ಪ್ರಜ್ವಲ್‌ ರೇವಣ್ಣಗೀಗ ಸೀರೆಯಸ್‌ ಸಂಕಷ್ಟ: ಸಂತ್ರಸ್ತೆಯರ ಸೀರೆಯಲ್ಲಿನ ವೀರ್ಯ, ಕೂದಲು ಜತೆ ಹೋಲಿಕೆ..!

By Kannadaprabha News  |  First Published Sep 11, 2024, 5:45 AM IST

ಪ್ರಜ್ವಲ್‌ ಅತ್ಯಾಚಾರ ಪ್ರಕರಣಗಳ ಸಂತ್ರಸ್ತೆಯರ ಸೀರೆಗಳು ಹಾಗೂ ಪೇಟಿಕೋಟ್‌ಗಳು ಪತ್ತೆಯಾಗಿವೆ. ತೋಟದ ಮನೆಯಲ್ಲಿ ಕೆಲಸಗಾರರು ಉಳಿದುಕೊಳ್ಳಲು ಪ್ರತ್ಯೇಕ ಕೋಣೆಯನ್ನು ಪ್ರಜ್ವಲ್ ರೇವಣ್ಣ ಕುಟುಂಬದವರು ನೀಡಿದ್ದರು. ಈ ಪ್ರಕರಣದ ತನಿಖೆ ವೇಳೆ ತೋಟದ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ ಕೆಲಸಗಾರರ ಕೋಣೆಯಲ್ಲಿ ಸೀರೆಗಳು ಹಾಗೂ ಪೇಟಿಕೋಟ್‌ಗಳು ಸಿಕ್ಕಿವೆ. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ. 


ಗಿರೀಶ್ ಮಾದೇನಹಳ್ಳಿ

ಬೆಂಗಳೂರು(ಸೆ.11):  ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ವಿರುದ್ಧದ ಕಾನೂನಿನ ಕುಣಿಕೆ ಬಿಗಿಗೊಳಿಸಲು ಮುಂದಾಗಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ಆರೋಪಿಯನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿರುವ ಮಹತ್ವದ ಬೆಳವಣಿಗೆ ನಡೆದಿದೆ. ತಮ್ಮ ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಡಿಎನ್‌ಎ ಪರೀಕ್ಷೆ ವಿಚಾರವು ಬೆಳಕಿಗೆ ಬಂದಿದೆ. ಅಲ್ಲದೆ ವೈದ್ಯಕೀಯ ಪರೀಕ್ಷಾ ವರದಿ ಬಾಕಿ ಇದ್ದು, ಆ ವರದಿ ಬಂದ ನಂತರ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದಾಗಿ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ ನೀಡಿದೆ.

Tap to resize

Latest Videos

ಅತ್ಯಾಚಾರ ಪ್ರಕರಣದ ಸಂತ್ರಸ್ತೆಯರಿಂದ ಬಟ್ಟೆಗಳು, ಈ ಕೃತ್ಯಗಳು ನಡೆದಿದೆ ಎನ್ನಲಾದ ಹಾಸನದ ಸಂಸದರ ಅತಿಥಿ ಗೃಹ, ಪ್ರಜ್ವಲ್‌ರವರ ಹೊಳೆನರಸೀಪುರ ಮತ್ತು ಬೆಂಗಳೂರಿನ ಬಸವನಗುಡಿ ಮನೆ ಹಾಗೂ ತೋಟದ ಮನೆಗಳಲ್ಲಿ ಬೆಡ್‌ ಶೀಟ್‌ ಹಾಗೂ ಸಂತ್ರಸ್ತೆಯರ ಸೀರೆ ಸೇರಿ ಕೆಲ ಬಟ್ಟೆಗಳನ್ನು ಎಸ್‌ಐಟಿ ಜಪ್ತಿ ಮಾಡಿತ್ತು. ಇವುಗಳಲ್ಲಿ ಪತ್ತೆಯಾದ ಕೂದಲು ಹಾಗೂ ವೀರ್ಯದ ಹೋಲಿಕೆಗೆ ಪ್ರಜ್ವಲ್‌ರವರನ್ನು ಎಸ್‌ಐಟಿ ಡಿಎನ್‌ಎ ಪರೀಕ್ಷೆಗೊಳಪಡಿಸಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಪ್ರಜ್ವಲ್‌ ರೇವಣ್ಣ ಇದ್ದ ಮನೆ ನಮ್ಗೆ ಬೇಡ: ನೂತನ ಸಂಸದರು

ಡಿಎನ್‌ಎ ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಹಾಗೂ ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಎಸ್ಐಟಿ ಕಳುಹಿಸಿದ್ದು, ಶೀಘ್ರದಲ್ಲೇ ಅಂತಿಮ ವರದಿ ಬರಲಿದೆ. ಈ ವರದಿಯಲ್ಲಿ ಸಾಮ್ಯತೆ ಕಂಡು ಬಂದರೆ ಪ್ರಜ್ವಲ್‌ರವರಿಗೆ ಕಂಟಕವಾಗಲಿದೆ. ಈ ಪರೀಕ್ಷಾ ವರದಿ ನಿರೀಕ್ಷಣೆ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದರ ಎದೆಯಲ್ಲಿ ಡವಡವ ಶುರುವಾಗಿದೆ. ಅತ್ಯಾಚಾರ ಕೃತ್ಯ ಸಾಬೀತಿಗೆ ಎಸ್ಐಟಿಗೆ ಬಹುಮುಖ್ಯವಾದ ವೈಜ್ಞಾನಿಕ ಸಾಕ್ಷ್ಯ ಲಭಿಸಿದಂತಾಗುತ್ತದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ತೋಟದ ಮನೆಯಲ್ಲಿ ರಾಸಲೀಲೆ?:

ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮನೆ ಮತ್ತು ತೋಟದ ಮನೆಗಳು, ಹಾಸನ ನಗರದ ಸಂಸದರ ಅತಿಥಿ ಗೃಹ ಹಾಗೂ ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ ಇಬ್ಬರು ಮನೆಗೆಲಸದವರ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಪ್ರಜ್ವಲ್ ವಿರುದ್ಧ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ.

ಈ ಎರಡು ಪ್ರಕರಣಗಳ ಆರೋಪಪಟ್ಟಿಯಲ್ಲಿ ತೋಟದ ಮನೆ ಹಾಗೂ ಹೊಳೆನರಸೀಪುರ ಮತ್ತು ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ಕೃತ್ಯ ನಡೆದಿವೆ ಎಂಬ ಸಂಗತಿ ಉಲ್ಲೇಖವಾಗಿದೆ. ಹೀಗಾಗಿ ಈ ಕೃತ್ಯದ ಸ್ಥಳಗಳಲ್ಲಿ ಪತ್ತೆಯಾದ ಬಟ್ಟೆಗಳು, ಹೊದಿಕೆ ಹಾಗೂ ಇತರೆ ವಸ್ತುಗಳು ಕೃತ್ಯದ ರುಜುವಾತುಪಡಿಸಲು ಎಸ್‌ಐಟಿ ಮಹತ್ವದ ಕುರುಹು ನೀಡಿವೆ ಎನ್ನಲಾಗಿದೆ.

ಹಾಸನ ಪೆನ್‌ ಡ್ರೈವ್ ಹಗರಣ ಸಂಬಂಧ ಎಸ್‌ಐಟಿ ರಚನೆಯಾದ ಕೂಡಲೇ ಪ್ರಜ್ವಲ್‌ ರೇವಣ್ಣರವರ ಮನೆ, ಅತಿಥಿ ಗೃಹ ಹಾಗೂ ತೋಟದ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಪ್ರಜ್ವಲ್‌ ರವರ ಕೋಣೆಯಲ್ಲಿದ್ದ ಹಾಸಿಗೆ, ದಿಂಬು, ಬಟ್ಟೆಗಳು, ಟವಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು. ಅಲ್ಲದೆ ಸಂತ್ರಸ್ತೆಯರಿಂದ ಸಹ ಸೀರೆಗಳನ್ನು ಕೂಡ ಎಸ್‌ಐಟಿ ವಶಪಡಿಸಿಕೊಂಡಿತ್ತು. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾತ್ ರೂಂಗೆ ಹೋಗಬೇಕು ಅಂದರೂ ಬಿಡದೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇಪ್‌..!

ಪುರುಷತ್ವ ಪರೀಕ್ಷೆ ಜತೆ ಡಿಎನ್‌ಎ ಸಂಕಷ್ಟ

ಅತ್ಯಾಚಾರ ಪ್ರಕರಣಗಳ ಸಂಬಂಧ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಪುರುಷತ್ವ ಪರೀಕ್ಷೆಗೊಳಪಡಿಸಿದ್ದರು. ಅದೇ ವೇಳೆ ನ್ಯಾಯಾಲಯದ ಅನುಮತಿ ಪಡೆದು ಅವರನ್ನು ಡಿಎನ್‌ಎ ಪರೀಕ್ಷೆಗೆ ಸಹ ಅಧಿಕಾರಿಗಳು ಒಳಪಡಿಸಿದ್ದರು. ಈ ಸುಳಿವು ಅರಿತೇ ವೈದ್ಯಕೀಯ ಪರೀಕ್ಷೆಗೆ ಪ್ರಜ್ವಲ್‌ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ತೋಟದ ಮನೆಯಲ್ಲಿ ಸೀರೆಗಳು ಪತ್ತೆ?

ಪ್ರಜ್ವಲ್‌ ಅತ್ಯಾಚಾರ ಪ್ರಕರಣಗಳ ಸಂತ್ರಸ್ತೆಯರ ಸೀರೆಗಳು ಹಾಗೂ ಪೇಟಿಕೋಟ್‌ಗಳು ಪತ್ತೆಯಾಗಿವೆ. ತೋಟದ ಮನೆಯಲ್ಲಿ ಕೆಲಸಗಾರರು ಉಳಿದುಕೊಳ್ಳಲು ಪ್ರತ್ಯೇಕ ಕೋಣೆಯನ್ನು ಪ್ರಜ್ವಲ್ ರೇವಣ್ಣ ಕುಟುಂಬದವರು ನೀಡಿದ್ದರು. ಈ ಪ್ರಕರಣದ ತನಿಖೆ ವೇಳೆ ತೋಟದ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ ಕೆಲಸಗಾರರ ಕೋಣೆಯಲ್ಲಿ ಸೀರೆಗಳು ಹಾಗೂ ಪೇಟಿಕೋಟ್‌ಗಳು ಸಿಕ್ಕಿವೆ. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

click me!