‘ಕ್ಯಾರ್‌’ ಆಯ್ತು, ಈಗ ‘ಮಹಾ’ ಸೈಕ್ಲೋನ್‌ ಭೀತಿ!

By Kannadaprabha NewsFirst Published Oct 31, 2019, 12:46 PM IST
Highlights

‘ಕ್ಯಾರ್‌’ ಚಂಡಮಾರುತದಿಂದ ನಲುಗಿದ ಕರಾವಳಿಯಲ್ಲಿ ಇದೀಗ ಮತ್ತೆ ಇನ್ನೊಂದು ಚಂಡಮಾರುತದ ಪ್ರಭಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಂಡುಬಂದಿವೆ. ಆದರೆ ಕರಾವಳಿಯಲ್ಲಿ ‘ಕ್ಯಾರ್‌’ನಷ್ಟುದೊಡ್ಡ ಮಟ್ಟದ ಪ್ರಭಾವವನ್ನು ಈ ಚಂಡಮಾರುತ ಬೀರುವ ಸಾಧ್ಯತೆ ಇಲ್ಲದಿದ್ದರೂ ಚಂಡಮಾರುತದ ಚಲನೆ ಮತ್ತು ತೀವ್ರತೆಯ ಮೇಲೆ ಆಧಾರಿತವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಮಂಗಳೂರು(ಅ.31): ‘ಕ್ಯಾರ್‌’ ಚಂಡಮಾರುತದಿಂದ ನಲುಗಿದ ಕರಾವಳಿಯಲ್ಲಿ ಇದೀಗ ಮತ್ತೆ ಇನ್ನೊಂದು ಚಂಡಮಾರುತದ ಪ್ರಭಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಂಡುಬಂದಿವೆ. ಆದರೆ ಕರಾವಳಿಯಲ್ಲಿ ‘ಕ್ಯಾರ್‌’ನಷ್ಟುದೊಡ್ಡ ಮಟ್ಟದ ಪ್ರಭಾವವನ್ನು ಈ ಚಂಡಮಾರುತ ಬೀರುವ ಸಾಧ್ಯತೆ ಇಲ್ಲದಿದ್ದರೂ ಚಂಡಮಾರುತದ ಚಲನೆ ಮತ್ತು ತೀವ್ರತೆಯ ಮೇಲೆ ಆಧಾರಿತವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ದಿನವಿಡಿ ಬಿಸಿಲು ಇದ್ದರೂ ಸಂಜೆಯಾಗುತ್ತಿದ್ದಂತೆ ದಿಢೀರನೆ ಭಾರಿ ಮಳೆ ಸುರಿದಿತ್ತು. ಮಂಗಳವಾರ ರಾತ್ರಿಯೂ ಇದೇ ರೀತಿ ದಿಢೀರ್‌ ಮಳೆಯ ಆಗಮನವಾಗಿತ್ತು. ಇದು ಚಂಡಮಾರುತದ ಪ್ರಭಾವವೇ ಎನ್ನುವ ಕುರಿತ ವಿಶ್ಲೇಷಣೆಯೂ ನಡೆಯುತ್ತಿದೆ.

‘ಮಹಾ’ ಚಂಡಮಾರುತ:

ಪ್ರಸ್ತುತ ಕನ್ಯಾಕುಮಾರಿಯ ಕೇಪ್‌ ಕೊಮೊರಿನ್‌ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಯಾವುದೇ ಸಮಯದಲ್ಲಿ ಇದು ಆಗ್ನೇಯ ಅರಬ್ಬಿ ಸಮುದ್ರಕ್ಕೆ ಚಲಿಸಿ ಲಕ್ಷದ್ವೀಪ ಬಳಿ ವಾಯುಭಾರ ಕುಸಿತವಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಇದರ ಪ್ರಭಾವ ತಮಿಳುನಾಡು, ದಕ್ಷಿಣ ಕೇರಳ ಮತ್ತು ಲಕ್ಷದ್ವೀಪದಲ್ಲಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ದಕ್ಷಿಣ ಕನ್ನಡಕ್ಕೆ ಇದರ ಪ್ರಭಾವದ ಕುರಿತು ತಿಳಿಸಿಲ್ಲ. ಆದರೂ ಈ ಚಂಡಮಾರುತದ ಪ್ರಭಾವ ಕರಾವಳಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ತಜ್ಞರು ವಿಶ್ಲೇಷಿಸತೊಡಗಿದ್ದಾರೆ.

ಮಂಗಳೂರಿಗೆ 2 ವಾಣಿಜ್ಯ ನ್ಯಾಯಾಲಯ

ದೀಪಾವಳಿ ಆರಂಭಕ್ಕೆ ಮೊದಲು ಕೆಲ ದಿನಗಳ ಕಾಲ ಕ್ಯಾರ್‌ ಚಂಡಮಾರುತದ ತೀವ್ರ ಪ್ರಭಾವ ಕರಾವಳಿ ಮೇಲಾಗಿತ್ತು. ಸಿಡಿಲು, ಗುಡುಗಿನೊಂದಿಗೆ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಆತಂಕವಾಗಿತ್ತು. ಕಡಲ ತೀರದ ಪ್ರದೇಶಗಳಲ್ಲಿ ಕಡಲ್ಕೊರೆತದ ಭೀತಿ ಮೂಡಿತ್ತು. ಆದರೆ ದೀಪಾವಳಿಯ ಮೂರೂ ದಿನಗಳ ಕಾಲ ಬಿಸಿಲು ಮೂಡಿ ಆಹ್ಲಾದಕರ ವಾತಾವರಣವಿತ್ತು. ಇನ್ನೇನು ಮಳೆ ಕಡಿಮೆಯಾಯಿತು ಎನ್ನುವಷ್ಟರಲ್ಲಿಯೇ ಮತ್ತೆ ಮಹಾ ಚಂಡಮಾರುತದ ಭೀತಿ ಆವರಿಸಿದೆ.

ಮೀನುಗಾರಿಕೆಗೂ ಕುತ್ತು: ಕ್ಯಾರ್‌ ಚಂಡಮಾರುತದಿಂದಾಗಿ ಹಲವು ದಿನಗಳ ಕಾಲ ಮೀನುಗಾರರು ಕಡಲಿಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಈ ಭೀತಿ ಕಡಿಮೆಯಾಗಿ ಮೀನುಗಾರಿಕೆಗೆ ತೆರಳುವ ಉತ್ಸುಕತೆಯಲ್ಲಿದ್ದ ಮೀನುಗಾರರು ಮತ್ತೆ ನಿರಾಶರಾಗಿದ್ದಾರೆ. ಚಂಡಮಾರುತ ಪ್ರಭಾವದಿಂದ ಮತ್ತೆ ಕಡಲು ಪ್ರಕ್ಷುಬ್ಧವಾದರೆ ಬಹಳಷ್ಟುಬಡ ಮೀನುಗಾರರಿಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಪರಿಸ್ಥಿತಿ. ನೂರಾರು ಕುಟುಂಬಗಳು ಇದರಿಂದ ತೊಂದರೆಗೆ ಒಳಗಾಗಲಿವೆ.

ಕೃಷಿಕರು ಕಂಗಾಲು

ಈಗಾಗಲೇ ಸುರಿದ ಮಳೆಯಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಬತ್ತದ ಗದ್ದೆಗಳು ಕಟಾವಿಗೆ ಸಿದ್ಧಗೊಂಡಿವೆ. ನಿರಂತರ ಮಳೆಯಾಗುತ್ತಿರುವುದರಿಂದ ಕಟಾವಿಗೂ ತೊಂದರೆಯಾಗುತ್ತಿದೆ. ಈಗಾಗಲೇ ಕೆಲವೆಡೆ ಕ್ಯಾರ್‌ ಚಂಡಮಾರುತದ ಪ್ರಭಾವದಿಂದಾಗಿ ಬೆಳೆದು ನಿಂತ ಪೈರು ಮಕಾಡೆ ಮಲಗಿದೆ. ಇನ್ನೂ ಮಳೆ ಬಂದರೆ ಅಲ್ಲೇ ಮೊಳಕೆಯೊಡೆಯುವ ಅಪಾಯವೂ ಇದೆ. ಕೈಗೆ ಸಿಕ್ಕ ಬೆಳೆ ಬಾಯಿಗೆ ಬಾರದೆದ್ದರೆ ಗತಿ ಏನು ಎಂದು ರೈತರು ಆತಂಕಗೊಂಡಿದ್ದಾರೆ.

ಟಿಕೆಟ್‌ಗಾಗಿ ಮಾಜಿ ಮೇಯರ್ ಮಗನ ಜೊತೆ ಮೊಯ್ದೀನ್ ಬಾವಾ ತಳ್ಳಾಟ

click me!