Bengaluru: ಮಕ್ಕಳ ಕಳ್ಳನೆಂದು ಭಾವಿಸಿ ಕಾರ್ಮಿಕನ ಬಡಿದು ಕೊಂದರು!

By Govindaraj SFirst Published Oct 8, 2022, 10:14 AM IST
Highlights

ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಅಮಾಯಕರ ಮೇಲೆ ಹಲ್ಲೆ ಮಾಡಿ ಹತ್ಯೆಗೈದ ಪ್ರಕರಣಗಳು ಈಗ ನಗರ ಪ್ರದೇಶದಲ್ಲಿ ಸಂಭವಿಸುತ್ತಿದ್ದು, ಮಕ್ಕಳ ಕಳ್ಳನೆಂದು ಭಾವಿಸಿ ಕಾರ್ಮಿಕನೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಅಮಾನುಷ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರು (ಅ.08): ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಅಮಾಯಕರ ಮೇಲೆ ಹಲ್ಲೆ ಮಾಡಿ ಹತ್ಯೆಗೈದ ಪ್ರಕರಣಗಳು ಈಗ ನಗರ ಪ್ರದೇಶದಲ್ಲಿ ಸಂಭವಿಸುತ್ತಿದ್ದು, ಮಕ್ಕಳ ಕಳ್ಳನೆಂದು ಭಾವಿಸಿ ಕಾರ್ಮಿಕನೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಅಮಾನುಷ ಘಟನೆ ನಗರದಲ್ಲಿ ನಡೆದಿದೆ. ಜಾರ್ಖಂಡ್‌ ಮೂಲದ ಸಂಜಯ್‌ ಟುಡೋ(27) ಹತ್ಯೆಯಾದ ದುರ್ದೈವಿ ಕಾರ್ಮಿಕ. ಈ ಸಂಬಂಧ ಕೆ.ಆರ್‌.ಪುರ ಠಾಣೆ ಪೊಲೀಸರು ವಿಜಿನಾಪುರದ ಪಾರ್ಥಿಬನ್‌, ಫಯಾಜ್‌ ಪಾಷಾ ಹಾಗೂ ಸಯ್ಯದ್‌ ಖಾಜಾ ಎಂಬುವವರನ್ನು ಬಂಧಿಸಿದ್ದು, ಇತರೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ವಿವರ: ಗಾರೆ ಕೆಲಸ ಮಾಡುವ ಜಾರ್ಖಂಡ್‌ ಮೂಲದ ಸಂಜಯ್‌ನನ್ನು ಸೆ.23ರಂದು ದೂರವಾಣಿ ನಗರದ ದರ್ಗಾ ಮೊಹಲ್ಲಾದ ಬಳಿ ಜನರ ಗುಂಪೊಂದು ಮಕ್ಕಳ ಕಳ್ಳನೆಂದು ಭಾವಿಸಿ ಮನಸೋ ಇಚ್ಛೆ ಹಲ್ಲೆ ಮಾಡಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ರಾಮಮೂರ್ತಿನಗರ ಪೊಲೀಸ್‌ ಠಾಣೆಯ ಹೊಯ್ಸಳ ಗಸ್ತು ವಾಹನದ ಪೊಲೀಸರು ಸ್ಥಳಕ್ಕೆ ಬಂದು ಸಂಜಯ್‌ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಪ್ರಶ್ನಿಸಿದಾಗ, ‘ನಾನು ಮಕ್ಕಳ ಕಳ್ಳ ಅಲ್ಲ. ಕಾರ್ಮಿಕ’ ಎಂದು ಹೇಳಿದ್ದನು, ಹಲ್ಲೆ ಮಾಡಿರುವ ಬಗ್ಗೆ ದೂರು ನೀಡುವುದಿಲ್ಲ ಎಂದು ಹೇಳಿ ಠಾಣೆಯಿಂದ ಹೋಗಿದ್ದನು.

Bengaluru: ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಲ್ಲಿ 4 ಲಕ್ಷ ಎಗರಿಸಿದ ವಂಚಕ

ಫುಟ್‌ಪಾತ್‌ನಲ್ಲಿ ಮೃತದೇಹ: ಸೆ.24ರಂದು ಬೆಳಗ್ಗೆ 9.30ರ ಸುಮಾರಿಗೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿ ಐಟಿಐ ಬಸ್‌ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೆ.ಆರ್‌ ಪುರಂ ಪೊಲೀಸರು ಬಂದು ಪರಿಶೀಲಿಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ವೇಳೆ ರಾಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೃತ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದ ವಿಚಾರ ಗೊತ್ತಾಗಿತ್ತು.

ಹಲ್ಲೆ ಘಟನೆ ಸಿಸಿಟಿವಿಯಲ್ಲಿ ಸೆರೆ: ಬಳಿಕ ಈತ ಕೆಲಸ ಮಾಡುತ್ತಿದ್ದ ಮೇಸ್ತ್ರಿಯನ್ನು ಸಂಪರ್ಕಿಸಿ, ಮೃತನ ಪತ್ನಿಯ ಮೊಬೈಲ್‌ ಸಂಖ್ಯೆ ಪಡೆದು ಪತಿಯ ಸಾವಿನ ವಿಚಾರ ತಿಳಿಸಲಾಗಿತ್ತು. ಆದರೆ, ಆಕೆ, ‘ನಾನು ಜಾರ್ಖಂಡ್‌ನಲ್ಲಿದ್ದು, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಹಾಗಾಗಿ ನಾನು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಮುಂದಿನ ಪ್ರಕ್ರಿಯೆಗಳನ್ನು ನೀವೇ ನೆರವೇರಿಸಿ’ ಎಂದು ಸ್ಥಳೀಯ ಪೊಲೀಸ್‌ ಠಾಣೆ ಮೂಲಕ ಕೆ.ಆರ್‌.ಪುರ ಪೊಲೀಸ್‌ ಠಾಣೆಗೆ ಪತ್ರ ಕಳುಹಿಸಿದ್ದಾರೆ. ಆಕೆಯ ಅನುಮತಿ ಪತ್ರ ಆಧರಿಸಿ 10 ದಿನಗಳ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಾಡಿಸಲಾಗಿತ್ತು. ಸಂಜಯ್‌ ಸಾವಿಗೆ ಹಲ್ಲೆಯೇ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಹಲ್ಲೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಮೂವರನ್ನು ಬಂಧಿಸಿ, ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ವಶದಲ್ಲಿ ಡೆತ್‌: ಸಾರ್ವಜನಿಕರಿಂದ ಹಲ್ಲೆಗೊಳಗಾದ ಕಾರ್ಮಿಕ ಸಂಜಯ್‌ ಟುಡೋನನ್ನು ಹೊಯ್ಸಳ ಪೊಲೀಸರು, ರಾಮಮೂರ್ತಿನಗರ ಠಾಣೆಗೆ ಕರೆತಂದಿದ್ದಾರೆ. ಹಲ್ಲೆಯಿಂದ ನಿತ್ರಾಣನಾಗಿದ್ದ ಸಂಜಯ್‌ಗೆ ಚಿಕಿತ್ಸೆ ಕೊಡಿಸದೆ ಪೊಲೀಸರು ನಿರ್ಲಕ್ಷ್ಯಿಸಿದ್ದಾರೆ. ಹೀಗಾಗಿ ಆತ ಪೊಲೀಸ್‌ ಠಾಣೆಯಲ್ಲೇ ಮೃತಪಟ್ಟಿದ್ದಾನೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಆರೋಪವನ್ನು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್‌ ಗುಳೇದ್‌ ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

Belagavi: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ, ಸಾರ್ವಜನಿಕರು ಅವರನ್ನು ಹಿಡಿದು ಸೌಜನ್ಯದಿಂದ ಪ್ರಶ್ನಿಸಬೇಕು. ಬಳಿಕ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ವ್ಯಕ್ತಿ ಮೇಲಾದರೂ ಹಲ್ಲೆ ಮಾಡುವುದು ತಪ್ಪು
- ಗಿರೀಶ್‌, ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ

click me!