ಅತ್ಯಾಚಾರ ಎಸಗಿ; ಗೃಹಿಣಿ ಕೊಲೆ ಶಂಕೆ | ನಾಪತ್ತೆಯಾಗಿದ್ದ ಮಹಿಳೆ ಪರಿಚಯಸ್ಥನ ಮನೆಯಲ್ಲಿ ಶವವಾಗಿ ಪತ್ತೆ
ಬೆಂಗಳೂರು(ಜ.06): ಯುವಕನೊಬ್ಬ ಪರಿಚಯಸ್ಥ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಬಳಿಕ, ಆಕೆಯನ್ನು ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಮಾಗಡಿ ರಸ್ತೆಯ ನಿವಾಸಿ ಅರುಣಾ ಕುಮಾರಿ (42) ಹತ್ಯೆಗೀಡಾದ ಗೃಹಿಣಿ. ಘಟನೆ ಬಳಿಕ ಆರೋಪಿ ಯುವಕ ಪ್ರವೀಣ್ ಕುಮಾರ್(23) ಎಂಬಾತ ಪರಾರಿಯಾಗಿದ್ದಾನೆ.
ಗೋವಾದಲ್ಲಿ ವಶಕ್ಕೆ?:
ಆರೋಪಿ ಗೋವಾದಲ್ಲಿರುವ ಕುರಿತು ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು, ನೀಡಿದ ಮಾಹಿತಿ ಮೇರೆಗೆ ಗೋವಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಕಾಮಾಕ್ಷಿಪಾಳ್ಯ ಪೊಲೀಸರು ಇದನ್ನು ಖಚಿತ ಪಡಿಸಿಲ್ಲ.
ಆರೋಪಿ ಪ್ರವೀಣ್ ಮೂಲತಃ ಮಾಗಡಿ ತಾಲೂಕಿನವನಾಗಿದ್ದು, ಕೆಲ ವರ್ಷಗಳಿಂದ ಕಾಮಾಕ್ಷಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಬಾರ್‌ವೊಂದರಲ್ಲಿ ಕ್ಯಾಷಿಯರ್ ಆಗಿದ್ದ. ಅರುಣಾ ಕುಮಾರಿ ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರಿಂಟಿಂಗ್ ಪ್ರೆಸ್‌ವೊಂದರಲ್ಲಿ ಕೆಲಸಕ್ಕಿದ್ದರು. ಆರೋಪಿ ಮತ್ತು ಮಹಿಳೆ ಇಬ್ಬರು ಪರಿಚಯಸ್ಥರಾಗಿದ್ದರು.
ಚಟ್ನಿಗೆ ವಿಷ ಬೆರೆಸಿ ಇಸ್ರೋ ವಿಜ್ಞಾನಿ ಹತ್ಯೆ ಯತ್ನ!
ಸೋಮವಾರ ಕೆಲಸಕ್ಕೆ ತೆರಳಿದ್ದ ಅರುಣಾ, ಸಂಜೆ ಪತಿಗೆ ಕರೆ ಮಾಡಿ ತಡವಾಗಿ ಬರುವುದಾಗಿ ಹೇಳಿದ್ದರು. ತಡರಾತ್ರಿಯಾದರೂ ವಾಪಾಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಮಾಗಡಿ ರಸ್ತೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಈ ನಡುವೆ ಮಂಗಳವಾರ ಮಧ್ಯಾಹ್ನ ಆರೋಪಿ ಪ್ರವೀಣ್ ಮನೆಯಲ್ಲಿ ಮಹಿಳೆಯೊಬ್ಬರ ಶವ ಬಿದ್ದಿರುವುದನ್ನು ಸ್ಥಳೀಯ ನಿವಾಸಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಬಗ್ಗೆ ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಬಿದ್ದಿರುವುದು ಅರುಣಾ ಶವ ಎಂಬುದು ಬೆಳಕಿಗೆ ಬಂದಿತ್ತು.
ದಿನ ಭವಿಷ್ಯ: ಈ ರಾಶಿಯವರಿಗೆ ಮಕ್ಕಳಿಂದ ವಿಶೇಷ ಫಲ, ಸಂಗಾತಿಯಿಂದ ಅನುಕೂಲ!
ಒಂಟಿಯಾಗಿದ್ದ ಪ್ರವೀಣ್, ಅರುಣಾಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ. ಬಳಿಕ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.