ಬೆಂಗಳೂರು: ಪುತ್ರನ ಹತ್ಯೆಗೈದ ರೌಡಿಯ ಕೊಂದ ತಂದೆ, ಮಗನ ಕೊಲೆಗೆ ರಿವೇಂಜ್‌ ತೀರಿಸಿಕೊಂಡ ಅಪ್ಪ..!

By Kannadaprabha News  |  First Published Aug 7, 2024, 9:45 AM IST

ಆ.1ರಂದು ಸಂಜೆ ಸುಮಾರು 4.15ಕ್ಕೆ ಶೇಷಾದ್ರಿಪುರದ ರಸಲ್ದಾರ್ ಸ್ಟ್ರೀಟ್‌ನಲ್ಲಿ ರೌಡಿಶೀಟರ್ ಅಜಿತ್ ಕುಮಾರ್‌(21)ನನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 


ಬೆಂಗಳೂರು(ಆ.07):  ಇತ್ತೀಚೆಗೆ ನಗರದಲ್ಲಿ ಹಾಡಹಗಲೇ ನಡೆದಿದ್ದ ರೌಡಿ ಶೀಟರ್‌ ಅಜಿತ್‌ನ ಸಿನಿಮೀಯ ಶೈಲಿಯ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರ ನಿವಾಸಿಗಳಾದ ಅರುಣ್(28), ಅಜಯ್(28), ನರಸಿಂಹನ್(48) ಮತ್ತು ಪ್ರಕಾಶ್(30) ಬಂಧಿತರು. ಆರೋಪಿಗಳು ಆ.1ರಂದು ಸಂಜೆ ಸುಮಾರು 4.15ಕ್ಕೆ ಶೇಷಾದ್ರಿಪುರದ ರಸಲ್ದಾರ್ ಸ್ಟ್ರೀಟ್‌ನಲ್ಲಿ ರೌಡಿಶೀಟರ್ ಅಜಿತ್ ಕುಮಾರ್‌(21)ನನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಇಬ್ಬರು ಮಹಿಳೆಯರನ್ನೂ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಚಿಕ್ಕಮಗಳೂರು: ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆಯೇ ಪುಂಡನಿಂದ ಹಲ್ಲೆ!

ಏರಿಯಾದಲ್ಲಿ ಅಜಿತ್‌ ಉಪಟಳ:

ಕೊಲೆಯಾದ ರೌಡಿ ಅಜಿತ್‌ ಮತ್ತು ಆರೋಪಿ ನರಸಿಂಹನ್‌ ಪುತ್ರ ಗಣೇಶ್‌ ನಡುವೆ ಎರಡು ವರ್ಷದ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವೇಳೆ ಅಜಿತ್‌ ಹಾಗೂ ಆತನ ಸಹಚರರು ಗಣೇಶ್‌ನನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಅಜಿತ್‌ ಜಾಮೀನು ಪಡೆದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ. ತಮ್ಮ ಏರಿಯಾದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ. ಈ ನಿಟ್ಟಿನಲ್ಲಿ ಕೆಲ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಅಜಿತ್‌ ವಿರುದ್ಧ ರೌಡಿ ಪಟ್ಟಿ ತೆರೆದಿದ್ದರು.

ಮಗನ ಕೊಲೆಗೆ ರಿವೇಂಜ್‌

ಈ ನಡುವೆ ಅಜಿತ್‌, ಗಣೇಶ್‌ ಕುಟುಂಬದ ಸದಸ್ಯರ ಬಗ್ಗೆ ಪದೇ ಪದೇ ಕೆಟ್ಟ ಮಾತನಾಡುವುದು, ನಿಂದನೆ, ಅವಮಾನ ಮಾಡುತ್ತಿದ್ದ. ಈತನ ವರ್ತನೆಯಿಂದ ಗಣೇಶ್‌ ಕುಟುಂಬದ ಸದಸ್ಯರು ರೋಸಿ ಹೋಗಿದ್ದರು. ಇನ್ನು ಪುತ್ರ ಗಣೇಶ್‌ನನ್ನು ಕೊಲೆ ಮಾಡಿದ್ದ ಅಜಿತ್‌ ಬಗ್ಗೆ ನರಸಿಂಹನ್ ದ್ವೇಷ ಕಾರುತ್ತಿದ್ದ. ಹೀಗಾಗಿ ತನ್ನದೇ ಒಂದು ತಂಡ ಕಟ್ಟಿ ಅಜಿತ್‌ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಕಳೆದ ಗುರುವಾರ ಅಜಿತ್ ಮನೆಯಲ್ಲಿ ಊಟ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಆರೋಪಿಗಳು ಏಕಾಏಕಿ ಆತನ ಮೇಲೆ ಮುಗಿಬಿದ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು ಎಂಬುದು ವಿಚಾರಣೆ ವೇಳೆ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!