ಮಂಗಳೂರು (ನ.13) : ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪಿಎಫ್‌ಐ ಸಂಚು ನಡೆಸಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆಸಿದೆ ಎನ್ನುವುದು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನಿಖೆಯಲ್ಲಿ ಸ್ಪಷ್ಟವಾಗಿದೆ.
ಮಸೂದ್ ಹತ್ಯೆ ಬಳಿಕ ಅದಕ್ಕೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸಿ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಪಿಎಫ್‌ಐ ಹೊಂದಿತ್ತು. ಕೆಲವೇ ದಿನಗಳಲ್ಲಿ ಪಿಎಫ್‌ಐ ನಾಯಕರು ಮತ್ತು ಕಾರ್ಯಕರ್ತರು ಸಂಚು ರೂಪಿಸಿ ಪ್ರವೀಣ್ ನೆಟ್ಟಾರು ಅವರನ್ನು ಟಾರ್ಗೆಟ್ ಮಾಡಿದ್ದರು. ಶನಿವಾರ ಬಂಧನಕ್ಕೀಡಾದ ಶಹೀದ್‌ನ ಮನೆಯಲ್ಲಿ ಈ ಕುರಿತು ಸಭೆ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಹೀದ್ ಬೆಳ್ಳಾರೆ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೇರಿದೆ. ಈತನ ಮೇಲೆ ಐಪಿಸಿ ಸೆಕ್ಷನ್ 120ಬಿ, 302, 34 ಮತ್ತು ಯುಎ (ಪಿ) ಕಲಂ 16 ಮತ್ತು 18ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಶಹೀದ್‌ನ ಮನೆಯಿಂದ ಪ್ರಕರಣಕ್ಕೆ ಪೂರಕವಾದ ದಾಖಲೆಗಳು, ಸಾಕ್ಷ್ಯಗಳನ್ನು ಎನ್‌ಐಎ ಅಧಿಕಾರಿಗಳು ಸಂಗ್ರಹಿಸಿದ್ದಾರೆ.ಪ್ರವೀಣ್ ಕೊಲೆ ಪ್ರಕರಣ: ತನಿಖೆ ಮತ್ತಷ್ಟು
ಚುರುಕು, ದೊಡ್ಡ ದೊಡ್ಡ ಕುಳಗಳಿಗೆ ಎನ್‌ಐಎ ಖೆಡ್ಡಾ!
ಜು.26ರಂದು ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿದ ಆರಂಭದಲ್ಲೇ 10 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಐವರು ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಇನ್ನಷ್ಟುಮಂದಿಯ ಬಂಧನ ಸಾಧ್ಯತೆಯಿದೆ.