ಗುಂಡಿನ ದಾಳಿ ನಡೆಸಿ ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿ ಕೊಲೆ| ಕಲಬುರಗಿ ನಗರದ ಗೋದುತಾಯಿ ಕಾಲೋನಿಯಲ್ಲಿ ನಡೆದ ಘಟನೆ| ಕೊಲೆಯಾದ ಸುನೀಲ್ ಮಳೆ ಬರುವ ಹೊತ್ತಲ್ಲೇ ತಮ್ಮ ಮನೆಯ ಕಾಂಪೌಂಡ್‌ನೊಳಗೆ ಇದ್ದರು. ಇದೇ ಅವಕಾಶಕ್ಕಾಗಿ ಕಾದಂತಿದ್ದ ಸ್ಕೂಟಿ ಹತ್ತಿ ಬಂದ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿ|
ಕಲಬುರಗಿ(ಆ.29): ಗುಂಡಿನ ದಾಳಿ ನಡೆಸಿ ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿ ಸುನೀಲ ರಂಕಾ (41) ಬರ್ಬರ ಹತ್ಯೆ ಮಾಡಿರುವ ಪ್ರಕರಣ ಗೋದುತಾಯಿ ಕಾಲೋನಿಯಲ್ಲಿ ಭಯದ ವಾತಾವರಣ ಹುಟ್ಟು ಹಾಕಿದೆ.
ಈ ಕಾಲೋನಿಯ ಶಿವ ಮಂದರದ ಪಕ್ಕದ ಮನೆಯಲ್ಲೇ ವಾಸವಿದ್ದ ಸುನೀಲ್ ಮಳೆ ಬರುವ ಹೊತ್ತಲ್ಲೇ ತಮ್ಮ ಮನೆಯ ಕಾಂಪೌಂಡ್‌ನೊಳಗೆ ಇದ್ದರು. ಇದೇ ಅವಕಾಶಕ್ಕಾಗಿ ಕಾದಂತಿದ್ದ ಸ್ಕೂಟಿ ಹತ್ತಿ ಬಂದ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಮಳಿಯೊಳಗ ಢಮಾರ್ ಎಂಬ ಸದ್ದು ಕೇಳಿ ಬಂತು, ಮಳೆ- ಗಾಳಿ ಇದ್ದಾಗ ಜೆಸ್ಕಾಂ ಟೀಸಿಗಳು ಸುಟ್ಟು ಹೋಗೋದು, ಈ ರೀತಿ ಸದ್ದು ಮಾಡೋದು ಸಾಮಾನ್ಯ, ಅದೇ ಇರಬೇಕು ಅಂತ ನಾವು ಸುಮ್ಮನಿದ್ವಿ ಎಂದು ಬಡಾವಣೆಯ ದಿನಸಿ ಮಳಿಗೆ ಮಾಲೀಕರು, ಔಷಧಿ ಅಂಗಡಿಯವರು, ಶಿವ ಮಂದಿರ ಆಸುಪಾಸಿನ ಮನೆಮಂದಿ ಹೇಳುತ್ತಿದ್ದಾರೆ.
ಡ್ರಗ್ ಮಾಫಿಯಾ ಕಿತ್ತೆಸೆಯಲು ನಮ್ಮ ಸರ್ಕಾರ ಬದ್ಧ: ಕಟೀಲ್
ಸಂಭಾವಿತ ಉದ್ಯಮಿ ಸುನೀಲ್ ರಾಂಕಾ:
ಸುನೀಲ್ ರಾಂಕಾ ರಾಜಸ್ಥಾನ ಮೂಲದವರಾದರೂ ಕಲಬುರಗಿಗೆ ಬಂದು ಎರಡೂವರೆ ದಶಕಗಳೇ ಕಳೆದಿದ್ದವು. ಇಲ್ಲಿನ ಭವಾನಿ ಮಂದಿರದ ಹಿಂಭಾಗ, ಜೇವರ್ಗಿ ಕ್ರಾಸ್‌ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲೇ ಟೈಲ್ಸ್ ವಹಿವಾಟಿನ ಮಳಿಗೆ ಇತ್ತು. ತಾವಾಯ್ತು, ತಮ್ಮ ಉದ್ಯಮ, ವ್ಯವಹಾರವಾಯ್ತು ಎಂದು ಇದ್ದವರು ರಾಂಕಾ. ಅವರಿಗೆ ಯಾಕೆ ದುಷ್ಕರ್ಮಿಗಳು ಹೀಗೆ ಗುಂಡಿಟ್ಟು ಕೊಂದರೋ? ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.
ಕೊರೋನಾ ಲಾಕ್ಡೌನ್‌ನಿಂದ ಇವರ ಉದ್ಯಮವೂ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಅದೇನಾದರೂ ಹಣಕಾಸು ವ್ಯವಹಾರ, ಕೊಡುಕೊಳ್ಳುವ ವ್ಯವಹಾರ ಉಲ್ಬಣಕ್ಕೆ ಹೋಗಿ ಈ ರೀತಿ ಕೊಲೆಯಲ್ಲಿ ಅಂತ್ಯ ಕಂಡಿತೆ? ಸುನೀಲರಿಗೆ ಇನ್ನಾವುದೇ ಉದ್ದೇಶದಿಂದ ಕೊಲೆ ಮಾಡಲಾಗಿದೆಯೆ? ಲಾಭಕ್ಕಾಗಿ ಇವರ®ನ್ನು ಹತ್ಯೆ ಮಾಡಲಾಯ್ತೆ? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಪೊಲೀಸರು ತನಿಖೆ ಶುರುಮಾಡಿದ್ದಾರೆ.
ಗೋದುತಾಯಿ ನಗರ ಶಾಂತಿಯ ಬಡಾವಣೆ, ಇಲ್ಲಿ ಹೀಗಾಗಿದ್ದು ನಮಗೂ ನೋವು ತಂದಿದೆ. ಸುನೀಲ ರಂಕಾ ಶಿಸ್ತಿನ ಉದ್ಯಮಿ, ನಿತ್ಯ ವಾಯುವಿಹಾರದಲ್ಲಿ ಭೇಟಿ ಯಾಗುತ್ತಿದ್ದರು. ಕೊಲೆಗೆ ಕಾರಣ ಪೊಲೀಸರ ತನಿಖೆಯೇ ಬಹಿರಂಗಪಡಿಸಬೇಕಷ್ಟೆ ಎಂದು ಕಲಬುರಗಿ ನಗರದ ಶರಣಬಸವೇಶ್ವರ ಸಂಸ್ಥಾನ ಲಿಂಗರಾಜಪ್ಪ ಅಪ್ಪ ಅವರು ತಿಳಿಸಿದ್ದಾರೆ.
ಗೋದುತಾಯಿ ಕಾಲೋನಿಯಲ್ಲಿನ ಕೊಲೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಬೇಕು, ಕಾಲನಿಯಲ್ಲಿ ಮೂಡಿರುವ ಭಯದ ವಾತಾವರಣ ಹೋಗಲಾಡಿಸಲು ಸೂಕ್ತ ಗಸ್ತು ವ್ಯವಸ್ಥೆ ಮಾಡುವಂತೆ ಗೃಹ ಇಲಾಖೆ ಕಾರ್ಯದರ್ಶಿ ರೂಪಾ ಮೌದ್ಗೀಲ್ ಅವರಿಗೆ ಮನವಿ ಮಾಡಲಾಗಿದೆ. ಬಡಾವಣೆಯಲ್ಲಿ ಆಗಂತುಕರ ಹಾವಳಿ ಹೆಚ್ಚಾಗಿದ್ದಾಗ ಪೊಲೀಸ್ ಗಸ್ತು ಇತ್ತು. ಈಚೆಗೆ ಇದು ಸಡಿಲವಾಗಿತ್ತು. ಇನ್ನಾದರೂ ಪೊಲೀಸ್ ಗಸ್ತು ಚುರುಕಾಗಲಿ ಎಂದು ಗೋದುತಾಯಿ ಕಾಲೋನಿ ನಿವಾಸಿ ಸಿದ್ದರಾಮಯ್ಯ ಹಿರೇಮಠ ಅವರು ಹೇಳಿದ್ದಾರೆ.