ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?

By Govindaraj SFirst Published Mar 15, 2023, 11:01 PM IST
Highlights

ಸರಿಯಾಗಿ ಪ್ರಪಂಚದ ಅರಿವೇ ಇಲ್ಲದ ಆ ಯುವತಿ ಕಾಲೇಜಿಗೆ ಹೋಗುತ್ತಿರುವಾಗಲೇ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದಳು. ಬದುಕಿನಲ್ಲಿ ಏನೇನೋ ನೂರಾರು ಕನಸ್ಸುಗಳ ಹೊತ್ತು ಮೂರು ವರ್ಷದಿಂದ ಪ್ರೀತಿಸಿದವನ ಕೈಹಿಡಿದಿದ್ದಳು. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.15): ಸರಿಯಾಗಿ ಪ್ರಪಂಚದ ಅರಿವೇ ಇಲ್ಲದ ಆ ಯುವತಿ ಕಾಲೇಜಿಗೆ ಹೋಗುತ್ತಿರುವಾಗಲೇ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದಳು. ಬದುಕಿನಲ್ಲಿ ಏನೇನೋ ನೂರಾರು ಕನಸ್ಸುಗಳ ಹೊತ್ತು ಮೂರು ವರ್ಷದಿಂದ ಪ್ರೀತಿಸಿದವನ ಕೈಹಿಡಿದಿದ್ದಳು. ಆ ಕನಸ್ಸುಗಳು ನನಸುಗಳಾಗಿ ಬಿಚ್ಚುಕೊಳ್ಳುವ ಮೊದಲೇ ಆಕೆ ಉಸಿರು ನಿಲ್ಲಿಸಿದ್ದಾಳೆ. ಆಕೆ ಮೇಲ್ವರ್ಗದ ಯುವಕನನ್ನು ವರಿಸಿದ್ದೇ ದಾರುಣ ಸಾವಿಗೆ ಕಾರಣವಾಗಿರುವ ಆರೋಪ ಕೇಳಿ ಬಂದಿದ್ದು ಮರ್ಯಾದ ಹತ್ಯೆ ನಡೆಯಿತಾ ಎನ್ನುವ ಅನುಮಾನ ಮೂಡಿದೆ. ಇನ್ನೂ ಮೊದಲನೇ ವರ್ಷದ ಪದವಿ ಮುಗಿಸಿ ರಜೆ ಇದ್ದಿದ್ದರಿಂದ ಮನೆಯಲ್ಲಿದ್ದ ಈ ಅರಳು ಕಂಗಣ್ಣ ಚೆಲುವೆ ವಿದ್ಯಾರ್ಥಿ ವೇತನದ ಹಣ ಬಂದಿದೆ ಅದನ್ನು ತೆಗೆದುಕೊಂಡು ಬರುತ್ತೇನೆ ಅಂತ ತನ್ನ ತಂದೆ ತಾಯಿಗಳಿಗೆ ಹೇಳಿ ಮಾರ್ಚ್ 10ನೇ ತಾರೀಖಿನಂದು ಮನೆಯಿಂದ ಹೋಗಿದ್ದವಳು. 

ಅಂದು ರಾತ್ರಿ 9 ಗಂಟೆಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ತಂದೆ ರಾಜು ಅವರು ಮಗಳು ಈಗ ಬಸ್ಸಿನಲ್ಲಿ ಬರಬಹುದು ಎಂದು ಕಾದಿದ್ದರು. ಆದರೆ ಮನೆಗೆ ಬರಬೇಕಾಗಿದ್ದ ಮಗಳು ಅದೇ ಊರಿನ ಒಕ್ಕಲಿಗ ಸಮುದಾಯದ ಹೇಮಂತ್ ಎಂಬ ಯುವಕನ ಮನೆಯಲ್ಲಿ ಮದು ಮಗಳಾಗಿ ನಿಂತಿದ್ದಳು. ಈ ವಿಷಯವನ್ನು ತಿಳಿದ ತಂದೆ ತಾಯಿಗಳಿಗೆ ಜಂಗಬಲವೇ ಹುದುಗಿ ಹೋದಂತೆ ಆಗಿತ್ತು. ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪದ 6 ನೇ ಹೊಸಕೋಟೆ ಗ್ರಾಮ ಈ ಪ್ರೇಮಿಯ ದುರಂತಕ್ಕೆ ಮೌನ ಸಾಕ್ಷಿಯಾಗಿದೆ. ಹೀಗೆ ಫೋಟೊದಲ್ಲಿ ಜೊತೆ ಜೊತೆಯಾಗಿ ನಿಂತ್ತಿರೊ ಇವರು ಅಕ್ಷಿತಾ ಹಾಗೂ ಹೇಮಂತ್. 

ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್

ಇಬ್ಬರು 6ನೇ ಹೊಸಕೋಟೆ ಗ್ರಾಮದ ಅಕ್ಕಪಕ್ಕದ ಬೀದಿಯವರು. ಅಕ್ಷಿತಾ ಕುಶಾಲನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಹೇಮಂತ್ ಆಕೆಯ ಹಿಂದೆ ಬಿದ್ದಿದ್ದ. ಹೀಗಾಗಿ ಪಿಯುಸಿಗೆ ಕಾಲಿಟ್ಟಾಗಲೇ ಪ್ರೀತಿ ಪ್ರೇಮದ ಪಾಶಕ್ಕೆ ಬಿದ್ದಿದ್ದ ಇಬ್ಬರು ಮೂರು ವರ್ಷಗಳಿಂದ ಕಾದು ಯುವತಿಗೆ 18 ವರ್ಷ ಆಗುತ್ತಿದ್ದಂತೆ ಮದುವೆಯಾಗಿದ್ದರು. ಆದ್ರೆ ಮದುವೆಯಾದ ಐದೆ ಐದು ದಿನಕ್ಕೆ 18 ವರ್ಷದ ಅಕ್ಷಿತಾ ದಾರುಣವಾಗಿ ಪ್ರಾಣಬಿಟ್ಟು ಮಸಣ ಸೇರಿದ್ದಾಳೆ. ಇದಕ್ಕೆ ಕಾರಣ ಆಕೆಯ ಪತಿ ಹೇಮಂತ್ ಹಾಗೂ ಹುಡುಗನ ತಂದೆ  ತಾಯಿಯೆ ಮುಖ್ಯ ಕಾರಣ ಅಂತ ಹುಡುಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಅಕ್ಷತಾ ದಲಿತ ಯುವತಿಯಾಗಿದ್ದರೆ, ಹುಡುಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಯುವಕನಾಗಿದ್ದ. ಹೀಗಾಗಿ ಹುಡುಗನ ತಂದೆ ತಾಯಿ ಯುವತಿಗೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಯುವತಿಯ ತಂದೆ ರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಯುವತಿ ಸಾವನ್ನಪ್ಪುತ್ತಿದಂತೆ ಯುವಕ ಹೇಮಂತ್ ಕೂಡ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಇದೆಲ್ಲವೂ ನಾಟಕ ಎಂದು ಯುವತಿಯ ಪೋಷಕರು ಹೇಳಿದ್ದಾರೆ. ಸದ್ಯ ಯುವಕ ಹೇಮಂತ್ ಮಡಿಕೇರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಭಂದ ಪ್ರತಿಕ್ರಿಯೆ ನೀಡಿದ ಕೊಡಗು ಎಸ್ಪಿ ರಾಮರಾಜ್ ಈ ಕರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವತಿ ಪ್ರಜ್ಞೆ ತಪ್ಪುವ 15 ನಿಮಿಷಗಳ ಹಿಂದೆ ಅಲ್ಲಿ ಏನೆಲ್ಲಾ ನಡೆದಿದೆ ಎನ್ನುವ ಮಾಹಿತಿ ದೊರೆತ್ತಿದೆ. ಆ ಕುರಿತು ತನಿಖೆ ನಡೆಯುತ್ತಿದೆ. ಸದ್ಯ ಐಪಿಸಿ ಸೆಕ್ಷನ್ 302 ದಾಖಲಾಗಿದ್ದು, ಮೂವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಮಂಗಳವಾರ ಸಂಜೆ ಯುವತಿ ಅಕ್ಷಿತಾ ಗಂಡ ಹೇಮಂತ್ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಈ ವಿಷಯವನ್ನು ಅಕ್ಷಿತಾ ಪೋಷಕರಿಗೆ ತಿಳಿಸಿದ್ದಾರೆ. ಮೊದಲಿಗೆ ಸುಮ್ಮನಾದ ಪೋಷಕರು ಬಳಿಕ ಹೋಗಿ ಮಗಳನ್ನು ನೋಡಿದಾಗ ತೀವ್ರ ರಕ್ತ ಸ್ರಾವದಿಂದ ರಕ್ತದ ಮಡುವಿನಲ್ಲಿಯೇ ಬಿದ್ದಿದ್ದ ಅಕ್ಷಿತಾನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ

ಅಷ್ಟರಲ್ಲಿಯೇ ಮಗಳು ಪ್ರಾಣಬಿಟ್ಟಿರುವ ವಿಷಯ ತಿಳಿದು ಪೋಷಕರ ದುಃಖದ ಕಟ್ಟೆ ಹೊಡೆದು ಹೋಗಿದೆ. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನಿಸಲಾಗಿದ್ದು  ನುರಿತ ವೈದ್ಯರ ತಂಡ ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದೆ. ಯುವತಿಯ ಗಂಡ ಹೇಮಂತ್, ಮಾವ ದಶರಥ, ಹಾಗೂ ಅತ್ತೆ ಗಿರಿಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು ಮುಂದಿನ ಕಾನೂನು‌ ಕ್ರಮ ಕೈಗೊಂಡಿರೊದಾಗಿ ಕೊಡಗು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿದವನೊಂದಿಗೆ ಬಾಳಿ ಬದುಕಬೇಕಾಗಿದ್ದ ಯುವತಿ ಜಾತಿ ಭೂತ ನರ್ತನಕ್ಕೆ ದಾರುಣವಾಗಿ ಸಾವನ್ನಪ್ಟಿದ್ದು ಮಾತ್ರ ವಿಪರ್ಯಾವೆ ಸರಿ.

click me!