ಹಣಕ್ಕಾಗಿ ಪೀಡಿಸಿದನೆಂದು ಕುಡಿದ ಮತ್ತಿನಲ್ಲಿ ಸ್ನೇಹಿತರೇ ಹೊಡೆದು ಹತ್ಯೆ!

By Kannadaprabha News  |  First Published Feb 6, 2024, 8:13 AM IST

ಬಾರ್‌ನಲ್ಲಿ ಮದ್ಯ ಸೇವಿಸುವಾಗ ಪರಿಚಯವಾದ ಗಾರೆ ಕಾರ್ಮಿಕ ಹಣಕ್ಕೆ ಪೀಡಿಸಿದ ಎಂಬ ಕಾರಣಕ್ಕೆ ಹಲ್ಲೆಗೈದು ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಫೆ.6) : ಬಾರ್‌ನಲ್ಲಿ ಮದ್ಯ ಸೇವಿಸುವಾಗ ಪರಿಚಯವಾದ ಗಾರೆ ಕಾರ್ಮಿಕ ಹಣಕ್ಕೆ ಪೀಡಿಸಿದ ಎಂಬ ಕಾರಣಕ್ಕೆ ಹಲ್ಲೆಗೈದು ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ಬಿ.ಸುನೀಲ್(28) ಬಂಧಿತ. ಆರೋಪಿ ಫೆ.2ರಂದು ಸಂಜೆ ತುಮಕೂರಿನ ಕ್ಯಾತಸಂದ್ರ ನಿವಾಸಿ ಕುಮಾರಸ್ವಾಮಿ(28) ಎಂಬಾತನನ್ನು ಕ್ಯಾತಸಂದ್ರ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್‌ ಫಾರ್ಮ್‌ ಬಳಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

undefined

ಬರಪರಿಹಾರಕ್ಕೆ ಶಬರಿಯಂತೆ ಕಾದರೂ ಪ್ರಯೋಜನವಾಗಿಲ್ಲ; ಕೇಂದ್ರದಿಂದ ಕರ್ನಾಟಕದ ಜನರ ಶೋಷಣೆ ಆಗ್ತಿದೆ: ಸಿಎಂ ಕಿಡಿ

ಏನಿದು ಪ್ರಕರಣ?:

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿರತಗೊಂಡ ಗ್ರಾಮದ ಕುಮಾರಸ್ವಾಮಿ ಕಳೆದ ಮೂರು ವರ್ಷಗಳಿಂದ ತುಮಕೂರಿನ ಕ್ಯಾತಸಂದ್ರದಲ್ಲಿ ನೆಲೆಸಿ, ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಇನ್ನು ಬಳ್ಳಾರಿ ಜಿಲ್ಲೆ ಬೊಮ್ಮನಾಳ ಗ್ರಾಮದ ಆರೋಪಿ ಸುನೀಲ್‌, 2ನೇ ತರಗತಿಯಿಂದ 9ನೇ ತರಗತಿ ವರೆಗೆ ತಮಕೂರಿನ ಸಿದ್ಧಗಂಗಾ ಮಠದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡಿದ್ದು, ಕಳೆದ 15 ವರ್ಷಗಳಿಂದ ಬಳ್ಳಾರಿಯಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಮಠ ನೋಡಲು ಬಂದಿದ್ದ ಹಳೇ ವಿದ್ಯಾರ್ಥಿ:

ತಾನು ವ್ಯಾಸಂಗ ಮಾಡಿದ ಸಿದ್ಧಗಂಗಾ ಮಠವನ್ನು ನೋಡಲು ಫೆ.2ರಂದು ಬೆಳಗ್ಗೆ ಬಳ್ಳಾರಿಯಿಂದ ಸಿದ್ಧಗಂಗಾ ಮಠಕ್ಕೆ ಬಂದಿದ್ದ. ಬಳಿಕ ಮಠದಲ್ಲಿ ತನ್ನ ಹಳೇಯ ಸ್ನೇಹಿತರ ಜತೆಗೆ ಕೆಲ ಹೊತ್ತು ಸಮಯ ಕಳೆದಿದ್ದ. ಬಳಿಕ ಮದ್ಯ ಸೇವಿಸಲು ಸ್ನೇಹಿತರ ಜತೆಗೆ ಕ್ಯಾತಸಂದ್ರದ ಬಾರ್‌ಗೆ ತೆರಳಿದ್ದ. ಈ ವೇಳೆ ಅಲ್ಲೇ ಸ್ನೇಹಿತರ ಜತೆಗೆ ಮದ್ಯ ಸೇವಿಸುತ್ತಿದ್ದ ಕುಮಾರಸ್ವಾಮಿ, ಸುನೀಲ್‌ಗೆ ಪರಿಚಯವಾಗಿದ್ದಾನೆ. ಈ ವೇಳೆ ತನಗೂ ಮದ್ಯ ಕುಡಿಸುವಂತೆ ಕುಮಾರಸ್ವಾಮಿ, ಸುನೀಲ್‌ನನ್ನು ಕೇಳಿದ್ದಾನೆ. ಈ ವೇಳೆ ಸುನೀಲ್‌, ತನ್ನದೇ ಹಣದಲ್ಲಿ ಕುಮಾರಸ್ವಾಮಿಗೆ ಮದ್ಯ ಕುಡಿಸಿದ್ದಾನೆ.

ಹಣ ಕೊಡುವಂತೆ ಪೀಡಿಸುತ್ತಿದ್ದ:

ಮದ್ಯ ಸೇವನೆ ವೇಳೆ ಸುನೀಲ್‌ ಬಳಿ ₹19 ಸಾವಿರ ಇರುವುದನ್ನು ಕುಮಾರಸ್ವಾಮಿ ನೋಡಿದ್ದಾನೆ. ಈ ವೇಳೆ ಕುಮಾರಸ್ವಾಮಿ ನನಗೂ ಸ್ವಲ್ಪ ಹಣ ಕೊಡುವಂತೆ ಕೇಳಿದ್ದಾನೆ. ಆಗ ಸುನೀಲ್‌ ಹಣ ನೀಡಲು ನಿರಾಕರಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ. ಬಳಿಕ ಸುನೀಲ್‌ ಮತ್ತೆ ಸಿದ್ಧಗಂಗಾ ಮಠಕ್ಕೆ ತೆರಳಿ ಸಂಬಂಧಿಕರ ಪುತ್ರನನ್ನು ಮಾತನಾಡಿಸಿಕೊಂಡು ಸಂಜೆ 5 ಗಂಟೆಗೆ ಮತ್ತೆ ಬಾರ್‌ಗೆ ಬಂದಿದ್ದಾನೆ. ಈ ವೇಳೆ ಮತ್ತೆ ಅಲ್ಲಿ ಕುಮಾರಸ್ವಾಮಿ ಸಿಕ್ಕಿದ್ದಾನೆ. ಆಗಲೂ ಹಣ ಕೊಡುವಂತೆ ಕುಮಾರಸ್ವಾಮಿ, ಸುನೀಲ್‌ಗೆ ಪೀಡಿಸಿದ್ದಾನೆ. ಹಣ ಕೊಡುವುದಿಲ್ಲ ಎಂದು ಸುನೀಲ್‌ ಹೇಳಿದ್ದಾನೆ.

ಪ್ಲಾಟ್‌ ಫಾರ್ಮ್‌ನಲ್ಲಿ ಹಿಗ್ಗಾಮುಗ್ಗಾ ಹಲ್ಲೆ

ಬಾರ್‌ನಿಂದ ಹೊರಗೆ ಬಂದ ಇಬ್ಬರು ಕ್ಯಾತಸಂದ್ರ ಸರ್ಕಲ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಸುನೀಲ್‌ ಕ್ಯಾತಸಂದ್ರ ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಕುಮಾರಸ್ವಾಮಿ ರೈಲ್ವೆ ನಿಲ್ದಾಣಕ್ಕೆ ಹಿಂಬಾಲಿಸಿ ಬಂದಿದ್ದು, ಹಣ ಕೊಡುವಂತೆ ಮತ್ತೆ ಪೀಡಿಸಲು ಆರಂಭಿಸಿದ್ದಾನೆ. ಇದರಿಂದ ಕೋಪಗೊಂಡ ಸುನೀಲ್‌, ಕೈನಿಂದ ಕುಮಾರಸ್ವಾಮಿ ಮುಖಕ್ಕೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಕುಮಾರಸ್ವಾಮಿ ಪ್ಲಾಟ್‌ ಫಾರ್ಮ್‌ನಿಂದ ಹಳಿ ಮೇಲೆ ಬಿದ್ದಿದ್ದಾನೆ. ಈ ವೇಳೆ ಸುನೀಲ್‌ ಚಪ್ಪಲಿ ಕಾಲಿನಿಂದ ಮುಖಕ್ಕೆ ಹತ್ತಾರು ಬಾರಿ ಒದ್ದು, ಕೈಗೆ ತೊಟ್ಟಿದ್ದ ಸ್ಟೀಲ್‌ ಕಡಗದಿಂದ ಮುಖಕ್ಕೆ ಗುದ್ದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಕುಮಾರಸ್ವಾಮಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಬಳಿಕ ಸುನೀಲ್‌ ಪರಾರಿಯಾಗಿದ್ದಾನೆ.

ಮೃತನ ಸುಳಿವು ನೀಡಿದ ಚೀಟಿ!:

ಫೆ.3ರಂದು ಬೆಳಗ್ಗೆ ರೈಲ್ವೆ ಹಳಿ ಪಕ್ಕ ರಕ್ತಸಿಕ್ತ ಮೃತದೇಹ ಬಿದ್ದಿರುವುದನ್ನು ಕಂಡು ಸಾರ್ವಜನಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು, ಮೃತ ವ್ಯಕ್ತಿಯ ಪ್ಯಾಂಟ್‌ ಜೇಬಿನಲ್ಲಿದ್ದ ಚೀಟಿ ತೆಗೆದು ನೋಡಿದಾಗ ಮೊಬೈಲ್‌ ಸಂಖ್ಯೆ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಮೃತ ವ್ಯಕ್ತಿ ಕುಮಾರಸ್ವಾಮಿ ಎಂಬುದು ಗೊತ್ತಿದೆ. ಅಲ್ಲೇ ಮೃತದೇಹ ಬಳಿ ರಕ್ತಸಿಕ್ತ ಚಪ್ಪಲಿಗಳು ಕಂಡು ಬಂದಿವೆ. ಹೀಗಾಗಿ ಇದು ಕೊಲೆ ಎಂಬುದು ಪೊಲೀಸರಿಗೆ ಅನುಮಾನ ಬಂದಿದೆ.

ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಲು ಕೇಂದ್ರ ಸಚಿವೆ ಸೀತಾರಾಮನ್‌ಗೆ ಪತ್ರ ಬರೆದ ಸಿಎಂ

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ, ಆರೋಪಿ ಸುನೀಲ್‌ನ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಮಾಡಿದಾಗ ತಾನೇ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!