ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಹಾಡಹಗಲೇ ರೌಡಿಯ ಅಟ್ಟಾಡಿಸಿ ಬರ್ಬರ ಹತ್ಯೆ..!

By Kannadaprabha News  |  First Published Aug 2, 2024, 10:42 AM IST

ಶೇಷಾದ್ರಿಪುರದ ರಿಸೆಲ್ದಾರ್‌ ಸ್ಟ್ರೀಟ್‌ ನಿವಾಸಿ ಅಜಿತ್‌ ಕುಮಾರ್‌ ಕೊಲೆಯಾದ ದುರ್ದೈವಿ. ಗುರುವಾರ ಸಂಜೆ ಸುಮಾರು 4 ಗಂಟೆಗೆ ಮನೆಯಿಂದ ಸುಮಾರು ಐನೂರು ಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಬಂಧನಕ್ಕೆ ರಚಿಸಿರುವ ಪೊಲೀಸರ ಎರಡು ವಿಶೇಷ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. 


ಬೆಂಗಳೂರು(ಆ.02):  ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರೌಡಿ ಶೀಟರ್‌ನನ್ನು ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಶೇಷಾದ್ರಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶೇಷಾದ್ರಿಪುರದ ರಿಸೆಲ್ದಾರ್‌ ಸ್ಟ್ರೀಟ್‌ ನಿವಾಸಿ ಅಜಿತ್‌ ಕುಮಾರ್‌(27) ಕೊಲೆಯಾದ ದುರ್ದೈವಿ. ಗುರುವಾರ ಸಂಜೆ ಸುಮಾರು 4 ಗಂಟೆಗೆ ಮನೆಯಿಂದ ಸುಮಾರು ಐನೂರು ಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಬಂಧನಕ್ಕೆ ರಚಿಸಿರುವ ಪೊಲೀಸರ ಎರಡು ವಿಶೇಷ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

ಬ್ಲಡ್‌ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌ಕುಮಾರ್‌, ಗುರುವಾರ ಸಂಜೆ ಮನೆಯಲ್ಲಿ ಊಟ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು, ಏಕಾಏಕಿ ಅಜಿತ್‌ ಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಆರಂಭಿಸಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಓಡಲು ಅಜಿತ್‌ ಯತ್ನಿಸಿದರೂ ಬೆನ್ನಟ್ಟಿದ ದುಷ್ಕರ್ಮಿಗಳು, ತಲೆ, ಕೈ, ಕಾಲು ಸೇರಿದಂತೆ ಹಲವೆಡೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅಜಿತ್‌ ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾಯಚೂರು: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಅಜಿತ್ ಕುಮಾರ್‌ ವಿರುದ್ಧ ಕಳೆದ ವರ್ಷ ಶೇಷಾದ್ರಿಪುರ ಠಾಣೆ ರೌಡಿ ಪಟ್ಟಿ ತೆರೆಯಲಾಗಿತ್ತು. ಎರಡು ವರ್ಷದ ಹಿಂದೆ ಗಣೇಶ್ ಎಂಬಾತನ ಕೊಲೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಅಜಿತ್‌, ಕೆಲವು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದ್ದ. ಇದರ ಬೆನ್ನಲ್ಲೇ ಆತನ ಕೊಲೆಯಾಗಿದ್ದು, ಹಳೇ ದ್ವೇಷವೇ ಈ ಕೊಲೆಗೆ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಶೇಷಾದ್ರಿಪುರ ಠಾಣೆ ಪೊಲೀಸರು, ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಗೆ ಸಾಗಿಸಿದರು. ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.ಶೇಷಾದ್ರಿಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!