ಬಾಗಲಕೋಟೆ ಮಹಿಳೆ ಮೇಲೆ ಉತ್ತರಾಖಂಡದಲ್ಲಿ ಅತ್ಯಾಚಾರ| ಲಿಫ್ಟ್ ಕೊಡುವುದಾಗಿ ಹೇಳಿ ಲಾರಿ ಚಾಲಕನಿಂದ ರೇಪ್
ಉತ್ತರಾಖಂಡ[ಡಿ.01]: ಹೈದರಾಬಾದ್‌ನ ಪಶುವೈದ್ಯೆ ಮೇಲೆ ಲಾರಿ ಚಾಲಕರು, ಸಹಾಯಕರು ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ದೂರದ ಉತ್ತರಾಖಂಡದಲ್ಲಿ ಲಾರಿ ಡ್ರೈವರ್ ಒಬ್ಬ ಕರ್ನಾಟಕದ ಮಹಿಳೆಯ ಮಾನಭಂಗ ಮಾಡಿದ್ದಾನೆ.
ಈ ಮಹಿಳೆ ಬಾಗಲಕೋಟೆಯವಳಾಗಿದ್ದು, ನ.20ರಂದು ಮನೆ ಬಿಟ್ಟು ಹೋಗಿದ್ದಳು. ಲಿಫ್ಟ್ ಕೊಡುವುದಾಗಿ ಹೇಳಿ ತನ್ನ ಲಾರಿಗೆ ಹತ್ತಿಸಿಕೊಂಡ ಚಾಲಕ, ಅತ್ಯಾಚಾರವೆಸಗಿ ಹಾದಿ ಮಧ್ಯೆ ಬಿಟ್ಟು ಹೋಗಿದ್ದಾನೆ. ಬಳಿಕ ಈಕೆ ಪೊಲೀಸರ ಮೊರೆ ಹೋಗಿದ್ದಾಳೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ.
undefined
28 ವರ್ಷದ ಈ ಮಹಿಳೆ ತಾನು ಕರ್ನಾಟಕದ ಬಾಗಲಕೋಟೆಯವಳು ಎಂದು ಹೇಳಿಕೊಂಡಿದ್ದಾಳೆ. ನ.20ರಂದು ಕರ್ನಾಟಕದಿಂದ ಹೊರಟಿದ್ದೆ. ಐದು ದಿನಗಳ ಹಿಂದೆ ಋುಷಿಕೇಶ ತಲುಪಿದ್ದೆ. ನ.28ರಂದು ಚಂಬಾದಲ್ಲಿ ಲಿಫ್ಟ್ ಕೊಡಲು ಹತ್ತಿಸಿಕೊಂಡ ಚಾಲಕ ದಾರಿ ಮಧ್ಯೆ ಅತ್ಯಾಚಾರವೆಸಗಿ, 29ರ ಬೆಳಗ್ಗೆ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ. ಅಲೆದಾಡಿದ ಬಳಿಕ ಪೊಲೀಸ್ ಠಾಣೆ ತಲುಪಿರುವುದಾಗಿ ತಿಳಿಸಿದ್ದಾಳೆ.
ಈ ಮಹಿಳೆ ಬಳಿ ಗುರುತಿನ ಚೀಟಿ, ಮೊಬೈಲ್, ಹೆಚ್ಚುವರಿ ಬಟ್ಟೆಗಳು ಇಲ್ಲ. ಆಕೆ ತಂದೆಯ ಮೊಬೈಲ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದಾಳೆ. ಕರ್ನಾಟಕದಲ್ಲಿರುವ ತಂದೆಯನ್ನು ಪೊಲೀಸರು ಸಂಪರ್ಕಿಸಿದ್ದಾರೆ. ತಮ್ಮ ಪುತ್ರಿ ಮಾನಸಿಕ ಸಮಸ್ಯೆ ಹೊಂದಿದ್ದಾಳೆ. ವಾರದ ಹಿಂದೆ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 4 ದಿನದೊಳಗೆ ಬಂದು ಆಕೆಯನ್ನು ಕರೆದೊಯ್ಯಲು ಸೂಚಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.