ಕೆಲಸವಿಲ್ಲದೆ ಡ್ರಗ್ಸ್ ಮಾರಾಟಕ್ಕಿಳಿದರೇ ನಿರುದ್ಯೋಗಿಗಳು?| ಕೊರೋನಾದಿಂದ ಎಲ್ಲ ಉದ್ಯಮ ನೆಲಕಚ್ಚಿದ್ದರೆ ಮಾದಕ ಲೋಕದಲ್ಲಿ ಸುಗ್ಗಿ| ಲಾಕ್‌ಡೌನ್ ಬಳಿಕ ಹಣದಾಸೆಗೆ ಡ್ರಗ್ಸ್ ದಂಧೆ ಶುರು| ಬಟ್ಟೆ ವ್ಯಾಪಾರಿ ಈಗ ಪೆಡ್ಲರ್|
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಅ.09): ಕೊರೋನಾ ಹಾವಳಿಗೆ ಎಲ್ಲ ಉದ್ಯಮಗಳು ಥರಗುಟ್ಟಿ ಹೋಗಿದ್ದರೆ ಮಾದಕ ಜಗತ್ತು ಮಾತ್ರ ನಳನಳಿಸುತ್ತಿದೆ. ಇದಕ್ಕೆ ಕಾರಣ ಕೊರೋನಾ ಶುರುವಾದ ಬಳಿಕ ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಹೊಸಬರ ಪ್ರವೇಶ ದೊಡ್ಡ ಮಟ್ಟದಲ್ಲಿ ನಡೆದಿರುವುದು.
ಇಂತಹದ್ದೊಂದು ಆತಂಕಕಾರಿ ಸಂಗತಿ ಇತ್ತೀಚೆಗೆ ಡ್ರಗ್ಸ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಗೋಚರಿಸಿದೆ. ಕೊರೋನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೆಲವರು ಮಾದಕ ಲೋಕದಲ್ಲಿ ಉದ್ಯೋಗ ಅರಸಿದ್ದಾರೆ. ಹೀಗೆ ದುಡಿಮೆ ಬಯಸಿ ಬಂದವರನ್ನು ಡ್ರಗ್ಸ್ ಮಾಫಿಯಾ ಜಾಲ ಸ್ವಾಗತಿಸಿದೆ. ಆದರೆ ಕೊರೋನಾ ಕಾಲದಲ್ಲಿ ಡ್ರಗ್ಸ್ ಮಾಫಿಯಾದ ವೃದ್ಧಿಗೆ ಉದ್ಯೋಗ ನಷ್ಟವೂ ಸಹ ಒಂದು ಪ್ರಮುಖ ಕಾರಣವಾಗಿದೆ ಎಂದು ನೇರವಾಗಿ ಒಪ್ಪಿಕೊಳ್ಳದ ಪೊಲೀಸರು, ಹಣದಾಸೆಗೆ ಕೃತ್ಯಕ್ಕೆ ಸಹಕರಿಸಿರಬಹುದು ಎಂದು ಶಂಕಿಸುತ್ತಾರೆ. ಆದಾಗ್ಯೂ ಈಗ ಡ್ರಗ್ಸ್ ಕೇಸ್‌ನಲ್ಲಿ ಬಂಧಿತರಾಗುತ್ತಿರುವವರ ಪೈಕಿ ಬಹುತೇಕರು ಹೊಸಬರು ಎಂಬುದು ಗಮನಾರ್ಹ ಸಂಗತಿಯಾಗಿದೆ.
9 ತಿಂಗಳಲ್ಲೇ ದಾಖಲೆ ಪ್ರಕರಣ:
ನಾಲ್ಕು ವರ್ಷಗಳಲ್ಲಿ ಮಾದಕ ವಸ್ತು ಮಾರಾಟ ಜಾಲ ಸಂಬಂಧ ವಾರ್ಷಿಕ ಸುಮಾರು 1000-1500 ಗಡಿಯಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದವು. ಒಂದೂವರೆ ಸಾವಿರ ಪೆಡ್ಲರ್‌ಗಳು ಜೈಲು ಸೇರುತ್ತಿದ್ದರು. ಆದರೆ ಪ್ರಸ್ತಕ ವರ್ಷದ ಒಂಭತ್ತು ತಿಂಗಳಲ್ಲೇ ರಾಜ್ಯವ್ಯಾಪಿ 2,589 ಪ್ರಕರಣಗಳು ವರದಿಯಾಗಿದ್ದು, 2,865 ಪೆಡ್ಲರ್‌ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲೇ 2587 ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಸುಮಾರು .7 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. 2014 ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ. ಈ ಡ್ರಗ್ಸ್ ಜಾಲದ ಪ್ರಗತಿಗೆ ಕಾರಣವೇನು? ಪೊಲೀಸರ ಕಾರ್ಯಾಚರಣೆ ಪರಿಣಾಮಕಾರಿಯಾಗಿದೆ ಎನ್ನಬಹುದು. ಆದರೆ ಬಂಧಿತರ ಪೈಕಿ ಮೊದಲ ಬಾರಿಗೆ ಸೆರೆಯಾದವರೇಕೆ ಹೆಚ್ಚು ಎಂಬ ಪ್ರಶ್ನೆಗಳು ಮೂಡುತ್ತವೆ.
ಮಾದಕ ವಸ್ತು ಮಾರಾಟ ದಂಧೆ: ಇಬ್ಬರು ಪೆಡ್ಲರ್‌ಗಳ ಸೆರೆ, 32 ಕೆಜಿ ಗಾಂಜಾ ವಶ
ಹೋಟೆಲ್, ಗಾರ್ಮೆಂಟ್ಸ್, ಐಟಿ-ಬಿಟಿ ಹೀಗೆ ಎಲ್ಲ ಸ್ತರದ ಉದ್ಯೋಗಸ್ಥರು ಕೊರೋನಾ ಬಳಿಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಸಂಕಟದ ಲಾಭ ಪಡೆದ ಡ್ರಗ್ಸ್ ಮಾಫಿಯಾ ಜಾಲವು ಹಣದಾಸೆ ತೋರಿಸಿ ಹೊಸಬರವನ್ನು ಸಂಘಟನೆಗೆ ನೇಮಿಸಿಕೊಳ್ಳಲಾರಂಭಿಸಿದೆ. ಒಂದು ಕೆ.ಜಿ. ಮಾರಾಟ ಮಾಡಿದರೆ ಸಾವಿರಾರು ರುಪಾಯಿ ಸಿಗಲಿದೆ ಎಂದು ಆಮಿಷವೊಡ್ಡಿ ತಮ್ಮ ಕಡೆಗೆ ಸೆಳೆಯುತ್ತಿದ್ದಾರೆ ಎಂದು ಹೆಸರು ಹೇಳಬಯಸದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿದಂತೆ ಹೊರ ರಾಜ್ಯಗಳಿಂದ ಗಾಂಜಾ ಹೆಚ್ಚು ಪ್ರಮಾಣದಲ್ಲಿ ಕರ್ನಾಟಕಕ್ಕೆ ಬರುತ್ತದೆ. ಈ ಗಾಂಜಾ ಸಾಗಾಣಿಕೆಯಲ್ಲಿ ಹೊಸಬರನ್ನು ಮಾರಾಟ ದಂಧೆಕೋರರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಬಂಧಿತ ಹೊಸ ಆರೋಪಿಗಳ ಪೈಕಿ ವ್ಯಸನಿಗಳು ಕೂಡಾ ಇದ್ದಾರೆ. ಆಂಧ್ರಪ್ರದೇಶದಲ್ಲಿ ಕೆ.ಜಿ. ಗಾಂಜಾಗೆ .20 ಸಾವಿರ ನೀಡಿ ಖರೀದಿಸುವ ದಂಧೆಕೋರರು, ಬೆಂಗಳೂರು ಸೇರಿದಂತೆ ರಾಜ್ಯದ ಇತೆರೆಡೆ .50ರಿಂದ .60 ಸಾವಿರಕ್ಕೆ ಮಾರುತ್ತಾರೆ. ಹೀಗೆ ಸುಲಭವಾಗಿ ಹಣ ಸಂಪಾದಿಸುವ ಆಕರ್ಷಣೀಯ ಉದ್ಯಮವಾಗಿ ಡ್ರಗ್ಸ್ ದಂಧೆ ಕಾಣುತ್ತಿದೆ ಎಂದು ಪೊಲೀಸರು ಆಂತಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಿಕ್ಕಿಬಿದ್ದ ಕೆಲ ಡ್ರಗ್ಸ್ ದಂಧೆಕೋರರು
ಬಟ್ಟೆ ವ್ಯಾಪಾರಿ ಈಗ ಪೆಡ್ಲರ್
ಕಲಬುರಗಿ ಜಿಲ್ಲೆಯಲ್ಲಿ ಶೇಷಾದ್ರಿಪುರ ಪೊಲೀಸರು ಗಾಂಜಾ ಗೋದಾಮು ಮೇಲೆ ದಾಳಿ ನಡೆಸಿ 1.3 ಟನ್ ಗಾಂಜಾ ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲಿ ಬಂಧಿತನಾದ ಆರೋಪಿ ನಾಗನಾಥ್ ಬಟ್ಟೆಅಂಗಡಿ ಇಟ್ಟಿದ್ದ. ಲಾಕ್‌ಡೌನ್ ವೇಳೆ ಹಣಕಾಸು ನಷ್ಟವು ಆತನ್ನು ಮಾದಕ ಜಾಲಕ್ಕೆ ತಳ್ಳಿತು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.
ಪೆಡ್ಲರ್ ಆದ ಐಟಿ ಉದ್ಯೋಗಿ
ಬೆಂಗಳೂರಿನ ಪೀಣ್ಯ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಐಟಿ ಉದ್ಯೋಗಿ ಒಡಿಶಾ ಮೂಲದ ತುಷಾರ್ ಪಟ್ನಾಯಕ್ ಪೊಲೀಸರ ಬಲೆಗೆ ಬಿದ್ದಿದ್ದ. ಎಂಬಿಎ ಮುಗಿಸಿದ ನಂತರ ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ತುಷಾರ್, ಲಾಕ್‌ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ. ಮಾಲೂರು ಮೂಲದ ಪರಿಚಯಸ್ಥ ವ್ಯಕ್ತಿಯೊಬ್ಬನಿಂದ ಗಾಂಜಾ ಖರೀದಿಸಿ ತುಷಾರ್, ಆಟೋಚಾಲಕ ಹಬೀಬ್ ಖಾನ್ ಮೂಲಕ ನಗರದಲ್ಲಿ ಬಿಕರಿ ಮಾಡುತ್ತಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ದಂಧೆಗೆ ಇಳಿದ ಹೋಟೆಲ್ ನೌಕರರು
ಬೆಂಗಳೂರಿನ ಜಾಲಹಳ್ಳಿ ಸಮೀಪ ಹಶೀಶ್ ಮಾರುವ ವೇಳೆ ಪೊಲೀಸರ ಗಾಳಕ್ಕೆ ಕೇರಳದ ಲೂಬಿನ್ ಅಮಲ್ ಹಾಗೂ ವಿವೇಕ್ ಬಿದ್ದಿದ್ದರು. ಹೋಟೆಲ್‌ನಲ್ಲಿ ಅಮಲ್ ಕೆಲಸಗಾರನಾಗಿದ್ದರೆ, ವಿವೇಕ್ ನಿರುದ್ಯೋಗಿಯಾಗಿದ್ದ. ಲಾಕ್‌ಡೌನ್ ಬಳಿಕ ಹಣದಾಸೆಗೆ ಡ್ರಗ್ಸ್ ದಂಧೆ ಶುರು ಮಾಡಿದ್ದರು. ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಬಳಿಕ ಸ್ಟೀಲ್ ಡಬ್ಬಿಗಳಲ್ಲಿ 10 ಗ್ರಾಂ ತುಂಬಿ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಟೋ ಚಾಲಕನ ಡ್ರಗ್ಸ್ ದಂಧೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆಗೆ ಸಿಲುಕಿದ ಆಟೋ ಚಾಲಕ ಶಬ್ಬೀರ್ ಖಾನ್ ಡ್ರಗ್ಸ್ ದಂಧೆಗಿಳಿದು ಈಗ ಸಂಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತನ್ನ ಸ್ನೇಹಿತ ವಿಶಾಖಪಟ್ಟಣದ ಭೀಮಣ್ಣ ಮೂಲಕ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತರುತ್ತಿದ್ದ ಖಾನ್, ಬಳಿಕ ನಗರದಲ್ಲಿ ದುಬಾರಿ ಬೆಲೆಗೆ ಗಾಂಜಾ ಮಾರಾಟ ಮಾಡುತ್ತಿದ್ದ.
ಮಾದಕ ವಸ್ತು ಮಾರಾಟ ಜಾಲದ ಬೆಳವಣಿಗೆಗೆ ಕೊರೋನಾ ಕಾರಣವಾಗಿದೆ ಎನ್ನುವುದಕ್ಕೆ ಆಗುವುದಿಲ್ಲ. ಕ್ರಿಮಿನಲ್ ಟೆಂಡೆನ್ಸಿಯಿಂದಲೇ ದಂಧೆಯಲ್ಲಿ ಜನರು ಪಾಲ್ಗೊಂಡಿದ್ದಾರೆ. ಕೊರೋನಾ ವೇಳೆ ಕೆಲವರು ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ದಂಧೆಯಲ್ಲಿ ನಿರತರಾಗಿರಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.
4 ವರ್ಷ ಡ್ರಗ್ಸ್ ಪ್ರಕರಣಗಳ ವಿವರ
ವರ್ಷ ಪ್ರಕರಣಗಳು ಬಂಧಿತರು
2017 1,126 1,604
2018 1,032 1,470
2019 1,661 2,263
2020 (ಸೆ.15) 2,589 2,865