9-12 ತರಗತಿ ಪ್ರಾರಂಭ: ಮಕ್ಕಳ ಸ್ವಾಗತಕ್ಕೆ 16,000 ಶಾಲೆ, 5,000 ಕಾಲೇಜು ಸಜ್ಜು!

By Suvarna NewsFirst Published Aug 23, 2021, 7:31 AM IST
Highlights

* ರಾಜ್ಯದಲ್ಲಿ ಇಂದಿನಿಂದ 9-12 ತರಗತಿ ಆರಂಭ

* ವಿದ್ಯಾರ್ಥಿಗಳ ಸ್ವಾಗತಕ್ಕೆ 16000 ಶಾಲೆ, 5000 ಕಾಲೇಜು ಸಜ್ಜು

* ಪ್ರೌಢಶಾಲೆ, ಪಿಯುಸಿ ಸೇರಿ 25 ಲಕ್ಷ ಮಕ್ಕಳಿಗೆ ಭೌತಿಕ ತರಗತಿ

* ದ.ಕ, ಚಿಕ್ಕಮಗಳೂರು, ಉಡುಪಿ, ಕೊಡಗು, ಹಾಸನದಲ್ಲಿ ಇಲ್ಲ

ಬೆಂಗಳೂರು(ಆ.23): ಕೋವಿಡ್‌ ಪಾಸಿಟಿವಿಟಿ ದರ ಹೆಚ್ಚಿರುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು ಮತ್ತು ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ 26 ಜಿಲ್ಲೆಗಳಲ್ಲಿ ಸೋಮವಾರದಿಂದ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು, ಕೋವಿಡ್‌ ಮಾರ್ಗಸೂಚಿ ಪ್ರಕಾರ ತರಗತಿ ನಡೆಸಲು ಎಲ್ಲ ಸಿದ್ಧತೆಗಳನ್ನು ಶಾಲಾ- ಕಾಲೇಜುಗಳು ಮಾಡಿಕೊಂಡಿವೆ.

26 ಜಿಲ್ಲೆಗಳಲ್ಲಿ ಸುಮಾರು 16 ಸಾವಿರ ಪ್ರೌಢಶಾಲೆ, 5000ಕ್ಕೂ ಹೆಚ್ಚು ಪಿಯು ಕಾಲೇಜುಗಳ 9ರಿಂದ 12ನೇ ತರಗತಿಗೆ ಈಗಾಗಲೇ ದಾಖಲಾತಿ ಪಡೆದಿರುವ ಸುಮಾರು 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಾಲ್ಕೂವರೆ ತಿಂಗಳ ಬಳಿಕ ಪುನಾರಂಭವಾಗಲಿವೆ. ಕೋವಿಡ್‌ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಭೌತಿಕ ತರಗತಿ ಆರಂಭಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈ ನಡುವೆ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಭಾನುವಾರ ಶೇ.2ಕ್ಕಿಂತ ಕೆಳಕ್ಕೆ ಕುಸಿದಿದೆಯಾದರೂ, ಅಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿಲ್ಲ.

ಸರ್ಕಾರದ ಆದೇಶದಂತೆ ಎಲ್ಲ ಶಾಲೆ, ಪಿಯು ಕಾಲೇಜುಗಳಲ್ಲೂ ಭೌತಿಕ ತರಗತಿ ಆರಂಭಕ್ಕೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುಲಾಬಿ ನೀಡುವುದು, ಸಿಹಿ ಹಂಚುವುದು ಸೇರಿದಂತೆ ತಮ್ಮದೇ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಿಕ್ಷಕರು, ಆಡಳಿತ ಮಂಡಳಿಗಳು ಸಿದ್ಧತೆ ಮಾಡಿಕೊಂಡಿವೆ. ಆದರೆ ಕೋವಿಡ್‌ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಎಷ್ಟುವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗುತ್ತಾರೆ ಎಂಬುದು ತೀವ್ರ ಕುತೂಹಲವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್‌ ಅವರು ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪ್ರೌಢಶಾಲೆಗಳಲ್ಲಿ 9ನೇ ತರಗತಿಗೆ 9.20 ಲಕ್ಷ ಮಕ್ಕಳು, 10ನೇ ತರಗತಿಗೆ 9.50 ಲಕ್ಷ ಮಕ್ಕಳು ಮತ್ತು ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಅಂದಾಜು 4 ಲಕ್ಷ ಮಕ್ಕಳು, ದ್ವಿತೀಯ ಪಿಯುಸಿಗೆ 5.80 ಲಕ್ಷ ಮಕ್ಕಳು ಈಗಾಗಲೇ ಪ್ರವೇಶ ಪಡೆದುಕೊಂಡಿದ್ದಾರೆ. ಈ ನಾಲ್ಕೂ ತರಗತಿಗಳ ಪ್ರವೇಶ ಪ್ರಕ್ರಿಯೆ ಇನ್ನೂ ಕೂಡ ಪ್ರಗತಿಯಲ್ಲಿದ್ದು, 9 ಮತ್ತು 10ನೇ ತರಗತಿಗೆ ಶೇ.95ರಷ್ಟುದಾಖಲಾತಿ ಪೂರ್ಣಗೊಂಡಿದ್ದರೆ, ಪ್ರಥಮ ಪಿಯುಸಿಗೆ ಅಂದಾಜು ಶೇ.50ರಷ್ಟುಮಾತ್ರ ದಾಖಲಾತಿ ನಡೆದಿದೆ ಎನ್ನಲಾಗುತ್ತಿದೆ. ದ್ವಿತೀಯ ಪಿಯುಸಿಗೂ ಇನ್ನೂ ಶೇ.15ರಷ್ಟುವಿದ್ಯಾರ್ಥಿಗಳು ದಾಖಲಾಗುವುದು ಬಾಕಿ ಇದೆ. ಒಟ್ಟಾರೆ ಈಗಾಗಲೇ ದಾಖಲಾತಿ ಪಡೆದಿರುವ ಮಕ್ಕಳಿಗೆ ಸೋಮವಾರದಿಂದ ಭೌತಿಕ ತರಗತಿಗಳು ಆರಂಭವಾಗಲಿವೆ. ಭೌತಿಕ ತರಗತಿ ಆರಂಭಕ್ಕೆ ಉತ್ತಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವ ಎರಡೂ ಇಲಾಖೆಗಳ ಅಧಿಕಾರಿಗಳು ಶಾಲೆ, ಕಾಲೇಜು ಆರಂಭದ ಬಳಿಕ ಬಾಕಿ ಇರುವ ದಾಖಲಾತಿ ಪ್ರಕ್ರಿಯೆಯು ವೇಗಗೊಳ್ಳಬಹುದು ಎಂಬ ಆಶಯದಲ್ಲಿದ್ದಾರೆ.

ಶಾಲೆಗಳಲ್ಲಿ ತಂಡವಾರು ತರಗತಿ:

ಪ್ರೌಢಶಾಲೆಗಳಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಲು 15ರಿಂದ 20 ವಿದ್ಯಾರ್ಥಿಗಳ ತಂಡ ರಚಿಸಿಕೊಂಡು 9 ಮತ್ತು 10ನೇ ತರಗತಿ ಮಕ್ಕಳಿಗೆ ಭೌತಿಕ ಪಾಠ ಮಾಡಬೇಕು. ಉದಾಹರಣೆಗೆ ಒಂದು ತರಗತಿಯಲ್ಲಿ 100 ಮಕ್ಕಳಿದ್ದರೆ ತರಗತಿ ಕೊಠಡಿಗಳ ವಿಶಾಲತೆ ಆಧಾರದಲ್ಲಿ 15ರಿಂದ 20 ತಂಡಗಳನ್ನು ರಚಿಸಬೇಕು. ಒಂದೊಂದು ತಂಡವನ್ನೂ ಒಂದೊಂದು ತರಗತಿಯಲ್ಲಿ ಕೂರಿಸಿ ಬೇರೆ ಬೇರೆ ವಿಷಯದ ಶಿಕ್ಷಕರು ಅವರಿಗೆ ತರಗತಿ ತೆಗೆದುಕೊಳ್ಳಬೇಕು. ಸದ್ಯ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ತಲಾ 40 ನಿಮಿಷಗಳ ಐದು ಪೀರಿಯಡ್‌, ಶನಿವಾರ 4 ಪೀರಿಯಡ್‌ ಪಾಠ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಪಿಯು ಕಾಲೇಜುಗಳಲ್ಲಿ ಪಾಳಿ ವ್ಯವಸ್ಥೆ:

ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪ್ರಕಾರ, ಪ್ರತಿ ಪಿಯು ಕಾಲೇಜಿನಲ್ಲಿ ವಾರದ ಮೊದಲ ಮೂರು ದಿನ (ಸೋಮವಾರ, ಮಂಗಳವಾರ ಮತ್ತು ಬುಧವಾರ) ಶೇ.50ರಷ್ಟುವಿದ್ಯಾರ್ಥಿಗಳಿಗೆ, ನಂತರದ ಮೂರು ದಿನಗಳಲ್ಲಿ (ಗುರುವಾರ, ಶುಕ್ರವಾರ ಮತ್ತು ಶನಿವಾರ) ಉಳಿದ ಅರ್ಧದಷ್ಟುಮಕ್ಕಳಿಗೆ ಭೌತಿಕ ತರಗತಿ ನಡೆಸಬೇಕು. ಭೌತಿಕ ತರಗತಿ ಇಲ್ಲದ ದಿನಗಳಲ್ಲಿ ಮಕ್ಕಳಿಗೆ ಆನ್‌ಲೈನ್‌ ಬೋಧನೆ ಮುಂದುವರೆಸಬೇಕು ಎಂದು ನಿರ್ದೇಶಿಸಲಾಗಿದೆ.

ಇಬ್ಬರಿಗೆ ಸೋಂಕು ತಗಲಿದರೆ ಶಾಲೆ ಸೀಲ್ಡೌನ್‌

ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದರೆ ಕೆಲ ದಿನ ಸೀಲ್‌ಡೌನ್‌ ಮಾಡಿ ಸ್ಯಾನಿಟೈಸ್‌ ಮಾಡಬೇಕು. ಕೊರೋನಾ ಲಕ್ಷಣ ಕಂಡುಬಂದ ಮಕ್ಕಳು, ಶಿಕ್ಷಕರು, ಸಿಬ್ಬಂದಿಗೆ ಶಾಲೆಯ ಪ್ರವೇಶ ಇರುವುದಿಲ್ಲ. ರಜೆ ಪಡೆಯಬೇಕು. ಶಾಲಾ-ಕಾಲೇಜುಗಳಲ್ಲಿ ಎಲ್ಲರೂ ಕಡ್ಡಾಯ ಸಾಮಾಜಿಕ ಅಂತರ, ಮಾÓ್ಕ… ಧರಿಸಬೇಕು. ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿರಬೇಕು. ತರಗತಿ ಹಾಜರಾತಿಗೆ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ. ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಗತಿಗೆ ಅವಕಾಶ. ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಒಳಗಿನ ನೆಗೆಟಿವ್‌ ರಿಪೋರ್ಟ್‌ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದೆ.

click me!