ಸಾಮಾಜಿಕ ಕಾರ್ಯಕರ್ತನ ಹತ್ಯೆ: ಹೊತ್ತಿ ಉರಿದ ಬೆಳಗಾವಿ, ಗಂಡನ ಚಪ್ಪಲಿ, ಬೈಕ್ ಅಪ್ಪಿಕೊಂಡು ಕಣ್ಣೀರಿಟ್ಟ ಪತ್ನಿ..!

By Girish Goudar  |  First Published Jun 19, 2022, 10:39 PM IST

*  ಸಾವಿರಾರು ಜನರ ಸಮ್ಮುಖದಲ್ಲಿ ಸತೀಶ್ ಪಾಟೀಲ್ ಅಂತ್ಯಕ್ರಿಯೆ
*  ನನ್ನ ಗಂಡ ಸತ್ತಿಲ್ಲ, ಹಾರ ಹಾಕ್ಬೇಡಿ ಪೂಜೆ ಮಾಡ್ಬೇಡಿ ಎಂದು ಆಕ್ರಂದನ
*  ವಿಶಾಖಪಟ್ಟಣಂನಿಂದ ತಾಯಿ ಬಂದ ಬಳಿಕ ಅಂತ್ಯಕ್ರಿಯೆ
 


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಜೂ.19): ಕಾರು ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪಾಟೀಲ್(27) ಕೊಲೆಯಲ್ಲಿ ಅಂತ್ಯವಾಗಿದೆ. ಗ್ರಾಮಸ್ಥರ ಒಳಿತಿಗಾಗಿ, ದೇವಸ್ಥಾನದ ಜಮೀನು ಮರಳಿ ದೇವಸ್ಥಾನಕ್ಕೆ ಸಿಗಬೇಕು ಅಂತಾ ಹೋರಾಡುತ್ತಿದ್ದ ಜೀವವನ್ನು ಆ ದೇವರೂ ಸಹ ಉಳಿಸಲಾಗಲಿಲ್ಲ. ಇದು ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮಸ್ಥರ ಮನದಾಳದ ಮಾತು. ಕಳೆದ ರಾತ್ರಿ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಕಾಲಭೈರವನಾಥ ದೇವಸ್ಥಾನ ಎದುರು ಯಾವ ದೇವಸ್ಥಾನದ ಜಮೀನುಗಾಗಿ ಹೋರಾಡುತ್ತಿದ್ದನೋ ಆತನ ನೆತ್ತರು ಹರಿದಿದೆ. 

Tap to resize

Latest Videos

ವೃತ್ತಿಯಲ್ಲಿ ಫಾರ್ಮಸಿಸ್ಟ್ ಆಗಿದ್ದ ಸತೀಶ್ ಪಾಟೀಲ್ ಸಾಮಾಜಿಕ ಸೇವೆಯಿಂದಲೇ ಗ್ರಾಮಸ್ಥರ ಮನಗೆದ್ದಿದ್ದ. ಆದರೆ ಕಳೆದ ರಾತ್ರಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಜೀವ ಚೆಲ್ಲಿದ್ದ. ಸುದ್ದಿ ಹರಡುತ್ತಿದ್ದಂತೆ ಹಿಂಸಾಚಾರ ನಡೆದಿದ್ದು 10 ಕ್ಕೂ ಹೆಚ್ಚು ವಾಹನಗಳು, ಬಣವೆಗಳು ಸುಟ್ಟು ಕರಕಲಾಗಿವೆ. ದೇವಸ್ಥಾನದ ಜಮೀನು ವಿವಾದ, ಹಳೆ ವೈಷಮ್ಯದಿಂದ ಇಡಿ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿದೆ. 

ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನೇ ಹತ್ಯೆಗೈದ ಪತ್ನಿ, ಪ್ರಿಯಕರ

ಕಳೆದ ರಾತ್ರಿ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮ ಅಕ್ಷರಶಃ ರಣರಂಗವಾಗಿತ್ತು. ಎಲ್ಲಿ ನೋಡಿದಲ್ಲಿ ಧಗಧಗಿಸುತ್ತಿರುವ ಬೆಂಕಿ...  ಪೊಲೀಸರ ಗಸ್ತು... ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ... ಕಾರು ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಗಲಾಟೆ ಹಾಗೂ ಹಳೆ ವೈಷಮ್ಯ ಕೊಲೆ, ಗಲಾಟೆ ಹಾಗೂ ಹಿಂಸಾಚಾರದ ಮೂಲಕ ಅಂತ್ಯವಾಗಿದೆ.  

ನಿನ್ನೆ ರಾತ್ರಿ ಗೌಂಡವಾಡ ಗ್ರಾಮದ ಕಾಲ ಭೈರವನಾಥ ದೇವಾಲಯ ಸ್ವಚ್ಛಗೊಳಿಸುವಾಗ ಆವರಣದಲ್ಲಿ ಆನಂದ ಕುಟ್ರೆ ಎಂಬಾತ ಕಾರು ಪಾರ್ಕ್ ಮಾಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾತೆ ತೆಗೆದ ಗ್ರಾಮದ ಮತ್ತೊಂದು ಗುಂಪಿನ ಜನ ಸತೀಶ್ ಪಾಟೀಲ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್ ಪಾಟೀಲ್ ನನ್ನ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಿಸದೇ ಸತೀಶ್ ಪಾಟೀಲ್ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಸತೀಶ್ ಪಾಟೀಲ್ ಬೆಂಬಲಿಗರು,  ವಿರೋಧಿ ಬಣದ ಹತ್ತಕ್ಕೂ ಹೆಚ್ಚು ಕಾರುಗಳು, ಮೇವಿನ ಬಣವೆಗಳು, ಮನೆಗಳಿಗೆ ಬೆಂಕಿ ಹಚ್ಚಿ, ಮನೆಗೆ ನುಗ್ಗಿ ಕಿಟಕಿ ಗಾಜುಗಳನ್ನ ಒಡೆದು, ಕಲ್ಲು ತೂರಾಟ ನಡೆಸಿದ್ದರು.

ಕಾಳಭೈರವನಾಥ ದೇವಸ್ಥಾನಕ್ಕೆ ಸೇರಿದ 27 ಎಕರೆ ಜಮೀನನ್ನು ಗ್ರಾಮದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ಇದನ್ನ ವಾಪಸ್ ಪಡೆಯಲು ಸತೀಶ್ ಪಾಟೀಲ್ ಹೋರಾಟ ಮಾಡಿದ್ರು. ಇದೇ ಕಾರಣಕ್ಕೆ ಪಕ್ಕಾ ಪ್ಲ್ಯಾನ್ ಮಾಡಿ ಹತ್ಯೆ ಮಾಡಿದ್ದಾರೆ ಅಂತಾರೆ ಗ್ರಾಮಸ್ಥರು‌. ಇನ್ನೂ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರ ಸುದ್ದಿ ತಿಳಿದು ಬೆಳಗಾವಿ ಪೋಲಿಸ್ ಆಯುಕ್ತ ಡಾ. ಬೋರಲಿಂಗಯ್ಯಾ ನೇತೃತ್ವದಲ್ಲಿ ನೂರಾರು ಪೋಲಿಸರು, ಗೌಂಡವಾಡ ಗ್ರಾಮಕ್ಕೆ ಲಗ್ಗೆ ಇಟ್ಟು ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದಿಂದ ವಾಹನ, ಮನೆ ಹಾಗೂ ಬಣವೆಗಳಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ರು‌. ರಾತ್ರಿಯಿಡೀ ಹೊತ್ತಿ ಉರಿದಿದ್ದ ಗೌಂಡವಾಡ ಗ್ರಾಮದಲ್ಲಿ ಇಂದು ಸ್ಮಶಾನ ಮೌನ ಆವರಿಸಿತ್ತು. 

ದೇವಸ್ಥಾನದ ವಿಚಾರಕ್ಕೆ ಕೊಲೆ: ಬೆಳಗಾವಿ ಉದ್ವಿಗ್ನ, 25 ವಾಹನಗಳಿಗೆ ಬೆಂಕಿ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಬೆಳಗಾವಿ ಕಾಕತಿ ಪೋಲಿಸರು ಕೊಲೆ ಪ್ರಕರಣದಲ್ಲಿ ಏಳು ಆರೋಪಿಗಳನ್ನ ಬಂಧಿಸಿದ್ದು, ಗ್ರಾಮದಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

ದೇವಸ್ಥಾನ ಜಮೀನು ಒತ್ತುವರಿ ಮಾಡಿ ರಿಯಲ್ ಎಸ್ಟೇಟ್ ದಂಧೆ?

ಗೌಂಡವಾಡ ಗ್ರಾಮದ ಕಾಲ ಭೈರವನಾಥ ದೇವಾಲಯದ ಜಮೀನು ಕಬಳಿಸಲು ಗ್ರಾಮದ ಕೆಲವರು, ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಕೈಜೋಡಿಸಿದ್ದ ಆರೋಪ ಕೇಳಿ ಬಂದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮೃತ ಸತೀಶ್ ಪಾಟೀಲ್ ಗ್ರಾಮದ ಹಲವರ ಬೆಂಬಲದೊಂದಿಗೆ ಹೋರಾಟ ನಡೆಸಿದ್ದ, ಸದ್ಯ ಜಮೀನು ವಿವಾದ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಮಂಗಳವಾರ ಅಂತಿಮ ತೀರ್ಪು ಹೊರಬರಬೇಕಿತ್ತಂತೆ. ಇದೇ ವೈಷಮ್ಯ ಇಟ್ಟುಕೊಂಡ ಹಂತಕರು, ಕಾರು ಪಾರ್ಕಿಂಗ್ ವಿಚಾರವಾಗಿ ಕ್ಯಾತೆ ತೆಗೆದು ಸತೀಶ್ ಪಾಟೀಲ್ ಕೊಲೆ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ‌. ಇನ್ನೂ ಸತೀಶ್ ಪಾಟೀಲ್ ಕೊಲೆಯಿಂದ ಆತನ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಸತೀಶ್ ಪತ್ನಿ ಪತಿಯನ್ನ ಕಳೆದುಕೊಂಡು ಕಂಗಾಲಾಗಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಗಂಡನ ಚಪ್ಪಲಿ, ಬೈಕ್ ಅಪ್ಪಿಕೊಂಡು ಪತ್ನಿ ಕಣ್ಣೀರು

ಇನ್ನು ಗಂಡ ಸತೀಶ್ ಪಾಟೀಲ್ ಸಾವಿನ ಸುದ್ದಿಯನ್ನು ಪತ್ನಿ ಸ್ನೇಹಾಗೆ ಕುಟುಂಬಸ್ಥರು ತಿಳಿಸಿರಲಿಲ್ಲ. ಇಂದು ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸತೀಶ್ ಪಾಟೀಲ್ ಪತ್ನಿ ಸ್ನೇಹಾ ಆಕ್ರಂದನ ಮುಗಿಲು ಮುಟ್ಟಿತ್ತು. ಸತೀಶ್ ಪಾಟೀಲ್ ಬಳಸುತ್ತಿದ್ದ ಬೈಕ್, ಚಪ್ಪಲಿ ಹಿಡಿದು ಬಿಗಿದಪ್ಪಿ ನನ್ನ ಗಂಡ ಸತ್ತಿಲ್ಲ... ಮರಳಿ ಬರ್ತಾನೆ ಅಂತಾ ಕಣ್ಣೀರಿಡುವ ದೃಶ್ಯ ಕಂಡು ಇಡೀ ಗ್ರಾಮಸ್ಥರೇ ಕಣ್ಣೀರಾಕಿದ್ರು. ಇನ್ನು ಗಂಡ‌ನ ಮುಖ ನೋಡಬೇಕು ಅಂತಾ ಮನೆಯಿಂದ ಓಡುತ್ತಾ ಹೋಗುತ್ತಿದ್ದ ಸ್ನೇಹಾಳನ್ನು ಕುಟುಂಬಸ್ಥರು ತಡೆದು ಸಾಂತ್ವನ ಹೇಳಿದ್ರು.

ಸತೀಶ್ ಪಾಟೀಲ್ ನೆನೆದು ಕಣ್ಣೀರಿಟ್ಟ ಗ್ರಾಮಸ್ಥರು

ಇನ್ನು ಸತೀಶ್ ಪಾಟೀಲ್ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ. ಸತೀಶ್ ಪಾಟೀಲ್ ನೆನೆದು ಕಣ್ಣೀರು ಹಾಕಿದ ಮಹಿಳೆಯರು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡುತ್ತಾ, 'ಎರಡು ಪುಟ್ಟ ಪುಟ್ಟ ಮಕ್ಕಳಿದ್ದು ಅವರ ಸ್ಥಿತಿ ಹೇಗೆ? ದೇವಸ್ಥಾನದ ಜಮೀನು, ಗ್ರಾಮದ ಒಳಿತಿಗಾಗಿ ಸತೀಶ್ ಪಾಟೀಲ್ ಹೋರಾಟ ಮಾಡುತ್ತಿದ್ದ. ದೇವಸ್ಥಾನದ ಜಮೀನು ವಾಪಸ್ ಪಡೆಯಲು ಸತತ ನಾಲ್ಕು ವರ್ಷಗಳಿಂದ ಹೋರಾಟ ಮಾಡ್ತಿದ್ದ. ಸತೀಶ್ ಪಾಟೀಲ್ ಕೊಲೆಯಾದ ಸುದ್ದಿ ಕೇಳಿ ನಮಗೆ ತುಂಬಾ ದುಃಖ ಆಗ್ತಿದೆ. ಸತೀಶ್ ಪಾಟೀಲ್ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು' ಎಂದು ಕಣ್ಣೀರು ಹಾಕಿದರು.

ಕರ್ನಾಟಕದ ಗಡಿಯೊಳಗೆ ಮಹಾರಾಷ್ಟ್ರ ಸರ್ಕಾರ ನಾಮಫಲಕ: ಕನ್ನಡಿಗರ ಆಕ್ರೋಶ..!

ವಿಶಾಖಪಟ್ಟಣಂನಿಂದ ತಾಯಿ ಬಂದ ಬಳಿಕ ಅಂತ್ಯಕ್ರಿಯೆ

ಇನ್ನು ಸತೀಶ್ ಪಾಟೀಲ್‌ಗೆ ಇಬ್ಬರು ಸಹೋದರಿಯರಿದ್ದು ಈ ಪೈಕಿ ಓರ್ವ ಸಹೋದರಿ ವಿಶಾಖಪಟ್ಟಣದಲ್ಲಿ ಗಂಡನ ಮನೆಯಲ್ಲಿ ವಾಸವಿದ್ದರು‌. ಮಗಳ ಬಳಿ ತೆರಳಿದ್ದ ಸತೀಶ್ ಪಾಟೀಲ್ ತಾಯಿ ನಳಿನಿಗೆ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಫ್ಲೈಟ್ ಮೂಲಕ ಸಂಜೆ 4.30ರ ಸುಮಾರಿಗೆ ಗೌಂಡವಾಡ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಕಾರಿನಿಂದ ಇಳಿದು ಎದೆ ಬಡೆದುಕೊಳ್ಳುತ್ತಾ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಗ್ರಾಮಕ್ಕೆ ಸತೀಶ್ ಪಾಟೀಲ್ ಮೃತದೇಹ ತರಲಾಯಿತು. ಈ ವೇಳೆ ಗಂಡನ ಮೃತದೇಹ ಬಿಗಿದಪ್ಪಿ ಕಣ್ಣೀರು ಹಾಕಿದ ಪತ್ನಿ ಸ್ನೇಹಾ ನನ್ನ ಗಂಡ ಸತ್ತಿಲ್ಲ, ಬದುಕಿದ್ದಾನೆ. ಹಾರ ಹಾಕಬೇಡಿ, ಪೂಜೆ ಮಾಡಬೇಡಿ ಅಂತಾ ಕಣ್ಣೀರಿಟ್ಟರು. ಬಳಿಕ ಅಂತಿಮ ವಿಧಿ ವಿಧಾನ ನೆರವೇರಿಸಿ ಸತೀಶ್ ಪಾಟೀಲ್ ಅಂತಿಮಯಾತ್ರೆ ಮಾಡಿ ಮರಾಠಾ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

ಒಟ್ಟಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಹಳೇ ಸೇಡು, ಕೊಲೆ, ಹಿಂಸಾಚಾರದಲ್ಲಿ ಅಂತ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ, ಮುಂಜಾಗ್ರತಾ ಕ್ರಮವಾಗಿ ಇಡೀ ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗ್ರಾಮದ ಒಳಿತಿಗಾಗಿ ದೇವಸ್ಥಾನದ ಜಮೀನು ಅತಿಕ್ರಮಣ ತೆರವಿಗಾಗಿ ಹೋರಾಡಿದ ಸಾಮಾಜಿಕ ಕಾರ್ಯಕರ್ತನ ಬದುಕು ದುರಂತ ಅಂತ್ಯ ಕಂಡಿದ್ದು ಇಡೀ ಗ್ರಾಮವೇ ಮಮ್ಮಲ ಮರುಗುತ್ತಿದೆ.
 

click me!