* ಪ್ರಸಕ್ತ ವರ್ಷ ಬಾಗಿಲು ಹಾಕಿದ ಮೂರು ಶಾಲೆಗಳು
* ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಮುಖ
* ಫಲಪ್ರದವಾಗದ ಸರ್ಕಾರಿ ಯೋಜನೆಗಳು
ಜಿ.ಡಿ.ಹೆಗಡೆ
ಕಾರವಾರ(ಮೇ.13): ಬೇಸಿಗೆ ರಜೆ ಬಳಿಕ ರಾಜ್ಯ ಸರ್ಕಾರ(Government of Karnataka) ಮೇ 16ರಿಂದ ಶಾಲೆಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ ಕೆಲವು ಶಾಲೆಗಳಿಗೆ ಬಾಗಿಲು ತೆರೆಯುವ ಭಾಗ್ಯವಿಲ್ಲ. ನೂರಾರು ಜನರಿಗೆ ವಿದ್ಯೆ ಕಲಿಸಿದ್ದ ಕೊಠಡಿಗಳು ಶೂನ್ಯ ವಿದ್ಯಾರ್ಥಿಗಳ(Students) ಸಂಖ್ಯೆಯಿಂದ ಖಾಲಿ ಖಾಲಿ ಇರುವಂತೆ ಆಗಿದೆ!
ಸರ್ಕಾರಗಳು ಜಾರಿಗೆ ತಂದ ವಿವಿಧ ಯೋಜನೆಗಳು ಫಲಪ್ರದವಾಗುತ್ತಿಲ್ಲ. ಸರ್ಕಾರಿ ಶಾಲೆಗಳತ್ತ(Schools) ಮಕ್ಕಳನ್ನು ಸೆಳೆಯಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಲ್ಲದೇ ಪ್ರತಿವರ್ಷವೂ ಪ್ರಾಥಮಿಕ ಶಾಲೆಗಳು ಸಾಲು ಸಾಲಾಗಿ ಬಾಗಿಲು ಮುಚ್ಚುತ್ತಿವೆ.
ಎಸ್ಸೆಸ್ಸೆಲ್ಸಿ ಪೇಲ್ ಕಡಿಮೆ ಮಾಡಲು 10% ಕೃಪಾಂಕ
ವಿದ್ಯಾರ್ಥಿಗಳಿಲ್ಲದೇ ಈಗಾಗಲೇ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ(Karwar Educational District) 2010ರಿಂದ ಇದುವರೆಗೆ 5 ತಾಲೂಕಿನ ಬರೋಬ್ಬರಿ 37 ಸರ್ಕಾರಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಪ್ರಸಕ್ತ ವರ್ಷ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಶಾಲೆಗಳು ಬಾಗಿಲು ಹಾಕುತ್ತಿವೆ. ಜಿಲ್ಲೆ ಕೇಂದ್ರವಾದ ಕಾರವಾರ ತಾಲೂಕಿನಲ್ಲಿ 2 ಹಾಗೂ ಪಕ್ಕದ ಅಂಕೋಲದಲ್ಲಿ 1 ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗದೇ ಮುಚ್ಚಲಾಗಿದೆ. ಈ ಶೈಕ್ಷಣಿಕ ಜಿಲ್ಲೆಯಲ್ಲಿ 5ಕ್ಕಿಂತ ಕಡಿಮೆ ಇರುವ 38 ಶಾಲೆಗಳು ಹಾಗೂ 10ಕ್ಕಿಂತ ಮಕ್ಕಳು ಕಡಿಮೆ ಇರುವ 95 ಶಾಲೆಗಳು ಇವೆ. ಕನ್ನಡ ಶಾಲೆಗಳಲ್ಲಿನ(Kannada Schools) ನಿರಾಸಕ್ತಿಯಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳು ಬಂದ್ ಆಗುವ ಸಾಧ್ಯತೆಯೂ ಇದೆ.
ಕಾರವಾರ 21, ಅಂಕೋಲಾ 5, ಕುಮಟಾ 4, ಹೊನ್ನಾವರ 8 ಒಟ್ಟು 38 ಶಾಲೆಗಳಲ್ಲಿ 5 ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಖ್ಯೆಯಿದೆ. ಕಾರವಾರ 24, ಅಂಕೋಲಾ, ಕುಮಟಾ ತಲಾ 15, ಹೊನ್ನಾವರ 23, ಭಟ್ಕಳದಲ್ಲಿ 18 ಶಾಲೆಗಳಲ್ಲಿ 10ಕ್ಕಿಂತ ವಿದ್ಯಾರ್ಥಿಗಳು ಕಡಿಮೆಯಿದ್ದಾರೆ. ಕನ್ನಡ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ತಾತ್ಕಾಲಿಕವಾಗಿ ಶಾಲೆಗಳು ಬಾಗಿಲು ಹಾಕುತ್ತಿವೆ.
ಫಲವಿಲ್ಲದ ಯೋಜನೆಗಳು:
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಬಟ್ಟೆ, ಮಧ್ಯಾಹ್ನದ ಬಿಸಿಯೂಟ ಹೀಗೆ ಹಲವಾರು ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿವೆ. ಆದರೆ ಸರ್ಕಾರಿ ಶಾಲೆಗಳತ್ತ ಮುಖ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಲೇ ಇದೆ. ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆಗಳು ಭಣಗುಡುತ್ತಿವೆ. ಕೋಟಿ ಕೋಟಿ ವೆಚ್ಚ ಮಾಡಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜತೆ ಪ್ರತಿಯೊಂದು ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದರೂ ಸಾವಿರಾರು ರು. ನೀಡಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪಾಲಕರು ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ.
Bijapur Sainik School ಹೆಣ್ಮಕ್ಕಳಿಗೂ ಪ್ರವೇಶ ಅವಕಾಶ
ಇಂಗ್ಲೀಷ್ ವ್ಯಾಮೋಹದ ಜತೆಗೆ ಶಿಕ್ಷಕರ ಕೊರತೆ ಕೂಡ ಶೂನ್ಯ ದಾಖಲಾತಿಗೆ ಕಾರಣ ಎನ್ನಬಹುದಾಗಿದೆ. ಶಿಕ್ಷಣ ಇಲಾಖೆಯು ಪ್ರತಿ ವರ್ಷ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರೂ ಅದು ಯಶಸ್ಸನ್ನು ಕೊಡುತ್ತಿಲ್ಲ.
ಇಪ್ಪತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು
ತಾಲೂಕು ಶಾಲೆ ಸಂಖ್ಯೆ
ಕಾರವಾರ 27
ಅಂಕೋಲಾ 35
ಕುಮಟಾ 42
ಹೊನ್ನಾವರ 62
ಭಟ್ಕಳ 32
ಒಟ್ಟು 198
‘ಕನ್ನಡ ಶಾಲೆ ಬಗ್ಗೆ ಸರ್ವೇ ನಡೆಸಿ’
ಶಾಲೆಗಳು ಬಂದ್ ಆದ ಮಾತ್ರಕ್ಕೆ ಊರಲ್ಲಿ ವಿದ್ಯಾರ್ಥಿಗಳಿಲ್ಲ ಎಂದರ್ಥವಲ್ಲ. ಸರ್ಕಾರ ಉಚಿತ ಶಿಕ್ಷಣ, ಬಟ್ಟೆ, ಊಟ ಎಲ್ಲ ನೀಡುತ್ತಿದೆ. ಕೇವಲ ಇದೊಂದೇ ಸಾಕಾಗುವುದಿಲ್ಲ. ಗುಣಮಟ್ಟದ ಶಿಕ್ಷಣವೂ ಆದ್ಯತೆಯಾಗಬೇಕು. ಶಿಕ್ಷಕರ ಮೇಲೆ ಇತರೇ ಒತ್ತಡ ಹಾಕದೇ ಕೇವಲ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಬಿಡಬೇಕು. ಏಕೆ ಕನ್ನಡ ಶಾಲೆಗೆ ಬರುತ್ತಿಲ್ಲ ಎನ್ನುವ ಬಗ್ಗೆ ಸರ್ವೆ ನಡೆಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಪಾಲಕರು ಒತ್ತು ನೀಡುತ್ತಿದ್ದಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಬೇಕು. ಊಟ, ಬಟ್ಟೆಇತ್ಯಾದಿ ನೀಡಿದರೆ ಪಾಲಕರನ್ನು ಆಕರ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ.