ಪತ್ನಿ ಮಗ ಭೇಟಿ ವೇಳೆ ದರ್ಶನ್ ಕಣ್ಣೀರ ಧಾರೆ ಸುರಿಸಿದ್ದಾರೆ. ಮಗ ವಿನೀಶ್ ಹಾಗೂ ವಿಜಯಲಕ್ಷ್ಮಿ ಜೈಲು ಒಳಗೆ ಹೋಗುತ್ತಿದ್ದಂತೆ ದರ್ಶನ್ ಭಾವುಕರಾಗಿ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ಕಣ್ಣೀರು ಹಾಕಿದ್ದಾರೆ.
ಬೆಂಗಳೂರು (ಜೂ.24): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ (RenukaSwamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan) ಕೇಂದ್ರ ಕಾರಾಹೃಗ ಪರಪ್ಪನ ಅಗ್ರಹಾರ ಸೇರಿದ್ದು, ಇಂದು ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಮತ್ತು ಆತ್ಮೀಯ ಗೆಳೆಯ ನಟ ವಿನೋದ್ ಪ್ರಭಾಕರ್ ಜೈಲಿನಲ್ಲಿ ಭೇಟಿಯಾದರು.
ಪತ್ನಿ ಮಗ ಭೇಟಿ ವೇಳೆ ದರ್ಶನ್ ಕಣ್ಣೀರ ಧಾರೆ ಸುರಿಸಿದ್ದಾರೆ. ಮಗ ವಿನೀಶ್ ಹಾಗೂ ವಿಜಯಲಕ್ಷ್ಮಿ ಒಳಗೆ ಹೋಗುತ್ತಿದ್ದಂತೆ ದರ್ಶನ್ ಭಾವುಕರಾಗಿ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ಕಣ್ಣೀರು ಹಾಕಿದ್ದಾರೆ. ಮಗ ವಿನೀಶ್ ನನ್ನು ತಬ್ಬಿಕೊಂಡೇ ಅಳುತ್ತಾ ಮಾತನಾಡಿದ್ದಾರೆ. ಅರ್ಧ ಘಂಟೆಯ ಭೇಟಿಯಲ್ಲಿ ದರ್ಶನ್ ಭಾವುಕದಿಂದಲೇ ಮಾತನಾಡಿದರು. ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯವನ್ನು ಮಗನ ಜೊತೆಗೆ ಕಳೆದರು.
ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂದು ಕಾನೂನಿನಲ್ಲಿದೆ: ವಿನೋದ್ ಪ್ರಭಾಕರ್
ಇನ್ನು ದರ್ಶನ್ ಭೇಟಿ ಬಳಿಕ ನಟ ವಿನೋದ್ ಪ್ರಭಾಕರ್ ಹೇಳಿಕೆ ನೀಡಿ, ಮೃತ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ. ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು. ಅವರ ಬರ್ತಡೇಗೆ ಭೇಟಿ ಮಾಡಿದ್ದೆ. ಮಾಧ್ಯಮಗಳಲ್ಲಿ ಬರುವುದನ್ನ ನೋಡಿ ವಿಚಾರ ತಿಳಿದುಕೊಂಡೆ. ಪೊಲೀಸ್ ಸ್ಟೇಷನ್ ಹತ್ರ ಹೋಗಿ ಭೇಟಿಯಾಗಲು ಪ್ರಯತ್ನಪಟ್ಟೆ ಆದ್ರೆ ಅಲ್ಲಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿ ಮಾಡಿದ್ದೇನೆ. ದರ್ಶನ್ ಅವರು ಮೌನವಾಗಿದ್ರು, ಏನ್ ಟೈಗರ್ ಅಂತ ಹೇಳಿದ್ರು ಅಷ್ಟೇ ನನ್ನ ಬಳಿ ಮಾತಾನಾಡಿದ್ದು, ಅವರಿಗೆ ಶೆಕ್ ಹ್ಯಾಂಡ್ ಮಾಡಿ ಬಂದೆ. ಪ್ರಕರಣ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದಷ್ಟೇ ನನಗೆ ಗೊತ್ತು.
ಎಲ್ಲಾ ಕಡೆ ವಿನೋದ್ ಪ್ರಭಾಕರ್ ಪೋಸ್ಟ್ ಮಾಡಿಲ್ಲ ಮಾತನಾಡಿಲ್ಲ ಅಂತ ಹೇಳುತ್ತಿದ್ದರು. ಈಗ ಪೋಸ್ಟ್ ಹಾಕಿ ಈ ಪ್ರಾಬ್ಲಮ್ ಸರಿಹೋಗುತ್ತೆ ಅಂದ್ರೆ ನಾನೇ ಸಾವಿರ ಪೋಸ್ಟ್ ಹಾಕುತ್ತಿದೆ. ಈ ಪ್ರಕರಣ ಬಹಳ ಗಂಭೀರವಾಗಿದೆ. ಕೇಸ್ ಪೊಲೀಸ್ ತನಿಖೆಯಲ್ಲಿದೆ. ಏನು ಮಾತನಾಡಬೇಕು ಎನ್ನುವ ಕ್ಲಾರಿಟಿ ನನಗಿಲ್ಲ. ಅದಕ್ಕೆ ಅವರನ್ನು ಭೇಟಿ ಮಾಡುವವರಗೆ ಮಾತನಾಡಬಾರದು ಅಂದು ಕೊಂಡಿದ್ದೆ. ಕಾನೂನಿಗಿಂತ ಯಾರು ದೊಡ್ಡವರಿಲ್ಲ ಎಲ್ಲರಿಗೂ ನ್ಯಾಯ ಸಿಗಲಿ. ನನಗೆ ದೇವರ ಮೇಲೆ ಅಪಾರವಾದ ನಂಬಿಕೆ ಇದೆ.
ದರ್ಶನ್ ರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಕಳೆದಿದೆ. ನಾನು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ನ್ಯೂಸ್ ನಲ್ಲಿ ನೋಡಿದ ಮೇಲೆ ನನಗೆ ಈ ಪ್ರಕರಣದ ಬಗ್ಗೆ ಗೊತ್ತಾಯ್ತು. ಅಂದ್ರೆ ಅವತ್ತು ನನಗೆ ನ್ಯೂಸ್ ನೋಡಿ ಶಾಕ್ ಆಯ್ತು. ರೇಣುಕಾಸ್ವಾಮಿ ಫ್ಯಾಮಿಲಿ ಒಂದು ಕಡೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇತ್ತ ದರ್ಶನ್ ಕುಟುಂಬದ ಜೊತೆಗೆ ಅಭಿಮಾನಿಗಳು ಕೂಡ ನೋವಿನಲ್ಲಿದ್ದಾರೆ. ಯಾರಿಗೆ ಸಾಂತ್ವನ ಹೇಳಬೇಕು ಅಂತ ತಿಳಿಯಲಿಲ್ಲ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ. ದರ್ಶನ್ ಭೇಟಿಗೆ ಹೋದಾಗ ಸಾಕಷ್ಟು ಮಂಕಾಗಿದ್ದರು. ಅವರ ಮುಖ ನೋಡಿಕೊಂಡು ಬರಲು ಹೋಗಿದ್ದೆ. ಒಂದು ಕ್ಷಣ ಅವರ ಮುಖ ನೋಡಿ ಶೆಕ್ ಹ್ಯಾಂಡ್ ಮಾಡಿ ಬಂದೆ. ಎಲ್ಲರಿಗೂ ಭಗವಂತ ಒಳ್ಳೆಯದನ್ನ ಮಾಡಲಿ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವುದು ಕಾನೂನಿನಲ್ಲಿದೆ. ನನ್ನ ಪ್ರಕಾರ ಎಲ್ಲರಿಗೂ ಒಳ್ಳೆಯದು ಆಗುತ್ತೆ ಎಂದಿದ್ದಾರೆ.