ಕಾಲೇಜು ನಿರ್ವಹಣೆಗೆ ಮಕ್ಕಳಿಂದಲೇ ಹಣ ವಸೂಲಿ!

By Kannadaprabha News  |  First Published Jul 4, 2022, 5:45 AM IST

*  ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿಗೆ ಹಣ ನೀಡದ ಸರ್ಕಾರ
*  ಬಡ ವಿದ್ಯಾರ್ಥಿಗಳಿಂದ 900 ರು.ವರೆಗೂ ಸಂಗ್ರಹ
*  ಕಾಲೇಜುಗಳ ನಿರ್ವಹಣೆಗೂ ಮಕ್ಕಳಿಂದಲೇ ಹಣ ಪಡೆಯುತ್ತಿರುವುದು ಮತ್ತಷ್ಟು ಹೊರೆ
 


ಲಿಂಗರಾಜು ಕೋರಾ

ಬೆಂಗಳೂರು(ಜು.04):  ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ ‘ಕಾಲೇಜು ಅಭಿವೃದ್ಧಿ ಸಮಿತಿ’ಗಳಿಗೆ ಸರ್ಕಾರ ಬಿಡಿಗಾಸೂ ನೀಡದ ಕಾರಣ ಕಾಲೇಜುಗಳ ನಿರ್ವಹಣೆಗಾಗಿ ವಿದ್ಯಾರ್ಥಿಗಳಿಂದಲೇ ಸಾವಿರಾರು ರು. ಹಣ ವಸೂಲಿ ಮಾಡಬೇಕಾದ ದುಸ್ಥಿತಿ ಬಂದಿದೆ.

Tap to resize

Latest Videos

ರಾಜ್ಯದಲ್ಲಿರುವ 1220ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಬಹುತೇಕ ಎಲ್ಲ ಕಾಲೇಜುಗಳಲ್ಲೂ ‘ಕಾಲೇಜು ಅಭಿವೃದ್ಧಿ ಸಮಿತಿ’ ರಚಿಸಿಕೊಳ್ಳಲಾಗಿದೆ. ಸ್ಥಳೀಯ ಶಾಸಕರೇ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕಾಲೇಜು ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ನೀಡುವ ಅನುದಾನದ ಜೊತೆಗೆ ದಾನಿಗಳಿಂದ ದೇಣಿಗೆ ಪಡೆದು ಬಳಕೆ ಮಾಡಲು ಈ ಸಮಿತಿಗೆ ಅವಕಾಶವಿದೆ. ಆದರೆ, ದಾನಿಗಳ ಕೊರತೆಯಿಂದ ಬಹಳಷ್ಟುಕಾಲೇಜುಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಕನಿಷ್ಠ 300 ರು.ನಿಂದ 900 ರು. ವರೆಗೂ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬಂದಿದೆ.

ಖಾಸಗಿ ಶಾಲೆಗಳಿಗೆ ತಂತ್ರಾಂಶ ಸಂಕಷ್ಟ..!

ದಾನಿಗಳ ಕೊರತೆ:

ರಾಜ್ಯದ ಎಲ್ಲ ಪಿಯು ಕಾಲೇಜುಗಳಲ್ಲೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗಳಿವೆ. ಸರ್ಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿ ಕೇವಲ ಸರ್ಕಾರವೊಂದರಿಂದಲೇ ಸಾಧ್ಯವಾಗುವುದಿಲ್ಲ. ಸಾರ್ವಜನಿಕರನ್ನು ಇದರಲ್ಲಿ ಒಳಗೊಳ್ಳುವಂತೆ ಮಾಡಿಕೊಳ್ಳುವ ದೃಷ್ಟಿಯಿಂದ ಪ್ರತೀ ಕಾಲೇಜಲ್ಲೂ ಈ ಸಮಿತಿ ರಚಿಸಿಕೊಂಡು ಸ್ಥಳೀಯವಾಗಿ ದಾನಿಗಳು, ಉಳ್ಳವರಿಂದ ಹಣ ಪಡೆದು ಕಾಲೇಜಿನ ಅಭಿವೃದ್ಧಿ, ನಿರ್ವಹಣಾ ಕಾರ್ಯಗಳಿಗೆ ಬಳಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.

ಆದರೆ, ಬಹುತೇಕ ಶಾಲೆಗಳಿಗೆ ದಾನಿಗಳ ಕೊರತೆ ಇದೆ. ಸರ್ಕಾರ ಕಾಲೇಜುಗಳ ನಿರ್ವಹಣೆಗೆ ನೀಡುವ ಹಣವೂ ಸಾಲುವುದಿಲ್ಲ, ಕೆಲವು ಸಲ ಬರುವ ಹಣವೂ ಸಮಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಕಾಲೇಜು ಅಭಿವೃದ್ಧಿ ಸಮಿತಿಯ ಒಪ್ಪಿಗೆ ಪಡೆದು ಮಕ್ಕಳಿಂದಲೇ ನೂರಾರು ರು. ಹಣ ಪಡೆದು ಅದನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಂಡ ಡಿ ಗ್ರೂಪ್‌ ನೌಕರರು, ಅತಿಥಿ ಶಿಕ್ಷಕರ ವೇತನಕ್ಕೆ, ವಾರ್ಷಿಕೋತ್ಸವ ಮತ್ತಿತರ ಸಮಾರಂಭಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಎನ್ನುತ್ತಾರೆ ‘ಕನ್ನಡಪ್ರಭ’ ಸಂಪರ್ಕಿಸಿದ ಹತ್ತಾರು ಕಾಲೇಜುಗಳ ಪ್ರಾಂಶುಪಾಲರು.

ಉಳಿವಿಗೆ ಅನಿವಾರ್ಯ:

ಹಲವು ಪ್ರಾಂಶುಪಾಲರ ಪ್ರಕಾರ ಇಂದು ಸರ್ಕಾರಿ ಕಾಲೇಜುಗಳು ಉಳಿಯಬೇಕಾದರೆ ಕಂಪ್ಯೂಟರ್‌ ಸೈನ್ಸ್‌ ಕೋರ್ಸನ್ನು ಒಳಗೊಂಡ ಕಾಂಬಿನೇಷನ್‌ ಆರಂಭಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಸರ್ಕಾರಿ ಕಾಲೇಜುಗಳಿಗೆ ಮಕ್ಕಳೇ ಬರುವುದಿಲ್ಲ. ವಾಣಿಜ್ಯ ವಿಭಾಗದಲ್ಲಿ ಇಂತಹ ಕೋರ್ಸುಗಳನ್ನು ಆರಂಭಿಸಲು ಅನುಮತಿ ಕೋರಿದಾಗ ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. ಆದರೆ, ಅದಕ್ಕೆ ತಕ್ಕ ಬೋಧನಾ ಸಿಬ್ಬಂದಿಗಳನ್ನು ನೀಡಿಲ್ಲ.

ಪಿಯು ಕಾಲೇಜುಗಳಲ್ಲಿ ಡಿಸೆಂಬರ್‌ ಬಳಿಕ NEP ಪಠ್ಯಕ್ರಮ: BC Nagesh

ಈ ಕೋರ್ಸುಗಳ ನಿರ್ವಹಣೆಯ ವೆಚ್ಚವನ್ನು ಕಾಲೇಜುಗಳಿಗೆ ನೀಡುವ ವೆಚ್ಚದಲ್ಲೇ ಸರಿದೂಗಿಸಲು ಸೂಚಿಸಿದೆ. ಸರ್ಕಾರ ಪ್ರತೀ ವರ್ಷ ಮಂಜುರಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತದೆ. ಈ ಹುದ್ದೆಗಳಲ್ಲಿ ಕಂಪ್ಯೂಟರ್‌ ಸೈನ್ಸ್‌ ಪಾಠ ಮಾಡುವ ಶಿಕ್ಷಕ ಹುದ್ದೆಗಳ ಸಂಖ್ಯೆ ಬಹಳ ಕಡಿಮೆ. ಹೀಗಾಗಿ ಕಾಲೇಜುಗಳೇ ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್‌ ಶಿಕ್ಷಕರನ್ನು ನೇಮಕ ಮಾಡಿಕೊಂಡು ಮಕ್ಕಳಿಂದ ಪಡೆದ ಹೆಚ್ಚುವರಿ ಶುಲ್ಕದಲ್ಲಿ ವೇತನ ನೀಡುತ್ತಿವೆ. ಈ ಎಲ್ಲ ಕಾರಣಗಳಿಗಾಗಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಸಂಗ್ರಹಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳುತ್ತಾರೆ.

ವಿದ್ಯಾರ್ಥಿಗಳು, ಪೋಷಕರ ಆಕ್ಷೇಪ

ಸರ್ಕಾರಿ ಕಾಲೇಜುಗಳಿಗೆ ದಾಖಲಾಗುವ ಮಕ್ಕಳಲ್ಲಿ ಬಹುತೇಕ ಬಡ ಹಾಗೂ ಮಧ್ಯಮವರ್ಗದ ಕುಟುಂಬದವರೇ ಆಗಿರುತ್ತಾರೆ. ಸಾಕಷ್ಟುಮಕ್ಕಳಿಗೆ ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸರ್ಕಾರ ನಿಗದಿಪಡಿಸಿರುವ 1500 ರು. ವರೆಗಿನ ಶುಲ್ಕ ಭರಿಸುವುದೂ ಕಷ್ಟಕರವಾಗಿದೆ. ಆದರೆ, ಕಾಲೇಜುಗಳ ನಿರ್ವಹಣೆಗೂ ಮಕ್ಕಳಿಂದಲೇ ಹಣ ಪಡೆಯುತ್ತಿರುವುದು ಮತ್ತಷ್ಟು ಹೊರೆಯಾಗುತ್ತಿದೆ ಎಂಬ ಆರೋಪಗಳು ವಿದ್ಯಾರ್ಥಿಗಳು ಹಾಗೂ ಪೋಷಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
 

click me!