ಶಿವರಾತ್ರಿ ಕ್ರಿಕೆಟ್‌ ಪಂದ್ಯಾವಳಿ ವೇಳೆ ಚಾಕು ಇರಿತ: ಇಬ್ಬರ ದಾರುಣ ಸಾವು!

By Kannadaprabha News  |  First Published Feb 18, 2023, 4:10 PM IST

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಶುಕ್ರವಾರ ಮಧ್ಯಾಹ್ನ ಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ವಾಹನ ನಿಲುಗಡೆ ವಿಚಾರವಾಗಿ ಘರ್ಷಣೆ ನಡೆದಿದ್ದು, ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.


ದೊಡ್ಡಬಳ್ಳಾಪುರ (ಫೆ.18): ಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ 3.15ರ ಸುಮಾರಿನಲ್ಲಿ ನಡೆದಿದೆ.  ಮೃತರನ್ನು ದೊಡ್ಡಬೆಳವಂಗಲ ಗ್ರಾಮದ ಪ್ರತೀಕ್‌(17) ಮತ್ತು ಭರತ್‌ಕುಮಾರ್‌(23) ಎಂದು ಗುರುತಿಸಲಾಗಿದೆ. ಪ್ರತೀಕ್‌ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಭರತ್‌ಕುಮಾರ್‌ ಎಂಜಿನಿಯರಿಂಗ್‌ ವ್ಯಾಸಂಗ ಮುಗಿಸಿದ್ದ ಎನ್ನಲಾಗಿದೆ.

ವಾಹನ ನಿಲುಗಡೆ ವಿಚಾರಕ್ಕೆ ಘರ್ಷಣೆ: ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ ಮೈದಾನದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ ಪಂದ್ಯಾವಳಿ ಸಂಬಂಧ ಮೈದಾನದಲ್ಲಿ ವಾಹನ ನಿಲುಗಡೆ ಮಾಡುವ ವಿಚಾರಕ್ಕೆ ದೊಡ್ಡಬೆಳವಂಗಲ ಮತ್ತು ಹುಲುಕುಂಟೆ ಗ್ರಾಮದ ಯುವಕರ ನಡುವೆ ಸಣ್ಣ ಘರ್ಷಣೆ ನಡೆದಿದೆ. ಬಳಿಕ ಇದನ್ನೇ ನೆಪವಾಗಿಸಿಕೊಂಡು ಉಭಯ ಗುಂಪುಗಳು ದೊಡ್ಡಬೆಳವಂಗಲ ಬಸ್‌ ನಿಲ್ದಾಣದ ಬಳಿ ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಭರತ್‌ ಮತ್ತು ಪ್ರತೀಕ್‌ಗೆ ಎದುರಾಳಿ ಗುಂಪಿನ ಕೆಲ ಯುವಕರು ಚಾಕುವಿನಿಂದ ಹೊಟ್ಟೆಹಾಗೂ ಗುಪ್ತಾಂಗದ ಭಾಗಕ್ಕೆ ಬಲವಾಗಿ ಇರಿದಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿದ್ದ ಯುವಕರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tap to resize

Latest Videos

ಬಿಗುವಿನ ವಾತಾವರಣ: ಘಟನೆ ಹಿನ್ನಲೆ ದೊಡ್ಡಬೆಳವಂಗಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ಮೂಲಕ ಗುಂಪು ಚದುರಿಸಿದ್ದಾರೆ.  ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ರಸ್ತೆ ಬದಿಯಲ್ಲಿ ಗೆಳೆಯನ ಶವ ಎಸೆದು ಹೋದ್ರಾ?, ಬೆಚ್ಚಿಬಿದ್ದ ಉಡುಪಿ ಜನ!

ಸಿಸಿಟಿವಿ ಪರಿಶೀಲನೆ: ಘಟನೆ ಸಂಬಂಧ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು, ಸ್ಥಳೀಯ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಫೂಟೇಜ್‌ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

KOLARA: ಅಪಹರಿಸಿ ಆಪ್ರಾಪ್ತ ಬಾಲಕಿಯ ಅತ್ಯಾಚಾರ, 4 ಆರೋಪಿಗಳಿಗೆ ಜೀವಿತಾವಧಿವರೆಗೂ ಜೈಲು

ಗ್ರಾಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ನಾಗರಾಜ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

click me!