ಗಂಡನ ಪೂಜೆ ಮಾಡುವ ಭೀಮನ ಅಮವಾಸ್ಯೆಯಂದೇ ಪತಿ ಹತ್ಯೆ!

By Kannadaprabha News  |  First Published Jul 18, 2023, 3:20 AM IST

ಭೀಮನ ಅಮವಾಸ್ಯೆ ದಿನದಂದು ಗಂಡನ ಪೂಜೆ ಮಾಡಿದರೆ ಗಂಡನ ಆಯುಷ್ಯ ಹೆಚ್ಚಾಗುತ್ತೆ ಎನ್ನುವ ನಂಬಿಕೆಯಿದೆ. ಆದರೆ ಇದೇ ದಿನ ಹೆಂಡತಿ ಜೊತೆ ದೇವಸ್ಥಾನಕ್ಕೆ ಬಂದಿದ್ದ ಗಂಡನ ಹತ್ಯೆ ಮಾಡುವ ಹಂತಕನಿಗೆ ಮಾಹಿತಿ ನೀಡಿದ ಪತ್ನಿಯಿಂದಾಗಿ ಅಮಾಯಕನ ಜೀವ ಬಲಿಯಾಗಿರುವ ಘಟನೆ ಸೋಮವಾರ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿಯಲ್ಲಿ ಸೋಮವಾರ ಹಾಡಹಗಲೇ ನಡೆದಿದೆ.


ಬೆಳಗಾವಿ (ಜು.18): ಭೀಮನ ಅಮವಾಸ್ಯೆ ದಿನದಂದು ಗಂಡನ ಪೂಜೆ ಮಾಡಿದರೆ ಗಂಡನ ಆಯುಷ್ಯ ಹೆಚ್ಚಾಗುತ್ತೆ ಎನ್ನುವ ನಂಬಿಕೆಯಿದೆ. ಆದರೆ ಇದೇ ದಿನ ಹೆಂಡತಿ ಜೊತೆ ದೇವಸ್ಥಾನಕ್ಕೆ ಬಂದಿದ್ದ ಗಂಡನ ಹತ್ಯೆ ಮಾಡುವ ಹಂತಕನಿಗೆ ಮಾಹಿತಿ ನೀಡಿದ ಪತ್ನಿಯಿಂದಾಗಿ ಅಮಾಯಕನ ಜೀವ ಬಲಿಯಾಗಿರುವ ಘಟನೆ ಸೋಮವಾರ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿಯಲ್ಲಿ ಸೋಮವಾರ ಹಾಡಹಗಲೇ ನಡೆದಿದೆ.

ವಡೇರಟ್ಟಿಗ್ರಾಮದ ಶಂಕರ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ಯುವಕ. ಹತ್ಯೆಗೀಡಾದ ಶಂಕರ ಪತ್ನಿ ಸಿದ್ದವ್ವ ಅಲಿಯಾಸ್‌ ಪ್ರಿಯಾಂಕಾ ಜಗಮುತ್ತಿ (21) ಹಾಗೂ ಈಕೆಯ ಪ್ರಿಯಕರ ಭೈರನಟ್ಟಿಗ್ರಾಮದ ಶ್ರೀಧರ ತಳವಾರ (22) ಬಂಧಿತರು. ಅಮಾವಾಸ್ಯೆ ಹಿನ್ನೆಲೆ ವಡೇರಟ್ಟಿಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಪ್ರಿಯಾಂಕ ಜೊತೆಗೆ ಶಂಕರ ಆಗಮಿಸಿದ್ದ. ದೇವರ ದರ್ಶನ ಪಡೆದ ಬಳಿಕ ವಾಪಸ್‌ ಬರುತ್ತಿದ್ದ ವೇಳೆ ದೇವಸ್ಥಾನ ಆವರಣದಲ್ಲೇ ಆರೋಪಿ ಶ್ರೀಧರ ತಳವಾರ ಲಾಂಕ್‌ನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಹಂತಕನ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಘಟನೆ ನಡೆದ ಕೇಲವೇ ಗಂಟೆಗಳಲ್ಲಿ ಶ್ರೀಧರ ತಳವಾರ ಹಾಗೂ ಹತ್ಯೆಗೀಡಾದ ಶಂಕರನ ಪತ್ನಿ ಪ್ರಿಯಾಂಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Tap to resize

Latest Videos

ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್‌ ಪಕ್ಷ: ಸಚಿವ ಮಧು ಬಂಗಾರಪ್ಪ

ಏನಿದು ಪ್ರಕರಣ?: ಮೂಡಲಗಿ ತಾಲೂಕಿನ ಬೈರನಟ್ಟಿಗ್ರಾಮದ ಶ್ರೀಧರ ತಳವಾರ ಹಾಗೂ ಸಿದ್ದವ್ವ ಅಲಿಯಾಸ್‌ ಪ್ರಿಯಾಂಕಾ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. 6 ತರಗತಿಯಲ್ಲೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶಂಕರ ಜಗಮುತ್ತಿ ಹಾಗೂ ಸಿದ್ದವ್ವ ಕುಟುಂಬದ ಹಿರಿಯರು ಸೇರಿಕೊಂಡು ಮಾತುಕತೆ ನಡೆಸಿ ಶಂಕರನೊಂದಿಗೆ 2023 ಮಾಚ್‌ರ್‍ 19 ರಂದು ವಿವಾಹ ಜರುಗಿತ್ತು. ಆದರೂ ಸಿದ್ದವ್ವ ಪ್ರಿಯಕರನೊಂದಿಗೆ ಕದ್ದುಮುಚ್ಚಿ ಮಾತುಕತೆ ನಡೆಸುತ್ತಿದ್ದಳು.

ಸಿದ್ದವ್ವ ಹುಟ್ಟುಹಬ್ಬವನ್ನು ಭಾನುವಾರ ರಾತ್ರಿ ಪತಿ ಶಂಕರ ಆಚರಿಸಿ ಕುಟುಂಬಸ್ಥರದೊಂದಿಗೆ ಸಂಭ್ರಮಿಸಿದ್ದರು. ಭೀಮನ ಅಮವಾಸ್ಯೆ ಹಾಗೂ ಬನಸಿದ್ದೇಶ್ವರ ದೇವಸ್ಥಾನ ಪೂಜಾರಿಯಾಗಿರುವ ಶಂಕರ ಜಗಮುತ್ತಿ ದೇವಸ್ಥಾನಕ್ಕೆ ಜತೆಯಾಗಿ ಹೋಗಿ ಬರುವುದಾಗಿ ಪತ್ನಿ ಸಿದ್ದವ್ವನಿಗೆ ತಯಾರಾಗುವಂತೆ ತಿಳಿಸಿದ್ದ. ಆದರೆ ಸಿದ್ದವ್ವ ತಾನು ತಯಾರಾಗುವ ಮೊದಲೇ ದೇವಸ್ಥಾನಕ್ಕೆ ಬರುವ ವಿಷಯವನ್ನು ಪ್ರಿಯಕರ ಶ್ರೀಧರ ತಳವಾರನಿಗೆ ಮಾಹಿತಿ ನೀಡಿದ್ದಳು. ಅಲ್ಲದೇ ಹತ್ಯೆ ಬಗ್ಗೆಯೂ ಪ್ಲ್ಯಾನ್‌ ಮಾಡಿಕೊಂಡಿದ್ದರು. ಏನೂ ಗೊತ್ತಿಲ್ಲದಂತೆ ಪತಿ ಶಂಕರನೊಂದಿಗೆ ದೇವಸ್ಥಾನಕ್ಕೆ ಬಂದು ಜೊತೆಯಾಗಿ ದೇವರ ದರ್ಶವನ್ನೂ ಪಡೆದುಕೊಂಡಿದ್ದಾರೆ. ಬಳಿಕ ಸಿದ್ದವ್ವ ಪತಿಗೆ ದ್ವಿಚಕ್ರ ವಾಹನ ತರುವಂತೆ ತಿಳಿಸಿ ವೇಗವಾಗಿ ನಡೆದುಕೊಂಡು ದೇವಸ್ಥಾನದಿಂದ ದೂರ ಬಂದು ನಿಂತಿದ್ದಾಳೆ. ಅಷ್ಟರಲ್ಲಿ ಹತ್ಯೆ ಮಾಡಲು ಬಂದಿದ್ದ ಶ್ರೀಧರ ತಳವಾರ, ದೇವಸ್ಥಾನದ ಬಳಿ ಹೋಗಿ ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಬಳಿಕ ಆರೋಪಿ ಸಿದ್ದವ್ವ ಮೋಸಳೆ ಕಣ್ಣೀರು ಸುರಿಸುತ್ತಾ, ಕೂಗಾಟ, ಚೀರಾಟ ನಡೆಸಿದ್ದಾಳೆ. ಇದರಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರು ಘಟನೆ ಕುರಿತು ಸಿದ್ದವ್ವನನ್ನು ವಿಚಾರಿಸಿದ ವೇಳೆ. ನಿನ್ನೆ ತಡರಾತ್ರಿ ನನ್ನ ಪತಿ ನನ್ನ ಬತ್‌ರ್‍ಡೇ ಆಚರಿಸಿದ್ದರು. ಇಂದು ಬೆಳಗಿನ ಜಾವ ದೇವಸ್ಥಾನಕ್ಕೆ ನನ್ನ ಕರೆದುಕೊಂಡು ಬಂದಿದ್ದರು. ಬೈಕ್‌ ತಿರುಗಿಸಿಕೊಂಡು ಬರುತ್ತಾರೆ ಅಂತ ನಾನು ಮುಂದೆ ಹೋಗಿ ನಿಂತುಕೊಂಡಿದ್ದೆ. ಅಷ್ಟರಲ್ಲಿ ಲಾಂಗ್‌ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ ನನ್ನ ಗಂಡನ ಮೇಲೆ ಹಲ್ಲೆ ಮಾಡಿ ಪರಾರಿಯಾದ. ನಾನು ಓಡಿ ಹೋಗುವಷ್ಟರಲ್ಲಿ ಅವರು ಕೆಳಗೆ ಬಿದ್ದಿದ್ದರು. ನಮ್ಮಿಬ್ಬರ ಮಧ್ಯೆ ಯಾವ ಜಗಳವೂ ಇರಲಿಲ್ಲ. ಬೆಳಗ್ಗೆ ದೇವಸ್ಥಾನಕ್ಕೆ ಕರೆದುಕೊಂಡು ಬಂದರು ಎಂದು ಕಥೆ ಕಟ್ಟಿಕಣ್ಣೀರು ಹಾಕಿದ್ದಳು.

ಶಿಗ್ಗಾಂವಿ ಕ್ಷೇತ್ರ ಶಿಕ್ಷಣ ಕಾಶಿಯಾಗಿಸುವೆ: ಮಾಜಿ ಸಿಎಂ ಬೊಮ್ಮಾಯಿ

ಘಟನಾ ಸ್ಥಳಕ್ಕೆ ಆಗಮಿಸಿದ ಮೂಡಲಗಿ ಪೊಲೀಸರು ಹಂತಕನ ಪತ್ತೆ ಬಲೆ ಬೀಸಿದ್ದರು, ಜತೆಗೆ ಈಕೆಯ ಹಾವಭಾವದ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ಈಕೆಯನ್ನು ತಮ್ಮದೇ ರೀತಿಯಲ್ಲಿ ವಿಚಾರಿಸಿದ ವೇಳೆ ಅಸಲಿ ಕಹಾನಿ ಹೊರಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಂತಕ ಶ್ರೀಧರ ತಳವಾರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!