ಖಾಸಗಿ ಕಾಲೇಜಲ್ಲಿ 25% ಸೀಟು ಹೆಚ್ಚಳ: ಸಚಿವ ಅಶ್ವತ್ಥ್‌

By Kannadaprabha News  |  First Published Sep 10, 2021, 7:13 AM IST

* ಕೋವಿಡ್‌ನಿಂದಾಗಿ ಎಲ್ಲರನ್ನೂ ಪಾಸ್‌ ಮಾಡಿದ್ದರ ಎಫೆಕ್ಟ್
* ಕಾಲೇಜುಗಳ ಮೇಲೆ ಅಡ್ಮಿಷನ್‌ ಒತ್ತಡ ತೀವ್ರ
* ಕಳೆದ ವರ್ಷ 3.8 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರೆ ಈ ವರ್ಷ 6.6 ಲಕ್ಷ ಪಾಸ್‌ 
 


ಲಿಂಗರಾಜು ಕೋರಾ

ಬೆಂಗಳೂರು(ಸೆ.10): ಪದವಿ ಪ್ರವೇಶಕ್ಕೆ ಎದುರಾಗಿರುವ ಭಾರಿ ಒತ್ತಡ ನಿಭಾಯಿಸಲು ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಿತ್ಯ ಎರಡು ಪಾಳಿ ಪದ್ಧತಿಯಲ್ಲಿ ತರಗತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜತೆಗೆ, ಖಾಸಗಿ ಕಾಲೇಜುಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶೇ.25ರಷ್ಟುಸೀಟು ಹೆಚ್ಚಳಕ್ಕೆ ಅವಕಾಶ ನೀಡಲು ತೀರ್ಮಾನಿಸಿದೆ.

Tap to resize

Latest Videos

undefined

ಕೋವಿಡ್‌ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಮಾಡಿದ್ದ ಸರ್ಕಾರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 6.66 ಲಕ್ಷ ವಿದ್ಯಾರ್ಥಿಗಳನ್ನೂ ಅವರ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶದ ಆಧಾರದಲ್ಲಿ ಪಾಸು ಮಾಡಿದೆ. ಕಳೆದ ವರ್ಷ ಪರೀಕ್ಷೆಯಲ್ಲಿ ಶೇ.61ರಷ್ಟು ಫಲಿತಾಂಶದೊಂದಿಗೆ 3.84 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಈ ಬಾರಿ ಶೇ.99.99ರಷ್ಟು ಫಲಿತಾಂಶದೊಂದಿಗೆ 6.66 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಪ್ರವೇಶಕ್ಕೆ ಪ್ರತೀ ವರ್ಷಕ್ಕಿಂತ ಈ ಬಾರಿ 2.81 ಲಕ್ಷಕ್ಕೂ ಹೆಚ್ಚು (ಶೇ.30) ಹೆಚ್ಚುವರಿ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಪರಿಣಾಮ ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಕಾಲೇಜುಗಳ ಪ್ರವೇಶಕ್ಕೆ ಭಾರಿ ಒತ್ತಡ ನಿರ್ಮಾಣವಾಗಿದೆ. ವಾಣಿಜ್ಯ, ವಿಜ್ಞಾನ ವಿಭಾಗದ ಕೋರ್ಸುಗಳಿಗಂತೂ ಲಭ್ಯ ಸೀಟುಗಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಅರ್ಜಿಗಳು ಬರುತ್ತಿವೆ. ಹಾಗಾಗಿ ಈ ಒತ್ತಡ ನಿಭಾಯಿಸಲು ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಕಾಲೇಜುಗಳಲ್ಲಿ ಈಗಾಗಲೇ ಅವಕಾಶ ಇರುವ ಪಾಳಿ ಪದ್ಧತಿ ಸೂತ್ರ ಅನುಸರಿಸಲು ತೀರ್ಮಾನಿಸಿದೆ. ನಿಯಮಾವಳಿ ಪ್ರಕಾರ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಕೋರಿ ಬಂದ ಯಾವ ವಿದ್ಯಾರ್ಥಿಗೂ ಪ್ರವೇಶ ನಿರಾಕರಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಲಭ್ಯ ಸೀಟಿಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ ಎಲ್ಲರಿಗೂ ಪ್ರವೇಶ ನೀಡಿ ಶೇ.50ರಷ್ಟುವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಉಳಿದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನಂತರ ಎರಡು ಪಾಳಿಯಲ್ಲಿ ತರಗತಿ ಚಟುವಟಿಕೆ ನಡೆಸಲು ನಿರ್ಧರಿಸಿದೆ.

ಕಲಬುರಗಿ: ಶರಣಬಸವ ವಿವಿ ಘಟಿಕೋತ್ಸವ, 6 ಸಾಧಕರಿಗೆ ಗೌಡಾ, ಡಿ.ಲಿಟ್‌ ಪ್ರದಾನ

ಪರಿಶೀಲಿಸಿ ಸೀಟು ಹೆಚ್ಚಳ: ಅಶ್ವತ್ಥ್‌

ಅದೇ ರೀತಿ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ಬರುವ ಒತ್ತಡ ನಿಭಾಯಿಸಲು ಬೇಡಿಕೆಗೆ ಅನುಗುಣವಾಗಿ ಪ್ರತಿ ಕಾಲೇಜಿನಲ್ಲಿ ಈಗಾಗಲೇ ಇರುವ ಸೀಟುಗಳ ಸಂಖ್ಯೆಗೆ ಅನುಗುಣವಾಗಿ ಗರಿಷ್ಠ ಶೇ.25ರವರೆಗೆ ಸೀಟು ಹೆಚ್ಚಳಕ್ಕೆ ಅನುಮತಿ ನೀಡಲು ತೀರ್ಮಾನಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಚಿವರು, ಯಾವುದೇ ಕಾಲೇಜಿನಲ್ಲಿ ಈಗಿರುವ ಸೀಟಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಕೋರಿ ಅರ್ಜಿ ಸಲ್ಲಿಸಿದರೆ ಆ ಕಾಲೇಜುಗಳು ಗರಿಷ್ಠ ಶೇ.25ರಷ್ಟುಸೀಟು ಹೆಚ್ಚಳ ಕೋರಿ ಕಾಲೇಜು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬಹುದು. ಇದನ್ನು ಪರಿಶೀಲಿಸಿ ಕಾಲೇಜಿನಲ್ಲಿ ಇರುವ ತರಗತಿ ಕೊಠಡಿ ಸಂಖ್ಯೆ, ಮೂಲಸೌಕರ್ಯ, ಬೋಧಕ ವರ್ಗ ಎಲ್ಲವನ್ನೂ ಅವಲೋಕಿಸಿ ಸೀಟು ಹೆಚ್ಚಳಕ್ಕೆ ಅನುಮತಿ ನೀಡಲಿದೆ ಎಂದು ವಿವರಿಸಿದರು.

ಹೆಚ್ಚು ದಾಖಲಾತಿಯಾದರೆ ಪಾಳಿ

ಸರ್ಕಾರಿ ಕಾಲೇಜುಗಳಲ್ಲಿ ಲಭ್ಯ ಸೀಟಿಗಿಂತ ಹೆಚ್ಚು ದಾಖಲಾತಿಯಾದರೆ ನಿತ್ಯ ಎರಡು ಪಾಳಿಯಲ್ಲಿ ತರಗತಿ ನಡೆಸುತ್ತೇವೆ. ಖಾಸಗಿ ಶಾಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ಗರಿಷ್ಠ ಶೇ.25ರಷ್ಟು ಸೀಟು ಹೆಚ್ಚಳಕ್ಕೆ ಅವಕಾಶ ನೀಡುತ್ತೇವೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪದೀಪ್‌ ತಿಳಿಸಿದ್ದಾರೆ. 

ಪ್ರತಿ ವರ್ಷ ಇಂಜಿನಿಯರಿಂಗ್‌ನಲ್ಲಿ ಹತ್ತಾರು ಸಾವಿರ ಸೀಟುಗಳು ಖಾಲಿ ಉಳಿಯುತ್ತಿವೆ. 70 ಸಾವಿರ ಸೀಟುಗಳಿರುವ ಪಾಲಿಟೆಕ್ನಿಕ್‌ಗಳಲ್ಲಿ 30 ಸಾವಿರ ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ. 1 ಲಕ್ಷ ಸೀಟಿರುವ ಐಟಿಐಗೆ 60 ಸಾವಿರ ಸೀಟುಗಳು ಖಾಲಿ ಉಳಿಯುತ್ತಿವೆ. ಹಾಗಾಗಿ ವೃತ್ತಿಪರ ಕೋರ್ಸುಗಳ ವ್ಯಾಸಂಗಕ್ಕೆ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪದೀಪ್‌ ಅವರು ಮಾತನಾಡಿ, ಉನ್ನತ ಶಿಕ್ಷಣ ಪ್ರವೇಶಕ್ಕೆ ಎದುರಾಗುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ರೀತಿ ಕ್ರಮ ಕೈಗೊಳ್ಳಲಾಗಿದೆ. ಪ್ರತೀ ವರ್ಷ 430ಕ್ಕೂ ಹೆಚ್ಚು ಪದವಿ ಕಾಲೇಜು, 329 ಖಾಸಗಿ ಅನುದಾನಿತ ಮತ್ತು 1500ಕ್ಕೂ ಹೆಚ್ಚು ಅನುದಾನ ರಹಿತ ಪದವಿ ಕಾಲೇಜು ಹಾಗೂ ಸಂಜೆ ಕಾಲೇಜುಗಳಲ್ಲಿ 3.5 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈ ವರ್ಷ ಪಿಯುಸಿಯಲ್ಲಿ ಎಲ್ಲರೂ ಪಾಸಾಗಿರುವುದರಿಂದ ಇನ್ನೂ 1ರಿಂದ 1.5 ಲಕ್ಷದಷ್ಟು ಮಕ್ಕಳು ಪದವಿಗೆ ಹೆಚ್ಚುವರಿಯಾಗಿ ಪ್ರವೇಶ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಲಭ್ಯ ಸೀಟಿಗಿಂತ ಹೆಚ್ಚು ದಾಖಲಾತಿಯಾದರೆ ನಿತ್ಯ ಎರಡು ಪಾಳಿಯಲ್ಲಿ ತರಗತಿ ನಡೆಸುತ್ತೇವೆ. ಖಾಸಗಿ ಶಾಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ಗರಿಷ್ಠ ಶೇ.25ರಷ್ಟುಸೀಟು ಹೆಚ್ಚಳಕ್ಕೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.
 

click me!