ನಾಲ್ಕು ತಿಂಗಳ ಸ್ವಂತ ಗಂಡು ಮಗುವನ್ನೇ ರಸ್ತೆ ಮೇಲೆ ಎಸೆದು ತಂದೆಯೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಸೆಪ್ಟೆಂಬರ್ 18ರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕೋಡಿ(ಸೆ.20): ಆತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೊಲೀಸ್ ಪೇದೆಯಾಗಿದ್ದ. ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಆತನಿಗೆ ನಾಲ್ಕು ತಿಂಗಳ ಮುದ್ದಾದ ಮಗುವಿತ್ತು. ಆದ್ರೆ ಮದುವೆ ವೇಳೆ ತನಗೆ ಪಲ್ಸರ್ ಬೈಕ್, ಚಿನ್ನ ಹಣ ನೀಡಿಲ್ಲ ಅಂತಾ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆತ ಪತ್ನಿಯ ತವರುಮನೆಗೆ ತೆರಳಿದ್ದಾನೆ. ಊರಲ್ಲಿ ಜಾತ್ರೆ ಇದ್ದು ಮಗು ಕರೆದುಕೊಂಡು ಹೋಗ್ತೀನಿ ಅಂತಾ ಕ್ಯಾತೆ ತಗೆದ ಆತ ಮಾಡಬಾರದ ಕೃತ್ಯ ಮಾಡಿದ್ದಾನೆ. ಪಾಪಿ ತಂದೆಯ ಕೃತ್ಯಕ್ಕೆ ಮುದ್ದಾದ ನಾಲ್ಕು ತಿಂಗಳ ಹಸುಗೂಸು ತಾಯಿಯ ಎದುರೇ ಉಸಿರು ಚೆಲ್ಲಿದೆ. ಅಷ್ಟಕ್ಕೂ ಏನಿದು ಘಟನೆ. ಗಣೇಶೋತ್ಸವ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿರೋದು ಏಕೆ ಈ ಸ್ಟೋರಿ ನೋಡಿ.
ನಾಲ್ಕು ತಿಂಗಳ ಸ್ವಂತ ಗಂಡು ಮಗುವನ್ನೇ ರಸ್ತೆ ಮೇಲೆ ಎಸೆದು ತಂದೆಯೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಸೆಪ್ಟೆಂಬರ್ 18ರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಫೋಟೋದಲ್ಲಿ ಕಾಣುತ್ತಿರುವ ಮುದ್ದಾದ ಮಗುವಿನ ಹೆಸರು ಸಂಚಿತ್.. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಧಾರವಾಡದ ಮೂರನೇ ಘಟಕೆದಲ್ಲಿ ಪೇದೆಯಾಗಿದ್ದ ಬಸಪ್ಪ ಬಳುನಕಿ ಹಾಗೂ ಲಕ್ಷ್ಮೀ ದಂಪತಿಯ ಮಗು. ಈ ಮುದ್ದಾದ ಮಗು ಸಂಚಿತ್ ಪಾಪಿ ತಂದೆಯ ದುಷ್ಕೃತ್ಯಕ್ಕೆ ಉಸಿರು ಚೆಲ್ಲಿದೆ. ಮೂಲತಃ ಗೋಕಾಕ್ ತಾಲೂಕಿನ ದುರದುಂಡಿ ನಿವಾಸಿಯಾಗಿದ್ದ ಬಸಪ್ಪ ಬಳುನಕಿ ಕಳೆದ ಒಂದೂವರೆ ವರ್ಷದ ಹಿಂದೆ ಚಿಂಚಲಿ ಗ್ರಾಮದ ಲಕ್ಷ್ಮೀ ಎಂಬಾತಳನ್ನ ಮದುವೆಯಾಗಿದ್ದ. ಇಬ್ಬರಿಗೂ ನಾಲ್ಕು ತಿಂಗಳ ಹಿಂದೆ ಮುದ್ದಾದ ಗಂಡು ಮಗು ಜನಿಸಿತ್ತು. ಹೆರಿಗೆ ಬಳಿಕ ಆರೋಪಿ ಬಸಪ್ಪ ಪತ್ನಿ ಲಕ್ಷ್ಮೀ ಹಾಗೂ ಮಗು ಸಂಚಿತ್ ಚಿಂಚಲಿಯ ತವರು ಮನೆಯಲ್ಲಿದ್ರು. ಸೆಪ್ಟೆಂಬರ್ 18ರ ರಾತ್ರಿ ಚಿಂಚಲಿಯ ನಿವಾಸಕ್ಕೆ ಆಗಮಿಸಿದ್ದ ಬಸಪ್ಪ ಪತ್ನಿಯ ಜೊತೆ ಚೆನ್ನಾಗಿಯೇ ಮಾತನಾಡಿದ್ದಾನೆ. ಜೋಳಿಗೆಯಲ್ಲಿದ್ದ ಮಗುವನ್ನು ಎಬ್ಬಿಸಿದ್ದಾನೆ. ಬಳಿಕ ತಮ್ಮ ಊರು ದುರದುಂಡಿಯಲ್ಲಿ ಜಾತ್ರೆ ಇದೆ ಮಗುವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಈಗ ಕತ್ತಲಾಗಿದ್ದು ನಾಳೆ ಹೋಗೋಣ ಅಂತಾ ಪತ್ನಿ ಹೇಳಿದ್ದಾಳೆ. ಆದ್ರೆ ಇದಕ್ಕೆ ಒಪ್ಪದ ಬಸಪ್ಪ ನಾಲ್ಕು ತಿಂಗಳ ಹಸುಗೂಸನ್ನು ಬೈಕ್ ಮೇಲೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ಆತನನ್ನು ತಡೆಯಲು ಮುಂದಾಗಿದ್ದಾರೆ. ಆಗ ರೊಚ್ಚಿಗೆದ್ದ ಬಸಪ್ಪ ಕೈಯಿಂದ ಮಗುವನ್ನು ಮೇಲೆತ್ತಿ ರಸ್ತೆ ಮೇಲೆ ಎಸೆದಿದ್ದಾನೆ. ಮಗುವಿನ ತಲೆಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿಯೇ ಉಸಿರು ಚೆಲ್ಲಿದೆ.
ಚಿಕ್ಕೋಡಿ: ಕೂದಲು ಆರಿಸುವವರ ಮಧ್ಯೆ ಗಲಾಟೆ, ಬಾಲಕನ ಕೊಂದು ಬಾವಿಯಲ್ಲಿ ಎಸೆದ ದುಷ್ಕರ್ಮಿಗಳು
ಇನ್ನು ಈ ಪಾಪಿ ಬಸಪ್ಪ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಪತ್ನಿ ಲಕ್ಷ್ಮೀಗೆ ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ನಿಮ್ಮ ಮನೆಯವರು ನನಗೆ ಪಲ್ಸರ್ ಬೈಕ್ ಕೊಡಿಸಿಲ್ಲ, ಹಣ ನೀಡಿಲ್ಲ, ಬಂಗಾರ ನೀಡಿಲ್ಲ ಅಂತಾ ಕಿರುಕುಳ ನೀಡಿ ಹಲ್ಲೆಯೂ ಮಾಡುತ್ತಿದ್ದರಂತೆ. ಆದ್ರೆ ಎಲ್ಲವನ್ನೂ ಸಹಿಸಿಕೊಂಡು ಇದ್ದ ಲಕ್ಷ್ಮೀ ತನ್ನ ಮಗುವಿನ ನಗು ನೋಡಿ ಜೀವನ ಸಾಗಿಸುತ್ತಿದ್ದಳು. ಆದ್ರೆ ಈ ಪಾಪಿಯ ದುಷ್ಕೃತ್ಯದಿಂದ ತನ್ನ ಮಗುವಿನ ನಗುವು ಸಹ ಮರೆಯಾಗಿದ್ದು ಪಾಪಿ ದುಷ್ಕೃತ್ಯಕ್ಕೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇನ್ನು ಕೊಲೆಯಾದ ಮಗುವಿನ ತಾಯಿ ನೀಡಿದ ದೂರಿನ ಮೇರೆ ಪತಿ ಬಸಪ್ಪ ಬಳುಣಕಿ, ಬಸಪ್ಪ ತಂದೆ, ತಾಯಿ, ಅಕ್ಕನ ವಿರುದ್ಧ ಕುಡಚಿ ಪೊಲೀಸ್ ಠಾಣೆಯಲ್ಲಿ ಮಗುವಿನ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಎಸ್‌ಪಿ ಭೀಮಾಶಂಕರ್ ಗುಳೇದ್, ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿ ತಂದೆ ಬಸಪ್ಪನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಅದೇನೇ ಇರಲಿ ಗಣೇಶೋತ್ಸವ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪಾಪಿ ತಂದೆಗೆ ಇಡೀ ಊರಿನ ಜನ ಹಿಡಿಶಾಪ ಹಾಕುತ್ತಿದ್ದಾರೆ.