ವಿದ್ಯಾರ್ಥಿಗಳಿಗೆ ಭತ್ತ ನಾಟಿಯ ಪಾಠ, ನೇಜಿ ಪರ್ಬದ ಹೆಸರಲ್ಲಿ ಕೆಸರಿನ ಆಟ!

By Suvarna NewsFirst Published Aug 8, 2022, 2:20 PM IST
Highlights

ನೇಜಿ ಪರ್ಬ' ಅನ್ನೋ ಹೆಸರಿನ ಈ ಕೃಷಿ ಹಬ್ಬದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಟ್ಟು ಮಣ್ಣಿನ ಮಕ್ಕಳಾದರು. ಈ ವಿಶೇಷ ಕಾರ್ಯಕ್ರಮದ ಮೂಲಕ ರೈತನ ಬದುಕಿನ ಹತ್ತಾರು ಆಯಾಮಗಳನ್ನು ತೆರೆದಿಡಲಾಗಿದೆ.

ಮಂಗಳೂರು(ಆ.08): ನಿತ್ಯ ನಾಲ್ಕು ಗೋಡೆಗಳ ಮಧ್ಯೆ ಪಾಠ. ಆಟ-ಪಾಠದ ಹೊರತು ಸಾಮಾಜಿಕ ತಾಣಗಳಲ್ಲೇ ಕಾಲ ಕಳೆಯುವ ಪರಿಪಾಠ. ಇದನ್ನೆಲ್ಲಾ ಬಿಟ್ಟು ಕಾಲೇಜು ವಿದ್ಯಾರ್ಥಿಗಳಿಗೆ ಹಳ್ಳಿಯ ಬದುಕು, ಕೃಷಿ ಸಂಸ್ಕೃತಿ, ಗದ್ದೆ-ಕೆಸರು, ಹೀಗೆ ರೈತನ ಬದುಕಿನ ಹತ್ತಾರು ಆಯಾಮಗಳನ್ನು ತೆರೆದಿಟ್ಟು ಮಣ್ಣಿನ ಮಕ್ಕಳಿಂದಲೇ ಪಾಠ ಹೇಳಿಸೋ ವಿಭಿನ್ನ ಕಾರ್ಯವೊಂದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದಲ್ಲಿ ನಡೆದಿದೆ. ತಂತ್ರಜ್ಞಾನದ ಯುಗಕ್ಕೆ ಅಂಟಿಕೊಂಡಿರೋ ಮಕ್ಕಳು ಇಂಟರ್ ನೆಟ್, ಫೇಸ್ ಬುಕ್ ಗಳಲ್ಲಿ ಮುಳುಗಿ ನಮ್ಮ ಸಂಸ್ಕೃತಿ ಮತ್ತು ಜೀವನ ಕ್ರಮಗಳನ್ನೇ ಮರೆಯುತ್ತಿದ್ದಾರೆ. ಅಂಥ ವಿದ್ಯಾರ್ಥಿಗಳಿಗೆ ಮತ್ತೆ ಈ ಮಣ್ಣಿನ ಸತ್ವ ಮತ್ತು ತತ್ವಗಳನ್ನು ಕಲಿಸಿಕೊಡೋ ಕೆಲಸವನ್ನ ಬಂಟ್ವಾಳ ತಾಲೂಕಿನ ಮದ್ದ ಗ್ರಾಮದ ಶಿವಾಜಿ ಬಳಗ (ರಿ) ಮತ್ತು ಶಿವಾಜಿ ಮಾತೃ ಸೇವಾ ಟ್ರಸ್ಟ್ ಹಮ್ಮಿಕೊಂಡಿತ್ತು. ವಾಮದಪದವಿನ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕೊಡಂಬೆಟ್ಟು ಗ್ರಾಮದ ಪೆರಿಯಾವುಗುತ್ತು ರಮೇಶ್ ಗಟ್ಟಿಯವರ ಕಂಬಳ ಗದ್ದೆಯಲ್ಲಿ ಭತ್ತ ನಾಟಿಯ ಪಾಠ ಮಾಡಲಾಯ್ತು. ‌'ನೇಜಿ ಪರ್ಬ' ಅನ್ನೋ ಹೆಸರಿನ ಈ ಕೃಷಿ ಹಬ್ಬದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಟ್ಟು ಮಣ್ಣಿನ ಮಕ್ಕಳಾದರು. ಆದರೆ ಈ ಬಾರಿ ಇವರಿಗೆ ಶಿಕ್ಷಕರಾಗಿದ್ದು ಮಾತ್ರ ಸ್ಥಳೀಯ ಕೃಷಿಕರು ಮತ್ತು ನಿತ್ಯ ಭತ್ತದ ಗದ್ದೆಯಲ್ಲೇ ಕಳೆಯುವ ತಾಯಂದಿರು. 

ಆಟಿ ತಿಂಗಳಲ್ಲಿ ತುಳುನಾಡಿನ ಭತ್ತದ ಗದ್ದೆಗಳು ಹೊಸ ಚೈತನ್ಯ ಪಡೆದುಕೊಳ್ಳುವ ಹೊತ್ತು. ಸಹಜವಾಗಿಯೇ ಈ ಭಾಗದಲ್ಲಿ ಮಳೆ ಬಿರುಸುಗೊಂಡು ಕೃಷಿ ಮತ್ತಷ್ಟು ವೇಗ ಪಡೆದುಕೊಳ್ಳುವ ಕಾಲ. ಹೀಗಾಗಿ ಇದೇ ಹೊತ್ತಲ್ಲಿ ಕಾಲೇಜು ವಿದ್ಯಾರ್ಥಿಗಳನ್ನ ಗದ್ದೆಗಿಳಿಸುವ ಶಿವಾಜಿ ಬಳಗದ ಪರಿಕಲ್ಪನೆ ಯಶಸ್ವಿಯಾಗಿದೆ. ಉಳುಮೆ ಮಾಡಿ ಮೊದಲೇ ಸಿದ್ದವಾಗಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿವಾಜಿ ಬಳಗದ ಸದಸ್ಯರು ನೇಜಿ ನೆಟ್ಟು ಸಂಭ್ರಮಿಸಿದ್ರು. ಕೃಷಿ ಕಾರ್ಯಕ್ಕೆ ಎಲ್ಲರೂ ಬೆನ್ನು ಹಾಕುವ ಹೊತ್ತಲ್ಲಿ ಸುರಿಯೋ ಮಳೆಯ ಮಧ್ಯೆಯೇ ವಿದ್ಯಾರ್ಥಿಗಳು ನೇಜಿ ನೆಟ್ಟರು. ಭತ್ತದ ಪೈರುಗಳನ್ನ ಹಿಡಿಯೋದು ಹೇಗೆ, ನಾಟಿ ಮಾಡೋದು ಹೇಗೆ, ಭತ್ತದ ಗದ್ದೆಯ ಮಣ್ಣಿನ ಗುಣಗಳ ಬಗ್ಗೆ ಕೃಷಿಕರಿಂದ ಅರಿತುಕೊಂಡರು. ಪಠ್ಯದ ಆಚೆಗೆ ಕೆಸರಿನ ಗದ್ದೆಯಲ್ಲಿ ತೆರೆದುಕೊಂಡ ಹೊಸ ಜಗತ್ತು ರಜಾ ದಿನದಲ್ಲಿ‌ ವಿದ್ಯಾರ್ಥಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿತ್ತು.

Chikkamagaluru: 21 ತಲೆಮಾರುಗಳಿಂದ ನಡೆದುಕೊಂಡು ಬರ್ತಿರೋ ವಿಶಿಷ್ಟ ಗದ್ದೆ ನಾಟಿ ಸಂಪ್ರದಾಯ

ಯಂತ್ರಗಳ ಬದಲು ಕೈಯ್ಯಲ್ಲೇ ನಾಟಿ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಬೆಳೆಗಳಿಗಿಂತಲೂ ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನೇ ಬೆಳೆಸಲಾಗುತ್ತೆ. ಭತ್ತ ಬೆಳೆದರೂ ಈ ಭಾಗದ ರೈತರು ಅಷ್ಟಾಗಿ ಆಹಾರ ಬೆಳೆಗಳತ್ತ ಆಸಕ್ತಿ ಹೊಂದಿರುವುದು ತೀರಾ ಕಡಿಮೆ. ಹೀಗಾಗಿಯೇ ಜಿಲ್ಲೆಯಾದ್ಯಂತ ನೂರಾರು ಎಕರೆ ಭತ್ತ ಬೆಳೆಯೋ ಭೂಮಿಗಳು ಪಾಳು ಬಿದ್ದಿದೆ. ಹತ್ತಾರು ವರ್ಷಗಳಿಂದ ಕೃಷಿ ಕಾರ್ಯವನ್ನೇ ಮಾಡದ ಪರಿಣಾಮ ಸಂಪೂರ್ಣ ಪಾಳು ಬಿದ್ದಿವೆ. ಇಂಥಹ ಭೂಮಿಗಳಲ್ಲಿ ಮತ್ತೆ ಬಂಗಾರದ ಬೆಳೆ ತೆಗೆಯೋದು ಸಾಧ್ಯವಾದರೂ ಯುವಕರು ಕೃಷಿ ಬದುಕಿನತ್ತ ಮುಖ ಮಾಡುತ್ತಿಲ್ಲ. ಶಿಕ್ಷಣ ಪಡೆದು ಹಳ್ಳಿಯ ಹೈಕಳು ಕೂಡ ಸಿಟಿ ಬದುಕನ್ನೇ ಆಶ್ರಯಿಸಿಕೊಂಡು ತಂತ್ರಜ್ಞಾನದ ಜೊತೆಗೆ ಬದುಕುತ್ತಿದ್ದಾರೆ. ಹೀಗಾಗಿ ಭತ್ತ ಕೃಷಿ ಮಾಡಲು ಜನರಿಲ್ಲ, ಇದ್ದವರಿಗೂ ಆಸಕ್ತಿ ಇಲ್ಲ. ಈ ಕಾರಣಕ್ಕೆ ಕೆಲವೆಡೆ ಭೂಮಿ ಹಡೀಲು ಬಿದ್ದರೆ, ಮತ್ತೆ ಕೆಲವರು ಆಧುನಿಕ ಯಂತ್ರಗಳ ಮೂಲಕ ಕೃಷಿ ಮಾಡಿ ಮಣ್ಣಿನ ಸತ್ವ ಸಾಯದಂತೆ ಉಳಿಸುತ್ತಿದ್ದಾರೆ. ಆದರೆ ಯಂತ್ರಗಳ ಬದಲು ಕೈಯ್ಯಲ್ಲೇ ನಾಟಿ ಮಾಡಿ ಭತ್ತದ ಬೆಳೆ ತೆಗೆಯೋದು ಈ ದೇಶದ ಕೃಷಿ ಪರಂಪರೆ. 

 

Chikkamagaluru: ಸಾಮೂಹಿಕ ಭತ್ತದ ಗದ್ದೆಯ ನಾಟಿ: ಶಾಸಕ ಕುಮಾರಸ್ವಾಮಿ ಭಾಗಿ

ಆಧುನಿಕ ಯುಗದಲ್ಲಿ ಯಂತ್ರಗಳ ಬಳಕೆಯಿದ್ದರೂ ತುಳುನಾಡಿನಲ್ಲಿ ಕಂಬಳ ಗದ್ದೆಯನ್ನು ಪುರಾತನ ಪರಂಪರೆಯ ಪ್ರಕಾರ ಜನರಿಂದಲೇ ನಾಟಿ ಮಾಡುವ ಪದ್ಧತಿ ಇಂದಿಗೂ ಕೂಡ ಇದೆ. ಅದರಂತೆ ಈಗಿನ ಯುವ ಜನಾಂಗಕ್ಕೆ ಕೃಷಿಯ ಬಗ್ಗೆ ಒಲವು ಹೆಚ್ಚಿಸಲು ಶಿವಾಜಿ ಬಳಗ ಹಾಗೂ ಶಿವಾಜಿ ಮಾತೃ ಸೇವಾ ಟ್ರಸ್ಟ್ ಇಂಥದ್ದೊಂದು ಕಾರ್ಯ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪೆರಿಯಾವು ಗುತ್ತುವಿನ ಹಿರಿಯವರಾದ ಗಂಗಾಧರ ಗಟ್ಟಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪಾಡ್ದನದ ಮೂಲಕ ನಿನ್ನಿಕಲ್ಲಿನ ಹಿರಿಯಾರದ ಅಕ್ಕಮ್ಮ ಅಜ್ಜಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟರು. ಜೊತೆಗೆ ನಾಟಿ ನೆಡುವ ಜೊತೆ ಜೊತೆಗೆ ಕೆಸರಿನಲ್ಲಿ ಆಡಿ ಕುಣಿದ ಮಕ್ಕಳು ಅಪ್ಪಟ ಮಣ್ಣಿನ ಮಕ್ಕಳಂತೆ ಸಂಭ್ರಮಿಸಿದರು.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

click me!