ಜುಲೈ 14ರಂದು ಗೃಹ ಸಚಿವರ ಜಿಲ್ಲೆಯಲ್ಲೇ ನಡೆದ ರೌಡಿ ಶೀಟರ್ ಹಂದಿ ಅಣ್ಣಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 8 ಆರೋಪಿಗಳು ಕೊಲೆ ಮಾಡಿರುವುದಾಗಿ ಹೇಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾರೆ.
ಶಿವಮೊಗ್ಗ (ಜು.19): ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಅಪರಿಚಿತ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಮಾರಕಾಸ್ತ್ರದಿಂದ ಕೊಂದಿದ್ದರು. ಪ್ರಕರಣ ಸಂಬಂಧ ಈಗ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮುಂದೆ ಆರೋಪಿಗಳು ಶರಣಾಗಿದ್ದಾರೆ. ತಡರಾತ್ರಿ ಎಸ್ಪಿ ಕಛೇರಿಗೆ ಆಗಮಿಸಿದ 8 ಆರೋಪಿಗಳು ಕೊಲೆ ಮಾಡಿರುವುದಾಗಿ ಹೇಳಿ ತಪ್ಪೊಪ್ಪಿಕೊಂಡಿದ್ದಾರೆ. ಶರಣಾದ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಜುಲೈ 14ರಂದು ಗೃಹ ಸಚಿವರ ಜಿಲ್ಲೆಯಲ್ಲೇ ನಡೆದ ಭೀಕರ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನೇ ತತ್ತರಗೊಳಿಸಿತ್ತು. ವಿನೋಬನಗರದ ಪೊಲೀಸ್ ಚೌಕಿಯ ಬಳಿ ಪೊಲೀಸ್ ಠಾಣೆಯ ಬಳಿಯೇ ಬರ್ಬರ ಹತ್ಯೆ ನಡೆದಿತ್ತು. ದುಷ್ಕರ್ಮಿಗಳು ಇನ್ನೋವ ಕಾರಿನಲ್ಲಿ ಬಂದು ಆಣ್ಣಿಯನ್ನು ಬೆನ್ನಟ್ಟಿ ಅಟ್ಟಾಡಿಸಿ ಲಾಂಗ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದರು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಣ್ಣಿ ಮೃತಪಟ್ಟಿದ್ದ. ಘಟನೆ ನಡೆದ ತಕ್ಷಣ ಆರೋಪಿಗಳು ಪರಾರಿಯಾಗಿದ್ದರು. ಈ ಕೊಲೆ ಭೇದಿಸಲು ತಂಡ ರಚನೆ ಮಾಡಲಾಗಿತ್ತು.
ಹಂದಿ ಅಣ್ಣಿ ಈ ಹಿಂದೆ ಅನೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನಟೋರಿಯಸ್ ರೌಡಿ ಸೋದರರಾಗಿದ್ದ ಲವ-ಕುಶನ ಹತ್ಯೆಯಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದ. ಬಳಿಕ ಹಲವು ಹತ್ಯೆ ಪ್ರಕರಣಗಳಲ್ಲಿ ಹಂದಿ ಅಣ್ಣಿ ಭಾಗಿಯಾಗಿದ್ದ ಎನ್ನಲಾಗಿದೆ. ಕೊಲೆಗೆ ಇದೇ ಕಾರಣವೋ ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಕಾರಣವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಸಾಗರ ರಸ್ತೆಯ ಜಾಗವೊಂದರ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದೆಂದು ಕೂಡ ಹೇಳಲಾಗುತ್ತಿದೆ.
ತಿಂಗಳು ಹಿಂದೆಯೇ ಸ್ಕೆಚ್
ತಿಂಗಳ ಹಿಂದೆಯೇ ಕೊಲೆಗೆ ಸ್ಕೆಚ್: ಹಂದಿ ಅಣ್ಣಿಯ ಕೊಲೆಯ ಹಿಂದೆ ಲೇಔಟ್ ವಿಚಾರ ಇದೆ ಎನ್ನಲಾಗುತ್ತಿದೆಯಾದರೂ, ಕೊಲೆ ಮಾಡುವ ಹುನ್ನಾರ ಸಂಬಂಧ ತಿಂಗಳ ಹಿಂದೇ ಅಣ್ಣಿಗೆ ವಿಚಾರ ಗೊತ್ತಾಗಿತ್ತು ಎನ್ನಲಾಗಿದೆ. ತಿಂಗಳ ಹಿಂದೆಯೇ ಆತನ ಮನೆ ಬಳಿಯೇ ಆತನ ಮೆಲೆ ದಾಳಿ ಮಾಡುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಸಿಸಿ ಟಿವಿ ಫೂಟೇಜ್‌ಲ್ಲಿದ್ದ ದೃಶ್ಯಗಳ ಸಮೇತ ಹಂದಿ ಅಣ್ಣಿ ವಿನೋಬನಗರ ಠಾಣೆ ಮೆಟ್ಟಿಲೇರಿದ್ದ. ಇದೊಂದು ಕಡೆಯಾದರೆ, ಅಣ್ಣಿ ತನ್ನ ಸೋಶಿಯಲ್ ಮೀಡಿಯಾದ ಸ್ಟೇಟಸ್‌ನಲ್ಲಿ ತೆಲುಗು ಭಾಷೆಯಲ್ಲಿಯೇ ಡೈಲಾಗ್ ಒಂದನ್ನು ಹಾಕಿಕೊಂಡಿದ್ದ. ಅಲ್ಲದೆ ಯಾರು ನನ್ನ ತುಳಿಯೋಕೆ ಸಾಧ್ಯವಿಲ್ಲ ಎಂದು ಕನ್ನಡದ ಪೋಸ್ಟರ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ. ಸ್ಟೇಟಸ್‌ನಲ್ಲಿ ಇದು ಅಪ್‌ಡೇಟ್ ಆದ 15 ನಿಮಿಷದಲ್ಲಿಯೇ ಆತನ ಕೊಲೆಯಾಗಿತ್ತು.
ಹಂದಿ ಅಣ್ಣಿ ಸಹಚರನ ಹತ್ಯೆಗೂ ಯತ್ನ: ಶಿವಮೊಗ್ಗ ಪೊಲೀಸರ ಕರ್ತವ್ಯದ ಚಾಕಚಕ್ಯತೆ ಪರಿಣಾಮ ಮತ್ತೊಬ್ಬ ರೌಡಿಶೀಟರ್‌ನ ಕೊಲೆಯೊಂದು ತಪ್ಪಿಹೋಗಿದೆ. ಹಂದಿ ಅಣ್ಣಿ ಸಹಚರ ಅನಿಲ್ ಯಾನೆ ಅಂಬು ಕೊಲೆಗೆ ಸ್ಕೆಚ್ ಹಾಕಿದ್ದ ಇಬ್ಬರು ಯುವಕರು ಈಗ ದೊಡ್ಡಪೇಟೆ ಠಾಣೆ ಪೊಲೀಸರ ಅತಿಥಿಗಳಾಗಿದ್ದಾರೆ. ರೌಡಿ ಶೀಟರ್ ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಅನಿಲ್ ಯಾನೆ ಅಂಬು ಎಂಬವರನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ ಚಂದನ್, ಕಿರಣ್ ವಿನೇಶ್‌ನ ವಿರುದ್ಧ ಪ್ರಕರಣ ದಾಖಲಾಗಿದೆ. ಕಿರಣ್ ಯಾನೆ ಕುಟ್ಟಿ ಮತ್ತು ವಿನೇಶ್ ಯಾನೆ ಜಿಂಕೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಚಂದನ್ ತಲೆಮರೆಸಿಕೊಂಡಿದ್ದಾನೆ.
ಬುದ್ದನಗರದ ವಿನೇಶ್ ಯಾನೆ ಜಿಂಕೆಯ ಮನೆಯಲ್ಲಿ ಪಿಐ ರವಿಕುಮಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆಯುಧಗಳು ಪತ್ತೆಯಾಗಿದೆ. ತಿಂಗಳ ಹಿಂದೆ ಬಂಕ್ ಬಾಲು ಹತ್ಯೆಯ ಪ್ರಮುಖ ಆರೋಪಿ ಆಗಿರುವ ಅನಿಲ (ಅಂಬು)ನನ್ನು ಹತ್ಯೆ ಮಾಡುವ ಉದ್ದೇಶದಿಂದ ಆಯುಧಗಳನ್ನು ಖರೀದಿಸಿ ಇಟ್ಟಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.