ಒಂದಾದ ಮೇಲೆ ಒಂದು ಇಂಟರ್‌ವ್ಯೂ ಅಟೆಂಡ್ ಮಾಡಿದ್ರೂ, ಎಲ್ಲ ಪ್ರಶ್ನೆಗೂ ಸರಿಯಾದ ಉತ್ತರ ನೀಡಿದ್ರೂ ಕೆಲ್ಸ ಸಿಗ್ತಿಲ್ವಾ? ಹಾಗಿದ್ದರೆ, ನೀವು ಈ ವಿಷಯಗಳತ್ತ ಗಮನ ಹರಿಸಿ ನೋಡಿ.
ದಿನಾ ಒಂದಿಲ್ಲೊಂದು ಇಂಟರ್‌ವ್ಯೂ ಅಟೆಂಡ್ ಮಾಡ್ತಾನೇ ಇದೀರಾ. ಆಯಾ ಕಚೇರಿಯಲ್ಲಿ ವೆಕೆನ್ಸಿ ಇರುವ ಹುದ್ದೆಗೆ ಸರಿಯಾದ ಎಲ್ಲ ಕ್ವಾಲಿಫಿಕೇಶನ್‌ಗಳೂ ನಿಮ್ಮಲ್ಲಿವೆ. ಇಂಟರ್‌ವ್ಯೂನಲ್ಲೂ ಎಲ್ಲ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಿದ್ದೀರಿ. ಸಂದರ್ಶನ ನಡೆಸಿದವರೂ ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಹಾಗಿದ್ದರೂ ಕೆಲಸ ಆಗಿದೆ ಎಂಬ ಕಾಲ್ ಮಾತ್ರ ಬರುತ್ತಿಲ್ಲ. ಎಲ್ಲಿ ಏನು ಹದ ತಪ್ಪುತ್ತಿದೆ ಎಂದೇ ತಿಳಿಯದೆ ಗೊಂದಲಕ್ಕೆ ಸಿಲುಕಿದ್ದೀರಾ? ಬಹುಷಃ ನೀವು ಈ ವಿಷಯಗಳಲ್ಲಿ ಸೋಲುತ್ತಿರಬಹುದು. ಅವುಗಳು ಯಾವುವು ಎಂದು ಅರಿತರೆ, ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.
1. ನಿಮ್ಮನ್ನು ನೀವು ಬಿಂಬಿಸಿಕೊಳ್ಳುತ್ತಿರುವ ರೀತಿ ತಪ್ಪಿರಬಹುದು
ಪ್ರಾಮಾಣಿಕತೆ ಯಾವಾಗಲೂ ಒಳ್ಳೆಯದೇ, ಅದರಲ್ಲೂ ಉದ್ಯೋಗ ಸಂದರ್ಶನಗಳಲ್ಲಿ ಪ್ರಾಮಾಣಿಕತೆ ಅತ್ಯಗತ್ಯ. ಆದರೆ, ಕೆಲವೊಂದನ್ನು ಉತ್ತರಿಸುವಾಗ ಟ್ರಿಕ್ಕಿಯಾಗಿರಬೇಕು. ಉದಾಹರಣೆಗೆ ನೀವು ಕೈಲಿರುವ ಕೆಲಸವನ್ನೇಕೆ ಬಿಡುತ್ತಿದ್ದೀರಾ ಎಂದೋ ಅಥವಾ ನಮ್ಮ ಕಂಪನಿಯಲ್ಲೇ ಕೆಲಸ ಮಾಡಬೇಕೆಂದು ಏಕೆ ಯೋಚಿಸಿದ್ದೀರಿ ಎಂದು ಪ್ರಶ್ನಿಸಿದರೆ, ನಿಮ್ಮ ಈಗಿನ ಕೆಲಸವನ್ನು ಹಳಿಯುವುದು, ಅಲ್ಲಿ ಬಾಸ್ ತೊಂದರೆ ಕೊಡುತ್ತಿರುವುದು ಮುಂತಾದವನ್ನು ಹೇಳುವುದು ಹಾಗೂ ಕೈಲಿರುವ ಕೆಲಸ ಬಿಟ್ಟು ಬಿಡಲು ಎಂಥದ್ದೇ ಆಫರ್ ಆದರೂ ಸರಿ ಒಪ್ಪಿಕೊಳ್ಳುತ್ತೀರಿ ಎಂದು ತೋರಿಸಿಕೊಳ್ಳುವುದಕ್ಕಿಂತ ಸ್ವಲ್ಪ ಸ್ಮಾರ್ಟ್ ಉತ್ತರ ನೀಡಲು ಪ್ರಯತ್ನಿಸಿ. ನೀವು ಹೊಸ ಕಂಪನಿಯ ಹೊಸ ಟೀಂಗೆ ಹೇಗೆ ಸರಿಯಾಗಿ ಫಿಟ್ ಆಗುತ್ತೀರಿ ಎಂದೋ ಅಥವಾ ಈ ಹೊಸ ರೋಲ್ ನಿಮಗೆ ಹೊಸತನ್ನು ಕಲಿಯಲು ಬಹಳ ಅವಕಾಶಗಳನ್ನು ನೀಡುತ್ತದೆ ಅಲ್ಲದೆ, ಅದು ನಿಮ್ಮ ಪ್ರತಿಭೆಗೆ ಹೇಳಿ ಮಾಡಿಸಿದ್ದು ಎಂದೋ ವಿವರಿಸಿ. ಇದು ನೀವು ಹತಾಶೆಯಿಂದ ಕೆಲಸ ಹುಡುಕುತ್ತಿದ್ದೀರಿ ಎಂದು ತೋರಿಸದೆ ಹೊಸ ಕೆಲಸ ಮಾಡಲು ಉತ್ಸುಕರಾಗಿದ್ದೀರಿ ಎಂದು ತೋರಿಸುತ್ತದೆ.
2019 ರ ಡಿಮ್ಯಾಂಡಿಂಗ್ ಕೆಲಸಗಳು ಯಾವುವು ಗೊತ್ತಾ?
2. ಸರಿಯಾದ ಪ್ರಶ್ನೆಗಳನ್ನು ಕೇಳುತ್ತಿದ್ದೀರಾ?
ನೀವು ಸಂದರ್ಶನದಲ್ಲಿ ಎಲ್ಲ ಪ್ರಶ್ನೆಗೂ ಚೆನ್ನಾಗಿ ಉತ್ತರಿಸುತ್ತಿರಬಹುದು. ಆದರೆ ನೀವೂ ಕೆಲವು ಆಸಕ್ತಿಕರ ಪ್ರಶ್ನೆಗಳನ್ನು ಕೇಳುತ್ತಿದ್ದೀರಾ? ನೀವು ಕೇಳುವ ಪ್ರಶ್ನೆಗಳು ನೀವು ಆ ಬಗ್ಗೆ ಹೆಚ್ಚು ರಿಸರ್ಚ್ ಮಾಡಿಲ್ಲ ಎಂಬುದನ್ನು ತೋರಿಸುತ್ತಿರಬಹುದು ಅಥವಾ ನೀವು ಯಾವುದೇ ಪ್ರಶ್ನೆಯನ್ನು ಕೇಳದೆ, ಕೇಳಿದ್ದಷ್ಟಕ್ಕೆ ಉತ್ತರಿಸಿ ಬರುತ್ತಿರುವುದಕ್ಕೇ ರಿಜೆಕ್ಟ್ ಆಗುತ್ತಿರಬಹುದು. ಇದು ನಿಮಗೆ ಆ ಕೆಲಸದಲ್ಲಿ ಅಷ್ಟೇನೂ ಆಸಕ್ತಿಯಿಲ್ಲ ಎಂಬುದನ್ನು ತೋರಿಸುತ್ತದೆ.
3. ಬಾಡಿ ಲಾಂಗ್ವೇಜ್ ತಪ್ಪಿರಬಹುದು
ನಿಮಗೆ ತಿಳಿಯದಿರಬಹುದು. ಆದರೆ, ಸಂದರ್ಶಕರು ನೀವು ನಡೆಯುವುದು, ಕೂರುವುದರಿಂದ ಹಿಡಿದು ಮಾತನಾಡುವುದು ಪ್ರತಿಯೊಂದನ್ನು ಒರೆಗೆ ಹಚ್ಚುತ್ತಿರುತ್ತಾರೆ. ಕೋಣೆಗೆ ಹೋಗುವ ಮುಂಚೆ ಬಾಗಿಲು ಬಡಿದಿರಾ, ನಿಮ್ಮ ಹ್ಯಾಂಡ್‌ಶೇಕ್‌ನಲ್ಲಿ ಆತ್ಮವಿಶ್ವಾಸವಿತ್ತೇ, ಸಂದರ್ಶನಕ್ಕೆ ಸರಿಯಾದ ಉಡುಗೆ ತೊಡುಗೆ ತೊಟ್ಟಿದ್ದೀರಾ, ಸಂದರ್ಶನಕ್ಕೂ ಮುಂಚೆಯಷ್ಟೇ ಸ್ಮೋಕ್ ಮಾಡಿ ಒಳಹೋಗಿದ್ದೀರಾ, ಮಾತನಾಡುವ ಶೈಲಿಯಲ್ಲಿ ವಿನಯ ಹಾಗೂ ಉತ್ಸಾಹ ಇತ್ತೇ ಎಲ್ಲವೂ ಕೌಂಟ್ ಆಗುತ್ತಿರುತ್ತದೆ. ನಿಮ್ಮ ಬಾಡಿ ಲಾಂಗ್ವೇಜ್ ಹಾಗೂ ಗೆಸ್ಚರ್‌ಗಳು ನಿಮ್ಮ ಬಗ್ಗೆ ಹಲವಷ್ಟು ವಿಷಯವನ್ನು ಹೇಳುತ್ತವೆ. ಇವುಗಳಲ್ಲಿ ಇಂಪ್ರೆಸ್ ಮಾಡುವುದನ್ನು ಕಲಿತುಕೊಳ್ಳಬೇಕು.
ಸ್ಮಾರ್ಟ್ ಆದ್ರೂ ಕೆಲವರು ಉದ್ಯೋಗದಲ್ಲೇಕೆ ಫೇಲ್ಯೂರ್ ಆಗ್ತಾರೆ?
4. ಅತಿಯಾದ ಸಂಬಳದ ನಿರೀಕ್ಷೆ
ಹೊಸ ಉದ್ಯೋಗಕ್ಕೆ ಹೋಗುವಾಗ ಸಂಬಳ ಹಾಗೂ ಹುದ್ದೆಯನ್ನು ಸ್ವಲ್ಪ ಹೆಚ್ಚಾಗಿ ಕೇಳುವುದು ಸಾಮಾನ್ಯ. ಆದರೆ, ಸಂದರ್ಶಕರ ನಿರೀಕ್ಷೆಗೂ ಮೀರಿ ಅವರಿಗೆ ಶಾಕ್ ಆಗುವಂತೆ ಸಂಬಳ ಕೇಳುವುದು ನಿಮ್ಮನ್ನು ದುರಾಸೆಯವರೆನಿಸುತ್ತದೆ. ನಿಮ್ಮ ಸಂಬಳದ ನಿರೀಕ್ಷೆ ಹೇಳುವ ಮುಂಚೆ, ಆ ಕಂಪನಿಯಲ್ಲಿ ಆಯಾ ಪ್ರೊಫೈಲ್‌ಗೆ ಅಂದಾಜು ಎಷ್ಟು ಸಂಬಳ ನೀಡುತ್ತಿದ್ದಾರೆ ಎಂಬ ಕುರಿತು ಸಂಶೋಧನೆ ನಡೆಸಿ. ಜೊತೆಗೆ, ಸಂಬಳದ ವಿಷಯದಲ್ಲಿ ಸ್ವಲ್ಪ ಫ್ಲೆಕ್ಸಿಬಲ್ ಆಗಿರಿ.
5. ನಿಮ್ಮ ಆ್ಯಟಿಟ್ಯೂಡ್
ನಿಮ್ಮ ಈಗಿನ ಕೆಲಸದಿಂದ ಹತಾಶೆಗೊಂಡಿರಬಹುದು. ಹಾಗಂತ ಪ್ರಸ್ತುತ ಉದ್ಯೋಗ ಮಾಡುತ್ತಿರುವ ಸಂಸ್ಥೆಯನ್ನಾಗಲೀ, ಅಲ್ಲಿನ ಸಹೋದ್ಯೋಗಿಗಳನ್ನು, ಬಾಸ್ ಅನ್ನು ದೂರುವ ದಡ್ಡತನ ತೋರಬೇಡಿ. ಇದು ನೀವು ಟೀಮ್ ಪ್ಲೇಯರ್ ಅಲ್ಲ ಎಂದೂ, ಸುಮ್ಮನೆ ಸಣ್ಣಪುಟ್ಟದ್ದನ್ನು ದೂರುತ್ತಾ ಕೂರುವವರೆಂದು ತೋರಿಸುತ್ತದೆ. ಸಾಧ್ಯವಾದಷ್ಟು ಎಲ್ಲ ವಿಷಯಗಳ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿ.
6. ಕೆಲವೊಮ್ಮೆ ನಿಮ್ಮ ತಪ್ಪೇನೂ ಇರದಿರಬಹುದು
ಕೆಲವೊಮ್ಮೆ ಕೆಲಸ ಸಿಗದಿರುವುದಕ್ಕೆ ಹಣೆಬರಹವನ್ನೋ, ಕಾರ್ಪೋರೇಟ್ ಲೋಕವನ್ನೋ ದೂರುವುದು ಉತ್ತಮ. ಏಕೆಂದರೆ, ನಿಮ್ಮ ತಪ್ಪೇನೂ ಇಲ್ಲದೆಯೂ ಮ್ಯಾನೇಜ್‌ಮೆಂಟ್ ವಿಷಯಗಳಿಗಾಗಿ ಕೆಲಸ ಸಿಕ್ಕದಿರಬಹುದು. ಉದ್ಯೋಗಕ್ಕೆ ತೆಗೆದುಕೊಳ್ಳುವುದಕ್ಕೆ ಒದಗಿ ಬಂದಿದ್ದ ಬಜೆಟ್ ಬೇರೆ ವಿಭಾಗಕ್ಕೆ ವರ್ಗಾಯಿಸಿರಬಹುದು, ಎಚ್ಆರ್ ಮ್ಯಾನೇಜರ್‌ಗಳು ಯಾವುದೋ ಲೆಕ್ಕಾಚಾರ ಬದಲಿಸಿ, ಬೇರೆ ವಿಭಾಗದಲ್ಲಿ ಉದ್ಯೋಗಿಗಳಿಗೆ ಹುಡುಕಾಟ ನಡೆಸುತ್ತಿರಬಹುದು. ನೀವು ಪಾಸಿಟಿವ್ ಆಗಿದ್ದು, ಎಂಪ್ಲಾಯರ್ ಜೊತೆ ಸಂಪರ್ಕದಲ್ಲಿರುವುದು ಮರೆಯಬೇಡಿ. ಮಂದಿನ ಬಾರಿ ವೆಕೇನ್ಸಿ ಇದ್ದಾಗ ಅವರು ನಿಮ್ಮನ್ನೇ ಕರೆಯಬಹುದು.