ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳೂರು, (ಜುಲೈ.28): ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ವಿಧಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾದ ಜಾಕೀರ್ ಮತ್ತು ಶಫೀಕ್ ನನ್ನು ಪೊಲೀಸರು ನ್ಯಾಯಾಲಕಕ್ಕೆ ಹಾಜರುಪಡಿಸಿದ್ದು, ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪೊಲೀಸ್ ವಶಕ್ಕೆ ಕೇಳದ ಹಿನ್ನೆಲೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ತನಿಖೆ ಅಗತ್ಯವಿದ್ದಲ್ಲಿ ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ಮನವಿ ಮಾಡುವುದಾಗಿ ವಕೀಲರು ಸ್ಪಷ್ಟಪಡಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಪ್ರಮುಖ ಆರೋಪಿಗಳ ಬಂಧನ
ಕಾಸರಗೋಡಿನಲ್ಲಿ ಬಂಧನ
ಕಾಸರಗೋಡಿನಲ್ಲಿ ಈ ಇಬ್ಬರನ್ನು ಬಂಧಿಸಲಾಗಿದ ಎಂದು ದಕ್ಷಿಣ ಕನ್ನಡ ಎಸ್‌ಪಿ ರಿಷಿಕೇಶ್ ಹೇಳಿದ್ದಾರೆ. ಈ ಇಬ್ಬರೇ ಮಾಸ್ಟರ್ ಮೈಂಡ್‌ಗಳು ಎನ್ನಲಾಗಿದ್ದು, ಇವರ ನಿರ್ದೇಶನದ ಮೇರೆಗೆ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಬಂಧಿತ ಇಬ್ಬರೂ ಆರೋಪಿಗಳು ಬೆಳ್ಳಾರೆ ಹಾಗೂ ಸವಣೂರಿನವರು ಎಂದು ಗೊತ್ತಾಗಿದೆ. ಆದ್ರೆ ಕೊಲೆ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಬಂಧಿಸಲಾಗಿರುವ ಇಬ್ಬರು ಆರೋಪಿಗಳು ಅಪರಾಧಿ ಹಿನ್ನೆಲೆಯವರಾಗಿದ್ದಾರೆ ಎಂದು ತಿಳಿದುಬಂದಿವೆ.
ಇನ್ನು ಈ ಬಗ್ಗೆ ಮಾತನಾಡಿರುವ ಎಡಿಜಿಪಿ ಅಲೋಕ್ ಕುಮಾರ್, ಇದುವರೆಗೆ 21 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಬೇರೆ ಬೇರೆ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ. ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರವೀಣ್ ನಿವಾಸಕ್ಕೆ ರಾಜಕೀಯ ನಾಯಕರ ದಂಡು
ಹೌದು....ಹತ್ಯೆಯಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇಂದು(ಗುರುವಾರ) ರಾಜಕೀಯ ನಾಯಕರ ದಂಡು ಹರಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಬಿವೈ ವಿಜಯೇಂದ್ರ ಸೇರಿದಂತೆ ಇತರೆ ಬಿಜೆಪಿ ನಾಯಕರು ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಇನ್ನು ಕಾಂಗ್ರೆಸ್‌ನಿಂದ ಮಾಜಿ ಶಾಸಕ ಐವನ್ ಡಿ ಸೋಜರವರ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ, ಮೃತರ ಪತ್ನಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆ.
ಮನೆ ನಿರ್ಮಾಣವಾಗಬೇಕಿದ್ದ ಸ್ಥಳದಲ್ಲೇ ಮಗನ ಅಂತ್ಯಸಂಸ್ಕಾರ:
ಬೆಳ್ಳಾರೆ ಸಮೀಪದ ನೆಟ್ಟಾರಿನ ಶೇಖರ ಪೂಜಾರಿ ಮತ್ತು ದಂಪತಿಯ ನಾಲ್ವರು ಮಕ್ಕಳಲ್ಲಿ ಕಿರಿಯವನಾದ ಪ್ರವೀಣ್ ಮನೆಗೆ ಆಧಾರಸ್ತಂಭವಾಗಬೇಕಿದ್ದ ಯುವಕ. ನಾಲ್ವರು ಮಕ್ಕಳ ಪೈಕಿ ಬಾಕಿ ಮೂವರೂ ಅಕ್ಕಂದಿರು, ಪ್ರವೀಣ್ ಏಕಮಾತ್ರ ಪುತ್ರರಾಗಿದ್ದರು.
ಪ್ರವೀಣ್ ವಿದ್ಯಾಭ್ಯಾಸದ ಬಳಿಕ ಬೇರೆ ಕಡೆ ಉದ್ಯೋಗ ಮಾಡಿಕೊಂಡಿದ್ದು, ಬಳಿಕ ಚಿಕನ್ ಫಾರ್ಮೊಂದರಲ್ಲಿ ಮ್ಯಾನೇಜರ್ ಆಗಿದ್ದರು. ಕೆಲವು ಸಮಯದ ಹಿಂದಷ್ಟೇ ಅಕ್ಷಯ ಚಿಕನ್ ಫಾಮ್‌ರ್ ಎಂಬ ಸ್ವಂತ ಉದ್ಯಮವನ್ನು ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಸ್ಥಾಪಿಸಿದ್ದರು. ಇದರ ಜೊತೆಗೆ ಇನ್ನೋವಾ ಇಟ್ಟುಕೊಂಡು ಟ್ರಾವೆಲ್ಸ್ ಕೂಡಾ ನಡೆಸುತ್ತಿದ್ದರು.
ರಾಜಕೀಯ ಪಕ್ಷ ಹಾಗೂ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರೂ ಪರಿಸರದ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ ಪ್ರವೀಣ್ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಸಮಾಜದ ಬೇರೆ ಬೇರೆ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ಬಿಲ್ಲವ ಯುವ ವಾಹಿನಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ನಾಲ್ಕು ವರ್ಷಗಳ ಹಿಂದೆ ನೆಟ್ಟಾರಿನ ತಮ್ಮ ಮನೆಯ ಸಮೀಪವೇ ಹೊಸ ಮನೆ ಕಟ್ಟಲು ಮಣ್ಣು ಸಮತಟ್ಟು ಮಾಡಲಾಗಿತ್ತು. ಆದರೆ ಮನೆ ಕಟ್ಟುವ ಕಾರ್ಯ ಕೂಡಿ ಬರಲಿಲ್ಲ. ಮದುವೆಯ ಸಂಬಂಧ ಕೂಡಿ ಬಂತು. ಹೀಗಾಗಿ ಹಳೆಯ ಮನೆಯನ್ನೇ ರಿಪೇರಿ ಮಾಡಿಸಿ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಹೊಸ ಮನೆಗೆಂದು ಸಮತಟ್ಟು ಮಾಡಿದ ಜಾಗದಲ್ಲಿ ಬುಧವಾರ ಪ್ರವೀಣ್ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸುವಂತಾಯಿತು.