ಕರ್ನಾಟಕದಲ್ಲಿ ಇನ್ನು ದಿನಕ್ಕೆ ‘2 ಶಿಫ್ಟ್‌’ನಲ್ಲಿ ಶಾಲೆ ಆರಂಭ?

By Kannadaprabha NewsFirst Published May 16, 2020, 10:46 AM IST
Highlights

ದಿನಕ್ಕೆ ‘2 ಶಿಫ್ಟ್‌’ನಲ್ಲಿ ಶಾಲೆ ಆರಂಭಕ್ಕೆ ಪ್ರಸ್ತಾವನೆ| ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ| ಬೆಳಗ್ಗೆ 7.50ರಿಂದ 12.20ರವರೆಗೆ 1ನೇ ಪಾಳಿ| ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ 2ನೇ ಪಾಳಿ| ಸರ್ಕಾರ ಇದಕ್ಕೆ ಅನುಮೋದನೆ ನೀಡುತ್ತಾ ಎಂಬುದು ಪ್ರಶ್ನೆ

ಬೆಂಗಳೂರು(ಮೇ.16): ಲಾಕ್‌ಡೌನ್‌ ನಂತರ ರಾಜ್ಯದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜಗಳ ಆರಂಭಕ್ಕೆ ಸರ್ಕಾರ ತಯಾರಿ ಆರಂಭಿಸಿರುವ ಲಕ್ಷಣಗಳಿವೆ. ಏಕೆಂದರೆ, ಶಿಕ್ಷಣ ಇಲಾಖೆಯು ಶುಕ್ರವಾರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿದ್ದು, ಇದರಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಾಳಿ ಆಧಾರದ ಮೇಲೆ ಪ್ರೌಢಶಾಲೆ ಹಾಗೂ ಪಿಯು ತರಗತಿ ನಡೆಸಲು ಒಪ್ಪಿಗೆ ಕೋರಲಾಗಿದೆ.

"

ಕೊರೋನಾ ವೈರಸ್‌ ತಡೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರೌಢಶಾಲೆ ಮತ್ತು ಪಿಯು ಕಾಲೇಜು ತರಗತಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಾಳಿ ಪದ್ಧತಿಯಲ್ಲಿ ನಡೆಸಲು ಅನುಮತಿಸುವಂತೆ ಈ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರ ಇದಕ್ಕೆ ಅನುಮೋದನೆ ನೀಡುವುದೇ ಕಾದು ನೋಡಬೇಕಿದೆ.

ಶುಕ್ರವಾರ ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶಾಲೆ ಮತ್ತು ಕಾಲೇಜು ತರಗತಿಯನ್ನು ಪಾಳಿ ಪದ್ಧತಿಯಲ್ಲಿ ನಡೆಸುವುದೇ ಸೂಕ್ತ ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಅದರಂತೆ 2 ಪಾಳಿಯ ಸಮಯ ನಿಗದಿ ಮಾಡಲಾಗಿದ್ದು, ಅದು- ಮೊದಲನೇ ಪಾಳಿ ಬೆಳಗ್ಗೆ 7.50ರಿಂದ 12.20 ಮತ್ತು ಎರಡನೇ ಪಾಳಿ ಮಧ್ಯಾಹ್ನ 12.10ರಿಂದ ಸಂಜೆ 5ರ ವÃಗೆ ಇರಲಿದೆ. ಈ ಪಾಳಿ ವ್ಯವಸ್ಥೆ ಜಾರಿಗೆ ತಂದರೆ ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಸಾಮಾಜಿಕ ಅಂತರ (ಒಂದು ಡೆಸ್ಕ್‌ನಲ್ಲಿ ಮೂವರು ವಿದ್ಯಾರ್ಥಿಗಳು ಕೂರಲು ಅವಕಾಶ ಕಲ್ಪಿಸುವುದು) ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯ.

ಪ್ರಸ್ತಾವನೆಯಲ್ಲಿ ಏನಿದೆ?:

- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ 1 ಡೆಸ್ಕ್‌ಗೆ 3 ವಿದ್ಯಾರ್ಥಿಗಳಂತೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.

- ಬೋಧನಾ ಕೊಠಡಿಗಳ ಕೊರತೆ ಉಂಟಾದಲ್ಲಿ ಗ್ರಂಥಾಲಯ ಕೊಠಡಿ. ಕ್ರೀಡಾ ಕೊಠಡಿ, ಕಂಪ್ಯೂಟರ್‌ ಕೊಠಡಿ ಬಳಸಿಕೊಳ್ಳಬೇಕು.

- ಜನ ವಸತಿ ಪ್ರದೇಶಗಳಲ್ಲಿ ಲಭ್ಯವಿರುವ ಸಮುದಾಯ ಭವನಗಳು, ಸರ್ಕಾರಿ ಕಟ್ಟಡಗಳು ಮತ್ತು ಮಧ್ಯಾಹ್ನದ ನಂತರ ದೊರೆಯುವ ಅಂಗನವಾಡಿ ಕೇಂದ್ರದ ಕೊಠಡಿಗಳನ್ನು ಬಳಸಿಕೊಳ್ಳಬಹುದು.

- ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆ ತರುವಾಗ ಶಾಲಾ ವಾಹನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

- ಪ್ರಾರ್ಥನೆ ಸಮಯದಲ್ಲಿ ಮಾಸ್ಕ್‌ ಧರಿಸುವುದು. ಶೌಚಾಲಯ ಮತ್ತು ಊಟದ ಸಮಯದಲ್ಲಿ ವಿದ್ಯಾರ್ಥಿಗಳು ಕೈ ತೊಳೆದುಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಬೇಕು.

- ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಪಾಳಿ ಪದ್ಧತಿ ಅಗತ್ಯವಿಲ್ಲ.

- ಯಾವ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಗುವಷ್ಟುವಿದ್ಯಾರ್ಥಿಗಳ ಸಂಖ್ಯೆಯಿದೆಯೋ ಅಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಬಹುದು.

- ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಕೊಠಡಿ ಸಮಸ್ಯೆ ಉಂಟಾದಲ್ಲಿ ಶಾಲೆ ಹಾಗೂ ಪಿಯು ಕೊಠಡಿಗಳನ್ನು ಒಗ್ಗೂಡಿಸಬಹುದು.

- ಪ್ರಸ್ತುತ ವಾರದಲ್ಲಿ 45 ತರಗತಿಗಳನ್ನು ನಡೆಸಲಾಗುತ್ತಿದೆ. ಈ ಸಂಖ್ಯೆಯಲ್ಲಿ 36ಕ್ಕೆ ಕಡಿತಗೊಳಿಸಬಹುದು.

- ಪಾಳಿ ಪದ್ಧತಿ ನಗರ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಬಹುದು.

- ಗ್ರಾಮೀಣ ಪ್ರದೇಶದಲ್ಲಿ ಜಾರಿ ಬಗೆಗೆ ಸ್ಥಳೀಯ ಆಡಳಿತ ಅಲ್ಲಿನ ಪರಿಸ್ಥಿತಿಗೆ ಅನುಸಾರವಾಗಿ ಸ್ಥಳೀಯ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬಹುದು.

click me!