ಹತ್ರಾಸ್ ಅತ್ಯಾಚಾರ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ/ ಮಧ್ಯಪ್ರದೇಶದಿಂದ ಕರಾಳ ಘಟನೆ ವರದಿ/ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಹರಿಬಿಟ್ಟ ದುರುಳರು/ ಗ್ರಾಮದ ವಾಟ್ಸಪ್ ಗ್ರೂಪ್ ನಲ್ಲಿ ಬಾಲಕಿ ಅತ್ಯಾಚಾರದ ವಿಡಿಯೋ
ಭೋಪಾಲ್(ಅ. 04) ದೇಶದಲ್ಲಿ ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರದ ವಿರುದ್ಧ ದನಿಗಳು ಗಟ್ಟಿಯಾಗುತ್ತಲೆ ಇವೆ. ಆದರೆ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಒಂದಾದ ಮೇಲೆ ಒಂದು ವರದಿಯಾಗುತ್ತಿರುವುದು ದುರ್ದೈವ.
ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಡಲಾಗಿದೆ. ವೀಡಿಯೊ ಬೆಳಕಿಗೆ ಬಂದ ನಂತರ, ಸ್ಥಳೀಯ ಪೊಲೀಸರು ವೀಡಿಯೋ ಹಂಚಿಕೊಂಡಿದ್ದ 25 ಜನರನ್ನು ವಶಕ್ಕೆ ಪಡೆದಿದ್ದಾರೆ.
ರೇಪ್; ರಿಪೋರ್ಟ್ ಕಾರ್ಡ್ ಬಿಚ್ಚಿಟ್ಟ ಉತ್ತರ ಪ್ರದೇಶದ ಭಯಂಕರ ಸತ್ಯ
ಪ್ರಕರಣದ ಪ್ರಮುಖ ಆರೋಪಿ ಅರುಣ್ ಪಟೇಲ್ ಮತ್ತು ಅಶ್ಲೀಲ ಕೃತ್ಯವನ್ನು ಚಿತ್ರೀಕರಿಸಿದ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 22 ರಂದೇ ಘಟನೆ ನಡೆದಿದ್ದು ವಿಡಿಯೋ ಇಟ್ಟುಕೊಂಡು ಇಬ್ಬರು ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.
ಅಶ್ಲೀಲ ಕೃತ್ಯದ ವಿಡಿಯೋವನ್ನು ಗ್ರಾಮದ ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಡಿಯೋ ಡಿಲೀಟ್ ಮಾಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.