ಶಿಥಿಲಾವಸ್ಥೆಯಲ್ಲಿ ಇವೆ ರಾಯಚೂರಿನ ಸರ್ಕಾರಿ ಶಾಲೆಗಳು
ಶಾಲೆಗಳ ದುರಸ್ತಿ ಮಾಡಲು ಅಧಿಕಾರಿಗಳು ಹಿಂದೇಟು
ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಆತಂಕದಲ್ಲಿ ವಿದ್ಯಾರ್ಥಿಗಳು
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು: ಹಿಂದುಳಿದ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತೆ. ಕಲ್ಯಾಣ ಕರ್ನಾಟಕ ಮಂಡಳಿಯೂ ಶಾಲೆಗಳ ದುರಸ್ತಿಗಾಗಿ ಅನುದಾನ ನೀಡುತ್ತಿದೆ. ಆದ್ರೂ ಸಹ ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮಾತ್ರ ಸುಧಾರಣೆ ಆಗುತ್ತಿಲ್ಲ. ಹೀಗಾಗಿ ನಿತ್ಯವೂ ಶಿಕ್ಷಕರು ಮತ್ತು ಮಕ್ಕಳು ಆತಂಕದಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಶಾಲೆಯಲ್ಲಿ ಕಾಮಗಾರಿ ಶುರುವಾಗಿದ್ರೂ ಪೂರ್ಣಗೊಳಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲ ಶಾಲೆಯಲ್ಲಿನ ಛಾವಣಿ ಬೀಳುವ ಹಂತ ತಲುಪಿದ್ದು ನಿತ್ಯ ಶಿಕ್ಷಕರು ಪುಸ್ತಕ ನೋಡಿ ಪಾಠ ಹೇಳುವುದಕ್ಕಿಂತ ಮೇಲೆ ನೋಡಿಕೊಂಡು ಪಾಠ ಹೇಳುವಂತೆ ಆಗಿದೆ.
ರಾಯಚೂರು ಜಿಲ್ಲೆಯಲ್ಲಿ 1705 ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿದ್ದು ಈ ಪೈಕಿ 942 ಶಾಲೆಗಳ ಸ್ಥಿತಿ ದುರಸ್ತಿಗೆ ಬಂದಿವೆ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಮಾಡಿದೆ. ಈ ಪೈಕಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ (Raichur taluk) 309, ದೇವದುರ್ಗದಲ್ಲಿ (Devadurga)55, ಲಿಂಗಸೂಗೂರಲ್ಲಿ(Lingasur) 257, ಮಾನ್ವಿಯ (Manvi) 239, ಸಿಂಧನೂರಿನ (Sindhanur) 82 ಶಾಲಾ ಕೊಠಡಿಗಳ ದುರಸ್ತಿ ಮಾಡಬೇಕು ಎಂದು ಬೇಡಿಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಇನ್ನೂ ಸರ್ಕಾರದಿಂದ ಯಾವುದೇ ಮರು ಉತ್ತರ ಬಂದಿಲ್ಲ. ಹೀಗಾಗಿ 942 ಶಾಲೆಗಳ ಶಿಕ್ಷಕರು ಆತಂಕದಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾಗಿದೆ.
ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಾಲೆಗಳ ನರಳಾಟ
ಕೊರೊನಾದಿಂದ ಎರಡು ವರ್ಷಗಳಿಂದ ಬಂದ್ ಆಗಿರುವ ಶಾಲೆಗಳು ಈ ವರ್ಷ ಮೇ 16ರಿಂದಲ್ಲೇ ಆರಂಭಗೊಂಡಿವೆ.ಶಾಲೆಯ ಅವ್ಯವಸ್ಥೆ ನೋಡಿದ ಮಕ್ಕಳು ಮತ್ತು ಶಿಕ್ಷಕರು ಭಯದಲ್ಲಿ ಶಾಲೆಗೆ ಬಂದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸಮಸ್ಯೆಗಳ ಆಗರವಾಗಿವೆ. ಶಾಲೆಯ ಛಾವಣಿ, ಬಾಗಿಲು, ಕಿಟಕಿ, ನೆಲ ಹಾಸು, ಕುಡಿಯುವ ನೀರು, ಹೊಸ ಕಟ್ಟಡ ಇಲ್ಲದಿರುವುದರಿಂದ ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಪ್ರತಿ ಶಾಲೆಯ ಕೊಠಡಿ ದುರಸ್ತಿಗೆ ಕನಿಷ್ಠ3 ಲಕ್ಷ ರೂಗಳಿಂದ ಗರಿಷ್ಟ 12 ಲಕ್ಷದವರೆಗೆ ಅನುದಾನದ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಆದ್ರೂ ಅನುದಾನ ಮಾತ್ರ ಬಂದಿಲ್ಲ ಅಂತರೇ ಅಧಿಕಾರಿಗಳು. ಹೀಗಾಗಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಮಳೆ ಬಂದರೆ ಸಾಕು ಶಾಲೆಗಳು ಸೋರುತ್ತವೆ. ಆವರಣದಲ್ಲಿ ನೀರು ತುಂಬುವ ಸ್ಥಿತಿ ನಿರ್ಮಾಣವಾಗುತ್ತಿದೆ. ಛಾವಣಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಅಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಮುಖ್ಯ ಶಿಕ್ಷಕರು, ಎಸ್‌ಡಿಎಂಸಿಯವರು ಮನವಿ ಮಾಡಿದರು ಏನು ಆಗುತ್ತಿಲ್ಲ..
ಕಿಡಿಗೇಡಿಗಳಿಂದ ಹಾಳಾಗುತ್ತಿವೆ ಹಳ್ಳಿಯ ಶಾಲೆಗಳು:
ಗ್ರಾಮೀಣ ಪ್ರದೇಶಗಳಲ್ಲಿ ಪುಂಡರಿಗೆ ಸರ್ಕಾರಿ ಶಾಲೆಗಳೇ ರಾತ್ರಿ ಅಡ್ಡೆಗಳಾಗಿವೆ. ಹೀಗಾಗಿ ಗ್ರಾಮೀಣ ಭಾಗದ ಕೆಲ ಶಾಲೆಗಳು ಅನೇಕ ಜನಗಳಿಗೆ ಅನೈತಿಕ ಕೃತ್ಯಗಳ ತಾಣಗಳಾಗಿದ್ದು, ನಿತ್ಯವೂ ಶಾಲೆಯ ಸ್ವಚ್ಛತೆ ಮಾಡುವುದೇ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ದೊಡ್ಡ ಕೆಲಸವಾಗಿ ಬಿಟ್ಟಿದೆ. ರಾತ್ರಿ ವೇಳೆ ಶಾಲೆಗೆ ನುಗ್ಗುವ ಕಿಡಿಗೇಡಿಗಳು ಮದ್ಯದ ಬಾಟಲಿ, ಊಟದ ಪತ್ರೋಳಿ, ಪ್ಲಾಸ್ಟಿಕ್ ಗ್ಲಾಸು, ಆವರಣದಲ್ಲಿರುವ ಶೌಚಾಲಯಗಳನ್ನು ಹಾಳು ಮಾಡುವುದು ಸಾಮಾನ್ಯ ಆಗಿದೆ. ಇನ್ನೂ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಹೈಟೆಕ್ ಶೌಚಾಲಯ, ಶಾಲೆಯ ಬಾಗಿಲುಗಳನ್ನು ಜನ ಮುರಿದು ಹಾಳು ಮಾಡಿದ ಹತ್ತಾರು ಉದಾಹರಣೆಗಳಿವೆ. ಶೌಚಾಲಯ ಇದ್ದರೂ ಅವುಗಳ ಬಳಸಲು ಬಾಲಕಿಯರು ಹಿಂದೇಟು ಹಾಕುವಂತಾಗಿದೆ. ಶಾಲೆಗೆ ತಡೆಗೋಡೆ ನಿರ್ಮಾಣ ಮಾಡಿ ಗೇಟುಗಳ ಅಳವಡಿಸಬೇಕು ಎನ್ನುವ ಪ್ರಸ್ತಾವನೆ ಶಿಕ್ಷಣ ಇಲಾಖೆ ಕಸದ ಬುಟ್ಟಿಯಲ್ಲಿದೆ. ಹೀಗಾಗಿ ನಿತ್ಯವೂ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಬೆಳಗ್ಗೆ ಶಾಲೆಯ ಸ್ವಚ್ಚತೆ ಮಾಡುವುದೇ ದೊಡ್ಡ ತಲೆನೋವು ಆಗಿದೆ.
ಕೊಠಡಿಗಳ ಕೊರತೆ ಮಕ್ಕಳು ಬಯಲಿನಲ್ಲಿ ಕುಳಿತು ಪಾಠ
ಜಿಲ್ಲೆಯ ಹತ್ತಾರು ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳ (children) ಸಂಖ್ಯೆಗೆ ಅನುಗುಣವಾಗಿ ಶಾಲೆಗಳ ಕಟ್ಟಡಗಳ ನಿರ್ಮಾಣವಾಗುತ್ತಿಲ್ಲ, ಹೀಗಾಗಿ ಮಕ್ಕಳು ಬಯಲಿನಲ್ಲಿ ಇಲ್ಲ ಮರದ ಕೆಳಗಡೆ ಕುಳಿತು ಪಾಠ ಕೇಳುವ ಪರಿಸ್ಥಿತಿಯಿದೆ. ಒಟ್ಟಾರೆ ಶಾಲೆಗಳು ಆರಂಭವಾಗಿದ್ದು ದುರಸ್ತಿ ಪ್ರಸ್ತಾವನೆ ಶಿಕ್ಷಣ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದ್ದರಿಂದ ಶಿಕ್ಷಕರು,(teacher) ಮಕ್ಕಳು ಚಾವಣಿ ನೋಡಿಯೇ ಪಾಠ ಕಲಿಯುವ ದುಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.