ಸಲ್ಮಾನ್ ಖಾನ್ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆಯಾದ ಆರೋಪ ಹೊತ್ತಿದ್ದಾರೆ. ಕೃಷ್ಣಮೃಗವೆಂದರೆ ಬಿಷ್ಣೋಯಿ ಸಮುದಾಯಕ್ಕೆ ಪೂಜ್ಯನೀಯ ಪ್ರಾಣಿ. ಹೀಗಾಗಿ ಈ ಸಮುದಾಯಕ್ಕೆ ಸೇರಿದ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಲ್ಲು ವಿರುದ್ಧ ಕತ್ತಿ ಮಸೆಯುತ್ತಿದ್ದಾನೆ.
ಮುಂಬೈ(ಜು.03): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಿನಿಮಾ ಶೂಟಿಂಗ್ ವೇಳೆ ಹತ್ಯೆ ಮಾಡಲು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗ್ ಸಂಚು ರೂಪಿಸಿತ್ತು. ಖುದ್ದು ಬಿಷ್ಣೋಯಿ ತನ್ನ ಗ್ಯಾಂಗ್ ಸದಸ್ಯರಿಗೆ ಸಲ್ಮಾನ್ ಹತ್ಯೆ ಮಾಡಲು 25 ಲಕ್ಷ ರು. ಸುಪಾರಿ ನೀಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿರುವ 5 ಮಂದಿಯ ವಿರುದ್ಧ ನವಿ ಮುಂಬೈ ಪೊಲೀಸರು ಸಲ್ಲಿಸಿದ್ದ ಹೊಸ ಆರೋಪಪಟ್ಟಿಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಗ್ಯಾಂಗ್‌ಗೆ ಸೇರಿದ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಯೋಜನೆ ರೂಪಿಸಿದ್ದರು. 2022 ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಲ್ಲಲು ಬಳಸಿದ್ದ ಟರ್ಕಿ ನಿರ್ಮಿತ ಜಿಗಾನಾ ಪಿಸ್ತೂಲ್‌ನಿಂದ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಗ್ಯಾಂಗ್ ಯೋಜನೆ ರೂಪಿಸಿತ್ತು. ಅವರ ಮೇಲೆ ದಾಳಿ ಮಾಡಲು ಎಂ16, ಎಕೆ-47 ಹಾಗೂ ಎಕೆ-92 ಬಂದೂಕುಗಳನ್ನು ಖರೀದಿಸಲು ಪಾಕಿಸ್ತಾನದ ಶಸ್ತ್ರಾಸ್ತ್ರ ವ್ಯಾಪಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಚಾರ್ಜ್‌ಶೀಟ್ ಹೇಳಿದೆ.
ಸಂಚು ಏಕೆ?: