ತಾನು ಸಾಲ ಮಾಡಿ ತಾಯಿಯ ಕೊಂದ ಮಹಿಳಾ ಟೆಕಿ, ಅದೃಷ್ಟವಶಾತ್‌ ತಮ್ಮ ಬಚಾವ್‌!

By Kannadaprabha News  |  First Published Feb 4, 2020, 7:29 AM IST

ತಾನು ಸಾಲ ಮಾಡಿ ತಾಯಿಯ ಕೊಂದಳು!| ಮೊದಲು ನಿದ್ರೆಯಲ್ಲಿದ್ದ ತಾಯಿಯ ಹತ್ಯೆ| ಬಳಿಕ ಸಹೋದರನ ಕೊಲೆಗೆ ಯತ್ನ| ಈ ವೇಳೆ ಸಾಲದ ವಿಷಯ ಬಾಯ್ಬಿಟ್ಟ ಟೆಕಿ| ಸಾಲಗಾರರಿಗೆ ಹೆದರಿ ನಿಮ್ಮನ್ನು ಕೊಲೆ ಮಾಡುತ್ತಿರುವುದಾಗಿ ಕುತ್ತಿಗೆಗೆ ಚುಚ್ಚಿದಳು ಎಂದು ದೂರಿತ್ತ ಆರೋಪಿಯ ಸಹೋದರ| ಹೈದರಾಬಾದ್‌ಗೆ ಪ್ರವಾಸಕ್ಕೆ ಹೋಗೋಣ ಎಂದಿದ್ದ ಮಗಳಿಂದ ತಾಯಿಯ ಹತ್ಯೆ|  ಸೋದರನ ಕೊಲೆಗೂ ಯತ್ನ, ಅದೃಷ್ಟವಶಾತ್‌ ಸಹೋದರ ಚಂದ್ರಶೇಖರ್‌ ಬಚಾವ್‌|  ಕೆ.ಆರ್‌.ಪುರಂನಲ್ಲಿ ಶನಿವಾರ ರಾತ್ರಿ ಘಟನೆ, ಆರೋಪಿ ಅಮೃತಾ ಪರಾರಿ


ಬೆಂಗಳೂರು[ಫೆ.04]: ಹೆತ್ತ ಮಗಳೇ ನಿದ್ರೆ ಮಾಡುತ್ತಿದ್ದ ತಾಯಿಯನ್ನು ಕೊಂದು, ಸಹೋದರನ ಹತ್ಯೆಗೆ ಯತ್ನಿಸಿರುವ ಘಟನೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರದ ಅಕ್ಷಯನಗರ ನಿವಾಸಿ ನಿರ್ಮಲಾ (54) ಕೊಲೆಯಾಗಿದ್ದು, ಘಟನೆಯಲ್ಲಿ ಈಕೆಯ ಸಹೋದರ ಹರೀಶ್‌ ಚಂದ್ರಶೇಖರ್‌ಗೆ(31) ಗಾಯವಾಗಿದೆ. ಕೊಲೆ ಆರೋಪಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅಮೃತಾ (33) ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Tap to resize

Latest Videos

undefined

"

ಕೊಲೆಯಾದ ನಿರ್ಮಲಾ ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದು, ಪುತ್ರ ಹರೀಶ್‌ ಮತ್ತು ಪುತ್ರಿ ಅಮೃತಾಳ ಜತೆ ಅಕ್ಷಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅಮೃತಾ ಮಾರತ್ತಹಳ್ಳಿಯ ಸಿಂಫೋನಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಇತ್ತೀಚೆಗೆ ಅಮೃತಾಗೆ ಹೈದರಾಬಾದ್‌ನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಸಿಕ್ಕಿತ್ತು. ಸಹೋದರ ಮತ್ತು ತಾಯಿಯನ್ನು ಹೈದರಾಬಾದ್‌ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಫೆ.2ರಂದು ದಿನಾಂಕ ಕೂಡ ನಿಗದಿ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.

ಕುತ್ತಿಗೆಗೆ ಚುಚ್ಚಿದಳು:

‘ಇಡೀ ಕುಟುಂಬ ಫೆ.2ರಂದು ಬೆಳಗಿನ ಜಾವ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಬೇಕಿತ್ತು. ಹಿಂದಿನ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ನಿದ್ರೆಗೆ ಜಾರಿದ್ದೆವು. ನಾನು ರೂಮ್‌ನಲ್ಲಿ ನಿದ್ರೆಗೆ ಜಾರಿದರೆ, ಅಮೃತಾ ಮತ್ತು ತಾಯಿ ನಿರ್ಮಲಾ ಹಾಲ್‌ನಲ್ಲಿ ಮಲಗಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಗೆ ನನ್ನ ರೂಮ್‌ನ ಬೀರುವಿನ ಶಬ್ದವಾಯಿತು. ಕೂಡಲೇ ಎಚ್ಚರಗೊಂಡು ನೋಡಿದಾಗ ಅಮೃತಾ ಬೀರುವಿನಲ್ಲಿ ಹುಡುಕಾಟ ನಡೆಸಿದ್ದಳು. ಏನನ್ನು ಹುಡುಕುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಬಟ್ಟೆಗಳನ್ನು ಪ್ಯಾಕ್‌ ಮಾಡುತ್ತಿದ್ದೆನೆಂದು ಹೇಳಿ ರೂಮ್‌ನಿಂದ ಹೊರಗೆ ಹೋದಳು. ಮತ್ತೆ 10 ನಿಮಿಷದ ಬಳಿಕ ಆಕೆ ರೂಮ್‌ಗೆ ಬಂದಿದ್ದನ್ನು ನೋಡಿದ ನಾನು ಎದ್ದು ಕುಳಿತುಕೊಂಡೆ, ನನ್ನ ಹತ್ತಿರ ಬಂದ ಆಕೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನನ್ನು ಸಾಯಿಸುವ ಉದ್ದೇಶದಿಂದ ಕತ್ತಿನ ಬಲ ಭಾಗಕ್ಕೆ ಚುಚ್ಚಿದಳು. ನಾನು ಕೂದಲೆಳೆ ಅಂತದಲ್ಲಿ ತಪ್ಪಿಸಿಕೊಂಡಾಗ ಮತ್ತೊಮ್ಮೆ ಇರಿಯಲು ಮುಂದಾದಳು. ಎಡಗೈಯನ್ನು ಅಡ್ಡ ಹಿಡಿದಾಗ ಅಂಗೈಗೆ ಗಾಯವಾಯಿತು. ನಾನು ಗಾಬರಿಯಿಂದ ಕಿರುಚಿಕೊಂಡು, ಅಮ್ಮನ ಬಗ್ಗೆ ಕೇಳಿದ್ದಕ್ಕೆ ಇದೇ ಚಾಕುವಿನಿಂದ ಅಮ್ಮನಿಗೆ ಚುಚ್ಚಿ ಹಾರೆಯಿಂದ ಹೊಡೆದು ಸಾಯಿಸಿದ್ದೇನೆಂದು ಹೇಳಿದಳು. ನಾನು ಏಕೆ ಈ ರೀತಿ ಮಾಡಿದೀಯಾ ಎಂದು ಕೇಳಿದ್ದಕ್ಕೆ ತಾನು ಸುಮಾರು .15 ಲಕ್ಷದಷ್ಟುಸಾಲ ಮಾಡಿದ್ದೇನೆ. ಸಾಲಗಾರರು ಭಾನುವಾರ ಮನೆಯ ಹತ್ತಿರ ಬರುತ್ತೇನೆಂದು ಹೇಳಿದ್ದಾರೆ. ಸಾಲಗಾರರು ಬಂದರೆ ಮರ್ಯಾದೆ ಹೋಗಬಾರದು. ಅದಕ್ಕೆ ನಿಮ್ಮಿಬ್ಬರನ್ನು ಕೊಲೆ ಮಾಡಿ ಹೋಗುತ್ತೇನೆಂದು ಹೇಳಿದಳು. ನನ್ನ ಕತ್ತಿನಿಂದ ರಕ್ತ ಬರುತ್ತಿದ್ದರಿಂದ ನಾನು ನಿಶಕ್ತಗೊಂಡಿದ್ದೆ, ಆಕೆಯನ್ನು ಹಿಡಿಯಲು ಹೋದಾಗ ನನ್ನನ್ನು ತಳ್ಳಿ ಹೊರಗೆ ಓಡಿ ಹೋದಳು. ಕೂಡಲೇ ಚಿಕ್ಕಮ್ಮನಿಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡು ವಿಷಯ ತಿಳಿಸಿದೆ’ ಎಂದು ಹರೀಶ್‌ ದೂರಿನಲ್ಲಿ ತಿಳಿಸಿದ್ದಾರೆ.

ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ:

ಆರೋಪಿ ತಲೆಮರೆಸಿಕೊಂಡಿದ್ದು, ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆಕೆ ಸಾಲ ಮಾಡಿದ್ದರೆ, ತಾಯಿಯನ್ನು ಹತ್ಯೆ ಮಾಡುವ ಅಗತ್ಯ ಏನಿತ್ತು ಎಂಬುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕೆ.ಆರ್‌.ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

click me!