* ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
* ಆರೋಪಿಗಳಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಿದೆ
* ಜು.5 ರಂದು ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆಗೈದಿದ್ದ ಆರೋಪಿಗಳು
ಹುಬ್ಬಳ್ಳಿ(ಜು.13): ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಹಾಂತೇಶ ಶಿರೂರು, ಮಂಜುನಾಥ ಮರೇವಾಡಗೆ ಜು. 18ರ ವರೆಗೆ ಪೊಲೀಸ್ ಕಸ್ಟಡಿ ವಿಸ್ತರಣೆ ಆಗಿದೆ.
ಇಬ್ಬರು ಆರೋಪಿಗಳ ಆರು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಸಂಜೆ ಇಲ್ಲಿನ ನೂತನ ನ್ಯಾಯಾಲಯ ಸಂಕೀರ್ಣದ 13ನೇ ಕೋರ್ಟ್ ಹಾಲ್‌ನಲ್ಲಿರುವ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ವಿದ್ಯಾನಗರ ಪೊಲೀಸರು ಹಾಜರುಪಡಿಸಿದರು. ಪ್ರಕರಣ ಗಂಭೀರವಾಗಿದ್ದು, ಇಬ್ಬರು ಆರೋಪಿಗಳಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಿದೆ. ಹೀಗಾಗಿ ಹತ್ತು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶ ನಾಗೇಶ ನಾಯಕ ಅವರು ಮುಂದಿನ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
undefined
ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಾರಣವಾಗಿದ್ದು ಆ 2 ಬೇನಾಮಿ ಆಸ್ತಿ!
ಗುರೂಜಿ ಹತ್ಯೆ ಪ್ರಕರಣಕ್ಕೆ ಈ ವರೆಗೆ ಬೇನಾಮಿ ಆಸ್ತಿಯೇ ಕಾರಣ ಎನ್ನಲಾಗುತ್ತಿದ್ದರೂ ಒಳಸುರುಳಿ ಸಾಕಷ್ಟಿದೆ. ಪಕ್ಷಗಳ ಮುಖಂಡರ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಕಾರಣ ಪೊಲೀಸ್ ಆಯುಕ್ತರು ಆರೋಪಿಗಳ ಹೆಚ್ಚಿನ ತನಿಖೆಗೆ ಕಾಲಾವಕಾಶ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಸಾಕ್ಷ್ಯ ಸಂಗ್ರಹಣೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸರು ಪ್ರಕರಣದ ಹಿಂದೆ ಮತ್ಯಾರಾದರೂ ಇದ್ದಾರಾ ಎಂಬುದು ಸೇರಿ ಸಮಗ್ರ ದೃಷ್ಟಿಕೋನದಿಂದ ತನಿಖೆ ಚುರುಕುಗೊಳಿಸಿದ್ದಾರೆ.
ಇಲ್ಲಿನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಜು. 5ರಂದು ಮಧ್ಯಾಹ್ನ ಚಂದ್ರಶೇಖರ ಗುರೂಜಿ ಅವರನ್ನು ಹಂತಕರು ಚೂರಿಯಿಂದ 40ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿದ್ದರು. ಕೊಲೆಗೈದ ಆರೋಪಿಗಳನ್ನು ನಾಲ್ಕು ಗಂಟೆಗಳ ಒಳಗಾಗಿ ಬೆಳಗಾವಿಯ ರಾಮದುರ್ಗದ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರು ಬಂಧಿಸಿದ್ದರು.