ಸಹೋದ್ಯೋಗಿಗಳಿಗಿಂತ ಹೆಚ್ಚಿನ ಬುದ್ಧಿವಂತಿಕೆ, ಉದ್ಯೋಗ ಕೌಶಲವಿದ್ದರೂ ಕೆಲವರು ಗೆಲುವಿನ ಮೆಟ್ಟಿಲು ಏರುವಾಗ ಜಾರುತ್ತಾರೆ. ಅವರೆಲ್ಲಿ ಎಡವಿರುತ್ತಾರೆ ಗೊತ್ತಾ?
ಸ್ಮಾರ್ಟ್ ಉದ್ಯೋಗಿ ಆಗಿರುವುದು ಖಂಡಿತಾ ನಿಮ್ಮನ್ನು ಉಳಿದವರ ಮಧ್ಯೆ ವಿಶೇಷವಾಗಿಸುತ್ತದೆ. ಆದರೆ, ಅದೇ ಸ್ವಭಾವ ಕೆಲವೊಮ್ಮೆ ಬ್ಯಾಕ್‌ಫೈರ್ ಆಗಬಹುದು. ಅದರಿಂದಲೇ ಉದ್ಯೋಗದಲ್ಲಿ ಮೇಲೇರಲು ತೊಡಕಾಗುತ್ತಿರಬಹುದು. ಜನರು ಸ್ಮಾರ್ಟ್ ಆಗಿದ್ದರೂ ಕೆಲವೊಮ್ಮೆ ಪೆದ್ದತನ ತೋರಿ ತಪ್ಪು ಮಾಡುತ್ತಾರೆ. ಇದರಿಂದ ತಮ್ಮ ಯಶಸ್ಸಿಗೆ ತಾವೇ ಕಲ್ಲು ಹಾಕಿಕೊಳ್ಳುತ್ತಾರೆ. ಅರೆ, ಹೇಗೆಂದು ಯೋಚಿಸುತ್ತಿದ್ದೀರಾ, ಮುಂದೆ ಓದಿ.
ಸಹೋದ್ಯೋಗಿಗಳೊಂದಿಗೆ ದುರ್ವರ್ತನೆ
ಸ್ಮಾರ್ಟ್ ಆಗಿ ಯೋಚಿಸುವವರಿಗೆ ಎಲ್ಲವೂ ಸುಲಭ. ಯಾವುದೇ ವಿಷಯವನ್ನಾದರೂ ಅವರು ತಕ್ಷಣ ಅರ್ಥ ಮಾಡಿಕೊಳ್ಳಬಲ್ಲರು. ಇದೇ ಕಾರಣಕ್ಕೆ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವ ಸಹೋದ್ಯೋಗಿಗಳನ್ನು ಅವರು ಕೀಳಾಗಿ ಕಾಣಬಹುದು. ಅವರನ್ನು ದೂರವಿಡುವುದು, ಕಿರಿಕಿರಿ ಮಾಡಿಕೊಳ್ಳುವುದು ಅಥವಾ ವ್ಯಂಗ್ಯ ಮಾಡಿ ನಗುವುದು ಮಾಡಬಹುದು. ಇದರಿಂದ ಸಹೋದ್ಯೋಗಿಗಳು ಅವರನ್ನು ನಿಧಾನವಾಗಿ ದೂರ ಮಾಡುತ್ತಾರೆ. ಅಲ್ಲದೆ, ಮೇಲರಿಮೆ ಭಾವನೆಯೇ ಸ್ಮಾರ್ಟ್ ಜನರು ಎಲ್ಲರೊಂದಿಗೆ ಬೆರೆಯದಂತೆ ಮಾಡುತ್ತದೆ. ಇದು ಟೀಮ್ ಕಟ್ಟಲು ಬೇಕಾದ ಸೋಷ್ಯಲ್ ಸ್ಕಿಲ್ ಅವರಲ್ಲಿಲ್ಲದಿರುವುದನ್ನು ಸೂಚಿಸುತ್ತದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸ್ವಭಾವದವರು ಮಾತ್ರ ಲೀಡರ್ ಆಗಿ ಉದ್ಯೋಗದಲ್ಲಿ ಮೇಲೇರಬಹುದು.
ಪ್ರೊಫೆಷನಲ್ ಫೋಟೋಗ್ರಾಫರ್ ಆಗ್ಬೇಕಾ?
ಕೆಲಸ ಹೇಳಿಕೊಡುವುದರಲ್ಲಿ ಸೋಲು
ಸ್ಮಾರ್ಟ್ ಉದ್ಯೋಗಿಯು ತನ್ನದೇ ಆದ ರೀತಿಯಲ್ಲಿ ಕೆಲಸವನ್ನು ವೇಗವಾಗಿ ಸರಿಯಾಗಿ ಮಾಡುತ್ತಾನೆ. ಆದರೆ, ಅದನ್ನು ಇತರರಿಗೆ ಹೇಳಿಕೊಡುವಲ್ಲಿ ಸೋಲುತ್ತಾನೆ. ಎಲ್ಲರಿಗೂ ಅರ್ಥ ಮಾಡಿಸಿ ಪ್ರಾಜೆಕ್ಟ್ ಮುಗಿಸುವುದಕ್ಕಿಂತ ಒಬ್ಬನೇ ಮಾಡಿ ಮುಗಿಸುವುದೇ ಸುಲಭ ಹಾಗೂ ಲೇಸು ಎಂಬುದು ಸ್ಮಾರ್ಟ್ ಉದ್ಯೋಗಿಯ ಯೋಚನೆಯಾಗಿರುತ್ತದೆ. ಹೀಗಾಗಿ, ಆತ ಉಳಿದವರು ಹೊಸ ಕಲಿಕೆ ಕಲಿಯುವ ಅವಕಾಶವನ್ನು ತಪ್ಪಿಸುತ್ತಾನೆ.
ಬೇಗ ಬೋರಾಗುವುದು
ಬುದ್ಧೀವಂತ ಉದ್ಯೋಗಿಗೆ ಯಾವುದೇ ವಿಷಯವಾಗಲಿ, ಥಟ್ಟನೆ ತಲೆಗೆ ಹೋಗುವುದರಿಂದ ಆತ ಅದನ್ನು ಆದಷ್ಟು ಬೇಗ ಕಲಿತುಕೊಂಡು ಮಾಡಿ ಮುಗಿಸಬಲ್ಲ. ಹೀಗಾಗಿ, ಬೇಗ ಬೇಗನೆ ಬೇರೆ ಬೇರೆ ಅಸೈನ್‌ಮೆಂಟ್‌ಗೆ ಜಂಪ್ ಆಗುತ್ತಾನೆ. ಒಂದು ವಿಷಯವನ್ನು ಕಲಿತ ಮೇಲೆ ಅದನ್ನೇ ಸುತ್ತಿ ಬಳಸಿ ಮಾತನಾಡುವುದು, ಅದರ ಮೇಲೇ ಕೆಲಸ ಮಾಡುವುದು ಆತನಿಗೆ ಬೋರ್ ಎನಿಸುತ್ತದೆ. ಇದು ಆತನಲ್ಲಿ ಸ್ಥಿರತೆ ಹಾಗೂ ತಾಳ್ಮೆಯ ಕೊರತೆ ಇರುವುದನ್ನು ಸೂಚಿಸುತ್ತದೆ.
ಉದ್ಯೋಗ ನಿರ್ವಹಿಸುವ ರೀತಿಯಲ್ಲಿ ತಪ್ಪು
ಉದ್ಯೋಗಿ ಸ್ಮಾರ್ಟ್ ಆಗಿದ್ದಷ್ಟೂ ಆತ ಯೋಚಿಸುವುದು ಹಾಗೂ ಸಣ್ಣ ವಿವರಗಳನ್ನು ತಡಕಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾನೆಯೇ ಹೊರತು, ಕೆಲಸ ಮುಗಿಸುವುದರತ್ತ, ತನ್ನ ಯೋಚನೆಗಳನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸುವುದು ಕಡಿಮೆ. ಹೆಚ್ಚಿನ ಬಾರಿ ಕೆಲಸ ಆಗುವುದು ಮುಖ್ಯವಾಗಿರುತ್ತದೆಯೇ ಹೊರತು, ಅದರ ಸಣ್ಣಸಣ್ಣ ನಗಣ್ಯ ವಿವರಗಳೆಲ್ಲ ಅನಗತ್ಯವಾಗಿರುತ್ತದೆ.
ರಜೆಯಲ್ಲಿ ಮಾಡಬಹುದಾದ ಪಾರ್ಟ್ ಟೈಂ ಉದ್ಯೋಗಗಳು
ಸಾಮಾನ್ಯ ತಪ್ಪು
ಸ್ಮಾರ್ಟ್ ಆಗಿರುವುದಕ್ಕೂ, ಓವರ್ ಸ್ಮಾರ್ಟ್ ಆಗಿರುವುದಕ್ಕೂ ವ್ಯತ್ಯಾಸವಿದೆ. ಸ್ಮಾರ್ಟ್ ಉದ್ಯೋಗಿಗೆ ತನ್ನ ಕೆಲಸದ ಬಗ್ಗೆ ಅಹಂ ಬಂದ ತಕ್ಷಣದಿಂದಲೇ ಆತ ಹಾದಿ ತಪ್ಪುತ್ತಾನೆ. ಯಾರಾದರೂ ತಮ್ಮ ಕೆಲಸವನ್ನು ಪ್ರಶ್ನಿಸಿದರೆ, ಅಥವಾ ಯಾವುದಾದರೂ ಕೆಲಸದ ವಿಷಯದಲ್ಲಿ ಸಹೋದ್ಯೋಗಿಯೂ ತನಗಿಂತ ಉತ್ತಮ ಸಲಹೆ ನೀಡಿದರೆ ಅದನ್ನು ಸಹಿಸಲು, ಒಪ್ಪಿಕೊಳ್ಳಲು ಈತನಿಂದ ಸಾಧ್ಯವಿಲ್ಲವಾಗುತ್ತದೆ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಗುಣ ಅವರಲ್ಲಿರುವುದಿಲ್ಲ.
ನೆನಪಿಡಿ
ಬುದ್ಧಿವಂತಿಕೆ ಒಂದು ಹಿಡಿ ಹೆಚ್ಚಿದ್ದ ಮಾತ್ರಕ್ಕೆ ಯಶಸ್ವಿಯಾಗಬೇಕೆಂದೇನೂ ಇಲ್ಲ. ಯಶಸ್ಸಿಗೆ ಯಾವುದೇ ಅಡ್ಡಹಾದಿಯಿಲ್ಲ. ಗೆಲ್ಲಬೇಕೆಂದರೆ ವಿನಯ, ಶ್ರದ್ಧೆ, ಹಾರ್ಡ್‌ವರ್ಕ್, ತಾಳ್ಮೆ ಅತ್ಯಗತ್ಯ. ಎಲ್ಲವನ್ನೂ ಒಗ್ಗೂಡಿಸಿಕೊಂಡು ಸರಿಯಾದ ಮನೋಭಾವದಿಂದ ಮುನ್ನುಗ್ಗಿದಿರಾದರೆ ಮಾತ್ರ ನಿಮ್ಮ ಗೆಲುವನ್ನು ಯಾರೂ ತಡೆಯಲಾರರು.