ಆಪ್ ಡೌನ್‌ಲೋಡ್ ಮಾಡುತ್ತಿದ್ದಂತೆ ಸಾಲ ನೀಡುವ ಈ ಚೀನಾ ಆಪ್‌ಗಳು ಗ್ರಾಹಕರ ಫೋಟೋಗಳ ಆಕ್ಸೆಸ್ ಪಡೆದು ಅವುಗಳನ್ನು ಅಶ್ಲೀಲವಾಗಿ ಚಿತ್ರಿಸಿ ಸಾಲ ತೀರಿದ ಬಳಿಕವೂ ಆ ಫೋಟೋಗಳನ್ನಿಟ್ಟುಕೊಂಡು ಬೆದರಿಸಿ ಕೋಟಿ ಕೋಟಿ ಸುಲಿಗೆ ಮಾಡಿರುವುದು ತಿಳಿದು ಬಂದಿದೆ.
ನವದೆಹಲಿ: ಮೊಬೈಲ್ ಆ್ಯಪ್‌ನಲ್ಲಿ ಫಟಾಫಟ್ ಸಾಲ ನೀಡಿ ಜನರನ್ನು ಸುಲಿಗೆ ಮಾಡುತ್ತಿದ್ದ ಚೀನಿ ಆ್ಯಪ್ ಗ್ಯಾಂಗ್, ಇದೀಗ ಜನರ ಖಾಸಗಿ ಚಿತ್ರಗಳನ್ನು ಸಂಗ್ರಹಿಸಿ ಸಾಲ ಪಡೆದವರಿಂದ ಹಣ ಸುಲಿಗೆ ಮಾಡುವ ದುಷ್ಕೃತ್ಯಕ್ಕೂ ಇಳಿದಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕಳೆದ 2 ತಿಂಗಳಲ್ಲಿ ಹೀಗೆ ಸಾವಿರಾರು ಜನರಿಂದ 500 ಕೋಟಿ ರೂ. ಹಣ ಸುಲಿಗೆ ಮಾಡಿ ಚೀನಾಕ್ಕೆ ರವಾನಿಸಿದ್ದ 22 ವಂಚಕರ ತಂಡವನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಇವರು ಉತ್ತರ ಪ್ರದೇಶದ ಲಖನೌನಲ್ಲಿ ಕಾಲ್ ಸೆಂಟರ್ ಸ್ಥಾಪಿಸಿಕೊಂಡು, ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 500 ಕೋಟಿ ರು. ಮೊತ್ತದ ಹಣ ಸುಲಿಗೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚೀನಾ ಹಾಗೂ ಹಾಂಗ್‌ಕಾಂಗ್‌ನಲ್ಲಿ ಸರ್ವರ್‌ಗಳನ್ನು ಸ್ಥಾಪಿಸಿಕೊಂಡು ಚೀನಾದ ಕೆಲ ದುಷ್ಕರ್ಮಿಗಳು ಭಾರತದಲ್ಲಿ ಭಾರತೀಯರನ್ನೇ ಕಾಲ್‌ಸೆಂಟರ್ ನೌಕರರನ್ನಾಗಿ ಬಳಸಿಕೊಂಡು ಹೀಗೆ ಇನ್‌ಸ್ಟಂಟ್ ಸಾಲದ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಗ್ಯಾಂಗ್‌ನ ಬಂಧನದ ನಂತರ ವಂಚಕರು ಪಾಕಿಸ್ತಾನ, ನೇಪಾಳ ಹಾಗೂ ಬಾಂಗ್ಲಾದೇಶಕ್ಕೆ ತಮ್ಮ ಕಾಲ್‌ಸೆಂಟರ್ ವರ್ಗಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರಲ್ಲಿ ಕೆಲವರು ದಿನಕ್ಕೆ 1 ಕೋಟಿ ರು.ಗಿಂತ ಹೆಚ್ಚು ಸುಲಿಗೆ ಮಾಡಿದ್ದಾರೆ. ಇವರು ಬ್ಯಾಂಕ್‌ಗಳಲ್ಲಿ ಹಲವಾರು ಖಾತೆ ಹೊಂದಿದ್ದು, ಆ ಖಾತೆಗಳಿಂದ ಹಣ ಜಪ್ತಿ ಮಾಡಲಾಗಿದೆ. ಬಂಧಿತ 22 ಮಂದಿಯಿಂದ 51 ಮೊಬೈಲ್ ಫೋನ್, 25 ಹಾರ್ಡ್‌ಡಿಸ್‌್ಕ, 19 ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಮೂರು ಕಾರು ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ.
ಸುಲಿಗೆ ಮಾಡುತ್ತಿದ್ದುದು ಹೀಗೆ:
ಕ್ಯಾಶ್ ಪೋರ್ಚ್, ರುಪಿ ವೇ, ಲೋನ್ ಕ್ಯೂಬ್, ವೋವ್ ರುಪಿ, ಸ್ಮಾರ್ಚ್ ವ್ಯಾಲೆಟ್, ಜಯಂಟ್ ವ್ಯಾಲೆಟ್, ಸ್ವಿಫ್‌ಟರುಪಿ, ಹಾಯ್ ರುಪಿ, ವ್ಯಾಲೆಟ್‌ವಿನ್, ಫಿಶ್‌ಕ್ಲಬ್, ಯಾಕ್ಯಾಶ್, ಐಆ್ಯಮ್ ಲೋನ್, ಗ್ರೋಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕ್ಯಾಶ್, ಫಾರ್ಚೂನ್ ಟ್ರೀ, ಸೂಪರ್‌ಕಾಯಿನ್, ರೆಡ್ ಮ್ಯಾಜಿಕ್ ಮುಂತಾದ ಹೆಸರಿನಲ್ಲಿ ಉತ್ತರ ಪ್ರದೇಶದ ವಂಚಕರ ತಂಡ ಮೊಬೈಲ್ ಆ್ಯಪ್‌ಗಳನ್ನು ನಡೆಸುತ್ತಿತ್ತು. ಜನರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಎಲ್ಲಾ ಪರ್ಮಿಷನ್‌ಗಳನ್ನು ನೀಡಿದರೆ ಅವರ ಮೊಬೈಲ್‌ನ ಸಮಗ್ರ ಡೇಟಾ ವಂಚಕರ ಕೈಗೆ ಸಿಗುತ್ತಿತ್ತು ಮತ್ತು ಚೀನಾದ ಸರ್ವರ್‌ಗೆ ಹೋಗುತ್ತಿತ್ತು. ಡೌನ್‌ಲೋಡ್ ಮಾಡಿಕೊಂಡ ಜನರಿಗೆ ಕೂಡಲೇ ಸಾಲ ಸಿಗುತ್ತಿತ್ತು. ಆದರೆ ಆ ಸಾಲವನ್ನು ಬಡ್ಡಿ ಸಮೇತ ತೀರಿಸಿದ ಮೇಲೂ ವಂಚಕರು ಕರೆ ಮಾಡಿ ನಿಮ್ಮ ಖಾಸಗಿ ಫೋಟೋಗಳನ್ನು ಅಶ್ಲೀಲವಾಗಿ ತಿರುಚಿ ನಿಮ್ಮೆಲ್ಲಾ ಪರಿಚಯದವರಿಗೆ ಕಳುಹಿಸುತ್ತೇವೆ, ಹಾಗೆ ಮಾಡಬಾರದು ಅಂದರೆ ಇಂತಿಷ್ಟುಹಣ ಕೊಡಿ ಎಂದು ಸುಲಿಗೆ ಮಾಡುತ್ತಿದ್ದರು. ಆ ಹಣವನ್ನು ಹವಾಲಾ ಅಥವಾ ಕ್ರಿಪ್ಟೋಕರೆನ್ಸಿ ಮೂಲಕ ಚೀನಾಕ್ಕೆ ಕಳುಹಿಸುತ್ತಿದ್ದರು.