ವಿನಯ ಕುಲಕರ್ಣಿ ಸೋದರ ಮಾವ ಸಿಬಿಐ ವಶಕ್ಕೆ| 3 ಕಂಟ್ರಿ ಪಿಸ್ತೂಲಿನ ವ್ಯವಸ್ಥೆ ಮಾಡಿದ ಆರೋಪದಡಿ ಚಂದು ಮಾಮಾ ವಶಕ್ಕೆ| ಯೋಗೀಶ್ ಗೌಡ ಹತ್ಯೆಗೆ ಸುಪಾರಿ ಪಡೆದಿದ್ದ ಭೀಮಾತೀರದ ಹಂತಕ ನಾಗಪ್ಪ
ಧಾರವಾಡ(ಡಿ.13): ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಅವರ ಬಂಧನದ ಒಂದು ತಿಂಗಳ ನಂತರ ಸಿಬಿಐ ಅಧಿಕಾರಿಗಳ ತಂಡವು ಮತ್ತೊರ್ವ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದೆ.
ಯೋಗೀಶಗೌಡ ಕೊಲೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ತಿರುಗಿ ಬಿದ್ದರೆ ಶೂಟ್ ಮಾಡಲು ಕಂಟ್ರಿ ಪಿಸ್ತೂಲಿನ ವ್ಯವಸ್ಥೆ ಮಾಡಿದ್ದ ಆರೋಪದಡಿ ವಿನಯ ಕುಲಕರ್ಣಿ ಸೋದರ ಮಾವ, ವಿಜಯಪುರದ ಚಂದ್ರಶೇಖರ ಇಂಡಿ ಉರ್ಫ ಚಂದು ಮಾಮಾ ಎಂಬುವರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಯೋಗೀಶ್ ಹತ್ಯೆಗೂ ಮುನ್ನ ಭೀಮಾತೀರದ ಹಂತಕರಿಗೆ ಸುಪಾರಿ ನೀಡಲಾಗಿತ್ತು ಎನ್ನುವ ಅಂಶವೂ ಬಯಲಿಗೆ ಬಂದಿದೆ ಎನ್ನಲಾಗಿದೆ.
ಏನಿದು ಪ್ರಕರಣ..?
ಯೋಗೀಶ ಹತ್ಯೆಗೂ ಮುನ್ನ ಈ ಹತ್ಯೆ ಸುಪಾರಿಯನ್ನು ಭೀಮಾ ತೀರದ ಹಂತಕ ಧರ್ಮರಾಜ ಚಡಚಣನಿಗೆ ನೀಡಲಾಗಿತ್ತು. ಆದರೆ, ಆತನಿಗೆ ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಡಿದ್ದ ಹಣದ ಬದಲಿಗೆ ಮೂರು ಕಂಟ್ರಿ ಪಿಸ್ತೂಲು ನೀಡುವಂತೆ ಚಂದ್ರಶೇಖರ ಇಂಡಿ ಮಧ್ಯಸ್ಥಿಕೆ ವಹಿಸಿದ್ದರು. ಧರ್ಮರಾಜನ ಸಹಚರ ನಾಗಪ್ಪ ಮೂರು ಪಿಸ್ತೂಲು ತಂದು ಇಂಡಿ ಕೈಗೆ ನೀಡಿದ್ದನು. ಅವೇ ಪಿಸ್ತೂಲುಗಳನ್ನು ಯೋಗೀಶ್ ಹಂತಕರಿಗೆ ನೀಡಲಾಗಿತ್ತು ಎಂಬ ಮಾಹಿತಿ ಇದೆ.
ಈ ಪ್ರಕರಣವೇ ಇದೀಗ ವಿನಯ ಕುಲಕರ್ಣಿ ಮಾವ ಚಂದು ಮಾಮಾಗೆ ಮುಳುವಾಗಿದೆ. ಇನ್ನು ಕೊಲೆಯಾದ ಬಳಿಕ ಮೂರೂ ಪಿಸ್ತೂಲುಗಳನ್ನು ಹಳ್ಳಿಯೊಂದರ ಬಳಿ ಮುಚ್ಚಿಡಲಾಗಿತ್ತು. ಅವುಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿನಯ ಕುಲಕರ್ಣಿ ಬಂಧನದ ನಂತರ ಪದೇ ಪದೇ ಚಂದ್ರಶೇಖರ ಇಂಡಿಯನ್ನು ವಿಚಾರಣೆ ಮಾಡಿದ ಫಲವಾಗಿ ಇದೆಲ್ಲಾ ಮಾಹಿತಿ ಹೊರ ಬಂದಿದ್ದು ಇದೀಗ ಇಂಡಿಯನ್ನು ವಶಕ್ಕೆ ಪಡೆದು ಸಿಬಿಐ ಮತ್ತಷ್ಟುವಿಚಾರಣೆ ಮಾಡುವ ಸಾಧ್ಯತೆಗಳಿವೆ.
ಸಿಬಿಐ ಅಧಿಕಾರಿಗಳು ಶನಿವಾರ ವಿಜಯಪುರದ ಬಿಎಲ್‌ಡಿಇ ಕಾಲೇಜಿನ ಬಳಿ ಚಂದ್ರಶೇಖರನನ್ನು ವಶಕ್ಕೆ ಪಡೆದಿದ್ದಾರೆ. ಅದಕ್ಕೂ ಮುನ್ನ ಪಿಸ್ತೂಲುಗಳನ್ನು ತಂದು ಇಂಡಿಗೆ ನೀಡಿದ್ದ ಧರ್ಮರಾಜನ ಸಹಚರ ನಾಗಪ್ಪನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.
ಸಿಬಿಐ ತನಿಖೆ ಆರಂಭಿಸಿದಾಗಿನಿಂದಲೂ ಒಂದಲ್ಲಾ ಒಂದು ಹೊಸ ಸಂಗತಿಯನ್ನು ಬಯಲಿಗೆ ತರಲಾಗುತ್ತಿದೆ. ವಿನಯ ಕುಲಕರ್ಣಿ ಬಂಧನವಾಗಿ ಐದು ವಾರ ಕಳೆದರೂ ಸಿಬಿಐ ಮುಂದಿನ ನಡೆ ಏನು ಎಂಬುದು ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಈ ಅವಧಿಯಲ್ಲಿ ಸಿಬಿಐ ಅಧಿಕಾರಿಗಳು ಈ ಪಿಸ್ತೂಲುಗಳ ಮರ್ಮದ ಹಿಂದೆ ಬಿದ್ದಿದ್ದರು ಎಂಬುದಕ್ಕೆ ಚಂದ್ರಶೇಖರ ಇಂಡಿ ಮತ್ತು ನಾಗಪ್ಪನನ್ನು ವಶಕ್ಕೆ ಪಡೆದಿರುವುದೇ ಸಾಕ್ಷಿಯಾಗಿದೆ. ಒಟ್ಟಾರೆ ಸಿಬಿಐ ಅಧಿಕಾರಿಗಳು ಮಾತ್ರ ಯೋಗೀಶಗೌಡ ಕೊಲೆ ಪ್ರಕರಣವನ್ನು ಹೊಸದಿಕ್ಕಿಗೆ ಒಯ್ಯುತ್ತಿದ್ದಾರೆ ಎಂಬುದು ಮಾತ್ರ ಸತ್ಯ.