* ತಂದೆಯೆ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣು
* ಅನ್ಯಜಾತಿ ಯುವಕನನ್ನು ಪ್ರೀತಿಸಿದಕ್ಕೆ ಮಗಳನ್ನು ಕೊಂದ
* ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ
ಪಿರಿಯಾಪಟ್ಟ(ಜೂ.08): ಅಪ್ರಾಪ್ತ ವಯಸ್ಸಿನ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದುದ್ದಕ್ಕೆ ತಂದೆಯೆ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ(17) ಮೃತಪಟ್ಟದುರ್ದೈವಿ.
ಒಕ್ಕಲಿಗ ಸಮಾಜಕ್ಕೆ ಸೇರಿದ ಸುರೇಶ್ ಹಾಗೂ ಬೇಬಿ ಅವರ ಪುತ್ರಿ ಶಾಲಿನಿ ಪಟ್ಟಣದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಆಕೆ ಗ್ರಾಮದ ಸಮೀಪದ ಮೆಲ್ಲಹಳ್ಳಿ ಬೋರೆ ಗ್ರಾಮದ ಪರಿಶಿಷ್ಟಜಾತಿಗೆ ಸೇರಿದ ಯುವಕನನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳು. ವಿಷಯ ತಿಳಿದ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪಟ್ಟಣದ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದ ಸಂದರ್ಭ ಯುವತಿ ಆತನನ್ನೇ ಪ್ರೀತಿಸುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆಕೆಗೆ 18 ವರ್ಷ ತುಂಬಿರದ ಕಾರಣ ಪೊಲೀಸರು ಆಕೆಯನ್ನು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಶಾಲಿನಿ ತನ್ನ ಪೋಷಕರಿಗೆ ಕರೆ ಮಾಡಿ ಇಲ್ಲಿಂದ ಕರೆದುಕೊಂಡು ಹೋಗುವಂತೆ ಹೇಳಿದಾಗ ಪೋಷಕರು ಒಪ್ಪಿಗೆ ಪತ್ರ ಬರೆದುಕೊಟ್ಟು ತಮ್ಮ ಮಗಳನ್ನು ಸ್ವಗ್ರಾಮಕ್ಕೆ ಕರೆತಂದಿದ್ದರು. ಸೋಮವಾರ ರಾತ್ರಿ ಶಾಲಿನಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿ ಕುಳಿತಾಗ ಆಕೆಯ ತಂದೆ ಸುರೇಶ್ ಇದಕ್ಕೊಪ್ಪದೆ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿ ತನ್ನ ಪತ್ನಿ ಬೇಬಿಯೊಂದಿಗೆ ಸೇರಿ ಆಕೆ ಪ್ರೀತಿಸುತ್ತಿದ್ದ ಹುಡುಗನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ 6.30ರ ಸಮಯದಲ್ಲಿ ಸುರೇಶ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ.