ಪ್ರವೀಣ್ ಹತ್ಯೆ ಘಟನೆ ಬಗ್ಗೆ ಜಿಲ್ಲಾ ಪೊಲೀಸರಲ್ಲದೆ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ಮಂಗಳೂರು(ಆ.04): ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಬೆಳ್ಳಾರೆ ಪ್ರವೀಣ್ ಹತ್ಯೆ ಘಟನೆ ಬಗ್ಗೆ ಜಿಲ್ಲಾ ಪೊಲೀಸರಲ್ಲದೆ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇದೀಗ ಘಟನೆ ಸಂಭವಿಸಿ ಒಂದು ವಾರ ಕಳೆದರೂ ಪ್ರಮುಖ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಸ್ಥಳೀಯ ನಾಲ್ವರನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಕೇರಳದ ತಲಶ್ಶೇರಿಯಲ್ಲಿ ಅಬೀದ್ ಎಂಬಾತನನ್ನು ಕರ್ನಾಟಕ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದು ಸುದ್ದಿಯಾಗಿತ್ತು. ಆದರೆ ಆತನಿಗೂ ಈ ಕೊಲೆಗೂ ಸಂಬಂಧ ಇಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಬಂಧಿತ ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದು ಬಿಟ್ಟರೆ ಇವರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಜನಪ್ರತಿನಿಧಿಗಳು ಮಾತ್ರ ಪೊಲೀಸರಿಗೆ ಪ್ರಮುಖ ಆರೋಪಿಗಳ ಸುಳಿವು ಲಭ್ಯವಾಗಿದೆ ಎಂದು ಹೇಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಬಗ್ಗೆ ಎನ್‌ಐಎ ಪ್ರಾಥಮಿಕ ತನಿಖೆ
ಜು.26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ಹತ್ಯೆಯಾಗಿತ್ತು. ಕೇರಳ ನೋಂದಣಿಯ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣ್‌ಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅಂದಿನಿಂದಲೇ ದುಷ್ಕರ್ಮಿಗಳ ಪತ್ತೆಗೆ ಜಿಲ್ಲಾ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಘಟನೆಗೆ ಕೇರಳ ಲಿಂಕ್ ಸಾಧ್ಯತೆಯನ್ನು ಶಂಕಿಸಲಾಗಿತ್ತು. ಮೃತನ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ ಬಳಿಕ ಎನ್‌ಐಎ ತನಿಖೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು.
ಕಳೆದ ನಾಲ್ಕೈದು ದಿನಗಳಿಂದ ಎನ್‌ಐಎ ತಂಡ ಕೂಡ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಪ್ರಾಥಮಿಕ ತನಿಖೆ ನಡೆಸುತ್ತಿದೆ. ಪುತ್ತೂರು ಡಿವೈಎಸ್‌ಪಿ ಗಾನ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸರು ಕೂಡ ಪ್ರಮುಖ ಆರೋಪಿಗಳ ಪತ್ತೆಗೆ 6 ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ತಂಡ ವಿವಿಧ ಆಯಾಮಗಳಲ್ಲಿ ತೀವ್ರ ತನಿಖೆ ನಡೆಸುತ್ತಿದೆ. ಎನ್‌ಐಎ ತಂಡ ಕೂಡ ಪ್ರಮುಖ ಆರೋಪಿಗಳ ಪತ್ತೆಗೆ ವಿವಿಧ ಕಡೆಗಳಿಗೆ ತೆರಳಿ ತನಿಖೆ ನಡೆಸುತ್ತಿದೆ. ಘಟನೆಗೆ ಕೇರಳ ಲಿಂಕ್ ಬಗ್ಗೆಯೂ ತನಿಖೆ ಕೇಂದ್ರೀಕರಿಸಿದ್ದು, ನಿಷೇಧಿತ ಅಥವಾ ಮತೀಯ ಸಂಘಟನೆಗಳ ಜತೆ ಪ್ರಮುಖ ದುರ್ಘಟನೆಗೆ ಸಂಬಂಧ ಇದ್ದರೆ ಎನ್‌ಐಎ ನೇರ ತನಿಖೆ ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.