ವಾರ್ಥ ಹಿತಾಸಕ್ತಿಗೇ ವಿನಃ ಇದರಲ್ಲಿ ಲೋಕಕಲ್ಯಾಣದ ಕಿಂಚಿತ್ತು ಲವಲೇಶವೂ ಇಲ್ಲ ಅನ್ನೋದು ಕಟುವಾಸ್ತವ, ಪರಮ ಸತ್ಯ.
ಕರಾಳ ದಿನ ಆಚರಣೆಗೆ ಇವರು ಕೊಟ್ಟ ಕಾರಣ
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ, ಈ ವ್ಯವಸ್ಥೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿಲ್ಲ, ಹಾಗಾಗಿ ಕರಾಳ ದಿನ ಆಚರಣೆಯ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪುಣ್ಯಕ್ಕೆ ಯಾರ ಭ್ರಷ್ಟಾಚಾರ, ಯಾವ ರೂಪದ ಭ್ರಷ್ಟಾಚಾರ ಅಂತ ಕರಾಳ ದಿನ ಆಚರಣೆಗೆ ಕರೆ ಕೊಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಪಷ್ಟ ಪಡಿಸಿಲ್ಲ.
ನಿಮಗೆ ಗೊತ್ತಿರಲಿ: ಇವರು ಕರಾಳ ದಿನ ಆಚರಣೆಗೆ ಮುಂದಾಗಿರುವುದು ಇವರ ಸಾರ್ವಜನಿಕ ವಂಚನೆಗಳ ವಿರುದ್ಧ ಸರ್ಕಾರದ ನಿಯಮಗಳನ್ನು, ಮಕ್ಕಳ ಹಕ್ಕುಗಳನ್ನು, ಮಕ್ಕಳ ಸುರಕ್ಷತಾ ನಿಯಮಗಳನ್ನು, ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು, ದೇಶದ ಮಕ್ಕಳ ಮತ್ತು ವಿದ್ಯಾರ್ಥಿಗಳ ಸಂವಿಧಾನಿಕ ಹಕ್ಕುಗಳನ್ನು ಮತ್ತು ಶುಲ್ಕದ ನಿಯಮಗಳನ್ನು ಉಲ್ಲಂಘನೆ ಮಾಡಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಇವರು ಶೋಷಿಸುತ್ತಿದ್ದು, ಅದರ ವಿರುದ್ಧವಾಗಿ ಯಾರೂ ಚಕಾರ ಎತ್ತಬಾರದೆoದೇ....!! ಇದಕ್ಕಿಂತ ಹಾಸ್ಯಾಸ್ಪದ, ಇದಕ್ಕಿಂತ ವಿಪರ್ಯಾಸ ಇನ್ನೊಂದಿಲ್ಲ. ಯಾಕೆಂದರೆ ಇವರು ಕಲಿತವರು, ಅಲ್ಲಲ್ಲ ಕಲಿಸುವವರು ; ಖಾಸಗಿ / ಅನುದಾನರಹಿತ ಶಿಕ್ಷಣ ಸಂಸ್ಥೆಗಳು.
ಭ್ರಷ್ಟಾಚಾರ ಅಂದ ಕೂಡಲೇ ನಮಗೆಲ್ಲರಿಗೂ ಒಂದು ತಪ್ಪು ಕಲ್ಪನೆಯಿದೆ
ಸಾರ್ವಜನಿಕರ ಹತ್ರ ದುಡ್ಡು ತಗೊಂಡು ಅವರಿಗೆ ಅನುಕೂಲಕರವಾಗಿ ಕರ್ತವ್ಯ ನಿರ್ವಹಿಸೋದಷ್ಟೇ ಭ್ರಷ್ಟಾಚಾರ ಅಲ್ಲ ; ನಿಯಮ ಮತ್ತು ಕಾನೂನುಗಳನ್ನು ಮೀರಿ ಕರ್ತವ್ಯ ನಿರ್ವಹಿಸುವುದು ಕೂಡಾ ಭ್ರಷ್ಟಾಚಾರವೇ. ಮೇಲಿನ ಒಂದು ಮಾತಲ್ಲೇ ಈ ಖಾಸಗಿ ಶಿಕ್ಷಣ ಸಂಸ್ಥೆಗಳು - ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕರಾಳ ದಿನ ಆಚರಣೆಗೆ ಮುಂದಾಗಿರುವ ಉದ್ದೇಶ ಏನು ಎಂದು ಸ್ಪಷ್ಟ ಪಡಿಸಲಾಗಿದೆ. ದೇಶದ ಸಂವಿಧಾನ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಶಾಲೆಗಳು / ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ.
ಮಕ್ಕಳ ಹಕ್ಕು, ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಶೈಕ್ಷಣಿಕ ಒತ್ತಡ ನಿರ್ವಹಿಸುವುದು ಎಲ್ಲಾ ಶಾಲಾ - ಕಾಲೇಜುಗಳ ಕರ್ತವ್ಯ. ಈ ಉಲ್ಲಂಘನೆಗಳಿಂದಾಗಿ ರಾಜ್ಯದಅಲ್ಲಿ ಮತ್ತು ದೇಶದಲ್ಲೂ ಸಾಕಷ್ಟು ಅವಘಡಗಳು ಘಟಿಸಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಬಗೆಯ ಘಟನೆಗಳಲ್ಲಿ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ, ಆತ್ಮಹತ್ಯೆಗೂ ಶರಣಾಗಿದ್ದಾರೆ. ತತ್ಸಬಂಧ ರಾಜ್ಯ ಶಿಕ್ಷಣ ಇಲಾಖೆಗೆ, ರಾಜ್ಯ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳೂ ಬಂದಿವೆ.... ಈ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಿದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ..
ವಿಶೇಷ ಗೊತ್ತಾ?
ಅಧಿಕಾರಿಗಳು ಯಾವುದೇ ಹೊಸ ನಿಯಮಗಳನ್ನು ವಿಧಿಸಿಲ್ಲ ; ಇರುವ ನಿಯಮಗಳನ್ನೇ ನಿಯಮಗಳ ಪ್ರಕಾರ ಅನುಷ್ಠಾನಗೊಳಿಸುತ್ತಿದ್ದಾರೆ ಅಷ್ಟೆ.... ಅಷ್ಟಕ್ಕೇ ಖಾಸಗಿ ಅನುದಾನರಹಿತ ಶಾಲೆಗಳು - ಶಿಕ್ಷಣ ಸಂಸ್ಥೆಗಳು ಬೊಬ್ಬೆ ಹಾಕುತ್ತಿವೆ ದೇಶದ ಸ್ವಾತಂತ್ರ್ಯೋತ್ಸವ ದಿನದಂದೇ ಕರಾಳ ದಿನ ಆಚರಣೆಯ ಬೆದರಿಕೆ ಒಡ್ಡಿವೆ. ನಾನು ಮೊದಲೇ ಹೇಳಿದಂತೆ ನಿಯಮ ಮತ್ತು ಕಾನೂನುಗಳನ್ನು ಮೀರಿ ಕರ್ತವ್ಯ ನಿರ್ವಹಿಸುವುದು ಕೂಡಾ ಭ್ರಷ್ಟಾಚಾರವೇ. ದೇಶದ ಸಂವಿಧಾನ, ಮಕ್ಕಳ ಹಕ್ಕು, ಆರ್ ಟಿ ಯಿ ನಿಯಮಗಳನ್ನು, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಶಾಲೆಗಳು / ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೇ ಬೆದರಿಕೆ ಒಡ್ದುವ ಹಂತಕ್ಕೆ ಬೆಳೆದು ನಿಂತಿದ್ದಾರೆ ಎಂಬಲ್ಲಿಗೆ ಇವರ ಲಾಬಿ ಯಾವ ಮಟ್ಟದಲ್ಲಿದೆ ಎಂದು ತಿಳಿಯಿರಿ.
ನಿಯಮಬಾಹಿರ ಚಟುವಟಿಕೆಗಳಿಗೆ ಒಪ್ಪಿಗೆಯ ಷರಾ ಕೊಡಿ ಎಂದು ಬೆದರಿಕೆ ಹಾಕುವ ಈ ಬಗೆಯ ಧೋರಣೆಯನ್ನು ಏನoಥ ಕರೆಯಬೇಕು ಹೇಳಿ. ಶಿಕ್ಷಣ ಇವತ್ತು ಸೇವೆಯಾಗಿ ಉಳಿದಿಲ್ಲ, ಉದ್ಯಮವಾಗಿ - ದಂಧೆಯಾಗಿ ಮಾರ್ಪಟ್ಟಿದೆ.... ಮತ್ತೆ ಪುನಃ ಶಿಕ್ಷಣ ಕ್ಷೇತ್ರವನ್ನು ಸೇವಾಕ್ಷೇತ್ರವಾಗಿ ಪುನರ್ ಪ್ರತಿಷ್ಠಾಪಿಸಬೇಕಾದ ಹೊಣೆಗಾರಿಕೆ ಯಾರದ್ದು. ಸರ್ಕಾರ ಮತ್ತು ಅಧಿಕಾರಿಗಳು ಮಾತ್ರವಾ ಅಥವಾ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ಇದೆಯೇ? - ವಿಶೇಷವಾಗಿ ಖಾಸಗಿ ಶಾಲೆಗಳಲ್ಲಿ ತಮ್ಮ ತಮ್ಮ ಮಕ್ಕಳನ್ನು ಓದಿಸುವ ಪೋಷಕರ ಪಾತ್ರ ಇಲ್ಲಿ ಮಹತ್ತರವಾಗಬೇಕಿದೆ.
ಖಾಸಗಿ ಶಾಲೆಗಳು / ಅನುದಾನರಹಿತ ಶಿಕ್ಷಣ ಸಂಸ್ಥೆಗಳು ದೇಶದ ಸಂವಿಧಾನ, ಮಕ್ಕಳ ಹಕ್ಕು, ಆರ್.ಟಿ.ಇ. ನಿಯಮಗಳು, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಕಾಯಿದೆಯ ಯಾವ ಯಾವ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿವೆ....? ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳ ಪೋಷಕರೇ ಕರಾಳ ದಿನ ಆಚರಿಸಬೇಕಾದ ಅನಿವಾರ್ಯತೆ ಏನು....? - ಒಂದೊಂದಾಗಿ ನೋಡೋಣ ಬನ್ನಿ.... ಈ ಕೆಳಕಂಡ ಎಲ್ಲಾ ಉಲ್ಲಂಘನೆಗಳು ಶಿಕ್ಷಣ ಇಲಾಖೆಯ ಆಂತರಿಕ ತನಿಖೆಯಲ್ಲಿ, ಶಾಲಾ ಮತ್ತು ಪಿಯು ಬೋರ್ಡ್ ಇಲಾಖಾ ವರದಿಯಲ್ಲಿ ರುಜುವಾತಾಗಿವೆ ಎನ್ನುವುದು ನಿಮ್ಮ ಗಮನದಲ್ಲಿರಲಿ :
1. ಶೈಕ್ಷಣಿಕ ಅವಧಿಗೆ ಮುಂಚಿತವಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ದಾಖಲಿಸುತ್ತಿರುವುದು.... ಶೈಕ್ಷಣಿಕ ಅವಧಿಗೆ ಮುಂಚೆಯೇ ಅಂದರೆ 10 ನೇ ತರಗತಿ ಓದುತ್ತಿರುವಾಗಲೇ ಮಕ್ಕಳನ್ನು ಪಿಯು ಕಾಲೇಜಿಗೆ ದಾಖಲು ಮಾಡುತಿದ್ದು, ಇದು ಶಿಕ್ಷಣ ನಿಯಮ 14(7), 14(13) ರ ನೇರ ಉಲ್ಲಂಘನೆಯಾಗಿರುತ್ತದೆ.
2. ಶಾಲಾ ಮತ್ತು ಪಿಯು ಶಿಕ್ಷಣ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿದ್ಯಾರ್ಥಿ ಪ್ರವೇಶ ರೋಸ್ಟರ್ ನಿಯಮಗಳನ್ನು ಉಲ್ಲಂಘಿಸಲಾಗಿದೆ.... ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಮಕ್ಕಳ ಮತ್ತು ಪಿಯು ವಿದ್ಯಾರ್ಥಿಗಳ 50% ರೋಸ್ಟರ್ ಆಧಾರಿತ ಪ್ರವೇಶ ನಿಯಮಗಳ ಪ್ರಕಾರ ತಮ್ಮ ಒಟ್ಟು ಪ್ರವೇಶಾತಿಯಲ್ಲಿ 50% ಸೀಟುಗಳನ್ನು ಒಬಿಸಿ / ಹಿಂದುಳಿದ ವರ್ಗ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಿರಿಸಬೇಕು. ಕಳೆದ ಹಲವು ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಒಬಿಸಿ / ಹಿಂದುಳಿದ ವರ್ಗ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳನ್ನು ಈ ನೆಲೆಯಲ್ಲಿ ವಂಚಿಸಿದ್ದು ಸದರಿ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಇದು ಗಂಭೀರವಾದ ಸಾಂವಿಧಾನಿಕ ಉಲ್ಲಂಘನೆಯಾಗಿದೆ.... ಇದು 14(1) ರಿಂದ 14(16) ಮತ್ತು 14(18) ಶಿಕ್ಷಣ ಕಾಯಿದೆ ನಿಯಮಗಳ ಉಲ್ಲಂಘನೆಯಾಗಿರುತ್ತದೆ.... ಸಂವಿಧಾನದ ಹಕ್ಕುಗಳನ್ನು ಕಾಪಾಡಬೇಕಾದದ್ದು ದೇಶದ ಪ್ರತಿಯೊಬ್ಬ ಪ್ರಜೆ ಮತ್ತು ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎನ್ನುವ ಕನಿಷ್ಟ ಪ್ರಜ್ಞೆ ಇವರಿಗಿಲ್ಲದಂತೆ ಕಾಣುತ್ತಿದೆ. ಇಂತಹ ಉಲ್ಲಂಘನೆಗಳನ್ನು ನೋಡಿಕೊಂಡು ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ಮಾಡದೇ ಸುಮ್ಮನೆ ಕೂರಬೇಕೇ....? ಸಾಮಾಜಿಕ ನ್ಯಾಯದ ಮಾತಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಪಟ್ಟ ಸಂಘಟನೆಗಳು ಇತ್ತ ಗಮನ ಹರಿಸಿ ಸದರಿ ವಿಚಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ಣಾಯಕ ಹೋರಾಟ, ನಿರ್ಣಾಯಕ ಕ್ರಮ ವಹಿಸಬೇಕಲ್ಲವೇ....? ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರಾಳ ದಿನ ಆಚರಿಸಬೇಕಲ್ಲವೇ?
3. ಶುಲ್ಕದ ನಿಯಮಗಳ ಉಲ್ಲಂಘನೆ..... ಭಾರತ ಸರ್ಕಾರ 2009 ರಲ್ಲಿ ಹೊರಡಿಸಿರುವ ರೈಟ್ ಟು ಎಜುಕೇಶನ್ ಆಕ್ಟ್ - RTE ಮತ್ತು ರಾಜ್ಯ ಶಿಕ್ಷಣ ಕಾಯಿದೆ ನಿಯಮಗಳ ಪ್ರಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಯ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಬೇಕಿದ್ದು, ರಾಜ್ಯದ ಒಂದೇ ಒಂದು ಖಾಸಗಿ ಶಿಕ್ಷಣ ಸಂಸ್ಥೆಯೂ ಈ ಪ್ರಕಾರವಾಗಿ ಪ್ರವೇಶ ಶುಲ್ಕ ನಿಗದಿ ಪಡಿಸಿಲ್ಲ ಅನ್ನೋದು ವಿಷಾದನೀಯ... ಹಾಗೆಯೇ ಈ ಪ್ರವೇಶ ಶುಲ್ಕವನ್ನು ಹೇಗೆ, ಯಾವ ಲೆಕ್ಕಾಚಾರಗಳ ತಳಹದಿಯ ಮೇಲೆ, ಎಷ್ಟು ನಿಗದಿ ಪಡಿಸಲಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವೆಬ್ಸೈಟ್ ನಲ್ಲಿ ಮತ್ತು ಸಂಸ್ಥೆಯ ಕಟ್ಟಡದ ಹೊರಭಾಗದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಯಾವ ಸಂಸ್ಥೆ, ಎಲ್ಲಿ ಪ್ರಕಟಿಸಿದೆ ಹೇಳಿ....??? ರಾಜ್ಯ ಉಚ್ಚ ನ್ಯಾಯಾಲಯ ಕೂಡಾ ಪ್ರವೇಶ ಶುಲ್ಕದ ಪ್ರಕಟಣೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ತೀರ್ಪು ನೀಡಿರುತ್ತದೆ.
ಹಾಗೂ ವಿದ್ಯಾರ್ಥಿ ಪ್ರವೇಶಾತಿ ಮತ್ತು ಶುಲ್ಕದ ವಿಚಾರವಾಗಿ ನಮೂನೆ 01 ರಿಂದ ನಮೂನೆ 14 ಮತ್ತು ನಮೂನೆ 18 ರ ವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ವಹಿಸಬೇಕು ಮತ್ತು ಹಾಗೆ ನಿರ್ವಹಿಸಿದ ದಾಖಲೆಗಳನ್ನು ಆಯಾಯ ಬಿಇಒ, ಡಿಡಿಪಿಐ, ಡಿಡಿಪಿಯು ಅವರಿಗೆ ಸಲ್ಲಿಸಿ ಅವರಿಂದ ಅನುಮೋದನೆ ಪಡೆಯಬೇಕು ಎಂದು ನಿಯಮವೇ ಹೇಳುತ್ತದೆ. ಈ ದಾಖಲೆಗಳನ್ನು ಕಡ್ಡಾಯವಾಗಿ ಐದು ವರ್ಷಗಳ ವರೆಗೂ ನಿರ್ವಹಣೆ ಮಾಡಬೇಕು. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಯಾವ ನಿಯಮಗಳನ್ನೂ ಪಾಲಿಸಿಲ್ಲ.... ನಮ್ಮ ಶಿಕ್ಷಣ ಕಾಯ್ದೆ ನಿಯಮಗಳ ಪ್ರಕಾರ ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ನಾವು ಪಾವತಿಸುತ್ತಿರುವ ದುಬಾರಿ ಶುಲ್ಕ ಮೌಲ್ಯಯುತವಾಗಿದೆಯೇ? ಸಂಸ್ಥೆಯ ಕಟ್ಟಡ ಸ್ವಂತದ್ದಾಗಿದ್ದರೆ ಒಬ್ಬ ವಿದ್ಯಾರ್ಥಿಯಿಂದ ಒಂದು ಬಾರಿ ಮಾತ್ರ ವಿಶೇಷ ಅಭಿವೃದ್ಧಿ ಶುಲ್ಕವನ್ನು ಪಡೆಯಬಹುದಾಗಿದೆ, ಆದರೆ ಆ ಮೊಬಲಗು ರೂ. 2500/- ಅನ್ನು ಮೀರುವಂತಿಲ್ಲ. ಅಥವಾ ಕಟ್ಟಡ ಬಾಡಿಗೆಯ ವಾರ್ಷಿಕ ವೆಚ್ಚ.
ಸಂಸ್ಥೆಯ ಶಿಕ್ಷಕರ ಸಂಬಳದ ವಾರ್ಷಿಕ ವೆಚ್ಚ, ಇತರೆ ಸಿಬ್ಬಂದಿಗಳ ಸಂಬಳ ವೆಚ್ಚ, ಕಟ್ಟಡದ ವಾರ್ಷಿಕ ನಿರ್ವಹಣಾ ವೆಚ್ಚ ಮತ್ತು ಮುಂದಿನ ವರ್ಷದ ಖರ್ಚು - ವೆಚ್ಚಗಳ 30% ಮೀಸಲು ನಿಧಿಗಳ ಒಟ್ಟು ಮೊಬಲಗನ್ನು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಿಂದ ಭಾಗಿಸಿ ಶಾಲಾ ಕಾಲೇಜು ಶುಲ್ಕವನ್ನು ನಿಗದಿ ಪಡಿಸಲಾಗಿದೆಯೇ....? ಮಕ್ಕಳು ಅಥವಾ ವಿದ್ಯಾರ್ಥಿಗಳು ನೀಡಿದ ಶುಲ್ಕ ಅದೇ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸಲ್ಪಡುತ್ತಿದೆಯೇ ಅಥವಾ ಶಿಕ್ಷಣ ಕಾಯಿದೆಯ ನಿಯಮಗಳಿಗೆ ಹೊರತಾಗಿ ಶಾಲಾ ಆಡಳಿತ ಮಂಡಳಿಯ - ಸಂಸ್ಥೆಯ ಬೇರೆ ಬೇರೆ ಸ್ಥಳಗಳ ಬೇರೆ ಬೇರೆ ಶಿಕ್ಷಣ ಶಾಖೆಗಳಿಗೆ ವಿನಿಯೋಗಿಸಲ್ಪಡುತ್ತಿದೆಯೇ...? - ಎನ್ನುವ ವಿವೇಕ, ವಿವೇಚನೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪೋಷಕರು ಬೆಳೆಸಿಕೊಳ್ಳೋದು ಯಾವಾಗ....??? ಖಾಸಗಿ ಸಂಸ್ಥೆಗಳು ಮಕ್ಕಳು ಅಥವಾ ವಿದ್ಯಾರ್ಥಿಗಳು ನೀಡಿದ ಶುಲ್ಕವನ್ನು ಅದೇ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸಿಕೊಳ್ಳದೇ ಬೇರೆ ಬೇರೆ ಸ್ಥಳಗಳ ಬೇರೆ ಬೇರೆ ಶಿಕ್ಷಣ ಶಾಖೆಗಳಿಗೆ ವಿನಿಯೋಗಿಸಿದ್ದರೆ ಇದು ಆದಾಯ ತೆರಿಗೆಯ 80ಜಿ ನಿಯಮಗಳ ಉಲ್ಲಂಘನೆಯಾಗಿರುತ್ತದೆ ಎಂದು ತಿಳಿದಿದೆಯೇ....?
4. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಶುಲ್ಕವನ್ನು ಏರಿಕೆ ಮಾಡುವಾಗ ಶಾಲಾ ಪೋಷಕ - ಶಿಕ್ಷಕರ ಸಂಘದ ಸಭೆಯಲ್ಲಿ ಮಂಡಿಸಿ ಅವರಿಂದ ಅನುಮೋದನೆ ಪಡೆಯಬೇಕು. ಯಾವುದೇ ಖಾಸಗಿ ಶಾಲೆಗಳೂ ಈ ರೀತಿ ಅನುಮೋದನೆ ಪಡೆದಿಲ್ಲ ಎಂದು ತಿಳಿದಿದೆಯೇ...? ಈ ಪ್ರಕ್ರಿಯೆಗಳನ್ನು ದಾಖಲೆಗಳನ್ನು ಆಯಾಯ ಬಿಇಒ, ಡಿಡಿಪಿಐ, ಡಿಡಿಪಿಯು ಗಮನಕ್ಕೂ ತಂದಿಲ್ಲ.... ಕೆಲವು ಸಂಸ್ಥೆಯ ಶುಲ್ಕ ರಶೀದಿಯಲ್ಲಿ ಸಂಸ್ಥೆಯ ಹೆಸರನ್ನು ಮುದ್ರಿಸದೇ ವಿವಿಧ ಬ್ಯಾಂಕ್ ಖಾತೆಗಳಿಗೆ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಆನ್ಲೈನ್ ಮೂಲಕ ವರ್ಗಾವಣೆ ಮಾಡಿರುವ ಹಣಕ್ಕೆ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದೇ ರಸೀದಿ ಕೊಟ್ಟಿಲ್ಲ.... ಇವರು ಕೊಟ್ಟಿರುವ ರಸೀದಿ ಪುಸ್ತಕವನ್ನು ಶಿಕ್ಷಣ ಕಾಯಿದೆ ನಿಯಮದ ಪ್ರಕಾರ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಸ್ಟಾಕ್ ಪುಸ್ತಕದಲ್ಲಿ ನಮೂನೆ 14 ರಂತೆ ನಿರ್ವಹಿಸಬೇಕು ಹಾಗೂ ನಮೂದಿಸಿದ ನಮೂನೆ 14 ರ ಪ್ರತಿಯನ್ನು ಐದು ವರ್ಷಗಳ ಕಾಲ ಸದರಿ ಬಿಇಒ, ಡಿಡಿಪಿಐ, ಡಿಡಿಪಿಯು ಕಚೇರಿಯಲ್ಲಿ ನಿರ್ವಹಣೆ ಮಾಡಬೇಕು ಕೂಡಾ.
ಯಾವುದೇ ತಾಲೂಕು ಮತ್ತು ಜಿಲ್ಲಾ ಕಚೇರಿಯಲ್ಲಿ ಈ ಯಾವುದೇ ನಿಯಮಗಳನ್ನೂ ಪಾಲನೆ ಮಾಡಿಲ್ಲದಿರುವುದು ಮೇಲ್ನೋಟಕ್ಕೆ ಇಲಾಖಾ ವರದಿಯಲ್ಲಿ ಕಂಡು ಬಂದಿದೆ..... ಸೆಕ್ಷನ್ 125, ರೂಲ್ 10(1) ರಿಂದ (9) ಮತ್ತು ಸೆಕ್ಷನ್ 48 ಶಿಕ್ಷಣ ಕಾಯಿದೆಯ ಶುಲ್ಕದ ನಿಯಮಗಳನ್ನು ನೇರವಾಗಿ ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಡೆದಿರುತ್ತಾರೆ....ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶುಲ್ಕದ ರಸೀದಿ ನೀಡುತ್ತಿಲ್ಲ ಮತ್ತು ಈ ಶುಲ್ಕ ರಶೀದಿ ಪುಸ್ತಕಗಳನ್ನು ಅವರು ತತ್ಸoಬಂಧದ ಆಯಾಯ ಬಿಇಒ, ಡಿಡಿಪಿಐ, ಡಿಡಿಪಿಯು ಗಳ ಗಮನಕ್ಕೆ ತಂದು ಅನುಮೋದನೆ ಪಡೆದಿಲ್ಲ. ನಿಯಮಗಳ ಪ್ರಕಾರ ಪ್ರತೀ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿ ಆಯಾಯ ಶಾಲಾ ಮುಖ್ಯೋಪಾಧ್ಯಾಯರು - ಕಾಲೇಜು ಪ್ರಾಂಶುಪಾಲರು ಶುಲ್ಕ ಪುಸ್ತಕಗಳನ್ನು ಶಾಲಾ - ಕಾಲೇಜು ಹಣಕಾಸು ಸ್ಟಾಕ್‌ಗೆ ತೆಗೆದುಕೊಳ್ಳುವ ಮೊದಲು ಈ ಎಲ್ಲಾ ಪುಸ್ತಕಗಳ ಅನುಮೋದನೆಯನ್ನು ಆಯಾಯ ಬಿಇಒ, ಡಿಡಿಪಿಐ, ಡಿಡಿಪಿಯು ತೆಗೆದುಕೊಳ್ಳಬೇಕಾಗುತ್ತದೆ.
ಪ್ರಸ್ತುತ ಶುಲ್ಕ ಪುಸ್ತಕಗಳ ದಾಖಲೆಗಳು ಸದರಿ ಬಿಇಒ, ಡಿಡಿಪಿಐ, ಡಿಡಿಪಿಯು ಕಚೇರಿಯಲ್ಲಿ ಮತ್ತು ಸದರಿ ಶಿಕ್ಷಣ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿಲ್ಲ, ಆನ್‌ಲೈನ್ ಮೂಲಕ ಎಲ್ಲವೂ ಕಾಲೇಜಿನ ಅನೇಕ ಖಾತೆಗಳಿಗೆ ಹೋಗುತ್ತಿವೆ. ಅವರು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಮತ್ತು ಹಣವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸುತ್ತಿದ್ದಾರೆ ಮತ್ತು ನೀಡಿದ ಯಾವುದೇ ರಸೀದಿ ಪುಸ್ತಕಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿ ಅಥವಾ ಶಿಕ್ಷಣ ಸಂಸ್ಥೆಗಳ ದಾಖಲೆಗಳಲ್ಲಿ ಅನುಮೋದಿಸಲಾಗಿಲ್ಲ. ಶಿಕ್ಷಣ ಕಾಯಿದೆ ಮತ್ತು ಆದಾಯ ತೆರಿಗೆ ಮತ್ತು ಜಿಎಸ್‌ಟಿ ಕಾಯ್ದೆಯ ಪ್ರಕಾರ ಇದು ಕಾನೂನುಬಾಹಿರ ಮತ್ತು ಕ್ರಿಮಿನಲ್ ಅಪರಾಧವಾಗಿದೆ.... ಶಿಕ್ಷಣದ ಮಾರ್ಗಸೂಚಿಗಳು ಮತ್ತು ನಿಯಮಗಳ ಪ್ರಕಾರ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಪ್ರತೀ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಶುಲ್ಕ ರಶೀದಿ ಪುಸ್ತಕಗಳನ್ನು ಸ್ಟಾಕ್ ಪುಸ್ತಕಗಳಿಗೆ ತೆಗೆದುಕೊಳ್ಳಬೇಕು ಮತ್ತು ಸರಿಯಾದ ಲೆಕ್ಕಪರಿಶೋಧನೆಯೊಂದಿಗೆ ವರ್ಷವಿಡೀ ಸ್ಟಾಕ್ ಪುಸ್ತಕಗಳನ್ನು ನಿಯಮಿತವಾಗಿ ನಿರ್ವಹಿಸಬೇಕು ಹಾಗೂ ಆಡಿಟ್ ಮಾಡಿಸಬೇಕು ಈ ಆಡಿಟ್ ವರದಿಯನ್ನು ಸಹ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು.
ಪ್ರತೀ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿ ಶುಲ್ಕ ರಶೀದಿಯ ದಾಸ್ತಾನು ಪುಸ್ತಕವನ್ನು ಬಿಇಒ, ಡಿಡಿಪಿಐ, ಡಿಡಿಪಿಯು ಅವರಿಗೆ ತೋರಿಸಿ ಅವರ ಅನುಮೋದನೆಯನ್ನು ತೆಗೆದುಕೊಳ್ಳಬೇಕು. ಈ ನಿಯಮವನ್ನು ಶಾಲಾ ಶಿಕ್ಷಣ ಮತ್ತು ಪಿಯು ಬೋರ್ಡ್ ಪ್ರವೇಶ ಮಾರ್ಗಸೂಚಿಗಳಲ್ಲಿ ಶುಲ್ಕ ಮಾರ್ಗಸೂಚಿಗಳ ಅಧ್ಯಾಯ 4 ರ ಅಡಿಯಲ್ಲಿ ಪುಟ ಸಂಖ್ಯೆ 35 ರಲ್ಲಿ ವ್ಯಾಖ್ಯಾನಿಸಲಾಗಿದೆ. ಇದನ್ನು ಕಾಪಾಡುವಲ್ಲಿ ಶಾಲಾ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಗಂಭೀರವಾದ ವಂಚನೆ ಮತ್ತು ಮೋಸವನ್ನು ಖಾಸಗಿ ಶಾಲಾ - ಕಾಲೇಜುಗಳು ಮಾಡುತ್ತಿವೆ ಎಂದರೆ ಇದು ಈ ನಾಡಿನ ದುರಂತ.... ಖಾಸಗಿ ಶಾಲೆ - ಕಾಲೇಜುಗಳು ಮಕ್ಕಳಿಂದ ಮತ್ತು ವಿದ್ಯಾರ್ಥಿಗಳಿಂದ ಪಾವತಿಸಿಕೊಂಡಿರುವ ಹೆಚ್ಚುವರಿ ಮೊಬಲಗನ್ನು ಶುಲ್ಕದ ನಿಯಮ 125 ರ ಪ್ರಕಾರ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕಿದ್ದು, ಈ ವರೆಗೂ ಮರುಪಾವತಿ ಮಾಡಲಾಗಿಲ್ಲ.
ತನ್ಮೂಲಕ ಎಲ್ಲ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಸಾಮಾಜಿಕ ನ್ಯಾಯ ಕೊಡಿಸಬೇಕಾಗಿದೆ.... ಶುಲ್ಕವನ್ನು ಸಂಗ್ರಹಿಸಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ, ವಿವಿಧ ಖಾತೆಗಳಲ್ಲಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ. ಇದು ಶಿಕ್ಷಣ ಕಾಯ್ದೆಯ ನಿಯಮ, ಆದಾಯ ತೆರಿಗೆ ನಿಯಮ ಹಾಗೂ ಸಹಕಾರ ಇಲಾಖೆಯ ಸೊಸೈಟಿ ಮತ್ತು ಟ್ರಸ್ಟ್ ಕಾಯಿದೆ 1960 ರ ನಿಯಮಗಳನ್ನು ಉಲ್ಲಂಘಿಸುತ್ತದೆ. ಯಾವುದೇ ಕಾಲೇಜಿಗೆ ಪ್ರವೇಶ ಶುಲ್ಕವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ತೆಗೆದುಕೊಳ್ಳಲು ಅನುಮತಿಸಲಾಗುವುದಿಲ್ಲ. ಇದು ಗಂಭೀರವಾದ ಅಪರಾಧವಾಗಿದೆ.... ಕರ್ನಾಟಕ ಶಿಕ್ಷಣ ಕಾಯಿದೆಯ ನಿಯಮ 51 ರ ಪ್ರಕಾರ ಅನುದಾನ ಹೊರತುಪಡಿಸಿ ಬೇರೆ ಮೂಲಗಳಿಂದ ಪಡೆದ ಹಣ (ಅ ) ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿಗೆ ಒಳಪಟ್ಟು ದಾನಿಗಳಿಂದ ಸ್ವಯಂ ಪ್ರೇರಿತ ದೇಣಿಗೆಯ ಮೂಲಕ ಪಡೆದ ಯಾವುದೇ ಹಣವನ್ನು ಸಂಸ್ಥೆ ಅಥವಾ ಆಡಳಿತ ಮಂಡಳಿಯು ಸ್ವೀಕರಿಸಬಹುದು ಮತ್ತು ಅಂತಹ ಸ್ವೀಕಾರದ ದಿನಾಂಕದಿಂದ ತೊಂಬತ್ತು ದಿನಗಳೊಳಗೆ ತಿಳಿಸಬೇಕು.
ಅಂತಹ ಹಣವನ್ನು ಶಾಲಾಕಾಲೇಜು ಸಮೀಪದ ರಾಷ್ಟ್ರೀಕೃತ ಅಥವಾ ಶೆಡ್ಯೂಲ್ಡ್ ಬ್ಯಾಂಕಿನಲ್ಲಿ ಅದೇ ಶಾಲಾ ಕಾಲೇಜಿನ ಸಂಸ್ಥೆಯ ಹೆಸರಿನಲ್ಲಿ ಖಾತೆಯನ್ನು ತೆರೆದು ಜಮಾ ಮಾಡಿ ನಿರ್ವಹಣೆ ಮಾಡತಕ್ಕದ್ದು. ಈ ಮೊಬಲಗು ಮತ್ತು ಬ್ಯಾಂಕ್ ಖಾತೆ ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟಿದ್ದು, ಸಂಸ್ಥೆಯ ಸುಧಾರಣೆ ಮತ್ತು ಶೈಕ್ಷಣಿಕ ಸೌಲಭ್ಯಗಳ ಅಭಿವೃದ್ಧಿಗಾಗಿ ಮತ್ತು ನಿಯಮಿಸಬಹುದಾದಂತಹ ಇತರ ಉದ್ದೇಶಗಳಿಗಾಗಿ ಅನ್ವಯಿಸಲಾಗುತ್ತದೆ ಮತ್ತು ವಿನಿಯೋಗಿಸಲಾಗುತ್ತದೆ. (ಆ) ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿಗೆ ಒಳಪಟ್ಟು ಯಾವುದೇ ಶಿಕ್ಷಣ ಸಂಸ್ಥೆಯು ಯಾವುದೇ ವ್ಯಕ್ತಿಯ ಪ್ರವೇಶದ ಮೊದಲು, ಪ್ರವೇಶದ ಸಮಯದಲ್ಲಿ ಅಥವಾ ನಂತರ ಅಂತಹ ಪ್ರವೇಶಕ್ಕೆ ಪೂರ್ವಭಾವಿಯಾಗಿ ನಿಗದಿತ ಶುಲ್ಕವನ್ನು ಹೊರತುಪಡಿಸಿ ಯಾವುದೇ ಹಣವನ್ನು ಪೋಷಕರಿಂದ ಸಂಗ್ರಹಿಸಬಾರದು.
ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿಯಮವನ್ನು ಪರಿಪೂರ್ಣವಾಗಿ ಉಲ್ಲಂಘನೆ ಮಾಡಿವೆ. ಹಾಗೂ ನಿಯಮದ ಪ್ರಕಾರ ಇವರು ತೆಗೆದುಕೊಂಡ ಮಕ್ಕಳ ಶುಲ್ಕದ ಹಣಕ್ಕೆ ರಸೀದಿಯನ್ನು ಕೊಡಬೇಕು. ಆದರೆ ಎಷ್ಟೋ ಸಂಸ್ಥೆಗಳು ಮಕ್ಕಳಿಗೆ ರಸೀದಿಯನ್ನು ಸಹಾ ಕೊಟ್ಟಿಲ್ಲ. ಹಣವನ್ನು ಅನೇಕ UPI ಖಾತೆಗೆ ಮತ್ತು ಅನೇಕ ಬ್ಯಾಂಕ್ ಖಾತೆಗೆ ಆನ್ಲೈನ್ ನಲ್ಲಿ ತೆಗೆದುಕೊಡಿದ್ದಾರೆ. ಇದು ಸರ್ವೋಚ್ಚ ನ್ಯಾಯಾಲಯದ ಟಿ.ಎಂ.ಎ. ಪೈ ತೀರ್ಪಿನ ಉಲ್ಲಂಘನೆಯಾಗಿದೆ. ಹಾಗೂ ಕರ್ನಾಟಕ ಶಿಕ್ಷಣ ಕಾಯಿದೆಯ ನಿಯಮಗಳ ಪರಿಪೂರ್ಣ ಉಲ್ಲಂಘನೆಯಾಗಿದೆ.
5. ದಾಖಲಾತಿ ದಾಖಲೆಗಳ ಪ್ರಕಾರ ವಾಸ್ತವವಾಗಿ ವಿದ್ಯಾರ್ಥಿಗಳು ಒಂದು ಶಾಲಾ - ಕಾಲೇಜು ಕ್ಯಾಂಪಸ್‌ನಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಮತ್ತು ಅವರು ಅದೇ ಕ್ಯಾಂಪಸ್‌ನಲ್ಲಿರುವ ಅದೇ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಆದರೆ ವಿದ್ಯಾರ್ಥಿ ಪ್ರವೇಶ ಶುಲ್ಕದ ದಾಖಲೆಗಳಲ್ಲಿ ಇನ್ನೊಂದು ವಿಳಾಸದ ಕಾಲೇಜು ಕ್ಯಾoಪಸ್ ಮತ್ತು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ವಾಸವಿದ್ದಾರೆ.ವಿದ್ಯಾರ್ಥಿಗಳನ್ನು ಒಂದು ಸಂಸ್ಥೆಗೆ ದಾಖಲಿಸಿ ಇನ್ನೊಂದು ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಲು ಹೇಗೆ ಸಾಧ್ಯ....??!! ಇದು ಶಿಕ್ಷಣ ಕಾಯ್ದೆಯ ಪ್ರಕಾರ ಕ್ರಿಮಿನಲ್ ಅಪರಾಧ. ಸದರಿ ವಿದ್ಯಾರ್ಥಿಗಳು ಸದರಿ ಸಂಸ್ಥೆಯ ಬೇರೆ ಬೇರೆ ಭಾಗದ ವಿವಿಧ ಶಾಖೆಗಳಿಗೆ ಪ್ರವೇಶ ಪಡೆದಿದ್ದು, ಹಾಸ್ಟೆಲ್ ಸೌಲಭ್ಯದೊಂದಿಗೆ ಕೋಚಿಂಗ್ ಸೆಂಟರ್‌ನಂತಹ ಮತ್ತೊಂದು ಶಾಖೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ.
ಈ ರೀತಿ ಅನಧಿಕೃತವಾಗಿ ಶಾಲಾ ಕಾಲೇಜುಗಳನ್ನು ನಡೆಸುವುದು ಶಿಕ್ಷಣ ಕಾಯಿದೆ 123 ರ ಉಲ್ಲಂಘನೆಯಾಗಿರುತ್ತದೆ ಇದು ಶಿಕ್ಷಣ ಕಾಯ್ದೆಯ ಪ್ರಕಾರ ಕ್ರಿಮಿನಲ್ ಅಪರಾಧ. ಸದರಿ ಎರಡನೇ ಪಿಯು ವಿದ್ಯಾರ್ಥಿಗಳಿಗೆ ಲ್ಯಾಬ್ ಪರೀಕ್ಷೆಯನ್ನು ಪ್ರವೇಶಾತಿ ಪಡೆದಲ್ಲೇ ನಡೆಸಲಾಗಿದೆಯೇ ಅಥವಾ ಬೇರೆ ಸ್ಥಳದಲ್ಲಿಯೇ? - ಬೇರೆ ಸ್ಥಳವಾಗಿದ್ದರೆ ಅದೂ ಕ್ರಿಮಿನಲ್ ಅಪರಾಧವಾಗಿರುತ್ತದೆ. ಈ ಲ್ಯಾಬ್ ಪರೀಕ್ಷೆಯ ಕೆಲಸಕ್ಕೆ ನಿಯೋಜಿಸಲಾದ ಶಿಕ್ಷಕರು ಯಾರು, ಅವರ ವಿದ್ಯಾರ್ಹತೆ ಏನು...?! ಇದು ಗಂಭೀರವಾದ ವಂಚನೆ. ಇದು ಶಿಕ್ಷಣ ಕಾಯ್ದೆಯ ನಿಯಮಗಳು 123 ಮತ್ತು 129 ರ ಅಡಿಯಲ್ಲಿ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ. ಅಲ್ಲದೇ ಇದು ಶಿಕ್ಷಣ ಕಾಯ್ದೆ ಮತ್ತು ಅದರ ಕ್ರಿಮಿನಲ್ ಅಪರಾಧದ ಅಡಿಯಲ್ಲಿ ವ್ಯಾಖ್ಯಾನಿಸಲಾದ ಪರೀಕ್ಷಾ ಕಾರ್ಯವಿಧಾನಗಳ ನಿಯಮಗಳನ್ನು ಉಲ್ಲಂಘಿಸುತ್ತದೆ ಇದು ಇಲಾಖೆಯ ವರದಿಯಲ್ಲಿಯೇ ಇದೆ.
6. ರಾಜ್ಯ ಮಾನ್ಯತೆ ಪಡೆದ ಅನೇಕ ಖಾಸಗಿ ಶಾಲೆಗಳಲ್ಲಿ (1-7) ಸರ್ಕಾರ ನಿಗದಿ ಪಡಿಸಿರುವ ಪಠ್ಯಪುಸ್ತಕಗಳನ್ನು ಬಳಸದೇ ಕಾನೂನುಬಾಹಿರವಾಗಿ ತಮ್ಮದೇ ಪಠ್ಯಪುಸ್ತಕಗಳನ್ನು ಮುದ್ರಿಸಿ, ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಮಾಡುತ್ತಿರುವುದು..... ಸದರಿ ಪಠ್ಯಪುಸ್ತಕಗಳನ್ನು ಯಾವುದೇ ರಸೀದಿ ಇಲ್ಲದೇ ಮಾರಾಟ ಮಾಡುತ್ತಿದ್ದು, ಇದು ಜಿ.ಎಸ್.ಟಿ. ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ. ಈ ಹೆಚ್ಚುವರಿ ಪಠ್ಯಕ್ರಮಗಳನ್ನು ಕಾಲೇಜಿನಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವನ್ನು ಉಂಟು ಮಾಡಿದ್ದಾರೆ. ಇದು ಶಿಕ್ಷಣ ಕಾಯಿದೆ ನಿಯಮ 19(1) (2) (3) ಹಾಗೂ 11(3) ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
7. ಅವ್ಯಾಹತವಾಗಿ ಸಾಗಿರುವ ಶಿಕ್ಷಣದ ವ್ಯಾಪಾರೀಕರಣ.... ಖಾಸಗಿ ಶಿಕ್ಷಣ ಸಂಸ್ಥೆಗಳು ಸಮವಸ್ತ್ರ ನಿಗದಿ ಪಡಿಸಬಹುದೇ ವಿನಃ ಸಮವಸ್ತ್ರ ವ್ಯಾಪಾರ ಮಾಡುವಂತಿಲ್ಲ.... ಆದರೆ ಈ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಒಂದೋ ನೇರವಾಗಿ ಯೂನಿಫಾರ್ಮ್, ಶೂ - ಸಾಕ್ಸ್, ಬ್ಲೇಜರ್ / ಕೋಟು ಮಾರಾಟ ಮಾಡುತ್ತಿವೆ ; ಇವರು ಗೊತ್ತುಪಡಿಸಿದವರಿಂದಲೇ ಯೂನಿಫಾರ್ಮ್, ಶೂ - ಸಾಕ್ಸ್, ಬ್ಲೇಜರ್ ಪಡೆಯಬೇಕು ಮತ್ತು ಇವರು ಗೊತ್ತು ಪಡಿಸಿದವರಲ್ಲೇ ಅದನ್ನು ಹೊಲಿಸಬೇಕು ; ಅದರಲ್ಲೂ ಕಮಿಷನ್ ಲೂಟಿ.... ಇದ್ಯಾವುದಕ್ಕೂ ಅಧಿಕೃತ ಬಿಲ್ ಇಲ್ಲ, ಜಿ.ಎಸ್.ಟಿ. ಪಾವತಿ ಕೂಡಾ ಇಲ್ಲ!!! ಆದಾಯ ತೆರಿಗೆಯ ನಿಯಮಗಳನ್ನೂ ದಿಕ್ಕು ತಪ್ಪಿಸಲಾಗಿದೆ.
8. ಯಾವುದೇ ಫ್ರೆಂಚ್ ಶಿಕ್ಷಕರು ಸಂಸ್ಥೆಯಲ್ಲಿ ಕರ್ತವ್ಯದಲ್ಲಿ ಇಲ್ಲದೆಯೂ ಪರೀಕ್ಷೆ ವೇಳೆ ಕೇವಲ ಹನ್ನೆರಡು ಶೀಟ್ ಫ್ರೆಂಚ್ ಭಾಷೆಯ ಝೆರಾಕ್ಸ್ ಕಾಪಿ ಕೊಟ್ಟು ನೀವೇ ಓದಿಕೊಂಡು ಪರೀಕ್ಷೆ ಬರೆಯುವಂತೆ ಪಿಯು ವಿದ್ಯಾರ್ಥಿಗಳಿಗೆ ತಿಳಿಸಿರುವುದು ಮಕ್ಕಳ ಭವಿಷ್ಯವನ್ನೇ ನಾಶ ಮಾಡುವಂಥಾ ಹೇಯ ಕೆಲಸವಾಗಿದ್ದು ಇಲಾಖಾ ವರದಿಯಲ್ಲಿಯೇ ಇದೆ.
9. ಕೆಲವು ಪಿಯು ಕಾಲೇಜುಗಳಲ್ಲಿ ಪ್ರಯೋಗಾಲಯಗಳು ಇಲ್ಲದೆಯೂ ಇಲಾಖೆಗೆ ಸುಳ್ಳು ಮಾಹಿತಿ ಕೊಟ್ಟು ವಿಜ್ಞಾನ ವಿಭಾಗಕ್ಕೆ ಅನುಮತಿ ಪಡೆದಿರುವುದು. ಭೌತಶಾಸ್ತ್ರದ ಮತ್ತು ರಾಸಾಯನಿಕಶಾಸ್ತ್ರದ ಪ್ರಯೋಗಾಲಯಗಳು ಕಾಲೇಜಿನಲ್ಲಿ ಇಲ್ಲ. ಹಾಗಾಗಿ ಮತ್ತೊಂದು ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯುವಂತೆ ಮಾಡಿರುವುದೂ ಇಲಾಖಾ ವರದಿಯಲ್ಲಿಯೇ ಇದೆ.
10. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇರೆಗೆ ಭಾರತ ಸರ್ಕಾರದ ಶಿಕ್ಷಣ ಇಲಾಖೆಯ 16-01-2024 ರ ಆದೇಶದ ಪ್ರಕಾರ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ಕೋಚಿಂಗ್ ಸೆಂಟರ್ ಗೆ ದಾಖಲಿಸಿಕೊಳ್ಳಲು ಅವಕಾಶವಿಲ್ಲ ಹಾಗೂ ಪ್ರವೇಶ ಪರೀಕ್ಷೆ ನಡೆಸುವಂತಿಲ್ಲ. ಆದರೆ ಇವರು 15 ವರ್ಷ ವಯಸ್ಸಿನಲ್ಲೇ (ಹತ್ತನೇ ತರಗತಿಯಲ್ಲೇ) ವಿದ್ಯಾರ್ಥಿಗಳನ್ನು ಕೋಚಿಂಗ್ ಸೆಂಟರ್ ಗೆ ದಾಖಲಿಸಿಕೊಂಡು, ನಿಯಮಬಾಹಿರವಾಗಿ ಪ್ರವೇಶ ಪರೀಕ್ಷೆ ನಡೆಸಿ, ರೋಸ್ಟರ್ ನಿಯಮಗಳನ್ನು ಉಲ್ಲಂಘಿಸಿ, ಪಿಯು ಕಾಲೇಜುಗಳಿಗೆ ಪ್ರವೇಶಾತಿ ಮಾಡಿಸಿಕೊಳ್ಳುತ್ತಿದ್ದಾರೆ. ತನ್ಮೂಲಕ ಮಕ್ಕಳ ಶೈಕ್ಷಣಿಕ ಹಕ್ಕಿನ ಕಾಯ್ದೆಗಳನ್ನು ಉಲ್ಲಂಘನೆ ಮಾಡಲಾಗಿದೆ.
11. ಕಾಯಿದೆ ಪ್ರಕಾರ ಶಾಲಾ - ಕಾಲೇಜು ಕ್ಯಾಂಪಸ್‌ನಲ್ಲಿ ಹಾಸ್ಟೆಲ್ ನಡೆಸಲು ಅವಕಾಶವಿಲ್ಲ ಮತ್ತು ಇದು ಮಕ್ಕಳ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ.
12. ಲೋಕೋಪಯೋಗಿ ಮತ್ತು ಅಗ್ನಿಶಾಮಕ ಇಲಾಖೆಯಿಂದ ಶಾಲಾ - ಕಾಲೇಜು ಕಟ್ಟಡ ಮತ್ತು ಹಾಸ್ಟೆಲ್‌ಗಾಗಿ ಸುರಕ್ಷತಾ ಪ್ರಮಾಣಪತ್ರವನ್ನು ಪಡೆದುಕೊಂಡಿರಬೇಕು. ಹೆಚ್ಚುವರಿ ವಿಭಾಗಗಳಿಗೂ ಈ ಸುರಕ್ಷತಾ ಪ್ರಮಾಣಪತ್ರ ಕಡ್ಡಾಯ.
13. ಶಿಕ್ಷಣ ಕಾಯಿದೆ ಮತ್ತು ಪಿಯು ಕಾಲೇಜುಗಳ ಮಾರ್ಗಸೂಚಿಗಳ ಪ್ರಕಾರ ಯಾವುದೇ ಪಿಯು ಕಾಲೇಜುಗಳು ಐಐಟಿ, ಜೆಇಇ, ನೀಟ್, ಸಿಇಟಿ ಕೋಚಿಂಗ್ ಅನ್ನು ಕಾಲೇಜು ಕ್ಯಾಂಪಸ್‌ನಲ್ಲಿ ನಡೆಸಬಾರದು..... ಆದರೆ ಎಷ್ಟೋ ಖಾಸಗಿ ಶಿಕ್ಷಣ ಸಂಸ್ಥೆಗಳು ಐಐಟಿ, ಜೆಇಇ, ನೀಟ್, ಸಿಇಟಿ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಿದ್ದು, ದೊಡ್ಡ ಮೊತ್ತದ ಅಕ್ರಮ ಶುಲ್ಕ ವಸೂಲಿ ಮಾಡುತ್ತಿದ್ದು, ಅದೇ ಶಾಲಾ - ಕಾಲೇಜಿನ ಶಿಕ್ಷಕರನ್ನೇ ಬಳಸಿಕೊಂಡು ಕೋಚಿಂಗ್ ನಡೆಸುತ್ತಿರುವುದು ಗಂಭೀರ ಉಲ್ಲಂಘನೆಯಾಗಿದೆ.... ಆಡಳಿತ ಮಂಡಳಿಯು ಪಿಯು ಶೈಕ್ಷಣಿಕ ಪಠ್ಯ ಪುಸ್ತಕಗಳನ್ನು ಅಕ್ರಮವಾಗಿ ಮುದ್ರಿಸುತ್ತಿದೆ. ಈ ಕಾನೂನುಬಾಹಿರ ಶೈಕ್ಷಣಿಕ ಪಠ್ಯ ಪುಸ್ತಕಗಳನ್ನು ಖರೀದಿಸಲು ಮಕ್ಕಳನ್ನು ಒತ್ತಾಯಿಸುತ್ತಿದ್ದಾರೆ. ಮತ್ತು ಅವರು ಶಾಲಾ - ಕಾಲೇಜು ಆವರಣದೊಳಗೆ IIT JEE, NEET ಮತ್ತು CET ಕೋಚಿಂಗ್ ತರಗತಿಗಳಿಗೆ ಸೇರುವಂತೆ ಮಕ್ಕಳನ್ನು ಒತ್ತಾಯಿಸುತ್ತಿದ್ದಾರೆ. ಈ ಎಲ್ಲಾ ಉಲ್ಲಂಘನೆಗಳು ಶಿಕ್ಷಣ ಕಾಯಿದೆಯ ನಿಯಮಗಳು 39 ಮತ್ತು ಪಿಯು ಬೋರ್ಡ್ ವ್ಯಾಖ್ಯಾನಿಸಿದ ಮಾರ್ಗಸೂಚಿಗಳಿಗೆ ವಿರುದ್ಧವಾಗಿವೆ.
14. ನಿಗದಿ ಪಡಿಸಿರುವ ನಿರ್ದಿಷ್ಟ ವಿದ್ಯಾರ್ಹತೆ ಇಲ್ಲದ ಎಷ್ಟೋ ಶಿಕ್ಷಕರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯದಲ್ಲಿದ್ದಾರೆ.
15. ಖಾಸಗಿ ಶಿಕ್ಷಣ ಸಂಸ್ಥೆಯೊಂದು ತನ್ನದೇ ಆದ ಸ್ಟಡಿ ಮೆಟೀರಿಯಲ್ ಪ್ರಿಂಟ್ ಮಾಡುವುದು ಅಪರಾಧ. ಅಷ್ಟರ ಮೇಲೆ ಅದನ್ನು ತನ್ನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವುದು ಇನ್ನೂ ದೊಡ್ಡ ಅಪರಾಧ.
16. ಐಐಟಿ, ಜೆಇಇ, ನೀಟ್, ಸಿಇಟಿ ತರಬೇತಿಯ ಹೆಸರಿನಲ್ಲಿ ಅಕ್ರಮವಾಗಿ ಮಕ್ಕಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ.
17. ಶಾಲಾ ಮತ್ತು ಪಿಯು ಕಾಲೇಜು ಮಾರ್ಗಸೂಚಿಗಳ ಪ್ರಕಾರ ಶಿಕ್ಷಣ ಸಂಸ್ಥೆಯೊಂದು ಪ್ರತೀ ದಿನ 6 ಗಂಟೆಗಳ ಕಾಲ ಮಾತ್ರ ತರಗತಿಯನ್ನು ನಡೆಸಬೇಕು, ಆದರೆ ಇವರು ಪ್ರತೀ ದಿನ 12 ಗಂಟೆಗಳ ಕಾಲ ತರಗತಿ ನಡೆಸುತ್ತಿದ್ದಾರೆ.
18. ಯಾವುದೇ ರೀತಿಯ ಪಠ್ಯಪುಸ್ತಕ ಮತ್ತು ಟಿಪ್ಪಣಿ ಸಾಮಗ್ರಿಗಳನ್ನು ಮುದ್ರಿಸುವುದು ಗಂಭೀರವಾದ ವಾಣಿಜ್ಯ ಚಟುವಟಿಕೆಯಾಗಿದ್ದು ಅದು ಶಿಕ್ಷಣ ಕಾಯಿದೆಯ ನಿಯಮ 39 ಅನ್ನು ಉಲ್ಲಂಘಿಸುತ್ತದೆ ಎಂದು ನಿಮ್ಮ ಶಿಕ್ಷಣ ಕಾಯಿದೆ ಸ್ಪಷ್ಟವಾಗಿ ಹೇಳುತ್ತದೆ. ಹೆಚ್ಚುವರಿ ಪುಸ್ತಕಗಳು ಮತ್ತು ಸಾಮಗ್ರಿಗಳನ್ನು ಮುದ್ರಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ಕೊಟ್ಟವರು ಯಾರು...?! - ಅವುಗಳನ್ನು ಇಲಾಖೆಯ ಗಮನಕ್ಕೆ ಏಕೆ ತರಲಿಲ್ಲ....? ಈ ಹೆಚ್ಚುವರಿ ಪುಸ್ತಕಗಳ ಒತ್ತಡದಿಂದಾಗಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ, ಶರಣಾಗುತ್ತಿದ್ದಾರೆ.
19. ಮಕ್ಕಳನ್ನು ಒಂದು ಪಿಯು ಕಾಲೇಜಿಗೆ ಸೇರಿಸಿಕೊಂಡು ಇನ್ನೊಂದು ಪಿಯು ಕಾಲೇಜಿನಲ್ಲಿ ಕೂರಿಸುತ್ತಿದ್ದಾರೆ.... ಹೀಗಾಗಿ ಇದೆಲ್ಲ NDMA ಮತ್ತು NBC ಯ ವಿದ್ಯಾರ್ಥಿ ಸುರಕ್ಷತಾ ಮಾರ್ಗಸೂಚಿಗಳ ಮೇಲೆ ಟಿ.ಎಂ.ಎ. ಪೈ ಸುಪ್ರೀಂ ಕೋರ್ಟ್ ತೀರ್ಪಿನ ಗಂಭೀರ ಉಲ್ಲಂಘನೆಯಾಗಿದೆ.
20. ಶಿಕ್ಷಣ ಕಾಯಿದೆಯ ಸೆಕ್ಷನ್ 125, ರೂಲ್ 10(1) ರಿಂದ (9) ಮತ್ತು ಸೆಕ್ಷನ್ 48 ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಮೇಲ್ಕಾಣಿಸಿದ ಶಿಕ್ಷಣ ಕಾಯಿದೆ ನಿಯಮಗಳ ಅಡಿಯಲ್ಲಿ ಕ್ರಮ ಮಾಡಬೇಕಿದೆ.
ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆ ಮಾಡಿ, ಸದರಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಈ ಎಲ್ಲಾ ಉಲ್ಲೇಖಿತ ನಿಯಮಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಇಲಾಖಾ ಅಧಿಕಾರಿಗಳು ಮುಂದಾಗಿರುವುದು ತಪ್ಪೇ....? ಒಂದೋ ಶಿಕ್ಷಣ ಕಾಯಿದೆಯ ನಿಯಮಗಳನ್ನು ಪಾಲಿಸಿ, ಇಲ್ಲವಾದರೆ ಅವೇ ನಿಯಮಗಳ ಅನ್ವಯ ಕ್ರಮ - ಪರಿಣಾಮ ಎದುರಿಸಿ ಅಂದರೆ ಅದು ತಪ್ಪೇ. ರಾಜ್ಯದ ಸಾಮಾನ್ಯ ಜನತೆ, ಸಾರ್ವಜನಿಕರು ಈ ಹಂತದಲ್ಲಿ ಈ ವಿಚಾರವಾಗಿ ಬಹಿರಂಗವಾಗಿ ಶಿಕ್ಷಣ ಇಲಾಖೆಯ ಪರವಾಗಿ, ಶಿಕ್ಷಣಾಧಿಕಾರಿಗಳ ಪರವಾಗಿ ಗುರುತಿಸಿಕೊಳ್ಳಬೇಕಿದೆ.... ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅನಾಚಾರಗಳಿಗೆ ಬಹಿರಂಗವಾಗಿ ಕಡಿವಾಣ ಹಾಕಿ ಶಿಕ್ಷಣ ಕಾಯಿದೆಯ ನಿಯಮಗಳನ್ನೂ, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನೂ, ಸಂವಿಧಾನದ ಉಲ್ಲೇಖಗಳನ್ನೂ - ಆಶಯಗಳನ್ನೂ ಪಾಲಿಸುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಾಕೀತು ಮಾಡಬೇಕಿದೆ.
ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್
ಸಾರ್ವಜನಿಕರು ಇಲಾಖೆಯ ಪ್ರಾಮಾಣಿಕ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮತ್ತು ಮಾನ್ಯತೆ ನವೀಕರಿಸಲು ಭೂ ಪರಿವರ್ತನೆ ಕಡ್ಡಾಯ ಮಾಡಿರುವುದು ಹಾಗೂ ಭೂ ಪರಿವರ್ತನೆ ಆದೇಶಗಳು ನೈಜವಾಗಿವೆಯೇ ಎಂದು ಪರಿಶೀಲಿಸುವುದು ತಪ್ಪೇ. ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಮಂಡಳಿಯ ತಂತ್ರಾoಶಗಳಲ್ಲಿ ದಾಖಲಿಸಿರುವ ದಾಖಲೆಗಳ ನೈಜತೆ ಪರಿಶೀಲಿಸುವುದು ತಪ್ಪೇ....?!! ಸರ್ಕಾರಿ ನಿಯಮಗಳನ್ನು - ಶಿಕ್ಷಣ ಕಾಯಿದೆಯ ನಿಯಮಗಳನ್ನು ಪಾಲಿಸಲಾಗಿದೆಯೇ, ಪೂರಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆಯೇ, ಕಟ್ಟಡದ ದೃಢತೆ ಸುರಕ್ಷತಾ ಪ್ರಮಾಣ ಪತ್ರ - ಅಗ್ನಿ ಸುರಕ್ಷತಾ ಸಮಾಪನ ಪತ್ರ ಗಳನ್ನು ತತ್ಸoಬಂಧಪಟ್ಟ ಇಲಾಖೆಯಿಂದಲೇ - ಇಲಾಖೆಯ ಸೂಚಿತ ಅಧಿಕಾರಿಯಿಂದಲೇ ಪಡೆಯಲಾಗಿದೆಯೇ ಎಂದು ಪರಿಶೀಲಿಸುವುದು ತಪ್ಪೇ....?!!
ರಾಜ್ಯದಲ್ಲಿರುವ ಅಧಿಕೃತ ಶಿಕ್ಷಣ ಸಂಸ್ಥೆಗಳು ಮತ್ತು ಅನಧಿಕೃತ ಶಿಕ್ಷಣ ಸಂಸ್ಥೆಗಳನ್ನು ಪಟ್ಟಿ ಮಾಡಿ, ಪರಿಶೀಲಿಸಿ, ಖಚಿತ ಪಡಿಸಿಕೊಂಡು ನಿರ್ಣಾಯಕ ಸಮರ ಸಾರಿರುವುದು, ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವುದು ತಪ್ಪೇ.