ಮಹಾರಾಷ್ಟ್ರದಲ್ಲಿ ಸಾಧುಗಳ ಹತ್ಯೆ/ ತಿಂಗಳುಗಳ ನಂತರ ಒಂದು ಕ್ರಮ ತೆಗೆದುಕೊಂಡ ಪೊಲೀಸ್ ಇಲಾಖೆ/ ಒಬ್ಬರಿಗೆ ಅಮಾನತು ಶಿಕ್ಷೆ/ ಇನ್ನಿಬ್ಬರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ
ಮುಂಬೈ(ಆ. 31) ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸಾಮೂಹಿಕ ಥಳಿತದಿಂದಾಗಿ ಸಾಧುಗಳು ಜೀವ ಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ತಿಂಗಳುಗಳ ನಂತರ ಕ್ರಮವೊಂದನ್ನು ತೆಗೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಒಬ್ಬರು ಪೊಲೀಸ್ ಅಧಿಕಾರಿ ಅಮಾನತು ಮಾಡಲಾಗಿದ್ದು ಇಬ್ಬರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಿ ಎಂದು ಸೂಚನೆ ನೀಡಲಾಗಿದೆ.
ಈ ವರ್ಷದದ ಏಪ್ರಿಲ್ 16 ಕರಾಳ ರಾತ್ರಿ ಸಾಧುಗಳ ಮೇಲೆ ಗುಂಪು ದಾಳಿ ಮಾಡಿತ್ತು. ಸಾಧುಗಳ ಮೇಲೆ 2,000ಕ್ಕೂ ಅಧಿಕ ಜನರು ಸೇರಿ ಹಲ್ಲೆ ನಡೆಸಿದ್ದರು. ಮುಂಬೈನಿಂದ ಗುಜರಾತ್‌ಗೆ ತೆರಳುತ್ತಿದ್ದ ಸಾಧುಗಳಾದ ಕಲ್ಪವೃಕ್ಷ ಗಿರಿ ಮಹಾರಾಜ್ (70), ಸುಶೀಲ್ ಗಿರಿ ಮಹಾರಾಜ್ (35) ಮತ್ತು ವಾಹನ ಚಾಲಕ ನಿಲೇಶ್ ತೆಲಗಡೆ ಅವರನ್ನು ಪಾಲ್ಘರ್ ಜಿಲ್ಲೆಯ ಗಡ್‌ಚಿಂಚ್ಲೆ ಗ್ರಾಮದ ಬಳಿ ಮಕ್ಕಳ ಕಳ್ಳರೆಂದು ಭಾವಿಸಿ ಜನರು ಸಾಮೂಹಿವಾಗಿ ಥಳಿಸಿ ಹತ್ಯಗೈದಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಘಟನೆ ನಡೆದು ಹೋಗಿತ್ತು.
ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗಿದ್ದು ಅಸಿಸ್ಟಂಟ್ ಪೊಲೀಸ್ ಇನ್ಸ್ ಪೆಕ್ಟರ್ ಆನಂದ್ ರಾವ್ ಕಾಳೆಯನ್ನು ಅಮಾನತು ಮಾಡಲಾಗಿದೆ. ಅಸಿಸ್ಟಂಟ್ ಪೊಲೀಸ್ ಇನ್ಸ್ ಪೆಕ್ಟರ್ ರವಿ ಸಾಳುಂಖೆ ಮತ್ತು ಕಾನ್ಸ್ ಸ್ಟೇಬಲ್ ನರೇಶ್ ದೋಢಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಿ ಎಂದು ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಚಿನ್ ನಾವಡ್ ಕರ್ ತಿಳಿಸಿದ್ದಾರೆ.
ಆನಂದ್ ರಾವ್ ಕಾಳೆ ಪಾಲ್ಘರ್ ನ ಕಾಸಾ ಪೊಲೀಸ್ ಠಾಣೆಯ ಜವಾಬಗ್ದಾರಿ ಹೊತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಹದಿನೈದು ಹೆಚ್ಚು ಜನರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಇಲ್ಲಿಯವರೆಗೆ 154 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 11 ಜನರು ಉದ್ದೇಶಪೂರ್ವಕವಾಗಿ ಗಲಭೆ ಮಾಡಿದ್ದಾರೆ ಎನ್ನುವುದಕ್ಕೂ ಸಾಕ್ಷ್ಯ ಸಿಕ್ಕಿದೆ. ಪ್ರಕರಣ ಮಹಾರಾಷ್ಟ್ರ ಸಿಐಡಿ ವ್ಯಾಪ್ತಿಯಲ್ಲಿ ಇದೆ. ಸಿಬಿಐ ತನಿಖೆಗೆ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.