ಅಡುಗೆ ಮಾಡುವ ವಿಚಾರಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ ಅಪ್ರಾಪ್ತನ ಬಂಧನ

By Kannadaprabha News  |  First Published Nov 5, 2022, 11:00 AM IST

ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ,  ಬಿಹಾರ ಮೂಲದ ಅಪ್ರಾಪ್ತ ಬಾಲಕನ ಬಂಧನ


ಬೆಂಗಳೂರು(ನ.05):  ಇತ್ತೀಚೆಗೆ ಅಡುಗೆ ಮಾಡುವ ವಿಚಾರಕ್ಕೆ ನಡೆದ ಜಗಳದ ವೇಳೆ ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಅಪ್ರಾಪ್ತ ಬಾಲಕ ಬಂಧಿತನಾಗಿದ್ದು, ಕಾನೂನಿನ ಅನ್ವಯ ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಅ.21ರಂದು ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಬಿಹಾರ ಮೂಲದ ಮುಖೇಶ್‌(27) ಎಂಬಾತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಮುಖೇಶ್‌ ಹಾಗೂ ಆರೋಪಿ ಅಪ್ರಾಪ್ತ ಬಾಲಕ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್‌ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದರು. ಅ.21ರಂದು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದ ಮುಖೇಶ್‌ ಮದ್ಯ ಸೇವಿಸಿದ್ದ. ಈ ವೇಳೆ ಅಡುಗೆ ಮಾಡುವಂತೆ ಅಪ್ರಾಪ್ತ ಬಾಲಕನಿಗೆ ಹೇಳಿದ್ದಾನೆ. ಈ ವೇಳೆ ಅಪ್ರಾಪ್ತ ಅನಾರೋಗ್ಯದ ಹಿನ್ನೆಲೆಯಲ್ಲಿ ಅಡುಗೆ ಮಾಡಲು ಆಗುವುದಿಲ್ಲ ಎಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಬಳಿಕ ಮುಖೇಶ್‌ ತಾನೇ ಅಡುಗೆ ಮಾಡಿ ಊಟ ಮಾಡಿದ್ದಾನೆ. ಅಪ್ರಾಪ್ತ ಬಾಲಕ ಊಟ ಮಾಡಲು ಮುಂದಾದಾಗ, ಮುಖೇಶ್‌ ಊಟ ಸೇವಿಸದಂತೆ ಬೈದಿದ್ದಾನೆ.

Tap to resize

Latest Videos

ಕುಡಿದ ಅಮಲಿನಲ್ಲಿ ಯುವಕನ ಕೈ ಕತ್ತರಿಸಿ ದುಷ್ಕರ್ಮಿಗಳ ಪುಂಡಾಟಿಕೆ: ಓರ್ವನ ಬಂಧನ

ಮುಖೇಶ್‌ನ ಮಾತಿನಿಂದ ಕೋಪಗೊಂಡ ಅಪ್ರಾಪ್ತ ಬಾಲಕ ದೊಣ್ಣೆ ತೆಗೆದುಕೊಂಡು ಮುಖೇಶ್‌ನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಕುಸಿದು ಬಿದ್ದ ಮುಖೇಶ್‌ನ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಹೆದರಿದ ಅಪ್ರಾಪ್ತ ಬಾಲಕ ಪರಾರಿಯಾಗಿದ್ದ. ಅ.22ರಂದು ಬೆಳಗ್ಗೆ ಹತ್ಯೆ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಿಹಾರದಲ್ಲಿ ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!