ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಕೊಲೆಯಾದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಅಂಜಲಿ ಕೊಲೆಯಾಗಿದೆ. ಮಗಳನ್ನು ಕಳೆದುಕೊಂಡ ನೋವಿನಲ್ಲಿಯೇ ನೇಹಾಳ ತಂದೆ ನಿರಂಜನ ಹಿರೇಮಠ್ ಅಂಜಲಿ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.
ಹುಬ್ಬಳ್ಳಿ (ಮೇ 15): ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆಯಾದ ಘಟನೆ ಮಾಸುವ ಮುನ್ನವೇ ಮತ್ತದೇ ಹುಬ್ಬಳ್ಳಿಯಲ್ಲಿ ನೇಹಾ ಮರ್ಡರ್ ಮಾದರಿಯಲ್ಲಿಯೇ ಮತ್ತೊಬ್ಬ ಯುವತಿ ಅಂಜಲಿಯನ್ನು ಬರ್ಬರವಾಗಿ ಚಾಕು ಚುಚ್ಚಿ ಕೊಲೆ ಮಾಡಲಾಗಿದೆ. ಮಗಳು ನೇಹಾಳನ್ನು ಕಳೆದುಕೊಂಡ ನೋವಿನಲ್ಲಿದ್ದ ಕಾರ್ಪೋರೇಟರ್ ನಿರಂಜನ ಹಿರೇಮಠ್ ಬಂದು ಅಂಜಲಿ ಕುಟುಂಬಕ್ಕೆ ಸಾಂತ್ವನ ಹೇಳಿ, 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.
ಹುಬ್ಬಳ್ಳಿಯ ಬಡ ಕುಟುಂಬದ ಯುವತಿಯಾಗಿದ್ದ ಅಂಜಲಿ ಅಂಬಿಗೇರಳನ್ನು ಕ್ರಿಮಿನಲ್ ಹಿನ್ನೆಲೆಯುಳ್ಳ ವಿಶ್ವ ಅಲಿಯಾಸ್ ಗಿರೀಶ್ ಸಾವಂತ ಎನ್ನುವ ಆರೋಪಿ ಪ್ರೀತಿಗಾಗಿ ಪೀಡಿಸಿ ಮನೆಗೆ ನುಗ್ಗಿ ಚಾಕು ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಬೆನ್ನಲ್ಲಿಯೇ ಹುಬ್ಬಳ್ಳಿಯ ಕಾರ್ಪೋರೇಟರ್ ನಿರಂಜನ ಹಿರೇಮಠ್ ಅವರು ಅಂಜಲಿಯ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ. ತನ್ನ ಮಗಳು ನೇಹಾಳನ್ನು ಫಯಾಜ್ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ. ಮಗಳನ್ನು ಕಳೆದುಕೊಂಡ ನೋವು ಕುಟುಂಬಕ್ಕಲ್ಲದೇ ಬೇರಾರಿಗೂ ಅರ್ಥವಾಗೊಲ್ಲ. ಕೊಲೆ ಮಾಡಿದ ಆರೋಪಿಯನ್ನು ಗಲ್ಲಿಗೇರಿಸುವಂತೆ ಸ್ಥಳೀಯರೊಂದಿಗೆ ಪ್ರತಿಭಟನೆ ಮಾಡಿದ ನೇಹಾಳ ತಂದೆ ನಿರಂಜನ ಹಿರೇಮಠ್ ಅವರು ಅಂಜಲಿಯ ಅಂತ್ಯಕ್ರಿಯೆ ಹಾಗೂ ಇತರೆ ಕಾರ್ಯಗಳಿಗೆ ನೆರವಾಗಲು 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.
ಹುಬ್ಬಳ್ಳಿ ನೇಹಾ ಮರ್ಡರ್ ಮಾದರಿಯಲ್ಲೇ, ಅಂಜಲಿಗೂ ಚಾಕು ಚುಚ್ಚಿ ಕೊಲೆಗೈದ ಪಾಗಲ್ ಪ್ರೇಮಿ!
ಅಂಜಲಿ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಮನವಿ ಪತ್ರ:
ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮನೆಗೆ ನುಗ್ಗಿ ಯುವತಿ ಅಂಜಲಿಯನ್ನು ಕೊಲಗೈದ ಆರೋಪಿಯನ್ನು ಎನ್‌ಕೌಂಟರ್ ಮಾಡಿ ಬೀಸಾಡಬೇಕು ಎಂದು ಆಗ್ರಹಿಸಿ ನೇಹಾಳ ತಂದೆಯೂ ಆಗಿರುವ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ಮಾಡಲಾಯಿತು. ಇದಕ್ಕೆ ಸ್ಥಳೀಯ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಸಾಥ್ ನೀಡಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜೊತೆಗೆ, ಸ್ಥಳೀಯ ನಿವಾಸಿಗಳು ಅಂಜಲಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದರೆ ಕೂಡಲೇ ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು. ಮೃತ ಅಂಜಲಿ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ, ಪರಿಹಾರ ಕೊಡಬೇಕು. ಜೊತೆಗೆ, ಸರ್ಕಾರದ ವತಿಯಿಂದ ಮನೆ ಕಟ್ಟಿಸಿಕೊಡಬೇಕು. ಅಂಜಲಿ ಸಹೋದರರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರ ವಿರುದ್ಧ ಆಕ್ರೋಶ:
ಈಗಾಗಲೇ ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾಳ ಕೊಲೆಯ ನಂತರ ಪೊಲೀಸರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಪೊಲೀಸರ ನಿರ್ಲಕ್ಷ್ಯದಿಂದಾಗಿ ಈಗ ಮತ್ತೊಂದು ಇದೇ ಮಾದರಿಯಲ್ಲಿ ಯುವತಿಯ ಕೊಲೆಯಾಗಿದೆ. ಈ ದುರ್ಘಟನೆಗೆ ಸರ್ಕಾರ ಹಾಗೂ ಸ್ಥಳೀಯ ಪೊಲೀಸರೇ ನೇರ ಹೊಣೆಗಾರರಾಗಿದ್ದಾರೆ. ಅಂಜಲಿ ಸಾವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾ ಬೇಕು ಎಂದು ಸ್ಥಳೀಯ ವೀರಾಪುರ ಓಣಿಯ ನಾಗರಿಕರು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ತಣಿಸಿ ಮನವಿ ಸ್ವೀಕರಿಸಿದ್ದಾರೆ.
4 ವರ್ಷ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ, 4 ತಿಂಗಳೂ ಸಂಸಾರ ಸಾಗಿಸದೇ ಆತ್ಮಹತ್ಯೆಗೆ ಶರಣು
ಪ್ರಾಣಕ್ಕೆ ಅಪಾಯವಿದೆ ಎಂದು ಪೊಲೀಸರ ಗಮನಕ್ಕೆ ತಂದರೂ ರಕ್ಷಣೆ ಕೊಡಲಿಲ್ಲ: ನೇಹಾ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹ ಪ್ರಕರಣ ನಡೆದಿದೆ. ಇದ್ರಲ್ಲಿ ಪೊಲೀಸ್ ಹಾಗೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಗೃಹ ಇಲಾಖೆ ಕೇವಲ ಟ್ರಾನ್ಸ್ ಫರ್ ವಿಚಾರದಲ್ಲಿ ಬ್ಯೂಸಿಯಾಗಿದೆ.ಇಂತಹ ಘಟಗೆಗಳತ್ತ ಸರ್ಕಾರ ಗಮನ ಹರಿಸುತ್ತಿಲ್ಲ. ನೇರವಾಗಿ ಈ ಹತ್ಯೆಗೆ ಸರ್ಕಾರದ ವೈಫಲ್ಯವೇ ಕಾರಣ. ಹತ್ಯೆ ಮಾಡಿರುವ ಆರೋಪಿ ಒಂದು ವಾರದ ಹಿಂದೆಯೇ ನೇಹಾ ಹತ್ಯೆ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಇದನ್ನ ಬೆಂಡಿಗೇರಿ ಪೊಲೀಸರ ಗಮನಕ್ಕೆ ತರಲಾಗಿತ್ತು. ಆದ್ರೂ ಬೆಂಡಿಗೇರಿ ಪೊಲೀಸರ ನಿರ್ಲಕ್ಷ್ಯದಿಂದ ಮತ್ತೊಂದು ಜೀವ ಬಲಿಯಾಗಿದೆ. ಅಂಜಲಿಯ ಕುಟುಂಬದಲ್ಲಿ ಭಾರಿ ಬಡತನವಿದೆ. ಮನೆ ಮನೆಗಳ ಪಾತ್ರೆ ತೊಳೆದು ಅವರ ಅಜ್ಜಿ ಹೆಣ್ಣುಮಕ್ಕಳನ್ನ ಓದಿಸುತ್ತಿದ್ದರು. ಸರ್ಕಾರ ಆ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕು. ಹುಬ್ಬಳ್ಳಿಯಲ್ಲಿ ಇದು ಎರಡನೇ ಘಟನೆ. ಸರ್ಕಾರ ಇನ್ನಾದ್ರೂ ಎಚ್ಚೆತ್ತುಕೊಂಡು ಮುಂದೆ ಯಾವ ಘಟನೆಯಾಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರು.