ಯುವಕನೋರ್ವನ ಶವ ಗುತ್ತಲ ಸಮೀಪದ ಕನವಳ್ಳಿ ಶಿಬಾರ ಬಳಿ ಪತ್ತೆಯಾಗಿದ್ದು, ಕೊಲೆ ಮಾಡಿ ರಸ್ತೆ ಪಕ್ಕಕ್ಕೆ ಎಸೆದು ಹೋಗಿದ್ದಾರೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು, ವಿಧಿ ವಿಜ್ಞಾನ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗುತ್ತಲ (ಜು.29): ಯುವಕನೋರ್ವನ ಶವ ಗುತ್ತಲ ಸಮೀಪದ ಕನವಳ್ಳಿ ಶಿಬಾರ (ಸೋಮನಕಟ್ಟಿ) ಬಳಿ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಮಾಡಿ ರಸ್ತೆ ಪಕ್ಕಕ್ಕೆ ಎಸೆದು ಹೋಗಿದ್ದಾರೆಂದು ಶಂಕಿಸಲಾಗಿದೆ. ಮೃತಪಟ್ಟಿರುವ ಯುವಕನನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ತುಂಗಭದ್ರಾ ಬಡಾವಣೆಯ ನಿವಾಸಿ ನವೀನ ಹೇಮಂತ ರಾಥೋಡ (26) ಎಂದು ಗುರ್ತಿಸಲಾಗಿದೆ. ಮೃತಪಟ್ಟಿರುವ ನವೀನ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲೂಕಿನ ಹಾನಾಪುರ ತಾಂಡದ ನಿವಾಸಿ ಎನ್ನಲಾಗಿದೆ. ಅತಿ ಸಾರಾಯಿ ಕುಡಿತ ಹಾಗೂ ಸಿಗರೇಟ್ ಚಟವನ್ನು ಹೊಂದಿದ್ದ ನವೀನ ಮನೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದು, ಮನೆಯಲ್ಲಿ ಹೇಳದೇ ಕೇಳದೆ ಮನೆಯಿಂದ ಹೊರಗಡೆ ಹೋಗುತ್ತಿದ್ದ. ಅಲ್ಲದೆ ಹಡಗಲಿಯಲ್ಲಿ ಕಳ್ಳತನ ಪ್ರಕರಣದ ಆರೋಪದಲ್ಲಿ ಜೈಲುಶಿಕ್ಷೆಯನ್ನು ಸಹ ಅನುಭವಿಸಿದ್ದಾನೆ. ಬುಧವಾರ ನವೀನ ತನ್ನ ಮನೆಯ ಸದಸ್ಯರಿಗೆ ನಾನು ಹುಬ್ಬಳ್ಳಿಗೆ ಹೋಗುತ್ತಿದ್ದೇನೆ. ನನಗೆ 600 ಹಣ ಬೇಕೆಂದು ಕೇಳಿ, ತಾಯಿಯಿಂದ ಹಣ ಪಡೆದುಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಗುರುವಾರ ಬೆಳಗಿನ ಜಾವ ಗುತ್ತಲ-ಹಾವೇರಿ ಮಾರ್ಗದ ಕನವಳ್ಳಿ ಶಿಬಾರ (ಸೋಮನಕಟ್ಟಿ) ಬಳಿ ರಸ್ತೆಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದು, ವಾಯು ವಿಹಾರಕ್ಕೆ ಹೋಗುವವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವೀನನ ಪ್ಯಾಂಟ್‌ನಲ್ಲಿ ವಾಹನ ಚಾಲನಾ ಪರವಾನಗಿ ಪತ್ರ (ಡಿಎಲ್) ದೊರೆತಿದ್ದು, ಕುಟುಂಬಸ್ಥರಿಗೆ ಅದರ ಮಾಹಿತಿ ಆಧಾರದ ಮೇಲೆ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ನವೀನನನ್ನು ಯಾರೋ ಮುಖ ಸೇರಿದಂತೆ ವಿವಿಧ ಭಾಗಗಳಿಗೆ ಹೊಡೆದು, ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕುಟುಂಬ ಸದಸ್ಯರು, ಆರೋಪಿಗಳನ್ನು ಪತ್ತೆ ಮಾಡುವಂತೆ ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದ ಆಂಟಿಯ ಬಂಧನ
ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು, ವಿಧಿ ವಿಜ್ಞಾನ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಎಂ. ಸಂತೋಷ, ಡಿವೈಎಸ್ಪಿ ಡಾ. ಶಿವಾನಂದ ಚಲವಾದಿ, ಗ್ರಾಮೀಣ ಠಾಣೆ ಸಿಪಿಐ ಕೆ. ನಾಗಮ್ಮ, ಪಿಎಸ್‌ಐಗಳಾದ ಜಗದೀಶ ಜಿ., ಎಂ.ಇ. ಮಣ್ಣಣ್ಣನವರ, ಎಎಸ್‌ಐ ಬಿ.ವೈ. ಚಳಗೇರಿ, ಮುಖ್ಯಪೇದೆ ಟಿ.ಸಿ. ಬ್ಯಾಳಿ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲಿಸಿದರು.
ನವೀನ ಕೊಲೆಯ ಆರೋಪಿಗಳ ಪತ್ತೆಗೆ ಗ್ರಾಮೀಣ ಠಾಣೆಯ ಸಿಪಿಐ ಕೆ. ನಾಗಮ್ಮ ಅವರ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆಹಚ್ಚಿ, ಕೊಲೆಯ ಹಿನ್ನೆಲೆಯನ್ನು ಭೇದಿಸಲಾಗುವುದು.
ಹನುಮಂತರಾಯ (ಪೊಲೀಸ್ ವರಿಷ್ಠಾಧಿಕಾರಿ ಹಾವೇರಿ)
ಯುವಕ ನೇಣಿಗೆ ಶರಣು
ಧಾರವಾಡ: ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮದಿಹಾಳ ಪ್ರದೇಶದಲ್ಲಿ ನಡೆದಿದೆ. ಕಾರ್ತಿಕ ಹಿರೇಮಠ ನೇಣಿಗೆ ಶರಣಾದ ಯುವಕ. ಮಲಗಲೆಂದು ಕೋಣೆಗೆ ಹೋದ ಕಾರ್ತಿಕ ಆತ್ಮಹತ್ಯೆ ಮಾಡಿಕೊಂಡಿದ್ದು ಬುಧವಾರ ಬೆಳಗಿನ ಜಾವ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೆಲ ದಿನಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಕಾರ್ತಿಕ, ಕುಡಿತದ ಚಟಕ್ಕೆ ಸಿಲುಕಿದ್ದನು ಎಂದು ತಿಳಿದು ಬಂದಿದೆ. ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
BENGALURU CRIME; ಹಿಟ್ ಆ್ಯಂಡ್ ರನ್ ಅಪಘಾತ, ಕಾರ್ಮಿಕ ದಂಪತಿ ಬಲಿ!
ಕೀಲಿ ಮುರಿದು ಮನೆಗಳ್ಳತನ
ಧಾರವಾಡ: ಮನೆಯ ಕೀಲಿ ಮುರಿದು ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಿದ ಘಟನೆ ತಾಲೂಕಿನ ಹೆಗ್ಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ ಗೋಕಾವಿ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದ ಪ್ರಕಾಶ ಶಂಕ್ರಪ್ಪ ಕುಲಕರ್ಣಿ ಎಂಬುವರ ಮನೆಯಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದೆ. ಪ್ರಕಾಶ ಅವರು ಕಳೆದ ಎರಡು ದಿನಗಳ ಕಾಲ ಮನೆಯಲ್ಲಿ ಇರದ ಸಮಯದಲ್ಲಿ ಕೀಲಿ ಮುರಿದು, ಮನೆಯಲ್ಲಿನ 5 ಗ್ರಾಂ. ಚಿನ್ನದ ಆಭರಣ, 70 ಗ್ರಾಂ ಬೆಳ್ಳಿ ಆಭರಣ ಮತ್ತು . 40 ಸಾವಿರ ನಗದು ದೋಚಿದ್ದಾರೆ. ಸಿಪಿಐ ಎಸ್.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.