* 8 ಆರೋಪಿಗಳ ವಿರುದ್ಧ ಚಾಜ್‌ಶೀಟ್
* ರೇಖಾ ಕದಿರೇಶ್ ಕೊಲೆಗೆ ರಾಜಕೀಯ ದ್ವೇಷ ಕಾರಣ
* 780 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು
ಬೆಂಗಳೂರು(ಸೆ.30): ಇತ್ತೀಚೆಗೆ ಕಾಟನ್‌ಪೇಟೆ ಸಮೀಪದ ಅಂಜನಪ್ಪ ಗಾರ್ಡನ್‌ನಲ್ಲಿ ನಡೆದಿದ್ದ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ(Murder) ಪ್ರಕರಣ ಸಂಬಂಧ ಮೃತಳ ನಾದಿನಿ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ನಗರದ 31ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಾಟನ್‌ಪೇಟೆ ಠಾಣೆ ಪೊಲೀಸರು(Police) ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.
ಅಂಜನಪ್ಪ ಗಾರ್ಡನ್ ನಿವಾಸಿ ಮೃತ ರೇಖಾ ಪತಿ ಕದಿರೇಶ್ ಹಿರಿಯ ಸೋದರಿ ಮಾಲಾ ಹಾಗೂ ಕದಿರೇಶ್ ಮಾಜಿ ಬಲಗೈ ಬಂಟ ಪೀಟರ್(46), ಸೂರ್ಯ(20), ಸ್ಟೀಫನ್(21), ಪುರುಷೋತ್ತಮ್(22), ಅಜಯ್(21), ಅರುಣ್‌ಕುಮಾರ್ (36) ಮತ್ತು ಸಿಲ್ವರಾಜ್ ಅಲಿಯಾಸ್ ಕ್ಯಾಪ್ಟನ್ (36) ಆರೋಪಿಗಳು. ಈ ಹತ್ಯೆಗೆ ಮಾಲಾ ಜತೆ ರಾಜಕೀಯ ದ್ವೇಷ ಮತ್ತು ಪೀಟರ್ ನಡುವಿನ ವೈಯಕ್ತಿಕ ವೈಮನಸ್ಸು ಕಾರಣವಾಗಿದೆ ಎಂದು 780 ಪುಟಗಳ ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.
ರೇಖಾ ಕದಿರೇಶ್ ಹತ್ಯೆ ಹಿಂದಿನ ಅಸಲಿ ಮುಖಗಳು!
ಜೂ.24ರಂದು ತಮ್ಮ ಗೃಹ ಕಚೇರಿ ಮುಂದೆ ಜನರಿಗೆ ಆಹಾರ ಪೊಟ್ಟಣ ವಿತರಣೆಗೆ ರೇಖಾ ಸಿದ್ಧತೆ ನಡೆಸಿದ್ದಾಗ ಏಕಾಏಕಿ ದಾಳಿ ನಡೆಸಿ ಭೀಕರವಾಗಿ ಕೊಂದು ಪೀಟರ್ ಹಾಗೂ ಆತನ ಸಹಚರರು ಪರಾರಿಯಾಗಿದ್ದರು. ಬಳಿಕ ತನಿಖೆ ವೇಳೆ ಪೀಟರ್‌ಗೆ ಮಾಲಾ ಹಾಗೂ ಆಕೆಯ ಪುತ್ರ ಅರುಣ್ ಸಾಥ್ ಕೊಟ್ಟಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು, ಸಾಕ್ಷಿದಾರರ ಹೇಳಿಕೆ, ವೈದ್ಯಕೀಯ ದಾಖಲೆಗಳು ಸಮೇತ ನ್ಯಾಯಾಲಯಕ್ಕೆ(Court) ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.